ಸೋಮವಾರ, ಜೂನ್ 1, 2020
27 °C

ಸಂಸ್ಕೃತಿ ಸಂಭ್ರಮ | ಏಕಾಂತ – ಏಕತಾನತೆ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಜಗತ್ತು ನಮ್ಮ ವಿರುದ್ಧ ಕಿಟಕಿ ಬಾಗಿಲುಗಳನ್ನು ಮುಚ್ಚಿದೆ ಎಂದು ಅನೇಕ ಬಾರಿ ನಮಗನ್ನಿಸಿದೆಯಲ್ಲವೆ? ಆದರೆ ಪ್ರಸ್ತುತದಲ್ಲಿ ನಾವು ಜಗತ್ತಿನ ವಿರುದ್ಧ ನಮ್ಮ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದೇವೆ. ಇದು ವರವೋ ಶಾಪವೋ ಎಂಬುದು ಕೋಟಿ ವರಾಹಗಳ ಪ್ರಶ್ನೆ. ಸಮಚಿತ್ತ, ಸಂತೋಷದಿಂದ ಈ ಏಕಾಂತವಾಸವನ್ನು ಅನುಭವಿಸಬಲ್ಲೆವಾದರೆ ಅದು ವರ. ಸಂಕಟ, ಹತಾಶೆ, ಆಕ್ರೋಶಗಳಿಂದ ನಾವು ಬಾಗಿಲು ಬಡಚಿಕೊಂಡರೆ ಅದು ಶಾಪ.

ಮನುಷ್ಯ ವಿಶಾಲವಾಗಿ ಬೆಳೆಯುತ್ತ ಬೆಳೆಯುತ್ತ ಏಕಾಂಗಿಯಾಗಿರಲು, ಏಕಾಂತವಾಸ ಅನುಭವಿಸಲು ಸಿದ್ಧನಾಗಬೇಕು, ಸಂತೋಷ ಪಡಬೇಕು. ಗುಂಪು ಗುಂಪಾಗಿ ಇರುವುದು, ಗುಂಪಿನಲ್ಲಿ ಬೆಳೆಯುವುದು, ಗುಂಪಿನೊಂದಿಗೇ ಸುಖಿಸುವುದು – ಇವೆಲ್ಲ ವಿಕಾಸದ ಪ್ರಾಥಮಿಕ ಹಂತಗಳು. ಪ್ರಾಣಿಗಳು ಹಿಂಡಿನಿಂದ ಬೇರ್ಪಟ್ಟರೆ ವಿಹ್ವಲವಾಗಿಬಿಡುತ್ತವೆ, ಕಂಗಾಲಾಗಿ ದಿಕ್ಕಾಪಾಲಾಗಿ ಓಡುತ್ತ ತಮ್ಮ ಗುಂಪನ್ನು ಅರಸಬಯಸುತ್ತವೆ. ಮನುಷ್ಯನೂ ಮೂಲತಃ ಪ್ರಾಣಿಯೇ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ವ್ಯಕ್ತಿಗೆ ಈ ಸಮಾಜವು ನೀಡುವ ಅತಿ ಘೋರ ಶಿಕ್ಷೆಯೆಂದರೆ ಬಹಿಷ್ಕಾರ – ಅಂದರೆ ಗುಂಪಿನಿಂದ ಬೇರ್ಪಡಿಸುವುದು; ಇನ್ನೂ ಘೋರವೆಂದರೆ ಏಕಾಂತ ಸೆರೆವಾಸ (Solitary Confinement). ಈ ಸಮಾಜದ ಮೇಲಣ ಅವಲಂಬನೆಯನ್ನು ಮಿತಗೊಳಿಸುತ್ತ ಸಾಗುವುದೇ ಅಧ್ಯಾತ್ಮ. ಅದು ಅಂತರಂಗದ ಪಯಣ. ಅಲ್ಲಿ ನಿಜವಾದ ಏಕಾಂಗಿತನ, ಆ ರೀತಿಯ ಹಠದ, ತಪದ ಬದುಕೇ ಏಕತಾನತೆ. ನಿಂತಲ್ಲಿ ನಿಲ್ಲದೆ ಮನಸ್ಸು ಚಡಪಡಿಸುತ್ತಿರುವಾಗ ಮನುಷ್ಯ ಏನಾದರೊಂದು ಮಾಡಲು ಹಾತೊರೆಯುವುದು ಈ ಕಾರಣಕ್ಕಾಗಿಯೇ. ಒಂದರ್ಥದಲ್ಲಿ ‘ಸಮಾಜಸೇವೆ’ಯೂ ಈ ಬಗೆಯ ಚಟವೇ. ನಿಜವಾದ ಕರ್ಮಯೋಗ ಮಾಡುವವರು ಕೋಟಿಗೊಬ್ಬರು – ಕೇವಲ ಕರ್ಮಕ್ಕಾಗಿ ಕರ್ಮ (Work for Work’s sake) ಸುಲಭದ ಆದರ್ಶವಲ್ಲ. ಸುಮ್ಮನಿರಲಾರದ್ದರಿಂದ ಮಾಡುವ ಕರ್ಮವದು! ವಿವೇಕಾನಂದರೆನ್ನುತ್ತಾರೆ: ‘ಕರ್ಮಕ್ಕಾಗಿ ಕರ್ಮ ಕೈಗೊಳ್ಳುವ ಮಹನೀಯನನ್ನು ಕಾಣಲು, ನಾನು ಬೇಕಾದರೆ ನನ್ನ ಮೊಣಕೈ ಮೊಣಕಾಲುಗಳ ಮೇಲೆ ತೆವಳುತ್ತ ಇಪ್ಪತ್ತು ಮೈಲಿ ಸಾಗಲು ಸಿದ್ಧನಿದ್ದೇನೆ. ಅವನಿಗೆಲ್ಲೋ ಒಂದು ಫಲಾಪೇಕ್ಷೆಯಿದೆ. ಹಣವಿಲ್ಲದಿದ್ದರೆ, ಅಧಿಕಾರ; ಅಧಿಕಾರವಲ್ಲದಿದ್ದರೆ, ಮತ್ತಾವುದೋ ಲಾಭ. ಏನೋ ಒಂದು ಮೂಲ ಆಶಯ ಇದ್ದೇ ಇರುತ್ತದೆ . . . .’

ಯಾವುದೋ ವಿಶೇಷವೂ ಅದ್ಭುತವೂ ಸುಂದರವೂ ಆದಂತಹ ಅನುಭವಗಳು ನಮಗೆ ಸಾಧ್ಯವಾಗುವುದು ನಾವು ಜನರಿಂದ, ಜಗದ ಗದ್ದಲದಿಂದ ದೂರಾದಾಗ. ಆರಂಭದಲ್ಲಿ ಇದು ಭೌತಿಕ ಅಂತರವಾದರೆ, ಅನುಭವ ಗಟ್ಟಿಯಾದಂತೆಲ್ಲ ಮಾನಸಿಕ ಅಂತರವನ್ನೂ ಸಾಧಿಸಬಹುದು. ಮೌನದ ಆಳಕ್ಕಿಳಿದಾಗಲೇ ಪದಗಳು ತಮ್ಮ ಅರ್ಥ ಕಳೆದುಕೊಂಡು ಭಾವಗಳಾಗಿ ಮಾರ್ಪಡುವುದು. ಆದರೆ ನಾವು ಸದಾ ಸಂಘ ಬಯಸುತ್ತೇವೆ. ಮಾತು ಕೇಳಲು, ಮಾತಾಡಲು ಬಯಸುತ್ತೇವೆ. ಇದೊಂದು ದೌರ್ಬಲ್ಯ. ಖಲೀಲ್ ಗಿಬ್ರಾನ್ ಎನ್ನುತ್ತಾನೆ: ‘ನಿಮ್ಮಲ್ಲಿ ಕೆಲವರು ಏಕಾಂಗಿಯಾಗಿರಲು ಹೆದರಿ ವಾಚಾಳಿಗಳನ್ನು ಬಯಸುತ್ತೀರಿ. ಏಕಾಂಗಿತನದ ಮೌನ ಅವರ ಕಣ್ಣುಗಳಿಗೆ, ಅವರು ತಪ್ಪಿಸಿಕೊಳ್ಳಬಯಸುವ ಬತ್ತಲನ್ನು ಪ್ರದರ್ಶಿಸುತ್ತದೆ. ಇನ್ನು ಮಾತಾಡುವವರು, ತಮ್ಮ ಅರಿವಿಗೇ ಬಾರದಂತೆ ತಾವೇ ತಿಳಿಯದ ಸತ್ಯವೊಂದನ್ನು ತಿಳಿಸಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರಿದ್ದಾರೆ, ಅವರೊಳಗೆ ಸತ್ಯವಿದೆ. ಆದರೆ ಅವರು ಅದನ್ನು ಮಾತುಗಳ ಮೂಲಕ ತಿಳಿಸುವುದಿಲ್ಲ. ಇಂತಹವರ ಎದೆಯೊಳಗಿನ ಆತ್ಮಗಳಲ್ಲೇ ಲಯಬದ್ಧ ಮೌನ ಅಡಗಿರುತ್ತದೆ.’

ರಮಣರ ಮೌನದಲ್ಲಿ ಈ ಬಗೆಯ ಲಯವಿತ್ತು. ಶ್ರೀರಾಮಕೃಷ್ಣರು ಪ್ರಾಪಂಚಿಕರೊಡನೆ ಮಾತೇ ಆಡುತ್ತಿರಲಿಲ್ಲವಂತೆ. ಅವರೆದುರು ಯಾರಾದರು ಶುದ್ಧ ಲೋಕವ್ಯವಹಾರ ಮಾತಾಡಿದರೆ ಅವರಿಗೆ ಅಸಹನೀಯ ವೇದನೆಯಾಗುತಿತ್ತಂತೆ. ‘ಗರಗಸದಿಂದ ತಲೆಯನ್ನು ಸೀಳಿದಂತೆ’) ನೋವಾಗುತಿತ್ತು ಎಂದು ಅವರು ತಮ್ಮ ಭಕ್ತರಿಗೆ ತಿಳಿಸುತ್ತಾರೆ. ಅಂತಹವರು ತಮ್ಮ ಕೋಣೆಯಿಂದ ಹೊರಹೋಗುವವರೆಗೆ ಪರಮಹಂಸರು ಮಾತೇ ಆಡುತ್ತಿರಲಿಲ್ಲವಂತೆ.

ಮೌನ ಮತ್ತು ಏಕಾಂತ ಅಂತರ್ಮುಖಿಯಾಗಲು ಪರಮೌಷಧ. ಎಲ್ಲ ಧರ್ಮಗಳು ಇವುಗಳ ಮಹತ್ವವನ್ನು ಸಾರುತ್ತವೆ. ಏಕಾಂತ ಮೊದಲಿಗೆ ಕಷ್ಟವೆನಿಸುತ್ತದೆ; ಆಮೇಲೆ ಸಹ್ಯವೆನಿಸುತ್ತದೆ; ಕೊನೆಗೆ ಪ್ರಿಯವೆನಿಸುತ್ತದೆ. ಬುದ್ಧಿವಂತರಾದವರು ಶಾಪವನ್ನೂ ವರವಾಗಿಸಿಕೊಳ್ಳುತ್ತಾರೆ, ವರವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ನಾವೆಲ್ಲ ಬುದ್ಧಿವಂತರಾಗಲು ಇದು ಸಕಾಲ, ಇದೊಂದು ಸದವಕಾಶ.

ಸುಮ್ಮನಿರುವುದೇ ತಪಸ್ಸು...

ಚಟುವಟಿಕೆಗಳಿಗೊಂದು ಕಾರಣ ಹುಡುಕುವ ಮನುಷ್ಯ ಸುಮ್ಮನೆ ಒಂದೇ ಕಡೆ ಇರುವುದೇ ಒಂದು ತಪಸ್ಸು. ಅದನ್ನು ಸಾಧಿಸುವ ಪ್ರಯತ್ನ ಮಾಡುವುದೇ ನಿಜವಾದ ಪುರುಷಲಕ್ಷಣ. ಮನಸ್ಸು ಸೆಳೆದ ಕಡೆಗೆಲ್ಲ ನಡೆಯುವ ಮನುಷ್ಯ ಈಗ ಅದನ್ನು ಬಂಧಿಸಿ ತನ್ನ ಅಂತರಂಗದಲ್ಲಿ ತನ್ನನ್ನು ಬಿಡುಗಡೆಗೊಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.