ಮಂಗಳವಾರ, ಮಾರ್ಚ್ 31, 2020
19 °C

ಜ್ಞಾನದ ಬೆಳಕಿಗೆ ಭಕ್ತಿಯ ತೈಲ

ರಘು ವಿ. Updated:

ಅಕ್ಷರ ಗಾತ್ರ : | |

ಭಕ್ತಿಯೋಗ ಮತ್ತು ಕರ್ಮಯೋಗ – ಇವು ಮುಖ್ಯವಾದ ಎರಡು ಮೋಕ್ಷ ಮಾರ್ಗಗಳು.

ಬಹುತೇಕರಿಗೆ ಇವು ತದ್ವಿರುದ್ಧದ ಮಾರ್ಗಗಳು ಎನಿಸಬಹುದು. ಇಲ್ಲಿ ಭಕ್ತಿ ಎಂಬುದನ್ನು ಭಗವದನುರಾಗ, ಭಗವತ್ಪ್ರೇಮ ಎಂದೂ, ಕರ್ಮ ಎಂಬುದನ್ನು ಫಲಾಪೇಕ್ಷೆಯಿಲ್ಲದ ಸೇವಾಭಾವ ಎಂದೂ ಗ್ರಹಿಸಬೇಕು.

ಪರಮಹಂಸ ಶ್ರೀರಾಮಕೃಷ್ಣರ ನಿರ್ಯಾಣಾನಂತರ, ಅದರಲ್ಲೂ ಸ್ವಾಮಿ ವಿವೇಕಾನಂದರು ವಿದೇಶಯಾತ್ರೆ ಮುಗಿಸಿ ಬಂದ ಬಳಿಕ ಅವರು ಗುರುಭಾಯಿಗಳೆಲ್ಲ ಸಂಘಟಿತರಾಗಿ ಸೇವಾಕಾರ್ಯಗಳನ್ನು ಕೈಗೊಳ್ಳಬೇಕೆಂದಾಗ ಅಲ್ಲೊಂದು ಕೋಲಾಹಲವೇ ಉಂಟಾಯಿತು. ಗುರುದೇವ ರಾಮಕೃಷ್ಣರು ತೀವ್ರಭಕ್ತಿ, ಸಾಧನೆಯಿಂದ ಮುಕ್ತಿ ಎಂದು ಬೋಧಿಸಿದ್ದರೆ, ಅವರ ಪರಮಶಿಷ್ಯ ನರೇಂದ್ರ (ಸ್ವಾಮಿ ವಿವೇಕಾನಂದ) ಸಂಘಟನೆ, ಮಾನವಸೇವೆಯ ಗುರಿ ಇರಿಸುತ್ತಿದ್ದಾನೆ ಎಂಬುದೇ ಈ ಗೊಂದಲಕ್ಕೆ ಕಾರಣ. ‘ನೀವು ಶ್ರೀರಾಮಕೃಷ್ಣರನ್ನು ನನಗಿಂತ ಚೆನ್ನಾಗಿ ಅರಿತಿದ್ದೀರೋ? ನಿಮ್ಮ ಭಕ್ತಿ ಎನ್ನುವುದೆಲ್ಲ ಭಾವಾವೇಗದ ಷಂಡತನ! ಸರಿಯಿರಾಚೆ - ಯಾರಿಗೆ ಬೇಕು ನಿಮ್ಮ ರಾಮಕೃಷ್ಣ? ನಿಮ್ಮ ಭಕ್ತಿ-ಮುಕ್ತಿಯೆಲ್ಲ ಯಾರಿಗೆ ಬೇಕು? ಶಾಸ್ತ್ರಗಳೇನು ಹೇಳುತ್ತವೆ ಎಂಬುದನ್ನು ಕಟ್ಟಿಕೊಂಡು ಏನಾಗಬೇಕು? ತಮಸ್ಸಿನಲ್ಲಿ ಮುಳುಗಿರುವ ನನ್ನ ದೇಶಬಾಂಧವರನ್ನು ಮೇಲೆತ್ತಲು ನಾನು ನಾನು ಸಾವಿರ ಸಲ ಬೇಕಾದರೂ ನರಕಕ್ಕೆ ಹೋದೇನು! ಭಕ್ತಿ-ಮುಕ್ತಿಗಳನ್ನು ಲೆಕ್ಕಿಸದೆ ಇತರರ ಸೇವೆಗೆ ನಿಲ್ಲುವವರ ದಾಸಾನುದಾಸ ನಾನು’ ಎಂದು ಗುಡುಗಿದರು ಸ್ವಾಮಿ ವಿವೇಕಾನಂದ.

ಮನುಷ್ಯಸಹಜ ದೌರ್ಬಲ್ಯಗಳು ತುಂಬಿರುವಾಗ, ಮನಸ್ಸಿನಲ್ಲಿ ತಾಮಸ ಸ್ವಭಾವ ನೆಲೆಗೊಂಡಿರುವಾಗ ಭಕ್ತಿಯ ಸಾಧನೆ ಸಾಧ್ಯವೇ ಇಲ್ಲ. ಮೊದಲಿಗೆ ಮನಸ್ಸನ್ನು ಶುದ್ಧಗೊಳಿಸಬೇಕು. ಹಾಗೆ ಶುದ್ಧವಾದ ಮನಸ್ಸಿನಲ್ಲಿ ಮಾತ್ರ ಭಕ್ತಿಯೆಂಬುದು ಚಿಗುರಲು ಸಾಧ್ಯ. ಆ ಶುದ್ಧತೆಯನ್ನು ಸಾಧಿಸಲು ಕರ್ಮಮಾರ್ಗವನ್ನು ಅನುಸರಿಸಬೇಕು ಎಂಬುದು ವಿವೇಕಾನಂದರ ಅಭಿಮತ. ಭಕ್ತಿಯೋಗವಾಗಲೀ ಕರ್ಮಯೋಗವಾಗಲೀ ನಿಲ್ಲುವುದು ನೈತಿಕತೆಯ ತಳಹದಿಯ ಮೇಲೆ. ಈ ಪ್ರಪಂಚವೆನ್ನುವುದು ಆ ನೈತಿಕತೆಯನ್ನು ರೂಢಿಸುವ ವ್ಯಾಯಾಮಶಾಲೆ.

‘ಭಗವಂತ ನಿಮಗೆ ಕರ್ಮ ಮಾಡುವ ಅವಕಾಶವನ್ನು ನೀಡಿದ್ದಾನೆ. ಪ್ರಪಂಚವೆಂಬ ಈ ಮಹಾಗರಡಿಮನೆಯಲ್ಲಿ ನಿಮ್ಮ ಸ್ನಾಯುಗಳ ವ್ಯಾಯಾಮಕ್ಕಾಗಿ ಈ ವ್ಯವಸ್ಥೆಯಾಗಿದೆ. ಇದರಿಂದ ನೀವು ಬೇರೆಯವರಿಗೆ ನೆರವು ನೀಡಿದಂತಾಗುವುದಿಲ್ಲ. ಸೇವೆ ಮಾಡುವುದರ ಮೂಲಕ ನಿಮಗೇ ಹೆಚ್ಚು ನೆರವು ನೀಡಿಕೊಂಡಂತೆ. ಒಂದು ಇರುವೆ ಕೂಡ ನಿಮ್ಮ ನೆರವಿಗೆ ಕಾಯ್ದು ಕುಳಿತಿದೆಯೆಂದು ಭಾವಿಸುವಿರಾ? ಪ್ರಪಂಚ ತನ್ನ ಪಾಡಿಗೆ ನಡೆಯುತ್ತಿದೆ. ಸಮುದ್ರದ ಒಂದು ಹನಿಯಂತೆ ನೀವು. ಅವನಿಗಾಗಿ ಕೆಲಸ, ಸೇವೆ ಮಾಡುವವರೇ ಭಾಗ್ಯವಂತರು . . . .’

(ಸ್ವಾಮಿ ವಿವೇಕಾನಂದ ಕೃತಿ ಸಂ. 5)

ಹೀಗೆ ಮನಃಶುದ್ಧಿಯ ಮಾರ್ಗವಾಗಿ ಕರ್ಮಯೋಗವನ್ನು ಅನುಸರಿಸಬೇಕೆಂದು ವಿವೇಕಾನಂದರು ಭಾವಿಸುತ್ತಾರೆ. ಆ ಬಳಿಕವಷ್ಟೆ ಭಕ್ತಿಯ ಸಾಧನೆ ಸಾಧ್ಯ. ಭಕ್ತಿ-ಕರ್ಮಗಳ ಸಂಯೋಗದಿಂದ ನಿಜಜ್ಞಾನ ಮತ್ತು ಜ್ಞಾನಿಯ ಉದಯ. ಇದಕ್ಕೆ ನಿದರ್ಶನವಾಗಿ ಈ ಅಪರೂಪದ ಗುರು-ಶಿಷ್ಯರನ್ನೇ ನೋಡಬಹುದು. ತಮ್ಮನ್ನು ಮತ್ತು ಶ್ರೀರಾಮಕೃಷ್ಣರನ್ನು ಕುರಿತಂತೆ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ರಾಮಕೃಷ್ಣರು ಬಹಿರಂಗದಲ್ಲಿ ’ಭಕ್ತ’, ಅಂತರಂಗದಲ್ಲಿ ’ಜ್ಞಾನಿ.’ ನಾನು ಬಹಿರಂಗದಲ್ಲಿ ’ಜ್ಞಾನಿ’, ಅಂತರಂಗದಲ್ಲಿ ’ಭಕ್ತ’.’

ಹೀಗೆ ಜ್ಞಾನದ ಬೆಳಕು ಕಾಣಬೇಕಾದರೆ ಅಲ್ಲಿ ಭಕ್ತಿಯ ತೈಲವೂ ಕರ್ಮದ ಬತ್ತಿಯೂ ಪೂರಕವಾಗಿರಬೇಕು. ರಾಜಯೋಗವು ಇದಕ್ಕೆ ಬೇಕಾದ ಸೂತ್ರಗಳನ್ನು ಒದಗಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)