ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಮೋಹಕ್ಕೆ ಶಕ್ತಿಯ ಅವತಾರ

ಭಾಗ –139
ಅಕ್ಷರ ಗಾತ್ರ

ಬ್ರಹ್ಮನಿಗೆ ಬುದ್ಧಿ ಹೇಳುವುದನ್ನು ಮುಂದುವರೆಸಿದ ವಿಷ್ಣು, ತ್ರಿಗುಣಗಳ ಸಂಬಂಧವಿಲ್ಲದವನಾಗಿರುವ ಶಿವನು ಮಾಯಾಮಯನಾದ ಸ್ವರೂಪವುಳ್ಳವನಲ್ಲ; ಪರಮಾರ್ಥವಾದ ಸ್ವರೂಪವುಳ್ಳವನು. ನಿಸ್ಮೃಹನು ಮಾಯೆಯ ಸಂಬಂಧವಿಲ್ಲದವನಾದರೂ ಮಾಯಾಮಯವಾದ ಅನೇಕ ಅದ್ಭುತ ಘಟನೆಗಳನ್ನು ಪ್ರದರ್ಶಿಸುವ ಆನಂದಸ್ವರೂಪನು. ತನ್ನ ಸ್ವರೂಪದಲ್ಲಿಯೇ ವಿಹರಿಸುವವನು. ಸುಖ-ದುಃಖ, ಶೀತೋಷ್ಣ ಮುಂತಾದ ದ್ವಂದ್ವಗಳಿಲ್ಲದ ಸದಾ ಸುಖಸ್ವರೂಪನು. ಯೋಗಿ. ದುಃಖಿತರಲ್ಲಿ ಸದಾ ಕರುಣೆಯುಳ್ಳವನಾದಂತಹ ರುದ್ರನನ್ನು ನಿನ್ನ ಸಾಮಾನ್ಯಪುತ್ರನೆಂದು ತಿಳಿದಿರುವೆಯಲ್ಲಾ?!

ಶಂಕರನು ಪತ್ನಿಯನ್ನು ಪರಿಗ್ರಹಿಸಲೇಬೇಕೆಂಬ ಬಯಕೆಯು ಎಂದರೆ ಶಕ್ತಿದೇವಿಯ ಸಾಕ್ಷಾತ್ಕಾರಕ್ಕೆ ಶಿವನನ್ನು ಸ್ಮರಿಸುತ್ತಾ ತಪಸ್ಸನ್ನು ಮಾಡು. ನಿನ್ನ ಬಯಕೆಯನ್ನು ಈಡೇರಿಸುವಂತೆ ಶಿವಶಕ್ತಿಯನ್ನು ಧ್ಯಾನಮಾಡು. ದೇವತೆಗಳಿಗೊಡೆಯಳಾದ ಆ ದೇವಿ ಪ್ರಸನ್ನಳಾದರೆ ನಿನ್ನ ಎಲ್ಲಾ ಕಾರ್ಯವನ್ನೂ ನೆರವೇರಿಸುವಳು. ದೇವಿಯು ಸಗುಣವಾದ ರೂಪವನ್ನು ಧರಿಸಿ ಲೋಕದಲ್ಲಿ ಯಾರ ಪುತ್ರಿಯಾಗಿ ಅವತರಿಸಿದರೆ, ಅವಳು ಶಿವನ ಪತ್ನಿಯಾಗಬಹುದು ಅಂತ ಯೋಚಿಸು. ಇದಕ್ಕಾಗಿ ದಕ್ಷಬ್ರಹ್ಮನಿಗೆ ದೇವಿಯನ್ನು ಕುರಿತು ಭಕ್ತಿಯಿಂದ ತಪಸ್ಸು ಮಾಡುವಂತೆ ಸೂಚಿಸು. ಅವಳು ಶಿವನ ಪತ್ನಿಯಾಗಿ ಅವತರಿಸುವಂತಾಗಲಿ ಎಂದು ಪ್ರಾರ್ಥಿಸು. ಪರಬ್ರಹ್ಮಸ್ವರೂಪಿಗಳಾದ ಶಿವ ಮತ್ತು ದೇವಿಯರು ಭಕ್ತಪರಾಧೀನರು. ಭಕ್ತರ ಇಚ್ಛೆ ಪೂರೈಸಲು ಸಗುಣರೂಪವನ್ನು ಧರಿಸುವರು ಎಂದು ಬ್ರಹ್ಮನಿಗೆ ವಿಷ್ಣು ಹಿತೋಪದೇಶವನ್ನು ಮಾಡುತ್ತಾನೆ.

ನಂತರ ವಿಷ್ಣುವು ‘ಎಲೈ, ವಿಧಿಯೇ! ಹಿಂದೆ ನಾವೀರ್ವರು ಶಿವನ ಇಚ್ಛೆಯಿಂದ ಜನಿಸಿದೆವು. ಆಗ ನಾವು ಶಿವನನ್ನು ಪ್ರಾರ್ಥಿಸಿದಾಗ ಪ್ರತ್ಯಕ್ಷನಾಗಿ ಯಾವ ಮಾತನ್ನು ನಮಗೆ ಹೇಳಿದ್ದ ಎಂಬುದನ್ನು ಈಗ ಸ್ಮರಿಸು. ಆದರೆ ನೀನು ಅದೆಲ್ಲವನ್ನೂ ಶಿವಶಕ್ತಿಯ ಮಹಿಮೆಯಿಂದ ಮರೆತು ಬಿಟ್ಟಿರುವೆ. ಆ ದೇವಿ ಸರ್ವೋತ್ಕೃಷ್ಟಳು. ಅವಳಿಂದಲೇ ಈ ಜಗತ್ತೆಲ್ಲವೂ ಮೋಹಗೊಳಿಸಲ್ಪಟ್ಟಿರುವುದು. ಶಿವನ ಹೊರತು ಆ ದೇವಿಯನ್ನು ಇನ್ನಾರೂ ತಿಳಿಯಲಾರರು. ಯಾವಾಗ ನಿರ್ಗುಣನಾದ ಶಿವನು ತನ್ನ ಇಚ್ಛೆಯಿಂದ ಸಗುಣಸ್ವರೂಪವನ್ನು ಧರಿಸಿದನೋ, ಆಗಲೇ ಈಶ್ವರನು ತನ್ನ ಶಕ್ತಿಯಿಂದ ನನ್ನನ್ನೂ ನಿನ್ನನ್ನೂ ಸೃಷ್ಟಿಸಿದ. ನಿನಗೆ ಸೃಷ್ಟಿಕ್ರಮ ಉಪದೇಶಿಸಿದ. ನನಗೆ ಜಗತ್ತನ್ನು ಪಾಲಿಸುವಿಕೆಯನ್ನು ಉಪದೇಶಿಸಿದ. ಹೀಗಾಗಿ ಆ ಶಿವನೇ ಜಗತ್ಕರ್ತ ಮತ್ತು ಪಾಲಕ. ನಾವಿಬ್ಬರೂ ನಿಮಿತ್ತ ಮಾತ್ರ. ಆಗ ನಾವು ಪರಶಿವನನ್ನು ‘ಓ ಪರಮೇಶ್ವರ, ನೀನೂ ಗುಣರೂಪಗಳನ್ನು ಧರಿಸಿ ಅವತಾರವನ್ನು ಎತ್ತಿ, ಲೋಕೋದ್ಧಾರಮಾಡು’ ಎಂದು ಪ್ರಾರ್ಥಿಸಿದೆವು.

ನಮ್ಮ ಪ್ರಾರ್ಥನೆಗೆ ಕರುಣಾಮೂರ್ತಿಯಾದ ಪರಮೇಶ್ವರ ನಕ್ಕು ಹೇಳಿದ್ದ, ‘ಈ ನನ್ನ ಸ್ವರೂಪವು ಬ್ರಹ್ಮನ ಶರೀರದಿಂದ ಸಗುಣವಾಗಿ ಅವತರಿಸುವುದು. ಆ ರೂಪಕ್ಕೆ ರುದ್ರನೆಂದು ಹೆಸರು. ನನ್ನ ಪೂರ್ಣರೂಪನಾದ ರುದ್ರನನ್ನು ಸದಾ ನೀವು ಪೂಜಿಸಬೇಕು. ಅವನು ಸಕಲ ಕಾರ್ಯವನ್ನೂ ಮಾಡುವನು. ಜಗತ್ತನ್ನು ಸಂಹರಿಸುವ ರುದ್ರನು ಗುಡಿಗಳಿಗೊಡೆಯ, ಅವ್ಯಕ್ತ ಬ್ರಹ್ಮಸ್ವರೂಪ. ತ್ರಿಮೂರ್ತಿಗಳಾದ ನೀವು ನನ್ನ ಸ್ವರೂಪರು. ಆದರೂ ರುದ್ರನು ನನ್ನ ಪೂರ್ಣವಾದ ಸ್ವರೂಪವುಳ್ಳವನು. ಉಮಾದೇವಿಯಿಂದ ಮೂರು ಸಗುಣರೂಪಗಳು ಆಗುವುವು. ಅವರೇ ಲಕ್ಷ್ಮಿ-ಸರಸ್ವತಿ-ಸತೀದೇವಿ. ಮೊದಲನೆ ರೂಪವಾದ ಲಕ್ಷ್ಮಿಯು ಹರಿಯಾದ ನನ್ನ ಪತ್ನಿ. ಎರಡನೆಯದಾದ ಸರಸ್ವತಿಯು ಬ್ರಹ್ಮನಾದ ನಿನ್ನ ಪತ್ನಿ. ಮೂರನೆ ರೂಪವಾದ ಸತೀದೇವಿಯು ರುದ್ರನ ಪತ್ನಿ. ಈ ಮೂರು ತ್ರಿದೇವಿರೂಪಗಳೂ ಶಿವಶಕ್ತಿಯವು. ಸತೀದೇವಿಯೇ ಶಕ್ತಿದೇವಿಯ ಪೂರ್ಣವಾದ ಸ್ವರೂಪವುಳ್ಳವಳು ಎಂದು ಪರಮೇಶ್ವರನು ಹೇಳಿ ಅಂತರ್ಧಾನನಾದ. ಕೆಲವು ಕಾಲದ ನಂತರ ನಾವು ಪತ್ನಿಯನ್ನು ಪರಿಗ್ರಹಿಸಿದೆವು, ಆದರೆ ಕೈಲಾಸವಾಸಿಯಾದ ರುದ್ರನು ಪತ್ನಿಯನ್ನು ಪರಿಗ್ರಹಿಸಲಿಲ್ಲ. ಮುಂದೆ ಆ ಶಿವಶಕ್ತಿಯು ಸತೀದೇವಿಯ ರೂಪದಿಂದ ಅವತರಿಸುವಳು. ಅವಳನ್ನು ಶಿವ ಪರಿಗ್ರಹಿಸುವ. ಆದ್ದರಿಂದ ಶಿವಶಕ್ತಿಯ ಅವತಾರಕ್ಕಾಗಿ ನೀನು ಮತ್ತು ನಿನ್ನ ಮಗ ದಕ್ಷಯಜ್ಞ ಸರ್ವಪ್ರಯತ್ನ ಮಾಡಿ’ ಎಂದು ವಿಷ್ಣು ಹೇಳಿ ಅಂತರ್ಧಾನನಾದ. ಶಿವನನ್ನು ಮೋಹಗೊಳಿಸುವ ವಿಧಾನ ತಿಳಿದ ಬ್ರಹ್ಮನಿಗೆ ತುಂಬಾ ಸಂತೋಷವಾಯಿತು ಎಂಬಲ್ಲಿಗೆ ಸತೀಖಂಡದ ಹತ್ತನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT