ಭಾನುವಾರ, ಸೆಪ್ಟೆಂಬರ್ 20, 2020
23 °C
ಅಧ್ಯಾತ್ಮ ಮತ್ತು ಹೆಣ್ಣು

ಹೆಣ್ಣಿನ ಹುಡುಕಾಟದಲ್ಲಿ ಅಧ್ಯಾತ್ಮ!

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ಹೆಣ್ಣು’ ಮತ್ತು ‘ಆಧ್ಯಾತ್ಮ’ ಅನ್ನೋ ಎರಡು ಪದಗಳನ್ನು ಒಟ್ಟಿಗೆ ನೋಡಿದರೇನೇ ರಾತ್ರಿಯ ಕಪ್ಪು ಆಗಸದಲ್ಲಿ ಮಿಂಚಿ ಮಾಯವಾದ ಬೆಳಕಿನ ಬಳ್ಳಿಯನ್ನು ನೋಡಿದಂತಹ ಅನುಭವ. ಹೆಣ್ಣಿಗೂ ಆಧ್ಯಾತ್ಮಕ್ಕೂ ಇರುವ ನಂಟು ಸಮುದ್ರಕ್ಕೂ ಅಲೆಗಳಿಗೂ ಇರುವಂತಹದ್ದು: ವಿಸ್ತಾರವೂ ಅವಿನಾಭಾವವೂ ನಿರಂತರವೂ ಆದದ್ದು. ನಿಗೂಢತೆಯ, ಕಾಲ್ಪನಿಕತೆಯ ಆವರಣವನ್ನೂ, ಸಮಸ್ಯೆಗಳ, ಪ್ರಶ್ನೆಗಳ ಸರಮಾಲೆಯನ್ನೂ ಹೆಣ್ತನವೂ ಆಧ್ಯಾತ್ಮಿಕತೆಯೂ ಸಮಾನವಾಗೆ ಹೊಂದಿವೆ. 'ಹೆಣ್ಣು ಎಂದರೆ ಹೀಗೆ' ಎಂಬ ಎಷ್ಟೋ ವಿಶ್ಲೇಷಣೆಗಳು ಮಣ್ಣುಮುಕ್ಕಿರುವಂತೆಯೇ 'ಆಧ್ಯಾತ್ಮ ಎಂದರೆ ಇದು' ಎಂದು ಹೇಳುವ ಅನೇಕ ಪ್ರಯತ್ನಗಳು ಮಣ್ಣುಪಾಲಾಗಿವೆ. ಇನ್ನು ಹೆಣ್ಣಿಗೂ, ಆಧ್ಯಾತ್ಮಕ್ಕೂ ದೇಹದ್ದೇ ದೊಡ್ಡ ಸವಾಲು. ಹೆಣ್ಣು ಎಂಬುದು ದೇಹಪ್ರಜ್ಞೆಯೋ ಅಥವಾ ದೇಹವನ್ನು ಮೀರಿದ ಸ್ತ್ರೀಪ್ರಜ್ಞೆ ಇದೆಯೋ? ಆಧ್ಯಾತ್ಮ ಎಂದರೆ ದೇಹವನ್ನು ಮೀರುವುದೋ ಅಥವಾ ದೇಹಾದ್ಯಂತ ಇರುವ ಪ್ರಜ್ಞಾವಲಯಗಳನ್ನು ಶೋಧಿಸುವುದೋ?

ಹೆಣ್ಣು ಎಂಬ ಪದವನ್ನು ತಾಯ್ತನ ಎಂಬ ಅರ್ಥದಿಂದ ಬೇರ್ಪಡಿಸುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಆಧ್ಯಾತ್ಮವನ್ನು ಹುಟ್ಟು–ಸಾವುಗಳ ಸುಳಿಯಿಂದ ಮೇಲೆತ್ತುವುದು. ಹಾಗೆಯೇ 'ತಾಯ್ತನ', 'ಹುಟ್ಟು-ಸಾವು' ಎಂಬ ಪದಗಳಿಗಿರುವ ಅರ್ಥವೈಶಾಲ್ಯವೂ ಅನಂತವಾದದ್ದು. ಹೆಣ್ಣಿಗೂ ಆಧ್ಯಾತ್ಮಕ್ಕೂ ಇರುವ ವಿಶೇಷತೆಯೂ ಒಂದೇ ಬಗೆಯದು: ಅಪಾರವಾದ ನೋವನ್ನು ಸಹಿಸಿ ಹೊಸಹುಟ್ಟನ್ನು ನೀಡುವುದು. ಕೊನೆಗೆ ಹೆಣ್ಣು ಮತ್ತು ಆಧ್ಯಾತ್ಮ ಎರಡೂ ಅಷ್ಟೇ, ತಪ್ಪಾಗಿ ಅರ್ಥೈಸಿಕೊಂಡರೆ, ದೈವತ್ವಕ್ಕೆ ಅಂಟಿಕೊಂಡರೆ ಅಪಾಯವೇ. ತಾಯಿಯನ್ನು ಮನುಷ್ಯಳು ಎಂಬುದನ್ನು ಮರೆತು ದೈವತ್ವಕ್ಕೆ ಏರಿಸಿದವರೂ, ಆಧ್ಯಾತ್ಮವನ್ನು ದೇವರು ಮತ್ತು ಧರ್ಮಕ್ಕೆ ಸಮೀಕರಿಸಿಕೊಂಡವರೂ ಪಡುತ್ತಿರುವ ಪಾಡನ್ನು ನೋಡಿದರೇ ತಿಳಿಯುವುದು.

ಹಾಗಾದರೆ ಆಧ್ಯಾತ್ಮದೊಡನೆ ಇಷ್ಟು ನಿಕಟವಾದ ಸಂಬಂಧ ಹೊಂದಿದ ಹೆಣ್ಣಿಗೆ ಆಧ್ಯಾತ್ಮದ ಅನುಭವ ಯಾವ ಬಗೆಯದು? ಹೆಣ್ಣು ಪ್ರಪಂಚವನ್ನು ನೋಡುವ, ಆಲೋಚಿಸುವ, ತನ್ನತನವನ್ನು ಕಂಡುಕೊಳ್ಳುವ, ಅನುಭವಿಸುವ ರೀತಿ ಗಂಡಿನ ನೋಟಕ್ಕಿಂತ ಭಿನ್ನವೇ? ಹೇಗೆ? ಎಂಬ ಪ್ರಶ್ನೆಯನ್ನು ಜೊತೆಗಿಟ್ಟುಕೊಂಡೇ ಹೆಣ್ಣಿಗೂ ಆಧ್ಯಾತ್ಮಕ್ಕೂ ಇರುವ ನಂಟನ್ನು ನೋಡಬೇಕು. ಹಾಗೆಯೇ ಪ್ರತಿವ್ಯಕ್ತಿಯ ಆಂತರ್ಯದಲ್ಲೂ ಗಂಡು ಹೆಣ್ಣುಗಳೆರಡೂ ಇವೆ ಎಂಬ ಚಿಂತನೆಯೂ ಬಹಳಷ್ಟು ಹೊಳಹುಗಳನ್ನು ಒದಗಿಸುತ್ತದೆ. ಗಂಡೆಂದರೆ ಬುದ್ಧಿ, ಕಾರ್ಯಶೀಲತೆ, ಹೆಣ್ಣೆಂದರೆ ಭಾವ, ಅನುಭವ ಎಂಬ ವಿಂಗಡನೆ ಅಸಮಂಜಸವೆನಿಸಿದರೂ ನಮ್ಮ ಸಂಸ್ಕೃತಿಯಲ್ಲಿ ಅದು ಬೇರೂರಿರುವ ಪರಿಯನ್ನು ಅಲ್ಲಗೆಳೆಯಲಾಗದು. ಮಕ್ಕಳನ್ನು ಹೆರುವುದನ್ನು ಸ್ವಇಚ್ಛೆಯಿಂದ ಮನಃಪೂರ್ವಕವಾಗಿ ನಿರಾಕರಿಸಿದ ಅನೇಕ ಸ್ತ್ರೀಯರೂ ಕೂಡ ತಮ್ಮ ಆಳದ ಯಾವುದೋ ಹೊಸ ಪ್ರಜ್ಞೆಗೆ ಜೀವವಿತ್ತಿದ್ಧನ್ನು ತಾಯ್ತನವೆನ್ನದೆ ಮತ್ತೇನೆನ್ನಬಹುದು?

ಇಂತಹ ಹಲವು ವಿಚಾರ, ವಿರೋಧಾಭಾಸಗಳ ಹಿನ್ನೆಲೆಯಲ್ಲಿ ನೋಡಿದಾಗ ಆಧ್ಯಾತ್ಮವೆಂದರೆ ಮಾತೃಪ್ರಜ್ಞೆಯ ಶೋಧನೆಯೇ ಇರಬೇಕು ಎಂದೆನಿಸುತ್ತಿದೆ. ನಾನು ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಈ ಮಾತೃಪ್ರಜ್ಞೆಯ ಸಾಕ್ಷಾತ್ಕಾರ ನನಗೆ ಆಗಿರಲೇಬೇಕೆಂಬುದಿಲ್ಲ. ಮಕ್ಕಳನ್ನು ಹೆತ್ತ ಮಾತ್ರಕ್ಕೆ ಹೆಣ್ಣು ಏಕಾಏಕಿ ಪ್ರೀತಿ, ಕರುಣೆಯ ನಿಕ್ಷೇಪವಾಗಿಬಿಡುವುದಿಲ್ಲ. ಕರುಣೆಯ ಒರತೆಯನ್ನು, ಕಾಪಿಡುವ ಶಕ್ತಿಯನ್ನು, ಕಾಯುವ ಕಣ್ಣನ್ನು, ಪೊರೆಯುವ, ಪೋಷಿಸುವ ಚೈತನ್ಯವನ್ನು ಕಂಡುಕೊಳ್ಳಬೇಕಾದೀತು. ನನ್ನ ತಾಯ್ತನದ ಅರಿವಿಗೂ, ಹಾದಿಗೂ ಅವನ ತಾಯ್ತನದ ಅರಿವಿಗೂ, ಹಾದಿಗೂ ಭಿನ್ನತೆಯೂ ಸಾಮ್ಯವೂ ಇರಬಹುದು. ಆ ಶೋಧನೆಯೇ ಆಧ್ಯಾತ್ಮಿಕ ದೃಷ್ಟಿಯಲ್ಲಿ ಹೆಣ್ಣೆಂದರೆ ಯಾರು ಎಂಬುದನ್ನು ತಿಳಿಸಬಹುದೇನೋ?

ಹೆಣ್ಣೊಬ್ಬಳು ‘ಆಧ್ಯಾತ್ಮ ಎಂದರೇನು’ ಎಂಬ ಹುಡುಕಾಟದಲ್ಲಿ ತೊಡಗಿ ಮಾತೃತ್ವದ ಅರಿವಿನಲ್ಲಿ ನೆಲೆಯಾಗುವ ಬಗೆ ರೋಮಾಂಚಕವೂ ಆಶ್ಚರ್ಯಕರವೂ ಆಗಿದೆ. What you seek is seeking you – ಎಂಬ ರೂಮಿಯ ಮಾತಿನಂತೆ, ಹೆಣ್ಣು ಆಧ್ಯಾತ್ಮವನ್ನು ಅರಸುತ್ತಿರಲು, ಆಧ್ಯಾತ್ಮವೂ ಹೆಣ್ಣನ್ನು ಅರಸುತ್ತಿರಬಹುದೇ? ಬಹುಶಃ ಪ್ರತಿಯೊಂದು ಜೀವಿಯೂ ಆಧ್ಯಾತ್ಮಿಕವಾಗಿ ಹೆಣ್ಣಾಗುವುದೇ ನಿಜವಾದ ಆಧ್ಯಾತ್ಮವಿರಬಹುದೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು