ಶನಿವಾರ, ಜುಲೈ 31, 2021
27 °C

ವಾರ ಭವಿಷ್ಯ | 05–07–2020 ರಿಂದ 11–07–2020 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ. ಹಣದ ಒಳಹರಿವು ಪರವಾಗಿಲ್ಲ ಎಂಬಂತಿರುತ್ತದೆ. ನಿಮ್ಮ ಅಭಿಪ್ರಾಯವನ್ನು ಎಲ್ಲರ ಮೇಲೆ ಹೇರುವುದು ತರವಲ್ಲ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಮುನ್ನಡೆ ಇರುತ್ತದೆ. ದೊಡ್ಡ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಂಸ್ಥೆಯನ್ನು ಮುನ್ನಡೆಸಲು ತೆಗೆದುಕೊಳ್ಳುವ ತೀರ್ಮಾನಗಳು ಫಲ ಕೊಡುತ್ತವೆ. ಕೆಲಸ ಮಾಡಿಕೊಡುತ್ತೇನೆಂದು ಹಣ ಪಡೆಯುವ ಬಗ್ಗೆ ಎಚ್ಚರವಾಗಿರಿ. ದಾಂಪತ್ಯ ಜೀವನದಲ್ಲಿ ಅನವಶ್ಯಕವಾದ ತಪ್ಪು ಕಲ್ಪನೆ ಅಥವಾ ವಾದವಿವಾದ ಬೇಡ. ಕೃಷಿಕರ ಆದಾಯದಲ್ಲಿ ಕೊರತೆಯಾಗಬಹುದು.

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)

ವೈಯಕ್ತಿಕ ವಿಚಾರಗಳನ್ನು ಹಿರಿಯರ ಬಳಿ ಚರ್ಚಿಸಿ ಸಲಹೆ ಪಡೆಯುವುದು ಉತ್ತಮ. ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ, ಹಣದ ನಿರ್ವಹಣೆ ಸರಿಯಾಗಿ ಮಾಡಿ. ಚರ್ಮವ್ಯಾಧಿ ಕಾಣಿಸಬಹುದು. ನಿರುದ್ಯೋಗಿಗಳು ಸಿಗುವ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಸಂತಸ ತರುವ ವಾರ. ಸಂಗಾತಿಯ ವ್ಯವಹಾರದಲ್ಲಿ ಸ್ವಲ್ಪ ಪ್ರಗತಿ ಕಾಣಬಹುದು. ತಂದೆ-ಮಕ್ಕಳ ನಡುವೆ ಅನುಬಂಧ ಹೆಚ್ಚುತ್ತದೆ. ವೃತ್ತಿಯಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ. ಕೃಷಿಕರ ಆದಾಯವು ಸ್ವಲ್ಪ ಪ್ರಗತಿಯನ್ನು ಕಾಣುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) 

ಆತ್ಮಸ್ಥೈರ್ಯ ಉತ್ತಮವಾಗಿರುತ್ತದೆ. ಬಾಂಧವ್ಯ ಮುಖ್ಯವಾದರೂ ಹಣದ ಎದುರಿಗೆ ಸಂಬಂಧಗಳು ಗೌಣವಾಗಬಹುದು. ವೃತ್ತಿಯಲ್ಲಿ ಯಾವುದೇ ವಿಚಾರಕ್ಕೂ ದುಡುಕದೇ ಇರುವುದು ಉತ್ತಮ. ಮಾತೃ ವರ್ಗದ ಕಡೆಯವರಿಂದ ಸ್ವಲ್ಪ ಕಿರಿಕಿರಿ ಎದುರಿಸಬೇಕಾಗಬಹುದು. ಮಾತಿನ ಜಾಣ್ಮೆಯಿಂದ ಕುಟುಂಬದಲ್ಲಿನ ಬಿಗುವಿನ ಪರಿಸ್ಥಿತಿಯನ್ನು ತಿಳಿಗೊಳಿಸುವಿರಿ. ನೀವು ಪ್ರಯತ್ನಿಸುತ್ತಿದ್ದ ಬ್ಯಾಂಕಿನ ಸಾಲ ದೊರೆಯುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುವುದು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವುದು ಉತ್ತಮ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಹಣದ ಒಳಹರಿವು ಪರವಾಗಿಲ್ಲ. ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವಿರಿ. ನೀವು ಪ್ರಬುದ್ಧವಾಗಿ ಮಂಡಿಸಿದ ವಿಷಯದ ಬಗ್ಗೆ ಜನಾಭಿಪ್ರಾಯ ಬರುತ್ತದೆ. ಸಂಗಾತಿಯ ಮುತುವರ್ಜಿಯಿಂದ ಸಂಸಾರದಲ್ಲಿ ಸುಖ ಹೆಚ್ಚುತ್ತದೆ. ಶೀತಬಾಧೆ ಸ್ವಲ್ಪ ಕಾಡಬಹುದು. ಅನಿರೀಕ್ಷಿತ ಸಂಕಷ್ಟಗಳಿಗೆ ಸ್ವಲ್ಪ ಹಣ ಮೀಸಲಿಡುವುದು ಉತ್ತಮ. ವ್ಯವಸಾಯ ಮಾಡುವವರಿಗೆ ಉತ್ತಮ ಸೌಲಭ್ಯ ಸಿಗುತ್ತದೆ. ವೃತ್ತಿಯಲ್ಲಿ ಅನುಕೂಲಗಳು ಹೆಚ್ಚುತ್ತವೆ. ಬಣ್ಣದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯ ಸಾಧ್ಯತೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)  

ತಂದೆಯ ಆರೋಗ್ಯಕ್ಕಾಗಿ ಹಣ  ಖರ್ಚು ಮಾಡಬೇಕಾಗಬಹುದು. ವ್ಯಾಪಾರಗಳಲ್ಲಿ ನಿಧಾನವಾಗಿ ಅಭಿವೃದ್ಧಿ ಕಾಣಬಹುದು. ಪರಿಚಯಸ್ಥರ ಸಹಾಯದಿಂದ ಸಂಗಾತಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕಗ್ಗಂಟಾಗಿದ್ದ ದಾಖಲೆಗಳನ್ನು ಸರಿಪಡಿಸುವ ಮಾರ್ಗ ತೆರೆಯುತ್ತದೆ. ಮೂಳೆ ನೋವು ಸ್ವಲ್ಪ ತಹಬಂದಿಗೆ ಬರುತ್ತದೆ. ಸಂಗಾತಿಯ ನೆರವಿನಿಂದ ಸಾಲ ತೀರಿಸಬಹುದು. ತಂದೆ ಮಕ್ಕಳ ನಡುವೆ ಮುಸುಕಿನ ಗುದ್ದಾಟ ಇರಬಹುದು. ಸರ್ಕಾರಿ ಸಂಸ್ಥೆಗಳಿಗೆ ಆಹಾರ ವಸ್ತು ಸರಬರಾಜು ಮಾಡುವವರಿಗೆ ಸ್ವಲ್ಪ ಹಣದ ಜೊತೆಗೆ ಹೊಸ ಆದೇಶ ದೊರೆಯುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಯಾವುದೇ ಕೆಲಸ ಒಪ್ಪಿಕೊಳ್ಳುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿಯಿರಿ. ನಿಮ್ಮ ಗೆಳೆಯರ ಅಸಲಿ ಬಣ್ಣ ಈಗ ತಿಳಿಯುತ್ತದೆ. ಸಾಂಸಾರಿಕ ಸಮಸ್ಯೆಗಳು ಉಪಶಮನವಾಗುತ್ತವೆ. ಆಹಾರ ವಿಷಯದಲ್ಲಿ ಎಚ್ಚರವಾಗಿರಿ. ಮಕ್ಕಳ ಮತ್ತು ಹಿರಿಯರ ನಡುವೆ ಸಂಬಂಧಗಳು ವ್ಯತಿರಿಕ್ತವಾಗಬಹುದು. ಸಂಗಾತಿಯು ತನ್ನ ಆದಾಯದ ವಿವರದಲ್ಲಿ ಸ್ವಲ್ಪ ಭಾಗ ಮುಚ್ಚಿಡಬಹುದು. ಸರ್ಕಾರಿ ವೃತ್ತಿಯಲ್ಲಿ ಇರುವವರಿಗೆ ಹೊಸ ರೀತಿಯ ಜವಾಬ್ದಾರಿಗಳು ಹೆಗಲೇರಬಹುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಆಕಸ್ಮಿಕವಾಗಿ ಸ್ವಲ್ಪ ಹಣ ಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಭಾವನೆಗಳಿಗೆ ಬೆಲೆ ಕಡಿಮೆ ಇರುತ್ತದೆ. ಅನಗತ್ಯ ವಸ್ತುಗಳಿಗಾಗಿ ದುಂದುವೆಚ್ಚ ಮಾಡಿದಿರಿ. ಧರಿಸುವ ವಸ್ತ್ರದ ಮೇಲೆ ಹೆಚ್ಚು ಕಾಳಜಿ ಮಾಡುವಿರಿ. ವಿದ್ಯಾರ್ಥಿಗಳು ದೃಢ ಮನಸ್ಸಿನಿಂದ ಮುನ್ನಡೆಯುವುದು ಉತ್ತಮ. ಬರಬೇಕಾಗಿದ್ದ ಹಣ ಈಗ ನಿಧಾನವಾಗಬಹುದು. ಆದ್ದರಿಂದ ಆದಾಯಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳಿ. ತಂದೆಯಿಂದ ಸಹಾಯ ಒದಗಬಹುದು. ಸಂಗಾತಿಯ ಅತಿವೆಚ್ಚ ಚಿಂತೆಗೀಡು ಮಾಡಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ  ಜೇಷ್ಠ) 

ವೃತ್ತಿರಂಗದಲ್ಲಿ ಆಶಾಭಂಗವಿದ್ದರೂ ನಿಮ್ಮ ಸತತ ಪ್ರಯತ್ನದಿಂದ ಫಲ ಕಾಣುವಿರಿ. ಸಮಯ ಸಾಧಕರಿಂದ ದೂರವಿದ್ದು ತಾರ್ಕಿಕವಾಗಿ ಆಲೋಚಿಸಿ ಮುಂದುವರೆಯಿರಿ. ಹೊಸ ಚಿಂತನೆಗಳಿಂದ ಹೊಸ ರೀತಿಯ ಕೆಲಸ ಆರಂಭಿಸಲು ಯತ್ನಿಸುವಿರಿ. ಸ್ವಲ್ಪ ಶೀತಬಾಧೆ ಕಾಡಬಹುದು. ನಿಂತಿದ್ದ ವಿವಾಹದ ಮಾತು ಈಗ ಪುನರಾರಂಭಗೊಳ್ಳಬಹುದು. ತಂದೆಯ ಜೊತೆ  ಅನುಬಂಧ ಹೆಚ್ಚುತ್ತದೆ. ಪಾಲುದಾರಿಕೆ ಸಿಗಲಾರದು ಎಂದುಕೊಂಡಿದ್ದ ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಪಾಲುದಾರಿಕೆ ಸಿಗುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಸಂಸಾರದಲ್ಲಿ ಹೊಂದಾಣಿಕೆ ಮೂಡಿ ಎಲ್ಲ ವಿಚಾರಗಳಲ್ಲೂ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ. ಕೈಗೆ ಬಂದ ಅವಕಾಶ ಬಳಸಿಕೊಂಡು ಮುನ್ನಡೆಯಿರಿ. ಕೃಷಿ ಚಟುವಟಿಕೆಗಳಲ್ಲಿ ಅತಿಯಾದ ಆಸಕ್ತಿ ಮೂಡುತ್ತದೆ. ಮಕ್ಕಳ ಕ್ರೀಡಾ ಚಟುವಟಿಕೆಗಳು ಸರಿಯಾಗಿ ಮುಂದುವರೆಯುತ್ತವೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಇರುತ್ತದೆ. ತಂದೆಯೊಂದಿಗೆ ಕೋಪ ಅಥವಾ ಜಗಳ ಅಷ್ಟು ಒಳಿತಲ್ಲ. ಸಂಗಾತಿಗೆ ವೃತ್ತಿಯಲ್ಲಿ ಅಪೇಕ್ಷಿಸುತ್ತಿದ್ದ ಸೌಲಭ್ಯಗಳು ದೊರೆಯುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಮಾತನಾಡುವಾಗ ಸೌಮ್ಯತೆ ಇರಲಿ. ಹಣದ ಒಳಹರಿವು ಕಡಿಮೆಯಿದ್ದರೂ ನಿಭಾಯಿಸುವ ಶಕ್ತಿ ಇರುತ್ತದೆ. ಎಲ್ಲರೊಡನೆ ಚುರುಕಾಗಿ ವ್ಯವಹರಿಸಿ ಗಮನ ಸೆಳೆಯುವಿರಿ. ಹೆಣ್ಣು ಮಕ್ಕಳ ಅಭಿವೃದ್ಧಿ ಉತ್ತಮವಾಗಿರುತ್ತದೆ. ಅವರ ವಿದ್ಯಾಭ್ಯಾಸ ಅಡೆತಡೆಯಿಲ್ಲದೆ ಸಾಗುತ್ತದೆ. ಗಣಿತಜ್ಞರಿಗೆ, ಲೆಕ್ಕ ಪರಿಶೋಧಕರಿಗೆ ಉತ್ತಮ ಕೆಲಸವಿರುತ್ತದೆ. ಆದಾಯ ಸಹ ಹೆಚ್ಚಲು ಆರಂಭಿಸುತ್ತದೆ. ಚರ್ಮ ಕಾಯಿಲೆ ಬಗ್ಗೆ ಎಚ್ಚರ ವಹಿಸಿರಿ. ಸಂಗಾತಿಯ ವೃತ್ತಿ ಕಾಯಂ ಆಗಬಹುದು. ಬಟ್ಟೆಯ ಮೇಲೆ ಕುಸುರಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಕೃಷಿಯಿಂದ ಆದಾಯ ಇರುತ್ತದೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗುವ ಸಾಧ್ಯತೆಯಿದೆ. ಹಣದ ಒಳಹರಿವು ನಿಧಾನವಾಗಿ ಹೆಚ್ಚುವುದು. ಎಲ್ಲಾ ಕೆಲಸಗಳಲ್ಲೂ ಚುರುಕುತನ ತೋರುವಿರಿ. ಸೈನ್ಯದಲ್ಲಿ ಇರುವವರಿಗೆ ಸೂಕ್ತ ಸೌಲಭ್ಯ ದೊರಕುವುದಲ್ಲದೆ ಆಸೆಪಟ್ಟಿದ್ದ ಜಾಗಕ್ಕೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ಬಟ್ಟೆ ವ್ಯಾಪಾರಿಗಳಿಗೆ ವ್ಯಾಪಾರ ಕುದುರತೊಡಗುತ್ತದೆ. ಹೊಟ್ಟೆಯಲ್ಲಿ ಪಿತ್ತ ಮತ್ತು ಉಷ್ಣ ಹೆಚ್ಚಾಗಬಹುದು. ಪ್ರೇಮಿಗಳ ನಡುವೆ ಹೊಂದಾಣಿಕೆ ಕಡಿಮೆಯಾಗಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚಾಗುವುದರ ಜೊತೆಗೆ ಶಿಸ್ತುಕ್ರಮ ಸಹ ಕಾಣಬಹುದು.  

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸ್ವಲ್ಪ ಉಗ್ರತೆ ನಿಮ್ಮಲ್ಲಿ  ಕಾಣಿಸುತ್ತದೆ. ಎಲ್ಲರನ್ನೂ ಧಿಕ್ಕರಿಸುವ ನಿಮ್ಮ ನಡವಳಿಕೆಗೆ ತಕ್ಕ ಉತ್ತರ ಸಿಗಬಹುದು ಎಚ್ಚರ. ಸಹೋದರಿಯರೊಡನೆ ಹೊಂದಾಣಿಕೆ ಹೆಚ್ಚಾಗುವುದು. ಸರ್ಕಾರದಿಂದ ಬರಬೇಕಿದ್ದ ಸವಲತ್ತುಗಳು ನಿಧಾನವಾದರೂ ಬಂದೇ ಬರುತ್ತವೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಎಚ್ಚರ ವಹಿಸಿರಿ. ಹಿರಿಯರ ಮಧ್ಯಸ್ಥಿಕೆಯಿಂದ ಕುಟುಂಬದವರು ಧನಸಹಾಯ ಮಾಡುವರು. ನಿಮ್ಮ ಹಣಗಳಿಕೆಯ ತಂತ್ರಗಳು ಕೆಲವರಿಗೆ ಗೊತ್ತಾಗಿ ಮಾಡುತ್ತಿದ್ದ ಸಹಾಯ ನಿಲ್ಲಿಸಬಹುದು. ಉಪನ್ಯಾಸಕರಿಗೆ ಮತ್ತು ಉಪಾಧ್ಯಾಯರಿಗೆ ನಿರೀಕ್ಷಿತ ಬಡ್ತಿ ದೊರೆಯುವ ಸಾಧ್ಯತೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.