ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವ ಪುರಾಣ ಸಾರ: ಮೇನಾದೇವಿಗೆ ಪಾಠ ಕಲಿಸಿದ ಶಿವ

ಭಾಗ 263
Last Updated 31 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ನಾರದ ಅಜ್ಞಾನಿಯಾದ ಮೇನಾದೇವಿಗೆ ಶಿವನನ್ನು ತೋರಿಸಲು ಅವಳನ್ನು ಚಂದ್ರಶಾಲೆಗೆ ಕರೆತರುತ್ತಾನೆ. ಅಷ್ಟರಲ್ಲಿ ಶಿವನಿಗೆ ಮೇನಾದೇವಿ ಮನದಲ್ಲಿ ಅಹಂಕಾರ ತುಂಬಿರುವುದನ್ನು ತನ್ನ ದಿವ್ಯದೃಷ್ಟಿಯಿಂದ ತಿಳಿಯುತ್ತಾನೆ. ಮೇನಾದೇವಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ ಶಿವ ತನ್ನೊಂದಿಗಿದ್ದ ಹರಿ, ಬ್ರಹ್ಮ, ಇಂದ್ರ ಮತ್ತಿತರ ದೇವತೆಗಳನ್ನು ಹಿಮವಂತನ ಅರಮನೆಯೊಳಗೆ ಕಳುಹಿಸಿ, ತಾನೊಬ್ಬನೇ ಚಂದ್ರಶಾಲೆಯಲ್ಲಿ ಉಳಿಯುತ್ತಾನೆ.

ನಾರದನೊಂದಿಗೆ ಚಂದ್ರಶಾಲೆಗೆ ಬಂದ ಮೇನಾದೇವಿಯು ಭ್ರಾಂತಿಗೊಳ್ಳುವಂತೆ ಶಿವ ನಾನಾ ವಿಧದ ಪ್ರದರ್ಶನ ಮಾಡುತ್ತಾನೆ. ಶಿವನ ಮಾಯಾಮೋಡಿಗೆ ಸಿಲುಕಿದ ಮೇನಾದೇವಿಗೆ ಮೊದಲು ಅದ್ಭುತವಾದ ಸೇನೆಯೊಂದು ಕಾಣಿಸಿದಂತಾಯಿತು. ಸೇನೆಯ ಮುಂಚೂಣಿಯಲ್ಲಿ ಸುಂದರರಾದ ಗಂಧರ್ವರು, ಅಪ್ಸರೆಯರು ಇದ್ದರು. ಗಣಗಳ ಸಮೂಹದಲ್ಲಿ ಅಷ್ಟವಸುಗಳು ಬರುತ್ತಿದ್ದವು. ಮಹಾತೇಜಸ್ವಿಯಾದ ವಸುನಾಯಕನನ್ನು ನೋಡಿ ಮೇನಾದೇವಿ ಹರ್ಷದಿಂದ ಇವನೇ ಶಿವನಿರಬಹುದು ಎಂದುಕೊಳ್ಳುತ್ತಾಳೆ.

ಆಗ ನಾರದ ಇವರೆಲ್ಲರೂ ಮಹದೇವನ ಗಣಗಳು. ಭವಾನೀಪತಿಯಾದ ಶಿವನು ಇವನಲ್ಲ. ಮುಂದೆ ಬರುವನು ಎನ್ನುತ್ತಾನೆ. ನಾರದನ ಮಾತನ್ನು ಕೇಳಿ ಮೇನಾದೇವಿಗೆ ವಸುನಾಯಕನಿಗಿಂತಲೂ ಶಿವ ಶ್ರೇಷ್ಠನಾಗಿರುವುದಾದರೆ ಅವನು ಇನ್ನೆಷ್ಟು ಚೆನ್ನಾಗಿರಬಹುದು? ಅದಕ್ಕಾಗಿಯೇ ತನ್ನ ಮಗಳು ಘೋರ ತಪಸ್ಸು ಮಾಡಿ ಅವನ ಮನ ಗೆದ್ದು ಮದುವೆಯಾಗುತ್ತಿದ್ದಾಳೆ ಎಂದು ಭಾವಿಸುತ್ತಾಳೆ.

ವಸುನಾಯಕರ ನಂತರ ಮಣಿಗ್ರೀವ ಮೊದಲಾದ ಯಕ್ಷರು ಬಂದರು. ಯಕ್ಷರ ಒಡೆಯನಾದ ಮಣಿಗ್ರೀವ ತುಂಬಾ ತೇಜಸ್ವಿಯಾಗಿದ್ದ. ಅವನನ್ನು ನೋಡಿ ಮೇನಾದೇವಿ ಹರ್ಷದಿಂದ ಇವನೇ ಗಿರಿಜಾಪತಿಯಾದ ರುದ್ರನೇ – ಎಂದು ಕೇಳುತ್ತಾಳೆ. ಆಗ ನಾರದ, ಇವನು ಸಹ ಶಿವನ ಸೇವಕ ಎನ್ನುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಅಗ್ನಿಪುರುಷ ಬರುತ್ತಾನೆ. ಮೇನಾದೇವಿ ಇವನೇನಾ ರುದ್ರ ಎಂದು ಕೇಳುತ್ತಾಳೆ. ನಾರದ ಇವನೂ ಅಲ್ಲವೆನ್ನುತ್ತಾನೆ. ಅಗ್ನಿಗಿಂತಲೂ ತೇಜಸ್ವಿಯಾದ ಯಮ ಬರುತ್ತಾನೆ. ಅವನನ್ನೂ ನಾರದ ರುದ್ರ ಅಲ್ಲವೆನ್ನುತ್ತಾನೆ. ಯಮನ ನಂತರ ದಾನವಾಧಿಪತಿ ನಿರ್ಋತಿ ಬಂದ. ಯಮನಿಗಿಂತಲೂ ತೇಜಸ್ವಿಯಾಗಿದ್ದ ನಿರ್ಋತಿಯನ್ನು ನೋಡಿ ಮೇನಾದೇವಿ ಇವನೇ ರುದ್ರನೆಂದು ಭಾವಿಸುತ್ತಾಳೆ. ನಾರದ ಅವನೂ ಅಲ್ಲ ಅನ್ನುವಷ್ಟರಲ್ಲಿ ವರುಣ ಬರುತ್ತಾನೆ.

ನಿರ್ಋತಿಗಿಂತಲೂ ತೇಜಸ್ವಿಯಾದ ವರುಣನನ್ನು ನೋಡಿ ಮೇನಾದೇವಿ ‘ಇವನೇ ರುದ್ರನಿರಬೇಕು’ ಎನ್ನುತ್ತಾಳೆ. ಆಗ ನಾರದ ಇವನು ರುದ್ರನಲ್ಲವೆಂದು ಹೇಳುತ್ತಾನೆ. ನಂತರ ವರುಣನಿಗಿಂತಲೂ ಇಮ್ಮಡಿ ಕಾಂತಿಶಾಲಿಯಾದ ವಾಯುದೇವ ತನ್ನ ಪರಿವಾರದೊಡನೆ ಬಂದ. ಅವನನ್ನು ನೋಡಿ ಮೇನಾದೇವಿ ಇವನೇ ರುದ್ರನಾಗಿರಬೇಕು ಎನ್ನುತ್ತಾಳೆ. ಇವನೂ ರುದ್ರನಲ್ಲವೆಂದು ನಾರದ ಹೇಳುತ್ತಿರುವಂತೆಯೇ ಅಲ್ಲಿಗೆ ಕುಬೇರ ಬರುತ್ತಾನೆ. ವಾಯುವಿಗಿಂತಲೂ ಎರಡರಷ್ಟು ತೇಜಸ್ವಿಯಾಗಿದ್ದ ಕುಬೇರನನ್ನು ನೋಡಿ ಮೇನಾದೇವಿ, ಇವನೇ ರುದ್ರನೆಂದು ಹೇಳುತ್ತಾಳೆ. ಆಗ ನಾರದ ಇವನು ರುದ್ರನಲ್ಲವೆಂದು ಹೇಳುವಷ್ಟರಲ್ಲಿ ಈಶಾನ ಬಂದ. ಕುಬೇರನಗಿಂತಲೂ ಇಮ್ಮಡಿ ತೇಜಸ್ವಿಯಾದ ಈಶಾನನ್ನು ನೋಡಿ ಮೇನಾದೇವಿ ಇವನೇ ರುದ್ರನೆನ್ನುತ್ತಾಳೆ. ಅವನಲ್ಲ ಎನ್ನುತ್ತಾನೆ, ನಾರದ. ಈಶಾನನಿಗಿಂತಲೂ ಸುಂದರನಾದ ದೇವರಾಜ ಇಂದ್ರ ಅಲ್ಲಿಗೆ ಬರುತ್ತಾನೆ. ಅವನನ್ನು ನೋಡಿ ಮೇನಾದೇವಿ ಇವನು ಶಂಕರನೇ – ಎಂದು ಕೇಳುತ್ತಾಳೆ. ಆಗ ನಾರದ ಇವನು ದೇವೇಶ್ವರನಾದ ಇಂದ್ರ ಎನ್ನುತ್ತಾನೆ.

l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT