ಬುಧವಾರ, ಜೂನ್ 16, 2021
27 °C

ಸಂಸ್ಕೃತಿ ಸಂಭ್ರಮ | ಹರಿಕರುಣಾಲಹರಿಯ ಹರಿವು

ಮಹೇಶ ಭಟ್ಟ ಆರ್. ಹಾರ್ಯಾಡಿ Updated:

ಅಕ್ಷರ ಗಾತ್ರ : | |

Prajavani

ಪಂಡಿತರಾಜನಾದ ಜಗನ್ನಾಥನು ಗಂಗಾಲಹರಿ, ಸುಧಾಲಹರಿ, ಅಮೃತಲಹರಿ, ಲಕ್ಷ್ಮೀಲಹರಿ, ಕರುಣಾಲಹರಿ ಎಂಬುದಾಗಿ ಐದು ಸ್ತೋತ್ರಕಾವ್ಯಗಳನ್ನು ಬರೆದಿದ್ದಾನೆ. ಇವುಗಳು ಪಂಚಲಹರಿಗಳೆಂದೇ ಪ್ರಸಿದ್ಧವಾಗಿವೆ.ಒಂದೊಂದು ಶ್ಲೋಕದಲ್ಲಿಯೂ ಅಲಂಕಾರಚಾತುರ್ಯ,ಪ್ರಸಾದಗುಣವೇ ಮೊದಲಾದ ಕಾವ್ಯಾಂಶಗಳನ್ನು ಕಾಣಬಹುದು.ಅರವತ್ತು ಶ್ಲೋಕಗಳಿಂದ ಕೂಡಿದ ಕರುಣಾಲಹರಿಯಲ್ಲಿ ಕವಿಯು ತನ್ನ ಮೇಲೆ ಕರುಣೆದೋರಬೇಕೆಂದು ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿದ್ದಾನೆ.ಆದ್ದರಿಂದಲೇ ಈ ಸ್ತೋತ್ರಕ್ಕೆ ವಿಷ್ಣುಲಹರಿ ಎಂಬ ನಾಮಾಂತರವೂ ಇದೆ.

ಕರುಣಾಲಹರಿಯ ಮೊದಲನೆಯ ಪದ್ಯದಲ್ಲಿಯೇ ‘ಮಯಾಯಮಾತ್ಮಾ ಭವತೇ ನಿವೇದಿತಃ’ - ಸಂಸಾರಸಾಗರದಲ್ಲಿ ಒದ್ದಾಡುತ್ತಿರುವ ನಾನು ಈ ಆತ್ಮವನ್ನೇ ನಿನಗೆ ಅರ್ಪಿಸುತ್ತಿದ್ದೇನೆ ಎನ್ನುವ ಮೂಲಕ ನವವಿಧಭಕ್ತಿಗಳಲ್ಲಿ ಒಂದಾದ ಆತ್ಮನಿವೇದನರೂಪವಾದ ಭಕ್ತಿಯನ್ನು ವ್ಯಕ್ತಪಡಿಸಿದ್ದಾನೆ. ಪೂಜೆಯಲ್ಲಿ ಮಾಡುವ ಹಣ್ಣು ಮೊದಲಾದವುಗಳ ನಿವೇದನೆಗಳಿಗಿಂತ ಇಂತಹ ನಿವೇದನೆಯು ದೇವರಿಗೆ ಹೆಚ್ಚು ಆನಂದವನ್ನೀಯುತ್ತದೆ. ಮತ್ತೆ ಇನ್ನೊಂದು ಶ್ಲೋಕದಲ್ಲಿ ‘ಅತ್ಯಂತವಿನಯದಿಂದ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ, ಸರಿಯಾಗಿ ಯೋಚಿಸಿ ಉತ್ತರವನ್ನು ಹೇಳು. ಯಾಕೆ ನನ್ನನ್ನು ಕೂಡಲೇ ಉದ್ಧರಿಸುತ್ತಿಲ್ಲ? ನಾನು ಆನೆ, ಪರ್ವತಗಳಿಗಿಂತಲೂ ಮಿಗಿಲೇ?’ ಎಂದು ಛೇಡಿಸುತ್ತಾನೆ.

ನಿತರಾಂ ವಿನಯೇನ ಪೃಚ್ಛತೇ ಸುವಿಚಾರ್ಯೋತ್ತರಮತ್ರ ಯಚ್ಛ ಮೇ|

ಕರಿತೋ ಗಿರಿತೋಪ್ಯಹಂ ಗುರುಸ್ತ್ವರಿತೋ ನೋದ್ಧರಸೇ ಯದದ್ಯ ಮಾಮ್ ||

ಭಗವಂತನು ಗಜೇಂದ್ರಮೋಕ್ಷಪ್ರಸಂಗದಲ್ಲಿ ಕೂಡಲೇ ಬಂದು ಆನೆಯನ್ನು ಉದ್ಧರಿಸಿದ್ದಾನೆ, ಇನ್ನೊಂದು ಪ್ರಸಂಗದಲ್ಲಿ  ಗೋವರ್ಧನಗಿರಿಯನ್ನು ಉದ್ಧರಿಸಿದ್ದಾನೆ. ಅದನ್ನು ಇಲ್ಲಿ ನೆನೆಸಿಕೊಳ್ಳಬೇಕು. ಸಂಸ್ಕೃತದಲ್ಲಿ ಉದ್ಧರಿಸುವುದು ಎನ್ನುವುದಕ್ಕೆ ಎತ್ತುವುದು ಎಂದೂ ಅರ್ಥವಿದೆ.

ಸ್ತೋತ್ರದ ಅರ್ಧಭಾಗವು ಕಳೆದ ಮೇಲೆ ಸುಮಾರು ಹದಿನಾಲ್ಕು ಶ್ಲೋಕಗಳಲ್ಲಿ ವಿಷ್ಣುವಿನ ದೇಹವನ್ನು ವರ್ಣಿಸಿದ್ದಾನೆ. ಮುಡಿಯಿಂದ ಹಿಡಿದು ಅಡಿಯವರೆಗೆ ಅವನ ಅವಯವಗಳು ಹೇಗೆ ಜಗದ್ರಕ್ಷಕಗಳಾಗಿವೆ ಎಂದು ಕಂಡರಿಸಿದ್ದಾನೆ. ಅಂತಹ ದೇಹವನ್ನುಳ್ಳ ನೀನು ವೃಂದಾವನದ ಮಧ್ಯದಲ್ಲಿ ಇಂದ್ರನೀಲಮಣಿಖಚಿತವಾದ ಭೂಮಿಯಲ್ಲಿ ಕುಳಿತಿರುವುದನ್ನು ನಾನು ಯಾವಾಗ ನೋಡಿಯೇನು ಎಂದು ಚಡಪಡಿಸುತ್ತಾನೆ.

ಹರಿಯೇ! ನಿನಗೆ ಕೈಮುಗಿದು ನಾನು ಕೇಳುವುದೊಂದೇ. ‘ಜನುರಸ್ತು ಕುಲೇ ಕೃಷೀವಲಾನಾಮಪಿ ಗೋವಿಂದಪದಾರವಿಂದಭಾವಃ’ - ಮುಂದೆ ಕೃಷಿಕರ ವಂಶದಲ್ಲಿ ನಾನು ಹುಟ್ಟುವಂತಾಗಲಿ. ಜೊತೆಗೆ ಗೋವಿಂದನ ಪಾದಾರವಿಂದದ ಮೇಲೆ ಭಕ್ತಿಯೂ ಇರಲಿ ಎಂದು ವಿನಮ್ರನಾಗಿ ಕೇಳಿಕೊಳ್ಳುತ್ತಾನೆ. ಕೃಷಿಕರಿಗೂ ಗೋವುಗಳಿಗೂ, ಗೋವುಗಳಿಗೂ ಕೃಷ್ಣನಿಗೂ ಇರುವ ಸಂಬಂಧ ಅವಿನಾಭೂತವಾದದ್ದು. ಕೃಷಿಕನಾದರೆ ಕೃಷ್ಣನಂತೆ ಗೋಪಾಲಕನಾಗಬಹುದಲ್ಲವೇ!

‘ತ್ವತ್ತೋ ನಾಸ್ತಿ ದಯಾನಿಧಿರ್ಯದುಪತೇ! ಮತ್ತೋ ನ ಮತ್ತಃ ಪರಃ’ ನಿನಗಿಂತ ಮಿಗಿಲಾದ ದಯಾನಿಧಿ ಇಲ್ಲ,ನನಗಿಂತ ಮಿಗಿಲಾದ ಅಹಂಕಾರಿ ಇಲ್ಲ? ಎನ್ನುತ್ತಾನೆ. ಪುರಂದರದಾಸರು ಕೃಷ್ಣನಾಮವನ್ನು ಕಲ್ಲುಸಕ್ಕರೆಯೆಂದರೆ ಇವನು ಕೃಷ್ಣನನ್ನೇ ರಸಾಯನ ಎಂದಿದ್ದಾನೆ. ’ಶ್ರೀಕೃಷ್ಣೇತಿ ರಸಾಯನಂ ರಸಯ ರೇ ಶೂನ್ಯೈಃ ಕಿಮನ್ಯೈಃ ಶ್ರಮೈಃ‘ -ಶ್ರೀಕೃಷ್ಣನೆಂಬ ರಸಾಯನವನ್ನು ಸವಿಯಿರಿ,ವ್ಯರ್ಥವಾದ ಬೇರೆಯ ಶ್ರಮಗಳೇಕೆ?ಕೃಷ್ಣನು ದಿಟವಾದ ಅರ್ಥದಲ್ಲಿ ರಸಾಯನ. ಅವನು ನವರಸಾಯನವೆನಿಸಿದ ಪುರಾತನರಸಾಯನ. ಕೃಷ್ಣನ ನವರಸಮಯವಾದ ಅಯನ ಎಂದರೆ ಮಾರ್ಗವಿರುವುದು ಭಾರತ-ಭಾಗವತಗಳಲ್ಲಿ. ಅದನ್ನು ಸವಿದರೂ ಕೃಷ್ಣನನ್ನು ಸವಿದಂತೆಯೇ ಸರಿ. ಸ್ತೋತ್ರದ ಕೊನೆಯಲ್ಲಿ

ವಿಧೂತಾಂತರ್ಧ್ವಾಂತೋ ಮಧುರಮಧುರಾಯಾಂ ಚಿತಿ ಕದಾ

ನಿಮಗ್ನಃ ಸ್ಯಾಂ ಕಸ್ಯಾಂಚನ ನವನಭಸ್ಯಾಂಬುದರುಚಿ

‘ಒಳಗಿನ ಕತ್ತಲನ್ನು ಕಳೆದುಕೊಂಡ ನಾನು ಭಾದ್ರಪದಮಾಸದ

ಹೊಸದಾದ ಮೋಡದಂತೆ ಕಾಂತಿಯಿಂದ ಕೂಡಿದ, ಅತ್ಯಂತಮಧುರವಾದ ಆ ಚಿತ್ಸ್ವರೂಪದಲ್ಲಿ (ವಿಷ್ಣುವಿನಲ್ಲಿ) ಯಾವಾಗ ಮುಳುಗುವೆನು?’ ಎನ್ನುತ್ತಾ ಕರುಣಾಲಹರಿಯನ್ನು ಮುಗಿಸಿ ಭಾವುಕರನ್ನು ಭಕ್ತಿಲಹರಿಯಲ್ಲಿ ತೋಯಿಸುತ್ತಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.