ಸೋಮವಾರ, ಜೂನ್ 21, 2021
28 °C

ಪುರೋಹಿತಶಾಹಿ ತಂಟೆ ಲಾಗಾಯ್ತಿನಿಂದಲೂ ಇದೆ

ಪ್ರೊ. ಕೆ.ಫಣಿರಾಜ್ Updated:

ಅಕ್ಷರ ಗಾತ್ರ : | |

Prajavani

ಕನಕದಾಸರು ದೇವರಿಗೆ ಕಾಣದಂತೆ ಬಾಳೆ ಹಣ್ಣು ತಿನ್ನಲಾಗದ ನೀತಿ ಕತೆ ಪ್ರಸಿದ್ಧವಾಗಿದೆ; ದೇವರಿಗೆ ಕಾಣದಂತೆ ಬಾಳೆ ಹಣ್ಣು ತಿನ್ನಲು ಅಡಗುತಾಣಗಳನ್ನು ಹುಡುಕಿಕೊಳ್ಳುವುದು ಲೌಕಿಕ ವ್ಯವಹಾರವೇ ಹೊರತು ಮತದ ಆಧ್ಯಾತ್ಮವಲ್ಲ. ತನ್ನ ಮತ್ತು ದೇವರ ನಡುವೆ ಯಾವ ಮಧ್ಯವರ್ತಿಗಳನ್ನು ಬಯಸದ ನಿಜ ಭಕ್ತರಿಗೂ, ದೇವರ ಪರವಾಗಿ ಲೋಕದ ಠೇಕೆದಾರಿಕೆಯ ಅಧಿಕಾರವನ್ನು ಬಲವಂತವಾಗಿ ವಹಿಸಿಕೊಳ್ಳಲು ಹಾತೊರೆಯುವ ವೈದಿಕಶಾಹಿಗಳಿಗೂ ಇರುವ ವ್ಯತ್ಯಾಸವನ್ನು ತುಕಾರಾಮನ ಅಭಂಗವೊಂದು ಸ್ಪಷ್ಟಪಡಿಸುತ್ತದೆ; ತುಕಾ ತನ್ನ ಅಭಂಗಗಳಿಂದ ಭಕ್ತರನ್ನು ಮತಿಹೀನರನ್ನಾಗಿ ಮಾಡುತ್ತಿದ್ದಾನೆ, ಅವನ ಅಭಂಗಗಳನ್ನು ನಾಶ ಮಾಡಿ ತಮ್ಮ ಮತ ಉಳಿಸಬೇಕೆಂದು ವೈದಿಕ ಮತದ ಠೇಕೆದಾರರು ದೊರೆಗಳಿಗೆ ದೂರು ನೀಡುತ್ತಾರೆ; ದೊರೆಗೂ ಮತಾಧಿಕಾರದ ಠೇಕೆದಾರರ ಸಾಥ್ ಬೇಕಾಗಿ ತುಕಾನ ಅಭಂಗಗಳ ಕಟ್ಟನ್ನು ಭೀಮಾ ನದಿಗೆ ಎಸೆಯಲು ಅಪ್ಪಣೆ ಮಾಡುತ್ತಾನೆ; ಆಗ ತುಕಾ ದೊರೆಯ ಬಳಿ ಬೇಡುವುದಿಲ್ಲ!

ಭಕ್ತನ ನುಡಿಯಲ್ಲಿ ನಿಜವಿದ್ದರೆ ನೀನೇ ನುಡಿ ಉಳಿಸಿಕೋ ಎಂದು ತನ್ನ ದೈವಕ್ಕೆ ಸವಾಲು ಹಾಕುತ್ತಾನೆ. ವೈದಿಕಶಾಹಿ ಠೇಕೆದಾರರಿಗೆ, ದೇವರ ಕಣ್ಣು ತಪ್ಪಿಸಿ ಬಾಳೆ ಹಣ್ಣು ತಿನ್ನುವ ಲೌಕಿಕ ಅಧರ್ಮಕ್ಕೆ ಯಾರ ಅಡ್ಡಿಯೂ ಇರಕೂಡದು! ಆದರೆ, ತಮ್ಮ ಕೈಯಿಂದ ಬಾಳೆ ಹಣ್ಣು ಜಾರುತ್ತಿರುವ ಅಪಾಯ ಬಂದಾಗ, ಮತ ಸಂಪ್ರದಾಯದ ನೆಪದಲ್ಲಿ ದೊರೆಯ ಅಧಿಕಾರ ಪ್ರವೇಶ ಬೇಕು! ಇಂಥಾ ಲೌಕಿಕ ಅಧಿಕಾರ ಲಾಲಸೆ ಮತ ಡಾಂಭಿಕತೆಯನ್ನು ಭಕ್ತಿಪಂಥದ ಸಾವಿರಾರು ತಾತ್ವಿಕರು ಉಗಿದರೂ, ಹೊಸ ಸನ್ನಿವೇಶಗಳಲ್ಲಿ ಹೊಸ ವೇಷದಲ್ಲಿ, ಅದೇ ಲೋಕ ಲಾಲಸೆಯ ಮರುಪ್ರದರ್ಶನ ಮಾಡುವುದಕ್ಕೆ ವೈದಿಕಶಾಹಿ ಠೇಕೆದಾರರು ಹೇಸುವುದಿಲ್ಲ. ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಕಾಯ್ದೆಗಳ ಬಗ್ಗೆ ವೈದಿಕಶಾಹಿ ಠೇಕೆದಾರರ ದೂರು ದುಮ್ಮಾನಗಳಿಗೂ ಮತ ನಂಬಿಕೆಯ ಆಧ್ಯಾತ್ಮಕ್ಕೂ ಏನೂ ಸಂಬಂಧವಿಲ್ಲ; ಅವು ಮತ ನಂಬಿಕೆಯ ಹೆಸರಲ್ಲಿ ನಡೆಯುವ ಲೌಕಿಕ ಸಂಪತ್ತಿನ ವ್ಯವಹಾರದಲ್ಲಿ ನಿರಂಕುಶ ಸರ್ವಾಧಿಕಾರ ಸ್ಥಾಪಿಸುವ ತಂತ್ರಗಳು ಮಾತ್ರವಾಗಿವೆ- 1850ರಿಂದ ಇಂದಿನ ವರೆಗೂ ನಡೆದಿರುವ ಕೋರ್ಟು ಕಟ್ಲೆಗಳನ್ನು ಗಮನಿಸಿದರೆ ಈ ಸಂಗತಿಯು ನಿಚ್ಚಳವಾಗಿ ತೋರುತ್ತದೆ.

ಅರಸೊತ್ತಿಗೆಗಳ ಕಾಲದಲ್ಲಿ ಆಯ್ದ ದೇವಸ್ಥಾನಗಳು ಅರಸರ ಅಧಿಕಾರ ಕೇಂದ್ರಗಳಾಗಿದ್ದವು; ಜನರಿಂದ ಪಡೆದ ತೆರಿಗೆ ಹಣದಲ್ಲಿ, ಜನರ ಮುಫತ್ತಾದ ಶ್ರಮ ಪಡೆದು, ವೈಭವೋಪೇತ ದೇವಸ್ಥಾನ ಕಟ್ಟಿಸಿ, ಅವನ್ನು ಅಧಿಕಾರಸ್ಥ ಮತಗಳ ಪುರೋಹಿತಶಾಹಿಗಳಿಗೆ ವಹಿಸಿಕೊಡುತ್ತಿದ್ದರು. ಪುರೋಹಿತಶಾಹಿಯ ಶ್ರಮಹೀನ ಸವಲತ್ತಿನ ಜೀವನಕ್ಕಾಗಿ ಸಾವಿರಾರು ಎಕರೆ ಕೃಷಿಯೋಗ್ಯ ಜಮೀನುಗಳನ್ನು ದಾನ ನೀಡುತಿದ್ದರು. ಪುರೋಹಿತಶಾಹಿಯು ದೇವರ ಭಯ ಹುಟ್ಟಿಸಿ ರೈತರಿಂದ ಪುಕ್ಕಟೆ ಸಾಗುವಳಿ ಮಾಡಿಸುವುದಕ್ಕೆ ದೊರೆಯ ಕೃಪೆ ಇರುವಾಗ ‘ರಾಜಃ ಪ್ರತ್ಯಕ್ಷ ದೇವತಃ’ ಆಗಿರುತ್ತಿದ್ದ! ಭಕ್ತಿ ಪಂಥದ ಪ್ರಭಾವದಲ್ಲಿ ತಮ್ಮ ಅಧಿಕಾರಕ್ಕೆ ಜನ ಸಮ್ಮತಿಯು ತೆಳುವಾದಾಗಲೆಲ್ಲಾ, ಇದೇ ವೈದಿಕ ಪುರೋಹಿತಶಾಹಿಗಳು ಸಂತರನ್ನು ದಂಡಿಸುವಂತೆ ಅರಸರ ಮೊರೆ ಹೋಗುತ್ತಿದ್ದ ಇತಿಹಾಸವು ಭಾರತದ ಉಪಖಂಡದಲ್ಲಿ ದಂಡಿಯಾಗಿವೆ. ವೈದಿಕಶಾಹಿಯ ಲೌಕಿಕ ಕರಾಮತ್ತುಗಳನ್ನು ಅರಿತ ಬ್ರಿಟಿಷ್ ವಸಾಹತುಶಾಹಿಯೂ, ತನ್ನ ಸುಭದ್ರತೆಗೆ ಇವರ ಆಟಗಳಿಗೆ ಅವಕಾಶ ನೀಡಿತ್ತು.

ಆದರೇನು, ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ವೈದಿಕಶಾಹಿಯ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟವೂ ಒಂದು ಭಾಗವಾಗಿ ಕಟ್ಟಿಕೊಂಡಿತು. ಭಕ್ತರ ಸಮಾನತೆಯ ಆಶಯಗಳ ಪರಿಣಾಮಗಳಿಂದ ರಕ್ಷಣೆ ಪಡೆಯಲು ವೈದಿಕಶಾಹಿಯು, ವಸಾಹತುಶಾಹಿ ಅರಸೊತ್ತಿಗೆಯ ಭಾಗವಾದ ಕೋರ್ಟು ಕಟ್ಲೆಗಳಿಗೆ ಮೊರೆ ಹೋಗುವುದಕ್ಕೂ, ಅಧಿಕಾರಿಗಳ ಕೃಪೆಗೆ ಯಾಚಿಸುವುದಕ್ಕೂ, ಶುರುವಿಟ್ಟುಕೊಂಡಿತ್ತು. ‘ಸಕಲ ಜಾತಿಗಳಿಗೂ ದೇವಸ್ಥಾನ ಪ್ರವೇಶ ಚಳವಳಿ’ ಹಾಗೂ ದೇವಸ್ಥಾನಗಳ ಆಸ್ತಿ ದುರ್ವ್ಯವಹಾರ ದೂರುಗಳು ‘ಹಿಂದೂ ಭಕ್ತ’ರಿಂದ ಬರತೊಡಗಿದ್ದರ ಫಲವಾಗಿ 1925ರಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ ಬಂದದ್ದು. ಸ್ವತಂತ್ರ ಭಾರತದ ಯಾವ ಸರ್ಕಾರವೂ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಕಾಯ್ದೆ ಮಾಡಿಲ್ಲ, ಎಲ್ಲಾ ರಾಜ್ಯಗಳಲ್ಲೂ ದತ್ತಿ ಇಲಾಖೆಗಳನ್ನು ಸ್ಥಾಪಿಸಬೇಕು ಎಂಬ ಕಾನೂನು ಸಹ ಇಲ್ಲ. ಆಯಾ ರಾಜ್ಯಗಳಲ್ಲಿ ಇರುವ ಸ್ಥಿತಿಗಳಿಗೆ ಅನುಗುಣವಾಗಿ ದತ್ತಿ ಇಲಾಖೆಗಳನ್ನು ಸ್ಥಾಪಿಸಲಾಗಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ ಪ್ರಕಾರ ದೇವಸ್ಥಾನಗಳನ್ನು ರಾಜ್ಯ ಸರ್ಕಾರ ತನ್ನ ಸಂಪೂರ್ಣ ಸ್ವಾಮ್ಯಕ್ಕೆ ತಂದುಕೊಂಡು, ತನ್ನದೇ ಮತಾಚರಣೆಯ ನಿಯಮ ರೂಪಿಸಬೇಕು ಎಂಬ ಯಾವ ಪ್ರಸ್ತಾಪವೂ ಇರುವುದಿಲ್ಲ. ‘ಸಾರ್ವಜನಿಕ ದೇವಸ್ಥಾನ’ ಎಂದು ಘೋಷಿಸಿಕೊಂಡಿರುವ ದೇವಸ್ಥಾನಗಳ ಆಡಳಿತ ಮಂಡಳಿಯ ವ್ಯವಹಾರಗಳನ್ನು ಇಲಾಖೆಯು ಪರಿಶೀಲಿಸುವ ಅಧಿಕಾರವನ್ನು ಮಾತ್ರವೇ ಹೊಂದಿರುತ್ತದೆ.

ದೇವಸ್ಥಾನಗಳ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಹಾಗೂ ಅದರ ಮತ ನಂಬಿಕೆಯ ಕಾರ್ಯಗಳಿಗೆ ಸದ್ವಿನಿಯೋಗವಾಗುವ ಕುರಿತು ಇಲಾಖೆಯು ನಿಗಾ ವಹಿಸುತ್ತದೆಯೇ ವಿನಹ, ಆದಾಯದ ಚಿಕ್ಕಾಸನ್ನೂ ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸುವ ಅಥವಾ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಬಳಸುವ ಯಾವ ನಿಯಮಗಳೂ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆಯಲ್ಲಿ ಇರುವುದಿಲ್ಲ.

ಶ್ರೀಮಂತ ದೇವಸ್ಥಾನಗಳಲ್ಲಿ ಉಳಿತಾಯ ವಾಗುವ ಆದಾಯದಲ್ಲಿ ಒಂದಿಷ್ಟನ್ನು, ಅದೇ ಮತ ನಂಬಿಕೆಯ ಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗಿಸುವ ತಿದ್ದುಪಡಿ ತಂದಾಗ, ಶ್ರೀಮಂತ ದೇವಸ್ಥಾನಗಳು ಅದನ್ನು ವಿರೋಧಿಸಿದ ಉದಾಹರಣೆಗಳಿವೆ! ಆದರೆ ‘ಸಾರ್ವಜನಿಕ ದೇವಸ್ಥಾನ’ ಎಂದು ಘೋಷಿಸಿಕೊಂಡು, ಎಲ್ಲ ಜಾತಿ ವರ್ಗಗಳಿಂದ ಕಾಣಿಕೆ ಸ್ವೀಕರಿಸಿ ಆದಾಯ ವೃದ್ಧಿಸಿಕೊಳ್ಳುವ ಆಡಳಿತ ಮಂಡಳಿಯಲ್ಲಿ ಸಾಂವಿಧಾನಿಕ ನಿಯಮಗಳನ್ವಯ ಪ್ರಾತಿನಿಧ್ಯ ಇರಬೇಕು ಮತ್ತು ಆದಾಯವು ಪಾರದರ್ಶಕವಾಗಿ ಲೆಕ್ಕಪರಿಶೋಧನೆಗೆ ತೆರೆದುಕೊಳ್ಳಬೇಕು ಎಂಬ ನ್ಯಾಯಬದ್ಧ ನಿಯಮಗಳ ಬಗ್ಗೆ, ವೈದಿಕಶಾಹಿಯು ತಂಟೆ ಎತ್ತುವುದು ಲಾಗಾಯ್ತನಿಂದ ನಡೆಯುತ್ತಿದೆ; ಈ ತಂಟೆಗಳನ್ನು ಸಾಮಾನ್ಯ ಭಕ್ತರು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಪ್ರಶ್ನಿಸುತ್ತಿರುವುದೂ ನಡೆಯುತ್ತಿದೆ.

ವೈದಿಕಶಾಹಿಯ ಲೌಕಿಕ ಯಜಮಾನಿಕೆಗೆ ಸಾಮಾನ್ಯ ಭಕ್ತಗಣವು ಎದುರಾಗಿ ಸಾಂವಿಧಾನಿಕ ಸಂಸ್ಥೆಗಳಿಂದ ನ್ಯಾಯ ಪಡೆದಾಕ್ಷಣವೇ, ವೈದಿಕಶಾಹಿಯು ‘ಮತ ನಂಬಿಕೆ’ಯ ಸ್ವಾಯತ್ತತೆಯಲ್ಲಿ ಸರ್ಕಾರದ ಮಧ್ಯಪ್ರವೇಶವೆಂದು ಟೊಂಕ ಕಟ್ಟಿ ನಿಲ್ಲುವ ವರಸೆಯೇ, ಸದ್ಯಕ್ಕೆ ಇರುವ ಅತಿ ಸೌಮ್ಯ ಸಾಂವಿಧಾನಿಕ ಮಧ್ಯಪ್ರವೇಶವನ್ನು ಸಮರ್ಥಿಸುತ್ತದೆ.

(ಲೇಖಕ: ಚಿಂತಕ, ಮಣಿಪಾಲ ಎಂಐಟಿಯಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಸಹ ಪ್ರಾಧ್ಯಾಪಕ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು