ಮಂಗಳವಾರ, ಮಾರ್ಚ್ 21, 2023
23 °C
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

ಸಕಲ ಜೀವಾತ್ಮರಿಗೆ ಲೇಸು ಬಯಸುವುದೇ ಶಿವಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಾವೆಲ್ಲರೂ ದೇವರ ಮಕ್ಕಳು ಎಂಬ ಭಾವ ಹೃದಯದಲ್ಲಿ ತುಂಬಿಕೊಂಡು ಪರಸ್ಪರ ಪ್ರೀತಿ, ಪ್ರೇಮ, ಸಹೋದರತ್ವ, ಸಮಾನತೆಯಿಂದ ಬಾಳಿದರೆ ಅದುವೆ ಶಿವಾಚಾರ. ನಾನು ಹೆಚ್ಚು ನೀನು ಕಡಿಮೆ ನಿನಗಿಂತಲೂ ನಾನು ಶ್ರೇಷ್ಠ ಎಂಬ ಅಹಂ ಯಾವಾಗಲೂ ಸಮಾಜದ ಅಧೋಗತಿಗೆ ಕಾರಣವಾಗುತ್ತದೆ. ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ಆದರೂ ನಾವು ಭೇದ-ಭಾವ ಮಾಡಿದರೆ ದೇವರು ಮೆಚ್ಚುವುದಿಲ್ಲ. ಸಕಲ ಜೀವಾತ್ಮರಿಗೆ ಲೇಸು ಬಯಸುವುದೇ ಶಿವಾಚಾರ. “ಇವನಾರವ ಇವನಾರವ” ಎನ್ನದೆ ಎಲ್ಲರೂ ನಮ್ಮವರು ಎಂಬ ಭಾವದಿಂದ ಬಾಳಿದರೆ ನಾವು ವಿಶ್ವಕುಟುಂಬಿಯಾಗುತ್ತೇವೆ. ವಿಶ್ವವೆಲ್ಲವೂ ದೇವನ ಸೃಷ್ಟಿಯಾಗಿದೆ. ನಾವು ನಡೆಯುವ ಭೂಮಿ, ಕುಡಿಯುವ ನೀರು, ಉಸಿರಾಡುವ ಗಾಳಿ ಒಂದೇಯಾಗಿರುವಾಗ ಮತ್ತೆ ಏಕೆ ಭೇದ ಮಾಡುವುದು. ಅದಕ್ಕೆ ಬಸವಣ್ಣನವರು ಹೇಳುತ್ತಾರೆ, “ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ” “ದಾಸಿಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದಕೊಂಬುದೆ ಯೋಗ್ಯ”. ಈ ವಚನ ವಾಣಿ ಶಿವಾಚಾರದ ನಡೆಯನ್ನು ತೋರಿಸುತ್ತದೆ.

ಜಾತಿಭೇದ ಹೆಣ್ಣು-ಗಂಡು ಎಂಬ ಲಿಂಗಭೇದ, ಬಡವ-ಶ್ರೀಮಂತ ಭೇದ. ಬ್ರಾಹ್ಮಣ-ಶೂದ್ರ ಎಂಬ ವರ್ಣಭೇದ ಮುಂತಾದ ಯಾವ ಭೇದಭಾವ ಮಾಡಲಾರದೆ ಎಲ್ಲರೂ ಶಿವನ ಮಕ್ಕಳೆಂದು ಭಾವಿಸಿ ನಡೆಯುವುದು ಶಿವಾಚಾರ. ಶಿವಾಚಾರ ಭಾವ ನಮ್ಮ ಅಂತರಂಗದಲ್ಲ್ಲಿ ಗಟ್ಟಿಯಾದರೆ ನಮ್ಮ ದೃಷ್ಟಿ ಬದಲಾಗುತ್ತದೆ. ಎಲ್ಲಿ ನೋಡಿದಲ್ಲಿ ಶಿವಸ್ವರೂಪ ಕಾಣುತ್ತದೆ. ಕಳ್ಳನಲ್ಲಿಯೂ ಸಂಗಮನಾಥನೆ ಕಾಣುತ್ತಾನೆ. ಬಸವಣ್ಣನವರು ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯನ ಹೃದಯದಲ್ಲಿ ದೇವರನ್ನು ಕಂಡು ಅವರಿಗೆ ಅಪ್ಪಿಕೊಂಡರು, ಒಪ್ಪಿಕೊಂಡರು. ಜೀವಭಾವ ಹೋಗಿ ವಿಶಾಲವಾದ ಶಿವಭಾವ ಬರಬೇಕು. ಎತ್ತನೋಡಿದತ್ತ ಶಿವಸ್ವರೂಪದ ದರ್ಶನವಾಗಬೇಕು. ಆವಾಗ ನಾವು ವಿಶ್ವ ಕುಟುಂಬಿಯಾಗುತ್ತೇವೆ. ಈ ವಿಶಾಲಭಾವವೇ ಶರಣರು ಶಿವಾಚಾರ ಎಂದು ಕರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು