ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿರಕ್ತರಾದ ದಕ್ಷನ ಮಕ್ಕಳು

ಭಾಗ –143
ಅಕ್ಷರ ಗಾತ್ರ

ನಾರದಮುನಿಯು ‘ದಕ್ಷನು ತನ್ನ ಮನೆಗೆ ಹೋದನಂತರ ಮುಂದೇನಾಯಿತೆಂಬುದನ್ನು ದಯವಿಟ್ಟು ಹೇಳು’ ಎನ್ನುತ್ತಾನೆ. ಆಗ ಬ್ರಹ್ಮ ‘ತನ್ನಾಶ್ರಮಕ್ಕೆ ತೆರಳಿದ ದಕ್ಷಬ್ರಹ್ಮ, ಮುಂದೆ ನನ್ನಾಜ್ಞೆಯಂತೆ ಮನಸ್ಸಿನಿಂದ ಅನೇಕ ಪ್ರಜೆಗಳನ್ನು ಸೃಷ್ಟಿಸಿದ. ಆದರೆ ಸೃಷ್ಟಿಸಿದ ಪ್ರಜೆಗಳು ಬೆಳೆಯಲೇ ಇಲ್ಲ. ಎಷ್ಟು ಜನಗಳನ್ನು ಸೃಷ್ಟಿಸಿದ್ದನೋ, ಅಷ್ಟೆ ಜನಗಳಿದ್ದರು. ಅದನ್ನು ನೋಡಿ ದಕ್ಷಬ್ರಹ್ಮ ಚತುರ್ಮುಖಬ್ರಹ್ಮನಾದ ನನ್ನ ಬಳಿಗೆ ಬಂದು ಹೀಗೆ ವಿಜ್ಞಾಪಿಸಿಕೊಂಡ.

‘ಓ ಬ್ರಹ್ಮನೇ, ನಾನು ಮಾಡಿದ ಪ್ರಜೆಗಳ ಸೃಷ್ಟಿಯು ಬೆಳೆಯುತ್ತಲೇ ಇಲ್ಲವಲ್ಲಾ? ನಾನೆಷ್ಟು ಪ್ರಜೆಗಳನ್ನು ಸೃಷ್ಟಿಸಿದ್ದೆನೋ ಅಷ್ಟೇ ಪ್ರಜೆಗಳಿರುವರು. ಒಂದೂ ಹೆಚ್ಚಾಗಿಲ್ಲ. ಈಗ ನಾನೇನು ಮಾಡಲಿ? ಈ ಪ್ರಜೆಗಳು ತಾನಾಗಿಯೇ ಹೇಗೆ ಬೆಳೆಯುವರು? ಪ್ರಜೆಗಳ ಸಂಖ್ಯೆ ಹೇಗೆ ಹೆಚ್ಚಾಗುವುದು? ಅದಕ್ಕೆ ಉಪಾಯವನ್ನು ಹೇಳು. ಅದರಂತೆ ನಾನು ಅವಶ್ಯವಾಗಿ ಮಾಡುವೆ’ ಎಂದ.

ಆಗ ಬ್ರಹ್ಮ ಹೇಳಿದ ‘ಎಲೈ ದಕ್ಷಪ್ರಜಾಪತಿಯೇ, ನಾನು ಹೇಳುವ ಹಿತವಾದ ಮಾತನ್ನು ಕೇಳು. ಅದರಂತೆ ಮಾಡು, ಶಿವನು ನಿನಗೆ ಕಲ್ಯಾಣವನ್ನುಂಟುಮಾಡುವನು. ಪಂಚಜನ ಅಥವಾ ವೀರಣ ಎಂಬ ಮುನಿಗೆ ‘ಅಸಿಕ್ನಿ’ ಎಂಬ ಸುಂದರಿಯಾದ ಪುತ್ರಿ ಇದ್ದಾಳೆ. ಅಸಿಕ್ನಿಯನ್ನು ನೀನು ಪತ್ನಿಯಾಗಿ ಪರಿಗ್ರಹಿಸು. ಬಳಿಕ ನಿನ್ನ ಪತ್ನಿಯಲ್ಲಿ ಮೈಥುನಧರ್ಮದಿಂದ ಪ್ರಜೆಗಳನ್ನು ಸೃಷ್ಟಿಮಾಡು. ಇದೇ ಕ್ರಮದಿಂದ ಮುಂದೆ ಸೃಷ್ಟಿಯು ಬೆಳೆಯುವುದು’ ಎಂದು ಸೂಚಿಸುತ್ತಾನೆ.

ಬ್ರಹ್ಮನ ಸಲಹೆಯಂತೆ ದಕ್ಷನು ಅಸಿಕ್ನಿಯನ್ನು ಮದುವೆಯಾದ. ನಂತರ ಮೈಥುನಧರ್ಮದಿಂದ ಪ್ರಜೆಗಳನ್ನು ಸೃಷ್ಟಿಸಲುದ್ಯುಕ್ತನಾದ. ತನ್ನ ಹೆಂಡತಿಯಾದ ವೀರಣಿ(ಅಸಿಕ್ನಿ)ಯಲ್ಲಿ ದಕ್ಷನು ‘ಹರ್ಯಶ್ವರ’ ಎಂಬ ಹೆಸರುಳ್ಳ ಹತ್ತು ಸಾವಿರ ಜನ ಪುತ್ರರನ್ನು ಸೃಷ್ಟಿಸಿದ. ದಕ್ಷಪುತ್ರರೆಲ್ಲರೂ ಒಂದೇ ವಿಧವಾದ ಧರ್ಮ ಮತ್ತು ಶೀಲವುಳ್ಳವರಾಗಿದ್ದರು. ತಂದೆಯಲ್ಲಿ ಭಕ್ತಿಯುಳ್ಳವರಾಗಿರುವುದರ ಜೊತೆಗೆ ಸದಾ ವೇದೋಕ್ತಮಾರ್ಗದಲ್ಲಿ ನಡೆಯುವವರಾಗಿಯೂ ಇದ್ದರು. ದಕ್ಷಬ್ರಹ್ಮ ತನ್ನ ಹತ್ತು ಸಾವಿರ ಪುತ್ರರನ್ನು ಕರೆದು ಪ್ರಜೆಗಳನ್ನು ಸೃಷ್ಟಿಮಾಡಿ ಎಂದು ಆಜ್ಞಾಪಿಸಿದ. ಅದಕ್ಕಾಗಿ ಅವರು ತಪಸ್ಸನ್ನಾಚರಿಸಲು ಪಶ್ಚಿಮದಿಕ್ಕಿನತ್ತ ತೆರಳಿದರು. ಪಶ್ಚಿಮದಿಕ್ಕಿನಲ್ಲಿರುವ ನಾರಾಯಣ ಸರಸ್ಸು ಎಂಬ ತುಂಬಾ ಪವಿತ್ರವಾದ ತೀರ್ಥವಿತ್ತು. ಆ ತೀರ್ಥದಲ್ಲಿ ದೇವಗಂಗೆ ಮತ್ತು ಸಮುದ್ರಗಳ ಸಂಗಮವಾಗುತ್ತಿತ್ತು. ಆ ತೀರ್ಥದ ಜಲವನ್ನು ಸ್ಪರ್ಶಮಾಡಿದೊಡನೆಯೇ ಆ ದಕ್ಷಪುತ್ರರು ಪರಿಶುದ್ಧರಾಗಿ ಧರ್ಮ ಮತ್ತು ಮೋಕ್ಷ ಸಾಧನವಾದ ಜ್ಞಾನಗಳಲ್ಲಿ ತುಂಬಾ ತಿಳಿವಳಿಕೆಯುಳ್ಳವರಾದರು.

ಆಗ ಹರಿಯ ಸಲಹೆಯಂತೆ ಅಲ್ಲಿಗೆ ಬಂದ ನಾರದನಾದ ನೀನು ‘ಎಲೈ ದಕ್ಷಪುತ್ರರಾದ ಹರ್ಯಶ್ವರೇ, ಭೂಮಿಯಲ್ಲಿಯ ಸೃಷ್ಟಿಯನ್ನೇ ನೋಡದೆ ನೀವು, ಸೃಷ್ಟಿಗಾಗಿ ತಪಸ್ಸನ್ನಾಚರಿಸುತ್ತಲಿರುವಿರಿ’ ಎಂದು ಹೇಳಿದೆ. ಆಗ ಆ ಹರ್ಯಶ್ವರು ನಿನ್ನ ಮಾತನ್ನು ಕೇಳಿ ಸೃಷ್ಟಿಯನ್ನು ಮಾಡುವ ವಿಚಾರದಲ್ಲಿ ತುಂಬಾ ವಿಮರ್ಶೆಯನ್ನು ಮಾಡಿದರು. ಶಾಸ್ತ್ರ ಮತ್ತು ಗುರುಗಳ ಉಪದೇಶಗಳಿಂದ ಸೃಷ್ಟಿಯ ಕ್ರಮವನ್ನು ತಿಳಿಯದಿದ್ದವನು, ಪ್ರಕೃತಿಯ ಗುಣಗಳಿಂದಾಗುವ ಸೃಷ್ಟಿಯನ್ನು ಹೇಗೆ ಮಾಡುವನು? ಅಂಥ ಸೃಷ್ಟಿ ಮಾಡುವುದು ಅಸಾಧ್ಯ ಎಂದು ನಿಶ್ಚಯಿಸಿದ ಆ ದಕ್ಷಪುತ್ರರೆಲ್ಲರೂ ನಾರದನಾದ ನಿನಗೆ ನಮಸ್ಕರಿಸಿ ಪುನರ್ಜನ್ಮರಹಿತವಾದ ಜ್ಞಾನಮಾರ್ಗವನ್ನು ಹಿಡಿದು ಮುಕ್ತರಾದರು’ ಎಂದು ತಿಳಿಸುತ್ತಾನೆ ಬ್ರಹ್ಮ.

‘ಎಲೈ ನಾರದ, ನೀನು ಶಂಕರನನ್ನೇ ಮನಸ್ಸಿನಲ್ಲಿ ಧ್ಯಾನಿಸುವವನು. ಸಾಮಾನ್ಯಜನಗಳಿಗೆ ಮಹೇಶ್ವರನಲ್ಲಿ ಭಕ್ತಿಯುಂಟಾಗುವಂತೆ ಮಾಡಿ ಮುಕ್ತಿಮಾರ್ಗಕ್ಕೆ ಹಚ್ಚುವೆ. ಅದರಂತೆ ಆ ದಕ್ಷಸುತರಿಗೂ ಮುಕ್ತಿಮಾರ್ಗ ಉಪದೇಶಿಸಿದೆ. ಅವರು ಸೃಷ್ಟಿಕಾರ್ಯ ಬಿಟ್ಟು, ಮುಕ್ತಿಮಾರ್ಗದಲ್ಲಿ ಮನಸ್ಸಿಟ್ಟರು. ಕೆಲವು ಕಾಲ ಕಳೆದ ಮೇಲೆ ವಿಷಯ ತಿಳಿದ ದಕ್ಷಪ್ರಜಾಪತಿ ತುಂಬಾ ದುಃಖಪಟ್ಟ. ನಾರದನಿಂದಲೇ ತನ್ನ ಪುತ್ರರು ತಿರುಗಿ ಬಾರದಂತಹ ಜ್ಞಾನಮಾರ್ಗವನ್ನು ಹಿಡಿದಿದ್ದಾರೆಂದು ಹಲುಬಿದ. ಒಳ್ಳೆಯ ಮಕ್ಕಳು ಜನಿಸುವುದು ಕೊನೆಗೆ ದುಃಖಕ್ಕಾಗಿಯೇ ಎಂದು ತನ್ನ ಮಕ್ಕಳ ಸ್ಥಿತಿ ನೆನೆದು ಶೋಕಿಸಿದ. ಶಿವಮಾಯೆಯಿಂದ ಮೋಹಿತನಾಗಿದ್ದರಿಂದ ದಕ್ಷಪ್ರಜಾಪತಿ ತುಂಬಾ ಶೋಕಕ್ಕೊಳಗಾದ’ ಎನ್ನುತ್ತಾನೆ ನಾರದನಿಗೆ ಬ್ರಹ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT