ಬುಧವಾರ, ಆಗಸ್ಟ್ 17, 2022
29 °C

ವಾರ ಭವಿಷ್ಯ: 13-12-2020ರಿಂದ 19–12–2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ ದೊರೆತು ಕೆಲಸ ಸುಗಮವಾಗುತ್ತದೆ. ಪ್ರೀತಿ ಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡು ಸಂತೋಷಿಸಬಹುದು. ಹಲವು ತಾಪತ್ರಯಗಳಿಂದ ಹೊರಬಂದು ನೆಮ್ಮದಿ ಕಾಣುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು, ಮಧ್ಯಸ್ಥಿಕೆ ಮಾಡುವ ಹಿರಿಯರಿಂದ ಈ ಸಮಸ್ಯೆ ಪರಿಹಾರವಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸಿರಿ, ವೈದ್ಯರ ಸಲಹೆ ಪಡೆಯುವುದು ಉತ್ತಮ. ಮಾತನಾಡುವಾಗ ಅತಿಯಾದ ಕಾಠಿಣ್ಯತೆ ಬೇಡ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಲಾಭವಿದೆ.

**
ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳುವಿರಿ. ಸ್ವತಂತ್ರವಾಗಿ ವ್ಯಾಪಾರ ಮಾಡಲು ತೀರ್ಮಾನಗಳನ್ನು ಕೈಗೊಂಡು ಮುನ್ನಡೆಯಿರಿ. ಆರಕ್ಷಕ ಇಲಾಖೆಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ನಿಮ್ಮ ಪ್ರತಿಭೆಗೆ ತಕ್ಕ ಅವಕಾಶಗಳು ಒದಗಿಬರುತ್ತವೆ, ಅವುಗಳನ್ನು ಸದುಪಯೋಗ ಮಾಡಿಕೊಳ್ಳಿರಿ. ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಅವಕಾಶವಿದೆ. ಸಂಗಾತಿಯ ಸಹಕಾರದಿಂದ ವ್ಯವಹಾರದಲ್ಲಿ ಆಗುತ್ತಿದ್ದ ಸೋರಿಕೆ ನಿಲ್ಲುತ್ತದೆ. ಬಂಧುವರ್ಗದ ಸಂತೋಷಕೂಟದಲ್ಲಿ ಭಾಗವಹಿಸುವ ಯೋಗವಿದೆ. ಕೃಷಿ ಪರಿಕರಗಳ ಮತ್ತು ರಸಗೊಬ್ಬರ ಮಾರಾಟಗಾರರಿಗೆ ವ್ಯವಹಾರ ಹೆಚ್ಚುತ್ತದೆ.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕ್ರೀಡಾಪಟುಗಳ ಕ್ರೀಡಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯು ದೊರಕುತ್ತದೆ. ಕುಶಲಕರ್ಮಿಗಳಿಗೆ ಸಂಪಾದನೆಯ ಹೊಸ ಮಾರ್ಗ ತೆರೆಯುತ್ತದೆ. ನಿಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಸೂಕ್ತವಾದ ಪೂರ್ವ ತಯಾರಿಯನ್ನು ಮಾಡಬಹುದು. ಗೃಹ ಕಲಹಗಳನ್ನು ತಡೆಯಲು ಹಿರಿಯರು ಮೌನವಹಿಸುವುದು ಉತ್ತಮ. ಹಣ್ಣುಗಳ ಮತ್ತು ಹೂಗಳ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಲಾಭ ಬರುತ್ತದೆ. ಮನೆಯಲ್ಲಿನ ಸಮಸ್ಯೆಗಳು ಪರಿಹಾರವಾಗಿ ಸಂತೋಷ ಮೂಡುವುದು. ಕಚೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸುವಿರಿ. ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರು ಮಾಡುವವರಿಗೆ ಹೊಸ ತಯಾರಿಕಾ ಆದೇಶಗಳು ದೊರೆಯುತ್ತವೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ವ್ಯವಹಾರದ ಸಂಬಂಧಗಳು ವಿಸ್ತಾರಗೊಳ್ಳುತ್ತದೆ. ವಾಹನ ಹಾಗೂ ವಸ್ತುಗಳ ಖರೀದಿಗಾಗಿ ಏರ್ಪಾಡು ಮಾಡುವಿರಿ.ಹಣದ ಒಳಹರಿವು ಉತ್ತಮವಾಗಿರುತ್ತದೆ ಚಿತ್ರಕಲೆಯಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶಗಳು ದೊರೆಯುವ ಸಂದರ್ಭವಿದೆ. ಹೊಸ ತಂತ್ರಜ್ಞಾನಗಳನ್ನು ನಿಮ್ಮ ಉದ್ದಿಮೆಗಳಲ್ಲಿ ಅಳವಡಿಸಿ ಯಶಸ್ಸನ್ನು ಕಾಣುವಿರಿ. ಉದ್ದಿಮೆಯಲ್ಲಿ ಬರುವ ತೊಂದರೆಗಳನ್ನು ಮುಂದಾಲೋಚನೆಯಿಂದ ಗ್ರಹಿಸಿ ಉತ್ತರ ಕಂಡುಕೊಳ್ಳುವಿರಿ. ಉದ್ಯೋಗದ ಸ್ಥಳದಲ್ಲಿ ಮನಸ್ಸಿಗೆ ಮುದನೀಡುವ ಘಟನೆಗಳು ನಡೆಯುತ್ತವೆ. ವಿದೇಶದಲ್ಲಿ ಉದ್ದಿಮೆಗಳನ್ನು ತೆರೆಯುವ ಆಸೆ ಇದ್ದವರಿಗೆ ಅವಕಾಶಗಳು ಒದಗಿ ಬರುತ್ತವೆ.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಗುರುತರವಾದ ಒಂದು ಜವಾಬ್ದಾರಿ ನಿಮ್ಮ ಹೆಗಲೇರಲಿದೆ, ಅದನ್ನು ಸರಿಯಾಗಿ ನಿಭಾಯಿಸಿ. ನಿಮ್ಮ ಶ್ರಮಕ್ಕೆ ತಕ್ಕ ಫಲಗಳು ಈಗ ಒದಗಿ ಬರುವ ಸಾಧ್ಯತೆಗಳಿವೆ. ಹೆಚ್ಚು ಬಂಡವಾಳ ಹೂಡುವ ಹೊಸ ಯೋಜನೆಗಳನ್ನು ಈಗ ಆರಂಭಿಸುವುದು ಬೇಡ. ಉದ್ಯೋಗಸ್ಥರಿಗೆ ಮೇಲಧಿಕಾರಿಯ ಜೊತೆ ಮಾತುಕತೆಗಳನ್ನು ಆಡಿ ಹೆಚ್ಚಿನ ಲಾಭ ಮಾಡಿ ಕೊಳ್ಳಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಸ್ಥಾನಮಾನಗಳು ಹೆಚ್ಚಾಗುವ ಜನಗಳಿಗೆ ಎಲ್ಲಾ ಲಕ್ಷಣಗಳಿವೆ. ಹೈನುಗಾರಿಕೆ ಮಾಡುವವರ ವ್ಯವಹಾರ ವೃದ್ಧಿಸುತ್ತದೆ. ಕೀಲುಗಳ ನೋವು ಬಾಧಿಸಬಹುದು. ಹಳೆಯ ಸಾಲಗಳನ್ನು ಈಗ ತೀರಿಸಬಹುದು.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿತ್ಯದ ಕೆಲಸಗಳನ್ನು ಹೆಚ್ಚು ನಿಗಾವಹಿಸಿ ಮಾಡಿ ಮುಗಿಸಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯುತ್ತಮ. ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ಈಗ ಪೂರ್ಣಗೊಂಡು ನಿರಾಳವಾಗುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಪದೋನ್ನತಿಯ ಅವಕಾಶಗಳಿರುತ್ತವೆ. ದೂರವಾಗಿದ್ದ ಹಿರಿಯರ ಸಂಬಂಧಗಳನ್ನು ಹತ್ತಿರ ಮಾಡಿಕೊಳ್ಳುವಿರಿ. ಮಕ್ಕಳು ವಿದ್ಯೆ, ಕ್ರೀಡೆಯ ಬಗ್ಗೆ ಹೆಚ್ಚಿನ ಗಮನ ಹರಿಸುವವರು. ತಂದೆಯ ಜೊತೆ ಸಂಬಂಧಗಳು ಸುಧಾರಿಸುವ ಎಲ್ಲ ಲಕ್ಷಣಗಳಿವೆ. ಸಾವಯವ ಕೃಷಿ ಮಾಡುವವರಿಗೆ ಮಾರುಕಟ್ಟೆ ವಿಸ್ತಾರವಾಗುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರ ವಿಸ್ತಾರಗೊಳ್ಳುತ್ತದೆ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಬರುವ ಹಣ ಶೇಖರಿಸಿ ಇಟ್ಟುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವರು. ಉನ್ನತ ವ್ಯಾಸಂಗದ ಬಗ್ಗೆ ಸಾಕಷ್ಟು ಚರ್ಚೆ ನಡೆಯುವುದು. ಆಸ್ತಿಯ ದಾಖಲೆಗಳ ಬಗ್ಗೆ ಸ್ವಲ್ಪ ಅಲೆದಾಟ ಆಗುತ್ತದೆ.ನಿಮ್ಮ ವೈಯಕ್ತಿಕ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಬಹಳ ಎಚ್ಚರವಿರಲಿ, ಇಲ್ಲವಾದಲ್ಲಿ ಗಾಯವಾಗಬಹುದು. ಸರ್ಕಾರಿ ಸಾಲಗಳು ಬೇಗನೇ ದೊರೆಯುತ್ತವೆ. ಇದನ್ನು ಬಳಸಿ ಇತರ ಸಾಲಗಳನ್ನು ತೀರಿಸಬಹುದು.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ನಿಮ್ಮ ನೇರ ನಡೆ ನುಡಿಯಿಂದ ಅಧಿಕಾರಿಗಳ ಮನಸ್ಸನ್ನು ಗೆದ್ದರೂ ಸಹೋದ್ಯೋಗಿಗಳ ನಿಷ್ಠುರ ಎದುರಿಸಬೇಕಾಗಬಹುದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರುವ ಸಾಧ್ಯತೆಗಳಿವೆ. ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳಿವೆ. ಶತ್ರುಗಳನ್ನು ಮಣಿಸಲು ಹೆಣೆಯುವ ತಂತ್ರಗಳು ಫಲ ಕೊಡುತ್ತವೆ. ಭೂಮಿ ಖರೀದಿಸುವ ಆಲೋಚನೆ ಮಾಡುವಿರಿ. ಕೆಲವು ಕೆಲಸಗಳಲ್ಲಿ ನಿಧಾನತೆ ಕಂಡು ಬಂದರೂ ಕೆಲಸ ಆಗೇ ಆಗುವುದು. ತಂದೆ ಮತ್ತು ಮಕ್ಕಳ ನಡುವೆ ಉತ್ತಮ ಹೊಂದಾಣಿಕೆ ಕಾಣಬಹುದು.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ಮನೆ ಕಟ್ಟುವ ವಿಚಾರದಲ್ಲಿ ಕೆಲವರಿಗೆ ಸಫಲತೆ ಇರುತ್ತದೆ. ಸಂಪನ್ಮೂಲಗಳಲ್ಲಿ ಅಭಿವೃದ್ಧಿ ಕಾಣಬಹುದು. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ದೊರೆಯುತ್ತವೆ. ಸಂಗಾತಿಯ ಸಂತೋಷಕ್ಕಾಗಿ ಹೆಚ್ಚಿನ ಖರ್ಚನ್ನು ಮಾಡುವಿರಿ. ವ್ಯವಹಾರಗಳಲ್ಲಿ ಹೊಸ ಪಾಲುದಾರರು ದೊರೆಯುವರು. ಸ್ಥಿರಾಸ್ತಿಗಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರವು ಈಗ ದೊರೆಯುತ್ತದೆ. ತೀವ್ರ ಗಾಬರಿ ಹುಟ್ಟಿಸಿದ್ದ ಅನಾರೋಗ್ಯವು ಇಳಿಮುಖವಾಗುತ್ತದೆ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1 2)

ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಬಹಳ ಚುರುಕಾಗಿ ಕೆಲಸ ಕಾರ್ಯಗಳನ್ನು ಮಾಡುವಿರಿ. ಸಂಪನ್ಮೂಲಗಳ ಅಭಿವೃದ್ಧಿಯತ್ತ ಗಮನ ಹರಿಸುವಿರಿ. ಹಣಕಾಸಿನ ಮುಗ್ಗಟ್ಟುದೂರವಾಗಿ ಆರ್ಥಿಕ ಸ್ಥಿರತೆ ಕಾಣುವಿರಿ. ಕೂಡಿಟ್ಟ ಬಂಡವಾಳದಿಂದ ನಿರೀಕ್ಷೆಗೂ ಮೀರಿ ಲಾಭ ಗಳಿಸುವಿರಿ. ವಿದೇಶದಲ್ಲಿ ಓದಬೇಕೆಂಬ ಆಸೆ ಹೊಂದಿದ್ದವರಿಗೆ ಈಗ ಮಾರ್ಗಗಳು ಗೋಚರಿಸುತ್ತವೆ. ನರದೌರ್ಬಲ್ಯ ಇರುವವರು ಸ್ವಲ್ಪ ಎಚ್ಚರಿಕೆಯ ಜೊತೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಅವಿವಾಹಿತರಿಗೆ ವಿವಾಹ ಗೊತ್ತಾಗುವ ಅವಕಾಶವಿದೆ. ಆಹಾರವಸ್ತುಗಳನ್ನು ತಯಾರಿಸುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

**
ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಅಪರೂಪದ ವಸ್ತುಗಳನ್ನು ಖರೀದಿ ಮಾಡುವಿರಿ. ನಿಮ್ಮ ಮನಸ್ಸಿನ ದುಗುಡಗಳನ್ನು ಸಂಗಾತಿಯೊಡನೆ ಅಥವಾ ಮನೆಯವರೊಂದಿಗೆ ಹೇಳಿಕೊಂಡಲ್ಲಿ ಅದಕ್ಕೆ ಸೂಕ್ತ ಪರಿಹಾರ ಮಾರ್ಗಗಳು ಗೋಚರಿಸಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ಆರ್ಥಿಕ ಸ್ಥಿತಿತೋಟಿಯಲ್ಲಿಡುವುದು ಉತ್ತಮ. ಕೃಷಿಕರಿಗೆ ಉತ್ತಮ ಸೌಲಭ್ಯಗಳು ಒದಗಿಬರುತ್ತವೆ. ವಿದೇಶಿ ಭಾಷೆಗಳನ್ನು ತರ್ಜುಮೆ ಮಾಡುವವರಿಗೆ ಉತ್ತಮ ಅವಕಾಶಗಳು ಒದಗಿಬರುತ್ತವೆ. ಕಬ್ಬಿಣದ ವಸ್ತು ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ಯಾವುದೇ ರೀತಿಯ ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಮಹಿಳಾ ಉದ್ಯೋಗಿಗಳ ಕೆಲಸಗಳ ಒತ್ತಡ ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು. ಆರೋಗ್ಯದ ತೊಂದರೆಗಳಿಗೆ ವೈದ್ಯಕೀಯ ಸಲಹೆಗಳು ಉತ್ತಮ. ಹೊಸ ಜನಗಳ ಸಂಪರ್ಕದಿಂದ ಸಾಂಸ್ಕೃತಿಕ ಕಾರ್ಯಗಳಲ್ಲಿ ನೀವು ಭಾಗವಹಿಸುವಿರಿ. ಮನೆಯ ವಹಿವಾಟಿನಿಂದ ವಿಶೇಷ ಗಮನ ಕೊಡುವುದು ಉತ್ತಮ. ಈ ಹಿಂದೆ ಇಟ್ಟಿದ್ದ ಹಣ ಇಂದು ನಿಮಗೆ ಆರ್ಥಿಕ ಶಕ್ತಿ ಕೊಡುತ್ತದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಭಿವೃದ್ಧಿ ಇದೆ. ಆಭರಣಗಳ ಮಾರಾಟಗಾರರಿಗೆ ವ್ಯವಹಾರಗಳು ವೃದ್ಧಿಸುತ್ತವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.