ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ರುದ್ರಶಿರನಾದ ಬ್ರಹ್ಮ

ಭಾಗ 158
ಅಕ್ಷರ ಗಾತ್ರ

ಬ್ರಹ್ಮ ಮತ್ತೆ ಶಿವಕಥೆಯನ್ನು ಹೇಳತೊಡಗುತ್ತಾನೆ,

‘ಭಕ್ತನುಗ್ರಹಶಾಲಿಯಾದ ಶಿವ, ಅಪರಾಧ ಮಾಡಿದ ನನ್ನನ್ನು ಕೊಲ್ಲದೆ ಬಿಟ್ಟ. ಅಲ್ಲಿ ನೆರೆದಿದ್ದ ದೇವತೆಗಳು ಮತ್ತು ಮುನಿಗಳು ಭಯರಹಿತರಾಗಿ ಸಂತೋಷದಿಂದ ಶಿವನನ್ನು ಸ್ತುತಿಸಿ, ಜಯಘೋಷ ಮಾಡಿದರು. ಆಗ ನಾನೂ ಭಯ ಬಿಟ್ಟು, ನಿರ್ಮಲಚಿತ್ತದಿಂದ ಭಕ್ತಿಪೂರ್ವಕವಾಗಿ ಶಂಕರನನ್ನು ಸ್ತೋತ್ರ ಮಾಡಿದೆ. ಲೀಲಾಮಯನಾದ ಶಿವನು ಸಂತಷ್ಟನಾಗಿ ಎಲ್ಲರೂ ಕೇಳುವಂತೆ ನನ್ನನ್ನು ಕುರಿತು ಹೀಗೆ ಹೇಳಿದ. ಎಲೈ ಬ್ರಹ್ಮನೆ, ಈಗ ನಿನ್ನಲ್ಲಿ ನಾನು ಪ್ರಸನ್ನನಾಗಿರುವೆ. ಆದಕಾರಣ ನೀನು ಭಯವನ್ನು ತ್ಯಜಿಸಿ, ನಿನ್ನ ಶಿರಸ್ಸನ್ನೊಮ್ಮೆ ಕೈನಿಂದ ಮುಟ್ಟಿಕೋ’ ಎಂದ.

ಶಂಕರನ ಮಾತನ್ನು ಕೇಳಿ ನಾನು ನನ್ನ ಶಿರಸ್ಸನ್ನು ಕೈಯಿಂದ ಮುಟ್ಟಿಕೊಂಡು ನಮಸ್ಕರಿಸಿದೆ. ಆಗ ನನ್ನ ಶಿರಸ್ಸು ರುದ್ರನ ಶಿರಸ್ಸಿನ ರೂಪ ಪಡೆಯಿತು. ಇದನ್ನು ಇಂದ್ರ ಮೊದಲಾದ ದೇವತೆಗಳು ಆಶ್ಚರ್ಯದಿಂದ ನೋಡಿದರು. ನಾನು ತುಂಬಾ ಲಜ್ಜೆಯಿಂದ ಮುಖವನ್ನು ಬಗ್ಗಿಸಿ, ಶಂಕರನಿಗೆ ನಮಸ್ಕರಿಸುತ್ತಾ, ‘ಓ ಶಿವ, ನನ್ನನ್ನು ಕ್ಷಮಿಸು. ನನ್ನ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಹೇಳು. ತಕ್ಕ ಶಿಕ್ಷೆಯನ್ನೂ ವಿಧಿಸು. ಅದರಿಂದ ನನ್ನ ಪಾಪವು ಹೋಗಬೇಕು’ ಎಂದು ಕೇಳಿದೆ.

ಭಕ್ತವತ್ಸಲನೂ ಸರ್ವೇಶ್ವರನೂ ಆದ ಶಿವ ಪ್ರಸನ್ನನಾಗಿ ಹೇಳಿದ: ‘ಎಲೈ ಬ್ರಹ್ಮನೇ, ಈ ರುದ್ರಶಿರಸ್ಸನ್ನು ಧರಿಸಿ ನೀನು ಪ್ರಸನ್ನತೆಯಿಂದ ನನ್ನನ್ನು ಆರಾಧಿಸುತ್ತಾ ತಪಸ್ಸನ್ನು ಮಾಡು. ‘ರುದ್ರಶಿರಾ’ ಎಂಬ ಹೆಸರಿನಿಂದ ನೀನು ಭೂಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುವೆ. ನೀನು ಜನರಿಗೆ ಎಲ್ಲಾ ಕಾರ್ಯಗಳನ್ನೂ ಸಾಧಿಸಿಕೊಡುವವನಾಗುವೆ. ಪರಸ್ತ್ರೀಯಲ್ಲಿ ಮೋಹಿತನಾಗಿ ವೀರ್ಯವನ್ನು ಸ್ರವಿಸುವುದು ಮನುಸ್ಯರ ಸ್ವಭಾವ. ಅದನ್ನು ಈಗ ನೀನು ಮಾಡಿರುವೆ. ಆದುದರಿಂದ ನೀನು ಮನುಷ್ಯನಾಗಿ ಜನಿಸಿ ಭೂಮಿಯಲ್ಲಿ ಸಂಚರಿಸುವೆ.

‘ಭೂಮಿಯಲ್ಲಿ ಈ ರುದ್ರಶಿರಸ್ಸನ್ನು ಧರಿಸಿ ತಿರುಗುತ್ತಿರುವ ನಿನ್ನನ್ನು ನೋಡಿದ ಜನರು, ‘ಇದೇನು? ಬ್ರಹ್ಮನ ಶಿರಸ್ಸಿನಲ್ಲಿ ರುದ್ರನೇಕೆ ಇರುವನು’ ಎಂದು ವಿಮರ್ಶಿಸುತ್ತಾರೆ. ನೀನು ಮಾಡಿರುವ ಕೃತ್ಯವನ್ನು ತಿಳಿಯಲು ಕುತೂಹಲಿತರಾಗುತ್ತಾರೆ. ಯಾರು ನಿನ್ನ ಕಥೆಯನ್ನ ಕೇಳುವರೋ, ಅವರು ಪರಸ್ತ್ರೀಸಂಗದಿಂದ ಮಾಡಿದ ಪಾಪದಿಂದ ಮುಕ್ತಿಯನ್ನು ಹೊಂದುವರು. ಇದನ್ನು ಎಷ್ಟೆಷ್ಟು ಬಾರಿ ಜನ ಕೇಳಿ ಕೀರ್ತನೆ ಮಾಡುವರೋ, ನಿನ್ನ ಪಾಪವು ಅಷ್ಟಷ್ಟು ನಾಶವಾಗುವುದು.

‘ಎಲೈ ಬ್ರಹ್ಮನೇ ಇದೇ ನಿನಗೆ ಪ್ರಾಯಶ್ಚಿತ್ತವು. ಇದರಿಂದ ಜನರು ನಿನ್ನನ್ನು ಹಾಸ್ಯ ಮಾಡಿ ನಿಂದಿಸುವುದರಿಂದ ನಿನ್ನ ಪಾಪವು ನಾಶವಾಗುವುದು. ಕಾಮುಕನಾದ ನಿನ್ನಿಂದ ಸ್ರವಿಸಿದ ರೇತಸ್ಸು ಅಗ್ನಿ ವೇದಿಮಧ್ಯದಲ್ಲಿ ಬಿದ್ದಿರುವುದನ್ನು ನಾನು ನೋಡಿರುವೆ. ಆದಕಾರಣ ಇದನ್ನು ತೆಗೆಯಲು ಅಸಾಧ್ಯ. ಭೂಮಿಯಲ್ಲಿ ಬಿದ್ದಿರುವ ನಿನ್ನ ನಾಲ್ಕು ಬಿಂದುವಿನಷ್ಟು ರೇತಸ್ಸುಗಳು ‘ಬಿಂದುಮಿತ’ಗಳೆಂಬ ಮೇಘಗಳಾಗುವುವು. ಅವು ಜಗತ್ತಿನಲ್ಲಿ ಪ್ರಳಯ ಉಂಟು ಮಾಡುವಂಥವು’ ಎಂದು ರುದ್ರ ಹೇಳಿದ.

ಅದೇ ಸಮಯಕ್ಕೆ ಅಗ್ನಿವೇದಿಯ ಮಧ್ಯದಲ್ಲಿ ಬಿದ್ದಿದ್ದ ನನ್ನ ಬ್ರಹ್ಮರೇತಸ್ಸಿನಿಂದ ನಾಲ್ಕು ಮೇಘರಾಶಿಗಳು ಜನಿಸಿದವು. ಶಿವೇಚ್ಛೆಯಿಂದ ಜನಿಸಿದ ಆ ಮೇಘಗಳು ಘೋರವಾಗಿ ಗರ್ಜಿಸುತ್ತಾ ನೀರನ್ನು ಸುರಿಸುತ್ತಾ ಆಕಾಶದಲ್ಲಿ ಸಂಚರಿಸಿದವು.

‘ಎಲೈ ನಾರದ, ಆ ನಾಲ್ಕು ವಿಧದ ಭಯಂಕರ ಪ್ರಳಯಮೇಘಗಳಿಗೆ ಸಂವರ್ತ, ಆವರ್ತ, ಪುಷ್ಕರ ಮತ್ತು ದ್ರೋಣಗಳೆಂಬ ಹೆಸರು ಇವೆ. ಆ ಮೇಘಗಳು ಘರ್ಜನೆಮಾಡುತ್ತಾ ಆಕಾಶವನ್ನು ವ್ಯಾಪಿಸಿದವು. ಇತ್ತ ಶಂಕರ ಔತ್ಸುಕ್ಯದಿಂದ ಸತೀದೇವಿಯನ್ನು ನೋಡುತ್ತಾ ಸಂಪೂರ್ಣವಾಗಿ ಶಾಂತನಾದ. ಬಳಿಕ ನಾನು ಯಾವ ಹೆದರಿಕೆಯೂ ಇಲ್ಲದೇ ಮಿಕ್ಕ ವಿವಾಹಕರ್ಮವನ್ನು ಮಾಡಿ ಮುಗಿಸಿದೆ. ಆಗ ದೇವತೆಗಳು ಸಂತೋಷದಿಂದ ಶಿವ ಮತ್ತು ಸತೀದೇವಿಯರ ಶಿರಸ್ಸಿನ ಮೇಲೆ ಹೂಮಳೆಯನ್ನು ಸುರಿಸಿದರು. ಅನೇಕ ಮಂಗಳವಾದ್ಯಗಳನ್ನು ಮೊಳಗಿಸಿ, ಗೀತೆಗಳನ್ನು ಹಾಡಿದರು. ದೇವತಾಸುಂದರಿಯರು ನರ್ತನಮಾಡಿದರು. ಮಹಾವಿಜೃಂಭಣೆಯಿಂದ ಶಿವ-ಸತೀದೇವಿಯ ವಿವಾಹ ಉತ್ಸವವು ನಡೆಯಿತು’ ಎನ್ನುತ್ತಾನೆ ಬ್ರಹ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT