ಶುಕ್ರವಾರ, ಜುಲೈ 1, 2022
28 °C

ವಾರ ಭವಿಷ್ಯ: 27-3-2022ರಿಂದ 2-4-2022ರ ವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ನಿರಾಯಾಸವಾಗಿ ಕೆಲಸ ಮಾಡಲು ಸಾಕಷ್ಟು ತಾಳ್ಮೆ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಲು ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಬಳಸಿಕೊಳ್ಳುವಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಕಾಣಬಹುದು. ನಿಮ್ಮ ಭರವಸೆಗಳು ಈಡೇರುವುದಕ್ಕಾಗಿ ಅತ್ಯಂತ ಶ್ರಮವಹಿಸಬೇಕಾದೀತು. ಕನ್ಯೆಯರಿಗೆ ವಿಶೇಷ ಉಡುಗೊರೆಯನ್ನು ಸ್ವೀಕರಿಸುವ ಸಂದರ್ಭವಿದೆ. ಕೃಷಿಕರ ವಸ್ತುಗಳಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಕೃಷಿಗೆ ಸಂಬಂಧಪಟ್ಟ ತಾಂತ್ರಿಕ ಉಪಕರಣಗಳನ್ನು ತಯಾರಿಸುವವರಿಗೆ ಉತ್ತಮ ವ್ಯವಹಾರವಿರುತ್ತದೆ. ಪಾಲುದಾರರ ಅಸಮ್ಮತಿಯ ನಡುವೆಯೂ ಹೊಸ ವ್ಯವಹಾರವನ್ನು ಆರಂಭಿಸುವುದು ಅಷ್ಟು ಒಳಿತಲ್ಲ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)

ವಿದೇಶಿ ವ್ಯವಹಾರ ಮಾಡುವವರಿಗೆ ಉತ್ತಮ ಪ್ರೋತ್ಸಾಹದ ಜೊತೆಗೆ ಸಲಹೆ ಸೂಚನೆ ದೊರೆಯುತ್ತದೆ. ವ್ಯವಹಾರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಜಾಣ್ಮೆಯನ್ನು ಬಳಸಿ ಗೆಲ್ಲುವಿರಿ. ಕೌಟುಂಬಿಕ ಸಮಸ್ಯೆಯೊಂದನ್ನು ಬಗೆಹರಿಸಲು ಕರೆ ಬರಬಹುದು, ಎಚ್ಚರದಿಂದ ಭಾಗವಹಿಸಿ. ಶುಭಕಾರ್ಯಗಳು ನಿಮ್ಮ ಇಚ್ಛೆಯಂತೆ ನೆರವೇರುತ್ತವೆ. ನಿಮ್ಮ ಒಡಹುಟ್ಟಿದವರು ನಿಮ್ಮ ವಿರುದ್ಧ ಮಾತನಾಡುವ ಎಲ್ಲ ರೀತಿಯ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಕಾಲ. ಸಹೋದ್ಯೋಗಿಗಳೊಡನೆ ಇದ್ದ ಮನಸ್ತಾಪಗಳು ದೂರಾಗುತ್ತವೆ. ಧನ ಆದಾಯವು ತೃಪ್ತಿಕರವಾಗಿರುತ್ತದೆ. ಎಲ್ಲ ಕೆಲಸಗಳಿಗೆ ನಿಮ್ಮ ಸಂಗಾತಿಯ ಸಹಕಾರ ಸಂಪೂರ್ಣ ದೊರೆಯುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಲೇವಾದೇವಿ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ಈಗಿನ ಸ್ಥಿತಿಯಲ್ಲಿ ದೊಡ್ಡಮಟ್ಟದ ಲೇವಾದೇವಿ ಖಂಡಿತವಾಗಿ ಬೇಡ. ವಿನಾಕಾರಣ ಮನೆಯವರೊಂದಿಗೆ ದುಡುಕಿ ಮಾತನಾಡುವ ಸಂದರ್ಭವಿದೆ, ತಾಳ್ಮೆವಹಿಸಿರಿ. ನಂಬಿ ಬಂದವರಿಗೆ ಕೈಲಾದ ಸಹಾಯ ಮಾಡಿ ಸಂತೋಷವನ್ನು ಪಡುವಿರಿ. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಕೆಲವೊಂದು ಗಹನವಾದ ವಿಚಾರಗಳನ್ನು ಕುಟುಂಬದವರೊಡನೆ ಚರ್ಚೆ ಮಾಡಿ ತೀರ್ಮಾನವನ್ನು ತೆಗೆದುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸ ಮಾಡುವಂತಹ ಯೋಗವಿದೆ. ನಿಮ್ಮ ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದೀತು. ಸಂತೋಷ ವಿಹಾರಕ್ಕಾಗಿ ದೂರದೂರುಗಳಿಗೆ ಹೋಗಿ ಬರಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ನಿರೀಕ್ಷೆಯಂತೆ ನಿತ್ಯದ ಕಾರ್ಯಗಳು ಸಾಗಿ ನೆಮ್ಮದಿ ಇರುತ್ತದೆ. ಕ್ರೀಡಾಪಟುಗಳಿಗೆ ಬಹಳ ಯಶಸ್ಸು ಸಿಗುವ ಸಾಧ್ಯತೆ ಇದೆ. ನ್ಯಾಯವಾದಿಗಳು ನ್ಯಾಯ ತೀರ್ಮಾನ ಮಾಡುವಲ್ಲಿ ಮುತುವರ್ಜಿವಹಿಸುವುದು ಒಳ್ಳೆಯದು. ಮುಚ್ಚಿಹೋಗಿದ್ದ ನ್ಯಾಯಾಲಯದ ಕಟ್ಟಳೆಗಳು ಪುನಃ ತೆರೆದು ನಿಮಗೆ ಹೆಚ್ಚಿನ ಮಟ್ಟಿನ ಲಾಭವಾಗುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರ ಲಾಭ ಹೆಚ್ಚಾಗುತ್ತದೆ. ಆಸ್ತಿಗಳ ದಾಖಲೆ ತಿದ್ದುಪಡಿಗಳನ್ನು ಸರಿಪಡಿಸುವಲ್ಲಿ ಸೂಕ್ತ ಇಲಾಖೆಯ ಸಹಾಯ ದೊರೆಯುತ್ತದೆ. ಸಂಗಾತಿ ಆದಾಯದಲ್ಲಿ ಹೆಚ್ಚಳ ಕಾಣಬಹುದು. ಸಹೋದ್ಯೋಗಿಗಳ ನೆರವಿನಿಂದ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಾಣಬಹುದು. ಆದಾಯದಷ್ಟೇ ಖರ್ಚು ಇರುತ್ತದೆ. ಹಣದ ನಿರ್ವಹಣೆ ಬಹಳ ಮುಖ್ಯ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಹೊಸ ವಾಹನವೊಂದನ್ನು ಖರೀದಿ ಮಾಡುವ ಸಲುವಾಗಿ ಮಿತ್ರರೊಡನೆ ಚರ್ಚೆ ಮಾಡಲಿದ್ದೀರಿ. ಆದರೆ ದಾಖಲೆ ಪರಿಶೀಲನೆಯನ್ನು ಸರಿಯಾಗಿ ಮಾಡಿ. ಜಮೀನು ಅಥವಾ ನಿವೇಶನವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬೇರೆಯವರ ಸಲಹೆಯಿಂದಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹಿರಿಯರ ಸಲಹೆ ಪಡೆದು ಈ ಆಪತ್ತಿನಿಂದ ಪಾರಾಗಬಹುದು. ಕಾರ್ಖಾನೆ ಕೆಲಸಗಾರರಿಗೆ ಬಾಕಿ ವೇತನ ಬಂದು ಸಂತೋಷವಾಗುತ್ತದೆ. ಕೃಷಿ ಕ್ಷೇತ್ರದ ಕೆಲಸಗಾರರಿಗೆ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ದುಡಿಮೆ ಹಣ ದೊರೆಯುತ್ತದೆ. ಧನಾದಾಯ ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ನಿಮ್ಮ ಬಂಧುಗಳ ವಿಶೇಷ ಸಮಾರಂಭವೊಂದರಲ್ಲಿ ಭಾಗವಹಿಸುವ ಅವಕಾಶಗಳಿವೆ. ಅಧಿಕ ಸುತ್ತಾಟದಿಂದ ದೇಹಾಲಸ್ಯ ಉಂಟಾಗಿ ಅನಾರೋಗ್ಯ ತಲೆದೋರಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಬಹುದಿನಗಳಿಂದ ನಡೆಯುತ್ತಿದ್ದ ಚಿತಾವಣೆಯು ಸಾರ್ವಜನಿಕರಿಗೆ ತಿಳಿದು ಅವರು ನಿಮ್ಮ ಮೇಲೆ ಜಗಳಕ್ಕೆ ಬರಬಹುದು. ಇದರಿಂದ ನಿಮ್ಮ ವ್ಯವಹಾರಗಳಲ್ಲಿ ಹಿನ್ನಡೆ ಕಾಣಬಹುದು. ನಿಮಗೆ ಸಾಲ ಕೊಟ್ಟವರು ಸಾಲ ವಾಪಸಾತಿಗಾಗಿ ದುಂಬಾಲು ಬೀಳಬಹುದು. ಅವರೊಡನೆ ತಾಳ್ಮೆಯಿಂದ ವರ್ತಿಸಿದಲ್ಲಿ ಮಹತ್ವದ ವಿಷಯಗಳಲ್ಲಿ ಒಡಂಬಡಿಕೆಗೆ ಬರುವ ಸಾಧ್ಯತೆ ಇದೆ. ಶ್ರದ್ಧೆಯಿಂದ ಅಧ್ಯಯನವನ್ನು ಮಾಡಿದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಈಗ ಮುಗಿಸಬಹುದು. ಮಕ್ಕಳ ಬೇಡಿಕೆ ಈಡೇರಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗಬಹುದು. ನರಸಂಬಂಧಿತ  ಕಾಯಿಲೆಗಳು ಬಾಧಿಸಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸರ್ಕಾರಿ ಸವಲತ್ತುಗಳನ್ನು ಈಗ ಪಡೆದುಕೊಳ್ಳಬಹುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಉದ್ಯೋಗದಲ್ಲಿ ಸಾಕಷ್ಟು ಒತ್ತಡವಿದ್ದು ಚಿಂತೆಗೊಳಗಾಗುತ್ತಾರೆ. ಹಣಕಾಸಿನ ವ್ಯವಹಾರವನ್ನು ಮಾಡುವವರಿಗೆ ಸಂಕಷ್ಟಗಳು ಎದುರಾಗಬಹುದು. ಹಿರಿಯರು ತಮ್ಮ ಅಭಿರುಚಿಗೆ ತಕ್ಕಂತೆ ಕೆಲಸ ಕಾರ್ಯಗಳಲ್ಲಿ  ತೊಡಗಿಕೊಳ್ಳುವುದು ಒಳಿತು, ಇಲ್ಲವಾದಲ್ಲಿ ಕಾವೇರಿದ ಮಾತುಗಳು ಆಗಬಹುದು. ಮಿತ್ರವೃಂದದವರಿಂದ ಸಂತಸದ ಮಾತುಗಳು ಕೇಳಿಬರುತ್ತವೆ. ಸಂಗಾತಿಯ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಹೆಚ್ಚು ಹಣ ಖರ್ಚಾಗುತ್ತದೆ. ನಿಮ್ಮ ಬಂಧುಗಳ ಜೊತೆ ಸುಗ್ರಾಸ ಭೋಜನ ಸವಿಯುವ ಯೋಗವಿದೆ. ರಾಜಕೀಯ ನಾಯಕರಿಗೆ ನ್ಯಾಯಾಲಯದ ದಾವೆಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಕಣ್ಣಿನ ಸೋಂಕು ಬಂದಲ್ಲಿ ಹೆಚ್ಚು ಎಚ್ಚರವಹಿಸಿರಿ. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. 

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ಹಿರಿಯರ ಸಲಹೆ ಬಗ್ಗೆ ನಂಬಿಕೆ ಇಟ್ಟು ನಡೆದಲ್ಲಿ ನಿಮಗೆ ಅನುಕೂಲವಾಗುತ್ತದೆ. ಹೊಸ ಕಾರ್ಯವನ್ನು ಈಗ ಆರಂಭಿಸಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಎಲ್ಲ ಸವಲತ್ತುಗಳು ದೊರೆಯುತ್ತವೆ. ಮಕ್ಕಳಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುವ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹೊಸ ಪಾಲುದಾರರು ದೊರೆತು ನಿಮ್ಮ ವ್ಯವಹಾರಕ್ಕೆ ಒಂದು ರೀತಿಯ ಉತ್ತಮ ತಿರುವು ದೊರೆಯುತ್ತದೆ. ಉದ್ದಿಮೆದಾರರು ತಮ್ಮ ಕಾರ್ಮಿಕರ ಸಮಸ್ಯೆಯನ್ನು ಸಮಾಧಾನದಿಂದ ಬಗೆಹರಿಸಬಹುದು. ಬಂಧುಗಳ ನೆರವಿನಿಂದ ನೀವು ಉತ್ಪಾದಿಸಿದ ಉತ್ಪನ್ನಗಳು ಮಾರಾಟವಾಗುತ್ತವೆ. ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ಸಮತೋಲನವನ್ನು ಕಾಪಾಡಿಕೊಳ್ಳುವುದು ಉತ್ತಮ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಹೊಸ ಹೊಸ ವಿಚಾರಗಳ ಬಗ್ಗೆ ಹಿರಿಯರೊಡನೆ ಚರ್ಚಿಸಿ ಮುಂದುವರೆಯುವುದರಿಂದ ನಿಮಗೆ ಹೆಚ್ಚು ಅನುಕೂಲ. ಸದಾಚಾರ ಕಾರ್ಯಕ್ರಮಗಳಲ್ಲಿ ಸಾಕಷ್ಟು ಶ್ರದ್ಧೆಯಿಂದ ಭಾಗವಹಿಸುವಿರಿ. ಮಿತ್ರರ ನಡುವಿನ ಹಣದ ವಿಚಾರದ  ಮಧ್ಯಸ್ಥಿಕೆಯನ್ನು ಮಾಡುವಾಗ ಗಂಭೀರವಾಗಿ ಆಲೋಚನೆ ಮಾಡಿರಿ. ರಾಜಕೀಯ ವ್ಯಕ್ತಿಗಳಿಗೆ ಇದ್ದ ಇರಿಸುಮುರುಸು ಪ್ರಸಂಗಗಳು ಈಗ ದೂರವಾಗುತ್ತವೆ. ಮಕ್ಕಳಿಂದ ಆರ್ಥಿಕ ಸಹಕಾರಗಳು ದೊರೆಯುವ ಸಾಧ್ಯತೆಗಳಿವೆ. ಸಹೋದರರಿಂದ ನಿಮ್ಮ ಕೆಲಸಕ್ಕೆ ಸಾಕಷ್ಟು ಸಹಾಯ ದೊರೆಯುತ್ತದೆ. ಮಹಿಳೆಯರು ತಮ್ಮ ಆಭರಣಗಳ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಲೇಬೇಕು. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಬರಹಗಾರರಿಗೆ ಕೀರ್ತಿ ಗೌರವಗಳು ದೊರೆಯುತ್ತವೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಲಸ್ಯ ಸಲ್ಲದು. ದೃಢವಾಗಿ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು. ಬಂಧುಗಳಿಗೆ ಅವರ ತಪ್ಪಿನ ಅರಿವಾಗುವುದರಿಂದ ಇದ್ದ ದ್ವೇಷ ದೂರವಾಗುತ್ತದೆ. ಉದ್ಯೋಗದಲ್ಲಿ ನೆಮ್ಮದಿ ತರುವ ಶುಭ ವಾರ್ತೆಯೊಂದು ಕೇಳಿಬರುತ್ತದೆ. ಭೂ ವ್ಯವಹಾರವನ್ನು ಮಾಡುವವರಿಗೆ ಉತ್ತಮ ಲಾಭವಾಗುವ ಸಂದರ್ಭವಿದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಮನೆಯ ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತವೆ. ಜಮೀನಿನ ಕೆಲಸ ಕಾರ್ಯಗಳು  ಸರಾಗವಾಗಿ ನಡೆಯುತ್ತದೆ. ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲವನ್ನು ಈಗ ತೀರಿಸಬಹುದು. ವಿದೇಶಿ ಭಾಷಾ ಕಲಿಕೆ ಮಾಡುವವರಿಗೆ ಉತ್ತಮ ಸೌಕರ್ಯ ದೊರೆಯುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಲೇವಾದೇವಿ ವ್ಯವಹಾರಸ್ಥರಿಗೆ ಬಾಕಿ ವಸೂಲಿ ಆಗಬಹುದು. ಹಿರಿಯ ವ್ಯಕ್ತಿಗಳ ವಿರುದ್ಧ ಪಿತೂರಿ ಮಾಡುತ್ತಿದ್ದವರ ಬಣ್ಣ ಬಯಲಾಗಲಿದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಯುವಕರು ಹುಡುಗಿಯರ ಹೊಗಳಿಕೆಗೆ ಉಬ್ಬಿ ನಷ್ಟ ಅನುಭವಿಸುವ ಸಂದರ್ಭಗಳಿವೆ. ಧಾರ್ಮಿಕ ಜೀವನವನ್ನು ನಡೆಸುವವರಿಗೆ ಹೆಚ್ಚಿನ ಸಹಕಾರಗಳು ದೊರೆಯುತ್ತವೆ. ಮಕ್ಕಳು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ತಂದೆಯಿಂದ ಹಣ ಪಡೆಯುವರು. ವಾಹನ ಖರೀದಿಗೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ತಂದೆಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು. ವಾರಾಂತ್ಯಕ್ಕೆ ವಿಹಾರಕ್ಕಾಗಿ ಹೋಗುವ ಸಾಧ್ಯತೆಗಳಿವೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಬಯಸಿದ ಒಡವೆಯನ್ನು ಈಗ ಕೊಳ್ಳಬಹುದು. ಸರ್ಕಾರಿ ಸೌಲಭ್ಯಗಳು ಈಗ ಸರಾಗವಾಗಿ ನಿಮಗೆ ದೊರೆಯುತ್ತವೆ. ಉದ್ದಿಮೆದಾರರಿಗೆ ಹೊಸ ಯಂತ್ರೋಪಕರಣಗಳನ್ನು ಕೊಳ್ಳುವ ಯೋಗವಿದೆ. ಕಾರ್ಮಿಕರಿಗೆ ಅಧಿಕ ಕೆಲಸದ ಒತ್ತಡವಿರುತ್ತದೆ. ಕಟ್ಟಡ ಕಾರ್ಮಿಕರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು. ಸ್ವಂತ ಆರೋಗ್ಯದಲ್ಲಿ  ಸ್ವಲ್ಪಮಟ್ಟಿನ ಏರುಪೇರು ಕಾಣಬಹುದು. ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಕಮಿಷನ್  ದೊರೆಯುವ ಸಂದರ್ಭವಿದೆ. ಸಂಗಾತಿಯ ವ್ಯವಹಾರದಲ್ಲಿ ನಿಮಗೂ ಪಾಲ್ಗೊಳ್ಳುವ ಅವಕಾಶಗಳಿವೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚಿನ ಶ್ರಮ ವಹಿಸಬೇಕಾದ  ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.