ಶ್ರೀ ಶಿವಮಹಾಪುರಾಣದ ಎರಡನೇ ಸಂಹಿತೆಯಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದ ಮೊದಲ ಅಧ್ಯಾಯದಲ್ಲಿ ನಾರದಮುನಿಯು ‘ಓ ಬ್ರಹ್ಮನೇ, ದಕ್ಷಯಜ್ಞದಲ್ಲಿ ಶರೀರವನ್ನು ತ್ಯಜಿಸಿದ ಸತೀದೇವಿಯು ಹೇಗೆ ಪರ್ವತಪುತ್ರಿಯಾದಳು? ಶಿವನನ್ನು ಹೇಗೆ ವರಿಸಿದಳು?’ ಎಂದು ಕೇಳುತ್ತಾನೆ. ಆಗ ಬ್ರಹ್ಮನು ಪಾರ್ವತೀಖಂಡವನ್ನು ಪ್ರಸ್ತುತಪಡಿಸುತ್ತಾನೆ.

ಹಿಂದೆ ಸತೀದೇವಿಯು ಹಿಮಾಲಯದಲ್ಲಿ ಹರನೊಂದಿಗಿರುವಾಗ ಹಿಮವಂತನ ಪ್ರಿಯೆಯಾದ ಮೇನಾದೇವಿಯು ಸತೀದೇವಿಯನ್ನು ತನ್ನ ಮಗಳಂತೆ ಉಪಚರಿಸುತ್ತಿದ್ದಳು. ದಕ್ಷನ ಯಜ್ಞದಲ್ಲಿ ಅವಮಾನಿತಳಾದ ಸತೀದೇವಿಯೂ, ತಂದೆ ದಕ್ಷನಿಂದ ಹುಟ್ಟಿದ ತನ್ನ ಶರೀರವನ್ನು ತ್ಯಜಿಸಲು ನಿರ್ಧರಿಸುವಾಗ, ಅವಳ ಮನದಲ್ಲಿ ಮೂಡಿದ್ದು ಮೇನಾದೇವಿ ಮತ್ತು ಹಿಮವಂತ ದಂಪತಿ. ಮುಂದಿನ ಜನ್ಮದಲ್ಲಿ ಜನಿಸಿದರೆ ಈ ದಂಪತಿಯಂಥ ವಾತ್ಸಲ್ಯ ತುಂಬಿದವರ ಮಗಳಾಗೇ ಜನಿಸಬೇಕೆಂದು ಬಯಸಿದಳು.

ಆ ಜನ್ಮದಲ್ಲೂ ಶಿವನನ್ನೇ ಪತಿಯಾಗಿ ಪಡೆಯಬೇಕೆಂದು ನಿಶ್ಚಯಿಸಿದಳು. ಅದರಂತೆ ಸತೀದೇವಿಯು ಯುಕ್ತವಾದ ಸಮಯದಲ್ಲಿ ಶರೀರವನ್ನು ತ್ಯಜಿಸಿ, ಹಿಮವಂತ–ಮೇನಾದೇವಿಯ ಮಗಳಾಗಿ ಜನಿಸಿದಳು. ಪರ್ವತರಾಜನ ಮಗಳಾಗಿದ್ದರಿಂದ ‘ಪಾರ್ವತೀ’ ಎಂದು ಹೆಸರುಳ್ಳವಳಾದಳು. ನಿನ್ನ ಉಪದೇಶದಿಂದ ಘೋರವಾದ ತಪವನ್ನಾಚರಿಸಿ ಮತ್ತೆ ಶಿವನನ್ನು ಪತಿಯಾಗಿ ಪಡೆದಳು’ ಎಂದ ಬ್ರಹ್ಮ, ಮೇನಾದೇವಿ ಮತ್ತು ಹಿಮವಂತನ ವಿವಾಹಕಥೆಯನ್ನು ತಿಳಿಸುತ್ತಾನೆ.

ಉತ್ತರದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತರಾಜನಿದ್ದ. ಅವನು ಮಹಾತೇಜಸ್ವಿಯೂ, ಸರ್ವಸಮೃದ್ಧಿಯುಳ್ಳವನಾಗಿದ್ದ. ಅವನಿಗೆ ಎರಡು ಸ್ವರೂಪಗಳಿದ್ದವು. ಒಂದು ಸ್ಥಿರವಾದ ಮಹಾರೂಪ, ಮತ್ತೊಂದು ಚರವಾದ ಸೂಕ್ಷ್ಮರೂಪ. ಅದು ಪೂರ್ವಪಶ್ಚಿಮ ಸಮುದ್ರಗಳೆರಡನ್ನೂ ವ್ಯಾಪಿಸಿತ್ತು. ಅದರಲ್ಲಿ ಅನೇಕ ರತ್ನಗಳು ಇದ್ದವು. ಪರ್ವತವು ಭೂಮಿಯನ್ನು ಅಳೆಯುವ ಕೋಲಿನಂತೆ ಇತ್ತು. ಅದರಲ್ಲಿ ಅನೇಕ ವೃಕ್ಷ, ಪಶು, ಪಕ್ಷಿಗಳು, ಅನೇಕ ಬಗೆಯ ವಿಚಿತ್ರ ಶಿಖರಗಳು ಇದ್ದವು. ಹಿಮಕ್ಕೆ ಆ ಗಿರಿಯು ಮನೆಯಾಗಿದ್ದರಿಂದಲೇ ಅದಕ್ಕೆ ಹಿಮಾಲಯನೆಂದು ಹೆಸರಾಗಿತ್ತು. ಅಲ್ಲಿ ದೇವತೆಗಳು, ಮುನಿಗಳು, ಸಿದ್ಧರು ಮೊದಲಾದವರು ಆಶ್ರಯಿಸಿದ್ದರು.

ಶಿವನಿಗೆ ಹಿಮಗಿರಿಯು ಪ್ರಿಯವಾದ ಸ್ಥಳವಾಗಿತ್ತು. ತಪಸ್ಸಿಗೆ ಯೋಗ್ಯವಾದ ಮಹಾಪವಿತ್ರವಾದ ಸ್ಥಾನವಾಗಿತ್ತು. ತಪಸ್ಸಿದ್ಧಿಯನ್ನು ಉಂಟುಮಾಡುವ ಅನೇಕ ಧಾತುಗಳು ಅಲ್ಲಿದ್ದವು. ವಿಷ್ಣುವಿನ ಅಂಶವೇ ಅವನಾಗಿದ್ದರಿಂದ ಸಾಧುಗಳಿಗೆ ಪ್ರಿಯನಾದವನಾಗಿದ್ದ. ಇಂಥ ಹಿಮವಂತನು, ತನ್ನ ವಂಶಕ್ಕಾಗಿ, ಧರ್ಮಕ್ಕಾಗಿ, ಪಿತೃದೇವತೆಗಳನ್ನು ತೃಪ್ತಿಪಡಿಸುವುದಕ್ಕಾಗಿ ವಿವಾಹವಾಗಲು ಇಚ್ಛಿಸಿದ. ಆಗ ದೇವತೆಗಳು ಪಿತೃದೇವತೆಗಳನ್ನು ಸಂಧಿಸಿ ತಮ್ಮ ಕಾರ್ಯಸಾಧನೆಗಾಗಿ ಹೀಗೆ ಹೇಳಿದರು:

‘ಓ ಪಿತೃದೇವತೆಗಳೇ, ದೇವಹಿತಕ್ಕಾಗಿ ನಿಮ್ಮ ಜ್ಯೇಷ್ಠಕುವರಿಯಾದ ಮೇನಾದೇವಿಯನ್ನು ಹಿಮವಂತನಿಗೆ ಮದುವೆ ಮಾಡಿಕೊಡಿ: ಎಲ್ಲರಿಗೂ ಕ್ಷೇಮವಾಗುವುದು. ನಿಮಗೂ ದೇವತೆಗಳಿಗೂ ಪದೇ ಪದೇ ಬರುವ ದುಃಖವು ನಾಶವಾಗುವುದು’ ಎಂದರು. ಪಿತೃದೇವತೆಗಳು ‘ಹಾಗೆಯೇ ಆಗಲಿ’ ಎಂದು ಒಪ್ಪಿಕೊಂಡರು. ಆ ಮದುವೆಗೆ ದೇವತೆಗಳು, ಮುನಿಗಳು ಆಗಮಿಸಿದ್ದರು. ವಧು–ವರರನ್ನು ಆಶೀರ್ವದಿಸಿ, ಬಗೆಬಗೆಯ ದಾನಗಳನ್ನು ಕೊಟ್ಟರು.

ಹಾಗೆಯೇ, ಹಿಮವಂತನಿಗೆ ಮಗಳು ಮೇನಾದೇವಿಯನ್ನು ಧಾರೆ ಎರೆದ ಪಿತೃದೇವತೆಗಳನ್ನು ಅಭಿನಂದಿಸಿದರು. ಹಿಮವಂತನು ತನ್ನ ವಿವಾಹ ಮಹೋತ್ಸವದಲ್ಲಿ ಅನೇಕ ಬಳುವಳಿಯನ್ನು ಪಡೆದು, ಸಂತೋಷದಿಂದ ಪತ್ನಿ ಮೇನೆಯೊಡನೆ ತನ್ನ ಮನೆಗೆ ಹಿಂದಿರುಗಿದ ಎಂಬಲ್ಲಿಗೆ ಶ್ರೀಶಿವಮಹಾಪುರಾಣದ ಎರಡನೆ ಸಂಹಿತೆಯಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ‘ಹಿಮವತ್ಪರ್ವತರಾಜನ ವಿವಾಹವರ್ಣನ’ ಎಂಬ ಮೊದಲನೆಯ ಅಧ್ಯಾಯ ಮುಗಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.