ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮ ನೆಲದ ಒಡಲಿನ ಹೂವು

Last Updated 15 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಧ್ಯಾತ್ಮ ಒಬ್ಬೊಬ್ಬರ ಮನಸ್ಸಿನಲ್ಲೂ ಒಂದೊಂದು ಚಿತ್ರಣ, ಭಾವ ಹುಟ್ಟಿಸುತ್ತದೆಯಾದರೂ ಸ್ಥೂಲವಾಗಿ ಅದು ಎರಡು ವಿಚಾರಗಳನ್ನು ಮುಖ್ಯವಾಗಿ ಮುನ್ನೆಲೆಗೆ ತರುತ್ತದೆ. ಒಂದು ನಮ್ಮೊಡನೆ ನಮಗೇ ಇರುವ ಸಂಬಂಧ ಮತ್ತು ಇನ್ನೊಂದು ಇತರರೊಡನೆ ನಾವು ಸಾಧಿಸಬಹುದಾದ ಸಂಬಂಧ ಮತ್ತು ಈ ಎರಡನ್ನು ನೆರಳಿನಂತೆ ಹಿಂಬಾಲಿಸುವ ಧ್ಯಾನಸ್ಥ ಎಚ್ಚರ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಆಲೋಚನೆ, ಕ್ರಿಯೆ, ಭಾವನೆ ಇವುಗಳನ್ನು ನಿಯಂತ್ರಿಸಲು ಬೇಕಾದ ಸ್ವಾಯತ್ತತೆ ಮತ್ತು ಬದುಕಿಗೆ ಉಸಿರಿನಷ್ಟೇ ಅವಶ್ಯಕವಾದ ಪ್ರೀತಿ, ಬಾಂಧವ್ಯ ಇವುಗಳಿಗೆ ಅಗತ್ಯವಾದ ಆತ್ಮೀಯತೆ. ಸ್ವಾಯತ್ತತೆ ಮತ್ತು ಆತ್ಮೀಯತೆ ಇವುಗಳ ನಡುವಿನ ಅವಿನಾಭಾವ ಸಂಬಂಧ ಮತ್ತು ಸಂಘರ್ಷಗಳನ್ನು ಅರ್ಥೈಸಲಾರದ ಅಧ್ಯಾತ್ಮ ಫ್ಯಾಷನ್ ಆಗಬಹುದಷ್ಟೇ, ಬದುಕಿಗೇನೂ ಉಪಯೋಗವಾಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಸ್ವಾತಂತ್ರ್ಯ ಮತ್ತು ಸಾಂಗತ್ಯ ಇವುಗಳ ನಡುವಿನ ಹೋರಾಟದಿಂದಲೇ ಮನುಷ್ಯನ ಅದ್ಭುತ ನಿರ್ಮಿತಿಗಳಲ್ಲಿ ಒಂದಾದ ‘ಸಮಾಜ’ ರೂಪುಗೊಂಡಿದೆ ಎಂದರೆ ತಪ್ಪಾಗಲಾರದು. ಸಮಾಜದಲ್ಲಿ ಸಹಿಷ್ಣುತೆ, ಶಾಂತಿ ಹಾಗೂ ವೈಯಕ್ತಿಕ ಸಾಧನೆಗಳಿಗೆ ಸೋಪಾನವಾಗಲೆಂದು ಮೌಲ್ಯಗಳು, ನೈತಿಕತೆ ಇವುಗಳ ಉಗಮ ಮತ್ತು ಪರಿಷ್ಕರಣೆ.

ಪ್ರಪಂಚದಲ್ಲಿ ಎಷ್ಟು ಕೋಟಿ ಜನರಿದ್ದಾರೋ ಅಷ್ಟೇ ಕೋಟಿ ಸಂಖ್ಯೆಯ ದಾರಿಗಳಿದ್ದರೂ, ಒಂದು ಹಂತಕ್ಕೆ ಬೇರೆ ಬೇರೆ ಗಮ್ಯ ತಲುಪಿದ ನಂತರವೂ ಒಂದೇ ತೆರನಾದ ಅನುಭೂತಿ ನೀಡುವ ಏಕೈಕ ಯಾತ್ರೆ ಎಂದರೆ ಅದು ಅಧ್ಯಾತ್ಮಯಾತ್ರೆ. ಧರ್ಮದ ವಿಷಯದಲ್ಲೂ ಈ ಮಾತನ್ನು ಹೇಳಲಾಗುವುದಾದರೂ ಧರ್ಮವೂ ಅಧ್ಯಾತ್ಮದ ಒಂದು ಹಾದಿಯಷ್ಟೇ ಅಲ್ಲವೇ ಎಂದು ಅನೇಕ ಸಲ ಅನಿಸುವುದಿದೆ. ಅಧ್ಯಾತ್ಮದ ಬಲವಿಲ್ಲದ ಧರ್ಮ ಅಜೆಂಡಾಗಳಿಗೆ, ಸಿದ್ಧಾಂತಗಳಿಗೆ, ಭೇದಭಾವಗಳಿಗೆ ಸುಲಭದ ತುತ್ತಾಗಿಬಿಡಬಹುದು. ಆದರೂ ಧರ್ಮದ ದೀಪ ಬರೀ ಆಲೋಚನೆಗಳಿಂದ, ತಪಸ್ಸಿನಿಂದ ಬೆಳಗುವುದಿಲ್ಲ. ಅದಕ್ಕೆ ‘ಆಚರಣೆ’ ಎಂಬ ತೈಲ ನಿರಂತರ ಪೂರೈಕೆಯಾಗಬೇಕು.

ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸುಲಭವಾಗಿ ದಾಟಿಕೊಳ್ಳುವ ಶಕ್ತಿ ಆಚರಣೆಗಳಿಗಿದೆ; ಆಲೋಚನೆಗಳಿಗೆ ಅದು ಕಷ್ಟಸಾಧ್ಯ. ಚಿಂತನೆಗಳು ಹುಟ್ಟುತ್ತವೆ, ಸಾಯುತ್ತವೆ, ಅನುಭವಗಳು ಮಾತ್ರ ನೆನಪಿನ ಕೋಶದಲ್ಲಿ ಸದಾ ಜೀವಂತವಾಗಿರುತ್ತವೆ. ಮೂಲ ಆಚರಣೆಗಳನ್ನು ಸ್ವಲ್ಪ ಬದಲಾಯಿಸಿ, ಕಾಲಕ್ಕೆ ತಕ್ಕಂತೆ ಒಗ್ಗಿಸಿ, ಬೇಡವಾದನ್ನು ಬಿಸಾಕಿ (ಇದು ಕಷ್ಟ ಸಾಧ್ಯ!) ಜೀವಪರವಾದ್ದನ್ನು ಪೋಷಿಸಿ ಉಳಿಸಿಕೊಳ್ಳಬಹುದಾದ ಸಾಧ್ಯತೆ ಆಚರಣೆಗಳಿಗಿರುವಷ್ಟು ಆಲೋಚನೆಗಳಿಗಿಲ್ಲ. ಉದಾಹರಣೆಗೆ ಈಗ ನಡೆಯುತ್ತಿರುವ ಕಾರ್ತೀಕಮಾಸದ ಮುಖ್ಯ ಆಚರಣೆಗಳಲ್ಲಿ ಒಂದು ದೀಪವನ್ನು ಬೆಳಗುವುದು, ಆರಾಧಿಸುವುದು, ಹಾಗೆಯೇ ತುಳಸಿ, ನೆಲ್ಲಿ ಮುಂತಾದ ಸಸ್ಯಗಳ ಪೂಜೆ. ಕೆಲವರಿಗೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕಾಣಿಸಿದರೆ ಮತ್ತೂ ಕೆಲವರಿಗೆ ಇದು ಜೀವನಸೌಂದರ್ಯದ ಆಸ್ವಾದನೆ; ಹಲವರಿಗೆ ಇದರ ಹಿಂದಿರುವ ಪೌರಾಣಿಕ ಕಥೆಗಳೇ ಧನ್ಯತೆಯನ್ನು ಮೂಡಿಸಿದರೆ, ಕೆಲವರಿಗೆ ಇದರಲ್ಲಿ ಹೆಚ್ಚಿನ ಅರ್ಥವೇನೂ ಕಾಣಿಸದಿದ್ದರೂ ಬಿಡಲಾಗದ ಸಂಕಟಕ್ಕೆ ಮುಂದುವರಿಸುತ್ತಿರಬಹುದು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅರ್ಥ, ಸಾರ್ಥಕ್ಯ, ಸಂಪನ್ನತೆ ಕಾಣಿಸಿದರೂ ಅದರ ಹಿಂದಿರುವುದು ಒಂದೇ ಸರಳ, ಮುಗ್ಧ ಆಚರಣೆ. ಇದನ್ನು ಓದುವ ಬಗೆ ಬೇರೆ ಬೇರೆ.

ಈಗ ಈ ಆಚರಣೆಯನ್ನು ಇಲ್ಲವಾಗಿಸಿ ಹಲವು ಬಗೆಯ ಹೊಳಹುಗಳಿಗೆ ಒಂದೇ ರೂಪ ನೀಡಿ ಜೀವಂತಸಂಸ್ಕೃತಿಯನ್ನು ಜಡ ಮಾಡಬೇಕಾದರೆ ಅದಕ್ಕಿರುವ ಸುಲಭ ಉಪಾಯ ಇದು: ಈ ಆಚರಣೆಗಳಿಗಿರುವ ಕ್ರಿಯೆಯ ಅಂಶವನ್ನು ಕೈಬಿಟ್ಟು ಕೇವಲ ಇದರ ಸರಿ ತಪ್ಪು, ಬೇಕೇ ಬೇಡವೇ, ಅರ್ಥ ಅನರ್ಥಗಳ ಜಿಜ್ಞಾಸೆಯಲ್ಲಿ ತೊಡಗಿ, ನಮಗೆ ಬೇಕಾದ ಉತ್ತರಗಳನ್ನೇ ತಲುಪಿ, ಅದನ್ನೇ ಪರಮ ಸತ್ಯವೆಂದು ಸ್ಥಾಪಿಸಲು ಹೊರಡುವುದು, ಮತ್ತು ಭಿನ್ನಾಭಿಪ್ರಾಯ ಇರುವವರೊಡನೆ ಯುದ್ಧಕ್ಕೆ ಇಳಿಯುವುದು. ಆಚರಣೆಗಳೊಟ್ಟಿಗೆ ಬದುಕಿ ಅವುಗಳ ಜೊತೆ ಸಂಬಂಧವನ್ನು ಹೊಂದುವುದರ ಬದಲು ಅದನ್ನು ಸಿದ್ಧಾಂತವಾಗಿಸುವುದು. ‘ದೀಪವನ್ನು ಬೆಳಗುವುದು’ ಎಂಬ ಕ್ರಿಯೆಗಿರುವ ಅನಂತ ಮುಖಗಳನ್ನು ‘ಜ್ಞಾನದ ಸಂಕೇತ‘, ‘ಪುಣ್ಯ’, ‘ಮಾನಸಿಕ ಸ್ವಾಸ್ಥ್ಯ’, ‘ಮೂಢನಂಬಿಕೆ’ ಇಂಥವು ಯಾವುದೂ ಪೂರ್ಣವಾಗಿ ಹಿಡಿದಿಡಲಾಗುವುದಿಲ್ಲ. ಅನಂತ ‘ಓದುಗಳಿಗೆ’ ತನ್ನನ್ನು ತೆರೆದಿಟ್ಟುಕೊಂಡ ಅದ್ಭುತವಾದ
‘ಟೆಕ್ಸ್ಟ್‌’ ಎಂದರೆ ಅದು ಇಂತಹ ಆಚರಣೆಗಳು, ಆಲೋಚನೆಗಳು ಸುಲಭವಾಗಿ ಬಣ್ಣ ಬದಲಿಸುವ ವ್ಯಾಖ್ಯಾನಗಳಷ್ಟೇ.

ಇಂತಹ ಆಚರಣೆಗಳಿಗೂ ಅಧ್ಯಾತ್ಮಕ್ಕೂ ಏನಾದರೂ ಸಂಬಂಧವಿದೆಯೇ? ಮೊದಲೇ ಹೇಳಿದಂತೆ ಅನುಭೂತಿ ಒಂದೇ ಆದರೂ ದಾರಿಗಳು ಅನೇಕವಾಗಿರುವಾಗ ನಾವು ನಿಂತ ನೆಲದಿಂದ ಪ್ರಾರಂಭಿಸುವುದೇ ಸಹಜ ಮತ್ತು ವಿವೇಕವೂ ಹೌದು. ಬೇರೆಲ್ಲ ಮಾನವಸಂರಚನೆಗಳಂತೆ, ಸಂಕಲ್ಪಗಳಂತೆ ಅಧ್ಯಾತ್ಮವೂ ಸಂಸ್ಕೃತಿಯ ಮಣ್ಣಿನಲ್ಲೇ ಚಿಗುರೊಡೆದು, ಬೇರುಬಿಟ್ಟು ಬೆಳೆಯುವಂತದ್ದು. ದೈಹಿಕ ಅಗತ್ಯಗಳನ್ನು ಮೀರಿದ ಔನ್ನತ್ಯದ ಕುರಿತಾದ ಹಂಬಲ ಮೂಡುವುದೇ ನಾವು ಒಂದು ಸಂಸ್ಕೃತಿಯ ಭಾಗವಾಗಿ ಮತ್ತು ಅದರ ನಿಯಮಗಳನ್ನು ಪಾಲಿಸುತ್ತಾ ಅದರ ನಾಡಿಮಿಡಿತದ ಸದ್ದಿಗೆ ನಮ್ಮನ್ನು ತೆರೆದುಕೊಳ್ಳುವ ಹಾದಿಯಲ್ಲಿ. ಸಂಸ್ಕೃತಿ ಎಂದರೆ ಬರೀ ಧರ್ಮ, ನೈತಿಕತೆ, ಸಂಪ್ರದಾಯಗಳಾಗಿರದೆ, ತತ್ವಜ್ಞಾನ, ತಂತ್ರಜ್ಞಾನ, ಕೃಷಿ, ರಾಜಕೀಯ, ಚರಿತ್ರೆ, ವಿಜ್ಞಾನ, ಜಾನಪದ, ಕಲೆ ಎಲ್ಲವೂ ಸೇರಿದೆ. ಹಾಗಿದ್ದ ಮೇಲೆ ಯಾವ ಕ್ಷೇತ್ರದ ಪ್ರಶ್ನೆಗಳು, ಪರಿಕಲ್ಪನೆಗಳು ನಮ್ಮನ್ನು ಆಳವಾಗಿ ಕಾಡಿಸುವುದೋ, ಅರಿವಿಗಾಗಿ ಹುಡುಕಾಟ ನಡೆಸುವಂತೆ ಪ್ರಚೋದಿಸುವುದೋ ಅಲ್ಲಿಂದಲೇ ಪ್ರಾರಂಭಿಸಿ ಮಾನವ ಜೀವನದ ಮೂಲಭೂತ ಪ್ರಶ್ನೆಗಳಾದ ಸ್ವಾತಂತ್ರ್ಯ ಮತ್ತು ಪ್ರೀತಿ ಇವುಗಳೆಡೆ ಸಾಗಬಹುದು. ನಾವು ಹುಟ್ಟಿ ಬೆಳೆದ ನೆಲದ ಸಂಸ್ಕೃತಿಯ ಸಾರವನ್ನು ಹೀರಿ ಬೆಳೆಯದೆ, ಅದನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳದೆ, ಪರಂಪರೆಯೊಂದಿಗಿನ ನಂಟನ್ನು ಕಂಡುಕೊಳ್ಳದ ಸ್ವಯಂಭೂಗಳು ಬಹುಕಾಲ ಬಾಳುವ ಯಾವ ಸಾಧನೆಯನ್ನೂ ಮಾಡಿಲ್ಲ. ಅಧ್ಯಾತ್ಮದ ತುಡಿತ ಆಕಾಶದಿಂದ ಉದುರುವುದಿಲ್ಲ, ಅದು ನೆಲದ ಒಡಲಿನ ಹೂವು. ಅಧ್ಯಾತ್ಮದ ಹಾದಿಯಲ್ಲಿ ಪ್ರಶ್ನೆಗಳು ಹುಟ್ಟುವ ನೆಲೆಯೂ, ಉತ್ತರಗಳು ಹೊಳೆಯುವ ನೆಲೆಯೂ ‘ನಾವು ನಿಂತ ನೆಲವೇ’ ಆಗಿರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT