ಶನಿವಾರ, ಮಾರ್ಚ್ 28, 2020
19 °C

ವಾರ ಭವಿಷ್ಯ: 16–02–2020ರಿಂದ 22–02–2020ರ ವರೆಗಿನ ರಾಶಿ ಭವಿಷ್ಯ

ವಾರ ಭವಿಷ್ಯ Updated:

ಅಕ್ಷರ ಗಾತ್ರ : | |

Weekly horoscope in Kannada

16–02–2020ರಿಂದ 22–02–2020ರ ವರೆಗಿನ ರಾಶಿ ಭವಿಷ್ಯ

ಮೇಷ 

ಅಶ್ವಿನಿ, ಭರಣಿ, ಕೃತ್ತಿಕಾ 1– ಅನೇಕ ದಿನಗಳಿಂದ ಮನಸ್ಸನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ನಿಶ್ಚಿತ ಪರಿಹಾರ ಕಾಣುವಿರಿ. ಸಾಹಸ ಕಾರ್ಯ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಖರ್ಚಿಗೆ ತಕ್ಕಷ್ಟು ಆದಾಯವಿರುತ್ತದೆ. ಯಾವುದೇ ದೊಡ್ಡ ಮೊತ್ತದ ಯೋಜನೆಯನ್ನು ಇನ್ನೊಬ್ಬರ ಮಾತಿನ ಭರವಸೆ ಮೇಲೆ ಆರಂಭಿಸಬೇಡಿ. ಅವರು ತುರ್ತು ಸಮಯದಲ್ಲಿ ಸಹಾಯ ಮಾಡದಿರಬಹುದು.

ವೃಷಭ

ಕೃತ್ತಿಕಾ 2,3,4 ರೋಹಿಣಿ, ಮೃಗಶಿರಾ 1, 2– ಇರುವ ಕೆಲಸದಲ್ಲಿ ಹೆಚ್ಚಿನ ಒತ್ತಡವಿದ್ದರೂ ಕೆಲಸ ಬಿಡುವ ಆಲೋಚನೆ ಮಾಡಬೇಡಿ. ಶುಭಕಾರ್ಯಕ್ಕೆ ಹೋದ ಸಂದರ್ಭದಲ್ಲಿ ನಿಮಗೆ ಕೆಲವರ ಪರಿಚಯವಾಗಿ ಬದಲಿ ಉದ್ಯೋಗದ ಬಗ್ಗೆ ಆಶ್ವಾಸನೆ ದೊರೆಯುತ್ತದೆ. ಹಿರಿಯ ಅಧಿಕಾರಿಗಳ ಆದಾಯ ಹೆಚ್ಚಾಗುತ್ತದೆ. ಅಧ್ಯಯನಕ್ಕಾಗಿ ವಿದೇಶಗಳಿಗೆ ಹೋಗಬೇಕೆನ್ನುವವರಿಗೆ ಉತ್ತಮ ಅವಕಾಶ ಒದಗುವುದು.

ಮಿಥುನ

ಮೃಗಶಿರಾ 3, 4 ಆರಿದ್ರಾ, ಪುನರ್ವಸು 1, 2, 3– ನಿಮ್ಮ ಯಶಸ್ಸಿನ ಲಾಭವನ್ನು ನಿಮ್ಮ ಬಂಧುಗಳು ಪಡೆಯಲು ಯತ್ನಿಸುವರು. ಅಂಥವರನ್ನು ದೂರವಿಡುವುದು ಉತ್ತಮ. ಇವರು ನಿಮ್ಮ ಹೆಸರು ದುರುಪಯೋಗ ಮಾಡಿಕೊಳ್ಳಬಹುದು. ಸಂಗಾತಿಯ ಸಿಟ್ಟನ್ನು ಸಮಾಧಾನದಿಂದ ಪರಿಹರಿಸಿ. ಕಚೇರಿಯಲ್ಲಿ ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಹೇಳಬೇಕಾಗಿದ್ದನ್ನು ಸಮಾಧಾನದಿಂದ ಹೇಳಿದರೆ ನಿಮ್ಮ ಒಳಿತಿಗೆ ಕಾರಣವಾಗುವುದು.

ಕಟಕ

ಪುನರ್ವಸು 4 ಪುಷ್ಯ, ಆಶ್ಲೇಷ– ನಿಮ್ಮ ವೃತ್ತಿಯಲ್ಲಿ ಯಾರನ್ನೂ ಅನಿವಾರ್ಯವೆಂದು ಭಾವಿಸಬೇಡಿ. ಅವರಿಂದಲೇ ನಿಮ್ಮ ಕೆಲಸ ಆಗುವುದು ಎಂಬ ಭಾವನೆ ಬಂದಲ್ಲಿ ಅವರು ನಿಮ್ಮನ್ನು ಆಟವಾಡಿಸುವರು. ಕೆಲವೊಮ್ಮೆ ಕೆಲಸದಲ್ಲಿನ ಒತ್ತಡದಿಂದ ಶಿರೋಭಾರವಾಗುವುದು. ವ್ಯಾಪಾರ ವ್ಯವಹಾರ ವೃದ್ಧಿಸುವುದು. ಆಮದು–ರಫ್ತು ವ್ಯವಹಾರ ಮಾಡುವವರಿಗೆ ಉತ್ತಮ ವ್ಯವಹಾರವಿದೆ.

ಸಿಂಹ

ಮಖಾ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1– ಕೆಲಸದ ಒತ್ತಡ ಅತಿಯಾಗಿದ್ದರೂ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನಿಗದಿತ ಗುರಿಯನ್ನು ತಲುಪುವಿರಿ. ಹಿರಿಯ ಅಧಿಕಾರಿಗಳೊಡನೆ ನಡೆಸಿದ ಪತ್ರ ವ್ಯವಹಾರಗಳು ಫಲಕೊಟ್ಟು ಬೇಕಾದ ನೆರವು ದೊರೆಯುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಅನಿಸಿದರೂ ನಂತರದ ದಿನಗಳಲ್ಲಿ ಪ್ರಗತಿ ಕಾಣಬಹುದು. ಅನವಶ್ಯಕ ಖರ್ಚುಗಳು ಕಾಡುವ ಸಾಧ್ಯತೆ ಇದೆ.

ಕನ್ಯಾ

ಉತ್ತರ ಫಲ್ಗುಣಿ 2, 3, 4 ಹಸ್ತ, ಚಿತ್ತಾ 1, 2– ಕೆಲಸದ ಒತ್ತಡಗಳಿದ್ದರೂ ವೃತ್ತಿಪರರ ಸಲಹೆಯಿಂದ ಕೆಲಸ ಹಗುರವಾಗುವುದು. ವಿನಾಕಾರಣ ಯಾರಲ್ಲೂ ಸಂಶಯಬೇಡ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಇಲ್ಲವಾದಲ್ಲಿ ಅವರಿಂದ ಸಿಗುವ ಸಹಾಯ ನಿಲ್ಲುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳನ್ನು ಎದುರು ಹಾಕಿಕೊಳ್ಳದಿರಿ. ಹಲವಾರು ದಿನಗಳಿಂದ ನಿಂತಿದ್ದ ಹಣ ವಾಪಸ್ಸು ಬಂದು ಸಂತಸವಾಗುವುದು.

ತುಲಾ

ಚಿತ್ತಾ 3, 4 ಸ್ವಾತಿ, ವಿಶಾಖೆ 1, 2, 3– ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸಿಗುವುದಲ್ಲದೆ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಕೆಲವೊಂದು ತಜ್ಞರ ಅಥವಾ ಹಿರಿಯರ ಸಲಹೆಗಳು ನಿಮ್ಮ ಧನಾದಾಯವನ್ನು ಹೆಚ್ಚಿಸುತ್ತವೆ. ಆಸ್ತಿ ವಿವಾದಗಳು ನಿಧಾನವಾಗಿ ಪರಿಹಾರ ಕಾಣುತ್ತವೆ. ನೀವು ಬಯಸಿದ್ದ ಆಸ್ತಿ ಕೈಸೇರುತ್ತದೆ. ಬಾಯಿಮಾತಿಗೆ ಕಟ್ಟುಬಿದ್ದು ಸಾಲ ಕೊಡುವುದು ಬೇಡ.

ವೃಶ್ಚಿಕ

ವಿಶಾಖೆ 4 ಅನೂರಾಧ, ಜ್ಯೇಷ್ಠ– ಧನಾದಾಯ ಉತ್ತಮ. ಭೂಮಿ ಸಂಬಂಧದ ವ್ಯಾಪಾರ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿಯಾಗಿ ಧನಸಂಗ್ರಹ ಹೆಚ್ಚುತ್ತದೆ. ನಿಮ್ಮ ಚಾಣಾಕ್ಷ ನಡೆ ವ್ಯವಹಾರಗಳಲ್ಲಿ ಉತ್ತಮ ಹೆಸರು ತಂದು ಕೊಡುತ್ತದೆ. ಮತ್ತು ಪ್ರಮುಖ ಸ್ಥಾನಗಳನ್ನು ಕೊಡುತ್ತದೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚು ಕಮಿಷನ್ ದೊರೆವುದು.

ಧನು

ಮೂಲ, ಪೂರ್ವಾಷಾಢ, ಉತ್ತರಾಷಾಢ 1– ಕುಟುಂಬಕ್ಕೆ ಸಂಬಂಧಿಸಿದ ಜಟಿಲ ಸಮಸ್ಯೆ ಸರಾಗವಾಗಿ ಪರಿಹಾರವಾಗುತ್ತದೆ. ಸ್ನೇಹಿತರ ಹಣಕಾಸಿನ ವ್ಯವಹಾರಗಳಲ್ಲಿ ಮಧ್ಯವರ್ತಿಯಾಗಿ ನಿಲ್ಲುವುದು ನಿಮಗೆ ದುಬಾರಿಯಾಗಬಹುದು. ಈ ಹಿಂದೆ ನಿಮ್ಮ ಬಗ್ಗೆ ಅಪಪ್ರಚಾರ ಮಾಡಿ ನಿಮ್ಮನ್ನು ಅವಮಾನಿಸಿದ್ದವರು ಈಗ ಕ್ಷಮೆ ಕೇಳಿ ನಿಮ್ಮ ಸ್ನೇಹಕ್ಕಾಗಿ ಹಾತೊರೆಯುವರು. ಬಿಟ್ಟು ಹೋಗಿದ್ದ ವ್ಯವಹಾರಗಳಲ್ಲಿ ಪುನಃ ಸೇರ್ಪಡೆಯಾಗುವಿರಿ.

ಮಕರ

ಉತ್ತರಾಷಾಢ 2, 3, 4 ಶ್ರವಣ, ಧನಿಷ್ಠ 1, 2– ಕೆಲವು ಕೆಲಸಗಳಲ್ಲಿ ನಿಮಗೆ ನಿರೀಕ್ಷಿತ ವೇಗ ದೊರೆಯದಿದ್ದರೂ ಕೆಲಸ ಆಗುತ್ತದೆ. ವ್ಯವಹಾರದ ವಿಸ್ತರಣೆಯು ಹಂತಹಂತವಾಗಿ ಆಗುವುದು. ಅನಿರೀಕ್ಷಿತವಾಗಿ ಕಚೇರಿ ಕೆಲಸದ ಮೇಲೆ ಪ್ರಯಾಣಕ್ಕಾಗಿ ಹೊರಡಬೇಕಾಗಬಹುದು. ಈ ಪ್ರಯಾಣಕ್ಕೆ ಬೇಕಾದ ದಾಖಲೆಗಳನ್ನು ಸರಿಯಾಗಿ ಹೊಂದಿಸಿರಿ. ಪ್ರಮುಖ ವ್ಯಕ್ತಿಗಳ ಸಂಪರ್ಕದಿಂದ ವೃತ್ತಿ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.

ಕುಂಭ

ಧನಿಷ್ಠ 3, 4 ಶತಭಿಷಾ, ಪೂರ್ವಾಭಾದ್ರ 1, 2, 3– ಸರ್ಕಾರಿ ದಾಖಲಾತಿ ವಿಭಾಗದಲ್ಲಿ ಕೆಲಸ ಮಾಡುವವರು ದಾಖಲೆಗಳ ಭದ್ರತೆ ಬಗ್ಗೆ ಸ್ವಲ್ಪ ನಿಗಾವಹಿಸಿ. ಅತ್ಯಂತ ಬೆಲೆಬಾಳುವ ದಾಖಲೆಗಳನ್ನು ಕದಿಯಲು ನಿಮ್ಮವರೇ ಇರುತ್ತಾರೆ. ನೀವು ಕೆಲವು ದಿನಗಳಿಂದ ಧರ್ಮಕ್ಕೆ ಸಂಬಂಧಿಸಿದ ಜಿಜ್ಞಾಸೆಯಿಂದ ತೊಳಲುವಿರಿ. ಅದನ್ನು ಪರಿಹರಿಸುವವರು ಈಗ ಸಿಗುತ್ತಾರೆ.

ಮೀನ

ಪೂರ್ವಾಭಾದ್ರ 4, ಉತ್ತರಭಾದ್ರ, ರೇವತಿ– ನಿಮ್ಮ ವಿಚಾರಗಳಲ್ಲಿ ಸಜ್ಜನರು ತೆಗೆದುಕೊಂಡ ನಿರ್ಧಾರಗಳಿಗೆ ಬೆಲೆ ಕೊಡುವುದರಿಂದ ನಿಮಗೆ ಗೌರವ ಹೆಚ್ಚಾಗುವುದು. ಕುಟುಂಬಗಳಲ್ಲಿ ಜನರಿಗೆ ನಿಮ್ಮ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯ ಅಳಿಸಿಕೊಳ್ಳಲು ಯತ್ನಿಸಿರಿ. ಇದರಿಂದ ಬಂಧುಗಳ ಬೆಂಬಲ ನಿಮಗೆ ದೊರೆಯುತ್ತದೆ. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭ ವಾರ್ತೆ ಕೇಳಿಬಂದು, ಉದ್ಯೋಗ ದೊರೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು