ಮಂಗಳವಾರ, ಮೇ 17, 2022
23 °C

ದೇವರ ದಾಸಿಮಯ್ಯ ಜಯಂತಿ: ‘ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ!’

ಆರ್. ದಿಲೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ದೇವರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ. ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆವೃತ್ತಿಯ ಜೊತೆಗೆ, ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾಕಾಯಕ ಯೋಗಿ ಅವನು. ಬಸವಣ್ಣನವರೂ ತಮ್ಮ ವಚನದಲ್ಲಿ ದಾಸಿಮಯ್ಯನನ್ನು ಸ್ಮರಿಸಿದ್ದಾರೆ. ದಾಸಿಮಯ್ಯನನ್ನು ಕುರಿತು ಮಾಹಿತಿಗಳು ಬಸವಪುರಾಣ, ದೇವಾಂಗಪುರಾಣ, ಶಿವತತ್ತ್ವಚಿಂತಾಮಣಿ ಮತ್ತು ಕಥಾಮಣಿಸೂತ್ರ ರತ್ನಾಕರ ಕೃತಿಗಳಲ್ಲಿ ದೊರೆಯುತ್ತವೆ.

ಭೂಲೋಕದಲ್ಲಿ ಅನಾಚಾರವು ಹೆಚ್ಚಾದುದನ್ನು ನಾರದರಿಂದ ಕೇಳಿ ತಿಳಿದ ಪರಮೇಶ್ವರನು ದೇವಾಂಗ ಗಣೇಶನನ್ನು ಧರ್ಮೋದ್ಧಾರಕ್ಕಾಗಿ ಭೂಲೋಕದಲ್ಲಿ ಅವತರಿಸುವಂತೆ ಅಪ್ಪಣೆ ಮಾಡಿದನು. ಆ ದೇವಾಂಗ ಗಣೇಶನ ರೂಪವೇ ಕಲಬುರಗಿ ಜಿಲ್ಲೆಯ ಮುದನೂರು ಗ್ರಾಮದ ಕಾಮಯ್ಯ ಮತ್ತು ಶಂಕರಿ ದಂಪತಿಗಳಿಗೆ ಮಗನಾಗಿ ಜನಿಸಿದ ದಾಸಿಮಯ್ಯ. ಆ ದಂಪತಿಗಳು ರಾಮನಾಥನ ಪರಮಭಕ್ತರಾದುದರಿಂದ ರಾಮನಾಥ ಲಿಂಗದಿಂದ ಸಾಕ್ಷಾತ್ ಶಿವನೇ ಒಡಮೂಡಿಬಂದು ಮುಗುವಿಗೆ ಲಿಂಗಧಾರಣೆ ಮಾಡಿ, ದೀಕ್ಷೆಯನ್ನು ಕೊಟ್ಟನಂತೆ. ದಾಸಿಮಯ್ಯನು ಶ್ರೀಶೈಲಕ್ಕೆ ಹೋಗಿ, ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಆತನ ಅಪ್ಪಣೆಯಂತೆ ಅಲ್ಲಿನ ಮಠಾಧಿಪತಿಯಾಗಿದ್ದ ಚಂದ್ರಕೊಂಡ ದೇಶೀಕೇಂದ್ರನಿಂದ ಶಿವಾನುಭವವನ್ನು ಪಡೆದು, ವಸ್ತ್ರಗಳನ್ನು ಮಾಡುವ ಕಾಯಕದಿಂದ ಗುರು, ಲಿಂಗ, ಜಂಗಮಗಳ ಆರಾಧನೆಯನ್ನು ಮಾಡುತ್ತಿದ್ದ. ದಾಸಿಮಯ್ಯ ತನ್ನ ಮನೆತನದ ಆರಾಧ್ಯದೈವವಾದ ‘ರಾಮನಾಥ’ನನ್ನೇ ವಚನಗಳಿಗೆ ಅಂಕಿತವನ್ನಾಗಿ ಮಾಡಿಕೊಂಡಿದ್ದಾನೆ.

ದಾಸಿಮಯ್ಯನು ಮಳಲಿಂದ ಅನ್ನವನ್ನು ಮಾಡಿ ಹಾಕುವವಳು ತನಗೆ ತಕ್ಕ ಮಡದಿಯೆಂದು ಹೇಳುತ್ತಾ ಅಂತಹವಳನ್ನು ಹುಡುಕುತ್ತಿರುವಾಗ ಗೊಬ್ಬೂರು ಗ್ರಾಮದ ಮಲ್ಲಿನಾಥ ಮತ್ತು ಮಹಾದೇವಿ ಎಂಬ ಶರಣದಂಪತಿಗಳ ಮಗಳಾದ ದುಗ್ಗಳಾಂಬೆಯು ದಾಸಿಮಯ್ಯನ ಪಾದಪೂಜೆ ಮಾಡಿ, ಆ ಪಾದೋದಕರಲ್ಲಿ ಮಳಲನ್ನು ಹಾಕಿ, ಅನ್ನವನ್ನು ಅಟ್ಟಿದಳು. ದಾಸಿಮಯ್ಯನು ಅವಳನ್ನು ಮದುವೆಯಾದ. ದುಗ್ಗಲೆಯೂ ವಚನಕಾರ್ತಿಯಾಗಿದ್ದು ಅವಳ ವಚನಗಳ ಅಂಕಿತ ‘ದಾಸಯ್ಯಪ್ರಿಯ ರಾಮನಾಥ’ ಎಂಬುದಾಗಿದೆ.

ದಾಸಿಮಯ್ಯನ ವಚನಗಳು ದಾಂಪತ್ಯಜೀವನ, ಕಾಯಕನಿಷ್ಠೆ, ಶಿವತತ್ತ್ವ, ಲಿಂಗಸಮಾನತೆ, ಭಕ್ತಿತತ್ತ್ವಗಳಿಂದ ಕೂಡಿವೆ. ಆತ್ಮತತ್ತ್ವವನ್ನು ಕುರಿತ ದಾಸಿಮತ್ತನ ಮಾತುಗಳು ಮನನೀಯವಾಗಿವೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮ
ಹೆಣ್ಣೂ ಅಲ್ಲ ಗಂಡೂ ಅಲ್ಲ ರಾಮನಾಥ

ಹೊರಗಿನ ದೇಹದ ಬೆಳವಣಿಗೆ, ಅಂಗಾಂಗಗಳ ಅಧಾರದ ಮೇಲೆ ಆತ್ಮತತ್ತ್ವವನ್ನು ಅಳೆಯಲು ಬಾರದು – ಎಂಬ ಮಾತುಗಳು ಎಲ್ಲ ಕಾಲಕ್ಕೂ ಬಹುಮಹತ್ವದ್ದಾಗಿದೆ. ಇದು ಸಾಮಾಜಿಕವಾಗಿ ಗಂಡು ಹೆಣ್ಣನ್ನು ಸಮಾನವಾಗಿ ಕಾಣುವ ಬಹು ಎತ್ತರದ ನಿಲುವಾಗಿ ಎಷ್ಟೋ ವಚನಕಾರರ ಆತ್ಮತತ್ತ್ವ ವಿವೇಚನೆ, ಸಾಮಾಜಿಕ ಪರಿವರ್ತನೆಗೆ ಹಾದಿ ಮಾಡಿಕೊಟ್ಟಿದೆ.

ಮನುಜಕುಲದ ಮುಖ್ಯ ಸಮಸ್ಯೆಯಾದ ಹಸಿವಿನ ಕುರಿತು ಬರೆವ ದಾಸಿಮಯ್ಯ ವಚನದ ಕೊನೆಯಲ್ಲಿ ಎತ್ತುವ ಪ್ರಶ್ನೆ ಮೌಲಿಕವಾದದ್ದು. ದೇಹ ದೇಹದೊಂದಿಗೆ ಅಂಟಿಬಂದ ಹಸಿವೆ ಮನುಷ್ಯನನ್ನು ಯಾವ ಮಟ್ಟಕ್ಕಾದರೂ ಇಳಿಸಿಬಿಡುತ್ತದೆ ಎಂಬುದರ ಜೊತೆಗೇ, ದೇವರಿಗೂ ‘ನೀನೊಮ್ಮೆ ಎನ್ನಂತೆ ಒಡಲುಗೊಂಡು ನೋಡಾ’ ಎಂದು ಪ್ರಶ್ನಿಸುವ ಅವನ ಮಾತುಗಳು ನಮ್ಮನ್ನು ಬೆರಗಾಗಿಸುತ್ತವೆ.

ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ

ಮನುಷ್ಯನ ಒಳ್ಳೆಯ ಕೆಟ್ಟ ನುಡಿ–ವರ್ತನೆಗಳಿಗೆ ಬಹುಮುಖ್ಯ ಕಾರಣ ದೇಹದೊಂದಿಗೇ ಅಂಟಿ ಬಂದಿರುವ ಅವನ ಹಸಿವು. ಆ ಹಸಿವು ಹಲವಾರು ಕಾರ್ಯಗಳನ್ನು ಹಸಿದವನಿಂದ ಮಾಡಿಸಿಬಿಡುತ್ತದೆ. ಕೆಲವೊಮ್ಮೆ ಮನುಷ್ಯ ತನಗೆ ಇಷ್ಟವಿಲ್ಲದ ಕಾರ್ಯಗಳನ್ನೂ ಮಾಡಬೇಕಾದ ಸಂದರ್ಭಗಳು ಒದಗಿಬಿಡುತ್ತವೆ. ಶಿವನನ್ನು ನೇರ ನಿಲ್ಲಿಸಿಕೊಂಡು ದಾಸಿಮಯ್ಯ ಆಡುವ ಮಾತುಗಳು ಮನನೀಯವಾಗಿವೆ.

ವಚನಚಳವಳಿಯ ಮುಖ್ಯ ಎಳೆಗಳು ಕನ್ನಡದ ಆದ್ಯ ವಚನಕಾರನಾದ ದಾಸಿಮಯ್ಯನಲ್ಲಿಯೇ ದೊರೆಯುತ್ತವೆ. ಕಾಯಕಸಂಸ್ಕೃತಿಯಲ್ಲಿ, ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ದಾಸಿಮಯ್ಯ–ದುಗ್ಗಲೆಯರು ಜೀವನ–ದರ್ಶನಗಳು ಎಲ್ಲ ಕಾಲಕ್ಕೂ ಅನುಕರಣೀಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು