ಸೋಮವಾರ, ಮೇ 17, 2021
30 °C

ವಚನಾಮೃತ: ದುರ್ಗುಣ, ವಿಷಯವಾಸನೆ, ಮದ–ಮತ್ಸರ ಅಳಿಯದಿದ್ದರೆ ಪೂಜೆ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುರ್ಗುಣ ಅಳಿಯದೇ ನವವಿಧ ಭಕ್ತಿಯ ಮಾಡಿದಡೇನು?

ವಿಜಯವಾಸನೆ ಪರಿಪರಿ ಕಳೆಯದೆ ಪುಷ್ಪವನರ್ಪಿಸದಡೇನು?

ಅಹಂಕಾರವ ನೀಗದೆ ಶಾಸ್ತ್ರ ಪುರಾಣವ ನೋಡೊದಡೇನು?

ಕಾಮಾದಿಗಳ ಜಯಿಸದೇ ಧೂಪ ದೀಪ ನೈವೇದ್ಯಗೈದಡೇನು?

ಆಡಂಬರದ ಡೊಂಬರಾಟಕ್ಕೆ ಒಲಿಯನು ಒಲಿಯನಯ್ಯ

ನಮ್ಮ ಬಸವಪ್ರಭು ಮುರುಗೇಶ.

ಈ ವಚನವನ್ನು ನಮ್ಮ ಗುರುಗಳಾದ ಶಿವಮೂರ್ತಿ ಮುರುಘಾ ಶರಣರು ರಚಿಸಿದ್ದಾರೆ. ಪ್ರತಿನಿತ್ಯ ನಾವು ನಂಬಿರುವ ದೇವರನ್ನು ಭಕ್ತಿಯಿಂದ ಪೂಜಿಸುತ್ತೇವೆ. ಭಕ್ತಿ ಎಂದರೆ ನಿರ್ಮಲವಾದ ಮನಸ್ಸಿನಿಂದ ದೇವರನ್ನು ಪ್ರೀತಿಸುವುದು. ಈ ಭಕ್ತಿಯಲ್ಲಿ ನವವಿಧಗಳಿವೆ. 1. ಶ್ರವಣಭಕ್ತಿ– ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು. 2. ಕೀರ್ತನ ಭಕ್ತಿ– ದೇವರ ಕೀರ್ತನೆ, ಭಜನೆ, ಗುಣಗಾನ ಮಾಡಿ ಹಾಡಿ ಕೊಂಡಾಡುವುದು. 3. ಸ್ಮರಣೆ ಭಕ್ತಿ– ದೇವರ ನಾಮಸ್ಮರಣೆಯನ್ನು ನಿರಂತರ ಮಾಡುವುದು. 4. ಪಾದಸೇವೆ ಭಕ್ತಿ– ಮಾಡುವ ಕಾರ್ಯಗಳನ್ನು ದೇವರ ಪಾದಸೇವೆಯೆಂದು ತಿಳಿದು ಮಾಡುವುದು. 5. ಅರ್ಚನೆ ಭಕ್ತಿ– ಫಲ, ಪುಷ್ಪಗಳಿಂದ ದೇವರ ಅರ್ಚನೆ, ಪೂಜೆ ಮಾಡುವುದು. 6. ವಂದನೆ ಭಕ್ತಿ–ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡುವುದು. 7. ದಾಸಭಕ್ತಿ– ಎಲ್ಲ ಕಾರ್ಯಗಳನ್ನು ಮಾಡುವಾಗ ದೇವರದಾಸನೆಂದು ತಿಳಿದು ಮಾಡುವುದು. 8. ಸಖಭಕ್ತಿ– ದೇವರ ಮೇಲೆ ವಿಶೇಷವಾದ ಪ್ರೀತಿ, ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು. 9. ಆತ್ಮನಿವೇದನೆ ಭಕ್ತಿ– ಮಾಡುವ ಎಲ್ಲಾ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.

ಹೀಗೆ ನಾವು ದೇವರಿಗೆ ನವವಿಧ ಭಕ್ತಿಗಳಿಂದ ಪೂಜೆ ಮಾಡಿದರೂ ನಮ್ಮೊಳಗಿರುವ ದುರ್ಗುಣ, ವಿಷಯವಾಸನೆ, ಮದ–ಮತ್ಸರಗಳು ಅಳಿಯದೇ ಹೋದರೆ ಆ ಪೂಜೆ ವ್ಯರ್ಥವೆಂದು ಗುರುಗಳು ಹೇಳಿದ್ದಾರೆ. ವ್ಯಕ್ತಿ ತಾನು ಪೂಜೆ ಮಾಡುತ್ತಾ ಮಾಡುತ್ತಾ ಪೂಜ್ಯನಾಗಬೇಕು. ಅದಕ್ಕೆ ಬಸವಣ್ಣನವರು ಇಷ್ಟಲಿಂಗ ಕೊಟ್ಟಿದ್ದಾರೆ. ಆ ಇಷ್ಟಲಿಂಗವನ್ನು ಪೂಜಿಸಿ ಮಾತನಾಡುವ ಲಿಂಗವಾಗೋಣ. ನಡೆದಾಡುವ ದೇವಾಲಯವಾಗೋಣ.

–ಬಸವಪ್ರಭು ಸ್ವಾಮೀಜಿ, ವಿರಕ್ತಮಠ, ದಾವಣಗೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು