ಒಂದು ದೃಷ್ಟಿಯಲ್ಲಿ ಪ್ರಾರ್ಥನೆ ಎಂದರೆ ದೇವರೊಡನೆ ಮಾತನಾಡುವುದು. ಮಾತು ಇತರರೊಡನೆ ಸಂಬಂಧವನ್ನು ಬೆಳೆಸಿಕೊಳ್ಳುವ ವಿಧಾನ. ನಾವು ರೈಲಿನಲ್ಲೋ, ಬಸ್ಸಿನಲ್ಲೋ ಪ್ರಯಾಣ ಮಾಡುತ್ತಿರುವಾಗ ಅಪರಿಚಿತರೊಡನೆ ಸಂಬಂಧ ಬೆಳೆಸುತ್ತೇವೆ ಮತ್ತು ಎಷ್ಟೋ ವೇಳೆ ಅವರು ನಮ್ಮ ನಿಕಟ ಸ್ನೇಹಿತರೂ ಆಗಿಬಿಡುತ್ತಾರೆ. ದೇವರ ಬಗ್ಗೆ ಮಾತನಾಡುವುದಕ್ಕಿಂತ ದೇವರೊಡನೆ ಮಾತನಾಡುವುದು ಒಳ್ಳೆಯದು ಎಂಬುದು ಸಂತರ ಅಭಿಪ್ರಾಯ.
ಹೀಗೆ ದೇವರೊಡನೆ ಮಾತನಾಡುವುದರ ಮೂಲಕ ಅವನೊಡನೆ ನಿಕಟ ಸಂಬಂಧ ಉಂಟಾಗುವುದು. ಅವನು ನಮ್ಮವನೇ ಎಂಬ ಭಾವದಿಂದ ನಮ್ಮ ಅಂತರಂಗವನ್ನು ತೆರೆದು ಅವನ ಮುಂದೆ ಇಡಬಹುದು. ನಮ್ಮ ಹೃದಯದ ವೇದನೆಯನ್ನು ಅವನ ಮುಂದೆ ತೋಡಿಕೊಳ್ಳಬಹುದು, ನಮ್ಮ ಎಲ್ಲಾ ದೋಷಗಳನ್ನೂ ಅವನ ಮುಂದೆ ತೆರೆದಿರಿಸಬಹುದು. ಈ ರೀತಿ ಮುಕ್ತವಾಗಿ ನಮ್ಮ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುವುದರ ಮೂಲಕ ನಮ್ಮ ದೋಷಗಳು ನಮಗೆ ಸ್ಪಷ್ಟವಾಗಿ ಕಾಣತೊಡಗುತ್ತವೆ. ಈ ರೀತಿಯ ಕಳಕಳಿಯ ಪ್ರಾರ್ಥನೆ ನಮ್ಮ ಅಂತರಂಗವನ್ನು ಕಲಕಿ ಅಲ್ಲಿರುವ ಕೊಳಕನ್ನೆಲ್ಲ ಹೊರಹಾಕುತ್ತದೆ.
ಕಾಣದ ದೇವರೊಡನೆ ಮಾತನಾಡುವುದು ಹೇಗೆ ಎಂಬ ಪ್ರಶ್ನೆ ಏಳಬಹುದು. ಆದರೆ, ನಾವು ಯಾವಾಗಲೂ ಮನಸ್ಸಿನಲ್ಲಿ ಇತರರೊಡನೆ ಮಾತನಾಡುತ್ತಿರುತ್ತೇವೆ. ಮಾತನಾಡುವುದಕ್ಕೆ ಯಾರಾದರೂ ವ್ಯಕ್ತಿ ನಮ್ಮ ಮುಂದೆ ಇರಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಅನೇಕ ವ್ಯಕ್ತಿಗಳನ್ನು ಕಲ್ಪಿಸಿಕೊಂಡು ಅವರೊಡನೆ ಸ್ನೇಹ ಸಂಭಾಷಣೆ ನಡೆಸುತ್ತೇವೆ, ವಾದ ಮಾಡುತ್ತೇವೆ, ಕೆಲವೊಮ್ಮೆ ಜಗಳವಾಡುತ್ತೇವೆ. ಹೀಗೆಯೇ ನಮ್ಮ ಮನಸ್ಸಿನಲ್ಲಿ ನಮ್ಮ ಇಷ್ಟ ದೇವತೆಯೊಡನೆ ಮಾತನಾಡಬಹುದು. ಆಗ ನಮ್ಮ ಹೃದಯಾಂತರಾಳದಲ್ಲಿ ಉಂಟಾಗುವ ದಿವ್ಯ ಸ್ಪಂದನ, ಸ್ಫುರಿಸುವ ದಿವ್ಯ ಭಾವನೆಗಳೇ ಅತ್ಯುತ್ತಮ ಪ್ರಾರ್ಥನೆ. ಅವೇ ಭಗವಂತನು ನಮ್ಮ ಪ್ರಾರ್ಥನೆಗೆ ನೀಡುವ ಉತ್ತರವೂ ಕೂಡ ಕೂಡ. ‘ಭಗವಂತನೆಡೆಗೆ ಕಳಿಸಿದ ಕೃತಜ್ಞತಾಪೂರ್ಣವಾದ ಒಂದು ಆಲೋಚನೆಯೇ ಅತ್ಯಂತ ಪರಿಪೂರ್ಣವಾದ ಪ್ರಾರ್ಥನೆ’ ಎಂಬುದು ಅನುಭವಿಗಳ ಮಾತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.