ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ವಿಚಾರದ ಸಂಸ್ಕೃತಿಯಲ್ಲಿ ಜೀವನಮೌಲ್ಯ

Last Updated 13 ಮೇ 2020, 19:45 IST
ಅಕ್ಷರ ಗಾತ್ರ

ಪ್ರಕೃತಿ ಹೇಗೆ ಕೆಲವು ನಿಯಮಗಳನ್ನು ಅನುಸರಿಸಿ ಸಾಗುವುದೋ ಹಾಗೆಯೇ ನಮ್ಮ ಆಲೋಚನೆಯೂ ಕೆಲವು ನಿಯಮಗಳಿಗೆ ಒಳಪಟ್ಟಿದೆ. ನಾವು ಸಾಮಾನ್ಯವಾಗಿ ’ಅವರು ತಮ್ಮ ವಿಚಾರಶಕ್ತಿಯನ್ನು ಕಳೆದುಕೊಂಡಿದ್ದಾರೆ, ಅತಾರ್ಕಿಕವಾಗಿ ಮಾತನಾಡುತ್ತಿದ್ದಾರೆ‘ ಎಂದೆಲ್ಲ ಹೇಳುತ್ತೇವೆ; ಆದರೆ ವಿಚಾರವನ್ನು, ತರ್ಕವನ್ನು ಮೀರಿ ಆಲೋಚಿಸುವುದು ನಿಜವಾಗಿಯೂ ಸಾಧ್ಯವೇ ಇಲ್ಲ. ಅತಾರ್ಕಿಕವಾದದ್ದು ಎಂದರೆ ತರ್ಕವನ್ನು ಮೀರಿದ್ದು ಎಂದು ಅರ್ಥವಲ್ಲ; ಬದಲಾಗಿ ತಾರ್ಕಿಕ ನಿಯಮಗಳಲ್ಲಿ ಅಥವಾ ತಾರ್ಕಿಕ ಪ್ರಕ್ರಿಯೆಗಳಲ್ಲಿ ಲೋಪಗಳು ಉಂಟಾಗಿವೆ ಎಂದಷ್ಟೇ ಅರ್ಥ. ಭಾವನಾತ್ಮಕವಾಗಿ ಮಾತನಾಡುವಾಗಲೆಲ್ಲ ನಾವು ತರ್ಕವನ್ನು ಮೀರಿ ಬಿಟ್ಟಿದ್ದೇವೇನೋ ಎಂಬ ಭ್ರಮೆ ಉಂಟಾಗುವುದು ನಿಜ, ಆದರೆ ಭಾವನೆಗಳೂ ತಮ್ಮದೇ ವಿಶಿಷ್ಟ ತರ್ಕಕ್ಕೆ ಒಳಪಟ್ಟಿವೆ. ವಿಚಾರವಂತರಾಗಿ ಬಾಳುವುದು ತುಂಬ ಕಷ್ಟ ಎಂದು ಒಮ್ಮೊಮ್ಮೆ ಅನಿಸಿದರೆ, ವೈಚಾರಿಕತೆಯನ್ನು ಪೂರ್ತಿಯಾಗಿ ಮೀರುವುದು ಅಸಾಧ್ಯ ಎಂಬುದರ ಕಡೆಗೂ ಒಮ್ಮೆ ಗಮನ ಹರಿಸಿ ನೋಡಿ.

’ವೈಚಾರಿಕತೆಯೇ ಬಂಧನ, ವೈಚಾರಿಕತೆಯೇ ಮೋಕ್ಷ‘ ಎಂಬ ವಿರೋಧಾಭಾಸವೇ ಮೈವೆತ್ತಂತಿರುವ ಮನುಷ್ಯನ ಪ್ರಜ್ಞೆಯು, ವಿಚಾರವಂತಿಕೆಯೇ ಎಲ್ಲ ನಿರ್ಧಾರ, ಕ್ರಿಯೆಗಳಿಗೆ ತಳಹದಿಯಾಗಬೇಕಾದ ಅನಿವಾರ್ಯತೆ ಇರುವ ಮಾನವಸಮಾಜವನ್ನು ಹೇಗೆ ಸಂಧಿಗ್ಧತೆಗೆ ದೂಡುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರಷ್ಟೇ ತಿಳಿಯುತ್ತದೆ. ವೈಚಾರಿಕತೆಯು ಕೇವಲ ದಿನನಿತ್ಯದ ವ್ಯವಹಾರ ಸುಲಲಿತವಾಗಿ ಸಾಗುವುದಕ್ಕಷ್ಟೇ ಸೀಮಿತವಾದುದಲ್ಲ; ಕೇವಲ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ಪೋಷಕವಾದುದಷ್ಟೇ ಅಲ್ಲ; ಮಾನವಜೀವನದ ಅತ್ಯುನ್ನತ ಮೌಲ್ಯಗಳಾದ ’ಸತ್ಯ, ಶಿವ, ಸೌಂದರ್ಯ‘ಗಳ ಸಾಧನೆಗೂ ಅಡಿಪಾಯವಾದದ್ದು. ’ಸತ್, ಚಿತ್, ಆನಂದ‘ಗಳ ಅರಸುವಿಕೆಯೇ ಮುಖ್ಯವಾದ ಭಾರತೀಯ ದರ್ಶನಪರಂಪರೆಯು ಅಲೌಕಿಕ, ಕಾವ್ಯಮಯ, ಆಧ್ಯಾತ್ಮಿಕ ಅನುಭವಗಳ ಕುರಿತು ಮಾತನಾಡುತ್ತಿರುವಾಗಲೂ ವೈಚಾರಿಕತೆಯ ಸುಭದ್ರವಾದ ಅಡಿಪಾಯದ ಮೇಲೆ ನಿಂತಿರುತ್ತದೆ ಎನ್ನುವುದು ರೋಮಾಂಚಕವಲ್ಲವೇ?

ಸತ್ಯದ ಅರಿವಿಗೇನೋ ತರ್ಕದ ಬಲ ಬೇಕು ನಿಜ; ಆದರೆ ಶಿವ, ಸೌಂದರ್ಯಗಳಿಗೆ ತರ್ಕದ ಹಂಗೇಕೆ ಎಂಬ ಪ್ರಶ್ನೆ ಸಹಜವೇ. ಇತರರ ತಪ್ಪು ನಡೆ, ನುಡಿಯನ್ನು, ವೈಯಕ್ತಿಕ ದೌರ್ಬಲ್ಯಗಳನ್ನು ನಾವು ದುಷ್ಟಬುದ್ಧಿ, ನೈತಿಕ ಅಧಃಪತನ, ಅನ್ಯಾಯ ಎಂದು ವ್ಯಾಖ್ಯಾನಿಸುವ ಬದಲು ’ಸತ್ಯವನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಆದ ವಿಚಾರದೋಷ‘ ಎಂದು ವ್ಯಾಖ್ಯಾನಿಸಿದರೆ ಹೇಗೆ? ಜೈನ, ಬೌದ್ಧ, ಅದ್ವೈತದರ್ಶನಗಳ ನಿಲುವು ಸರಿಸುಮಾರು ಇಂತಹುದೇ. ಕರುಣೆಯೇ ಹೂರಣವಾದ ಬೌದ್ಧ ದರ್ಶನ ತಪ್ಪು /ಅಪರಾಧಗಳನ್ನು ’ಅಜ್ಞಾನ‘ ಎಂದು ನೋಡುತ್ತದೆಯೇ ಹೊರತು ’ಪಾಪ‘ ಎನ್ನುವಂತೆ ನೋಡುವುದಿಲ್ಲ. ಹೌದು, ’ಮತ್ತೊಬ್ಬರಿಗೆ ಕೇಡು ಬಗೆದು ನಾನು ಚೆನ್ನಾಗಿರುವೆ‘ ಎನ್ನುವುದು ಪ್ರಪಂಚದ ಎಲ್ಲದರ ನಡುವಿನ ಸಂಬಂಧದ ಸತ್ಯದ ಸ್ವರೂಪ ತಿಳಿಯದ ಅಜ್ಞಾನವೇ ಅಲ್ಲವೆ? ಸತ್ಯಕ್ಕೆ ’ಒಂದು‘ ಅಥವಾ ’ಸೊನ್ನೆ‘, ’ಇದೆ‘ ಅಥವಾ ‘ಇಲ್ಲ‘ ಎಂಬ ಎರಡೇ ಮುಖಗಳಿಲ್ಲ; ನಡುವೆ ಅವ್ಯಕ್ತವಾದದ್ದು, ಅನಿರ್ವಚನೀಯವಾದದ್ದು ಬಹಳಷ್ಟಿದೆ ಎಂಬ ಜೈನತರ್ಕವು ಅಹಿಂಸೆಯ ಮೂಲದಂತೆಯೇ ಇದೆಯಲ್ಲವೇ?

ಭಾರತೀಯ ಸಂಸ್ಕೃತಿಯಲ್ಲಿ ಕಲೆಯೂ ಜೀವನಮೌಲ್ಯಗಳ ಚೌಕಟ್ಟಿನಲ್ಲಿಯೇ ಅರಳುವುದು. ’ಕಲೆಗಾಗಿ ಕಲೆ‘ ಎಂಬ ನಿಲುವಿಗೆ ಅಷ್ಟು ಮನ್ನಣೆ ನೀಡದ ಪರಂಪರೆಯಲ್ಲಿ, ಕಲೆಯೂ ಸತ್ಯದ ಅರಿವು, ಒಳಿತಿನ ಸಾಧನೆಗಳ ಜೊತೆಗೇ ನಿಲ್ಲಬೇಕು. ’ಕರುಣೆ‘ ಎಂಬ ರಸವಿಲ್ಲದ ಕಲೆಯೂ ಕಲೆಯೇ? ಪರಮೋನ್ನತ ಸತ್ಯದ ಒಂದು ಕ್ಷಣಿಕ, ಅಪೂರ್ಣ ಅನುಭವವನ್ನಾದರೂ ನೀಡದ ಕಲೆ ನಿಜವಾದ ಕಲೆಯೇ? ಕಲಾನುಭವವೂ ’ಸಮ್ಯಕ್ ದೃಷ್ಟಿ‘ ಇಲ್ಲದೆ ಸಾಧ್ಯವಿಲ್ಲ. ಒಟ್ಟಾರೆ ವೈಚಾರಿಕ ಪ್ರಜ್ಞೆ, ಶುದ್ಧ ಆಲೋಚನೆಗಳಿಲ್ಲದೆ ಬದುಕಿನ ಯಾವ ಆನಂದ, ಸೌಖ್ಯವೂ ಲಭ್ಯವಿಲ್ಲ. ಭಿನ್ನ ಧ್ವನಿಗಳನ್ನು ಆದರಿಸುವ ನೈತಿಕ ಮೌಲ್ಯವು ವೈಚಾರಿಕತೆಯ ಕಡೆಗಿನ ನಮ್ಮ ಬದ್ಧತೆ, ನಿಷ್ಠೆಯಿಂದಷ್ಟೇ ಸಾಧ್ಯ. ಭಾರತೀಯ ತತ್ತ್ವಶಾಸ್ತ್ರದಲ್ಲಿ ನ್ಯಾಯದರ್ಶನಕ್ಕೆ ವಿಶೇಷವಾದ ಸ್ಥಾನವಿದೆ; ವಾದ-ಪ್ರತಿವಾದಗಳ ವಿಚಾರ ಸಂಸ್ಕೃತಿಯನ್ನು ಸಂಭ್ರಮಿಸುವ ಸಂಪ್ರದಾಯವಿದೆ. ಈ 'ನಮ್ಮ ಸಂಸ್ಕೃತಿ' ಮಸುಕಾಗದೆ ಉಳಿಯಬೇಕಾದರೆ ನಾವು ತುಳಿಯಬೇಕಾದ ಹಾದಿ ಯಾವುದು ಎಂಬುದನ್ನೂ ನಮ್ಮ ವೈಚಾರಿಕತೆ ಮತ್ತು ಮೌಲ್ಯಗಳೇ ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT