ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಿವೃತ್ತಿಯ ನಂತರ ಬದುಕು ನೋಡಿ ಸುಂದರ

Last Updated 16 ಫೆಬ್ರುವರಿ 2021, 6:06 IST
ಅಕ್ಷರ ಗಾತ್ರ

ಈಚೆಗೆ ಬ್ಯಾಂಕ್‌ ಕೆಲಸದಿಂದ ನಿವೃತ್ತರಾದ ದಂಪತಿ ಸೀದಾ ನಗರ ಜೀವನ ತೊರೆದು ಹಳ್ಳಿಗೆ ತೆರಳಿದ್ದರು. ಚಿಕ್ಕ ಜಮೀನಿನಲ್ಲೇ ತೋಟ, ಕೃಷಿ ಮಾಡುವುದು, ನಿವೃತ್ತ ಜೀವನನ್ನು ಶಾಂತಿಯಿಂದ ಹೊಲ– ಗದ್ದೆಗಳ ನಡುವೆ ಕಳೆಯುವುದು ಅವರ ಉದ್ದೇಶವಾಗಿತ್ತು.

ವಿದೇಶದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ದಂಪತಿ ವಿಆರ್‌ಎಸ್‌ ಪಡೆದು ಮೈಸೂರು ಬಳಿಯ ಹಳ್ಳಿಯೊಂದರಲ್ಲಿ ತೋಟವೊಂದನ್ನು ಖರೀದಿಸಿ, ಅದರ ನಡುವೆ ಮನೆ ನಿರ್ಮಿಸಿದ್ದೂ ಪರಿಸರದೆಡೆಗಿನ ಸೆಳೆತವೇ ಎನ್ನಿಸಿತು.

ಬೆಂಗಳೂರಿನಲ್ಲಿ ಇನ್‌ಶೂರೆನ್ಸ್‌ ಕಂಪನಿಗಳಲ್ಲಿ ಕೆಲಸ ಮಾಡಿದ ಅನುರಾಧಾ ನಿವೃತ್ತರಾದಾಗ ಏನು ಮಾಡುವುದು ಎಂಬ ಯೋಜನೆಯನ್ನೇನೂ ಮಾಡಿರಲಿಲ್ಲ. ಆದರೆ ಬಾಲ್ಯದಲ್ಲಿದ್ದ ಬಣ್ಣ–ಕುಂಚಗಳ ಪ್ರೀತಿ ಅವರನ್ನು ಮತ್ತೆ ಚಿತ್ರಕಲೆಯ ಜಗತ್ತಿಗೆ ಕೈಬೀಸಿ ಕರೆಯಿತು. ಉದ್ಯೋಗದ ಒತ್ತಡದಲ್ಲಿ ರೇಖೆ–ಬಣ್ಣಗಳ ಒಡನಾಟದಿಂದ ದೂರವಿದ್ದ ಅವರಿಗೆ ಈಗ ಎಲ್ಲ ರೀತಿಯ ಚಿತ್ರಕಲೆಗಳನ್ನು ರೂಢಿಸಿಕೊಳ್ಳುವ ಇಚ್ಛೆ ಉಂಟಾಗಿತ್ತು. ಮತ್ತೆ ಪೆನ್ಸಿಲ್‌, ಕ್ರಯಾನ್ಸ್‌, ವಾಟರ್‌ ಕಲರ್‌, ತೈಲ ವರ್ಣ, ಮಂಡಲ ಕಲೆ, ಚಾರ್‌ಕೋಲ್‌ ಪೇಂಟಿಂಗ್‌.. ಅದು– ಇದೂ ಎಂದು ದಿನಕ್ಕೊಂದರಂತೆ ಬಿಡಿಸಿ ಸ್ಟೇಟಸ್‌ಗೆ ಹಾಕುವುದನ್ನು ನೋಡಿ ಮಕ್ಕಳೂ ಬೆರಗಾಗಿದ್ದರು. ಅರೆ ಅಮ್ಮನಿಗೆ ಎಷ್ಟು ಚಂದ ಚಿತ್ರ ಬಿಡಿಸಲು ಬರುತ್ತದೆಯೆ? ಎಂದು.

ಬಾಲ್ಯದಲ್ಲಿ ಹಲವು ಪ್ರತಿಭೆ, ಇಷ್ಟಗಳು ಮಕ್ಕಳಲ್ಲಿ ಇರುವುದು ಸಾಮಾನ್ಯ. ಆದರೆ ಎಲ್ಲವನ್ನೂ ಮುಂದುವರಿಸಲು ಸಾಧ್ಯವಾಗಿರುವುದಿಲ್ಲ. ಉತ್ತಮ ಉದ್ಯೋಗಾವಕಾಶ ಬಂದಾಗ ಕಲಾಪ್ರತಿಭೆ ಮೂಲೆಗುಂಪಾಗುವ ಸಾಧ್ಯತೆ ಇರುತ್ತದೆ. ನಿವೃತ್ತಿಯ ನಂತರ ಮತ್ತೆ ಈ ಕಲಾ ಸಾನ್ನಿಧ್ಯ ಖುಷಿ ಕೊಡುತ್ತದೆ.

ನಿವೃತ್ತಿಯ ನಂತರ ಹರ್ಷದಿಂದ ಇರಬೇಕೆಂದರೆ ಮೊದಲು ಆರೋಗ್ಯ ಉತ್ತಮವಾಗಿರಬೇಕು. ಇದಕ್ಕಾಗಿ ನಿಯಮಿತ ವ್ಯಾಯಾಮ ಅಗತ್ಯ ಎನ್ನುತ್ತಾರೆ ತಜ್ಞರು. ಮಕ್ಕಳಿಗೆ ಅಭ್ಯಾಸಕ್ಕೆ ಹೇಗೆ ವೇಳಾಪಟ್ಟಿ ಅಗತ್ಯವೋ, ನಿವೃತ್ತಿಯ ನಂತರವೂ ಉತ್ತಮ ಜೀವನಕ್ಕಾಗಿ ಬೆಳಗಿನ ವಾಕಿಂಗ್‌, ಜಾಗಿಂಗ್‌, ಸ್ವಿಮಿಂಗ್‌, ಯೋಗ ನಿಯಮಿತವಾಗಿ ಅನುಸರಿಸುವುದು ಸೂಕ್ತ. ಆರೋಗ್ಯ ತಪಾಸಣೆಯೂ ಅಗತ್ಯ.

ವರ್ಕೋಹಾಲಿಕ್‌ ಆಗಿರುವ ಕೆಲವರಿಗೆ ನಿತ್ಯ ಕೈತುಂಬ ಕೆಲಸವಿಲ್ಲದಿದ್ದರೆ ದಿನ ಕಳೆಯವುದೇ ಕಷ್ಟವಾಗುತ್ತದೆ. ಅಂಥವರಿಗೆ ನಿವೃತ್ತ ಜೀವನ ತೀರಾ ಬೇಸರದಾಯಕವಾಗುವ ಸಾಧ್ಯತೆಗಳಿವೆ. ಅಂಥವರು ತೀವ್ರ ಶ್ರಮ ಬೇಡದ ಯಾವುದಾದರೂ ಸ್ವಂತ ಉದ್ಯೋಗ ಇಲ್ಲವೇ ಪಾರ್ಟ್‌ಟೈಮ್‌ ಕೆಲಸ ಮಾಡುವುದು ಉತ್ತಮ. ಇದರಿಂದ ನಿವೃತ್ತ ಜೀವನ ಹೊರೆ ಎನಿಸುವುದಿಲ್ಲ.

ಓದುವ ಹವ್ಯಾಸ ಇರುವವರಿಗೆ ಈ ಹಂತದಲ್ಲಿ ಪುಸ್ತಕಗಳೇ ನೆಮ್ಮದಿ ನೀಡುತ್ತವೆ. ಓದುವುದಷ್ಟೇ ಅಲ್ಲದೇ ಮೊಮ್ಮಕ್ಕಳಿಗೂ ಉತ್ತಮ ಓದಿನ ಸಾರ ಹೇಳಬಹುದು. ಅವರ ಜ್ಞಾನ ಸಂಪಾದನೆಗೂ ಕಾರಣರಾಗಬಹುದು. ಮನೆಯಲ್ಲಿ ಮೊಮ್ಮಕ್ಕಳಿದ್ದರೆ ಅವರ ಓದಿನ ಹೊಣೆ ಹೊತ್ತರೆ ಸಮಯ ಕಳೆಯುವುದು ಕಷ್ಟವೇ ಆಗುವುದಿಲ್ಲ. ಬಹುತೇಕ ಮಹಿಳೆಯರೂ ಈಗ ಉದ್ಯೋಗಸ್ಥರಾದ ಕಾರಣ ಹಲವು ವೃದ್ಧ ದಂಪತಿಗೆ ಈಗ ಮೊಮ್ಮಕ್ಕಳನ್ನು ನೋಡಿಕೊಳ್ಳುವುದೂ ನಿವೃತ್ತಿಯ ಒಂದು ಭಾಗವಾಗಿದೆ. ಆರೋಗ್ಯ ಸಮಸ್ಯೆ ಇರುವವರಿಗೆ ಇದು ಹೊರೆ ಎನಿಸಿದರೆ, ಉಳಿದವರಿಗೆ ಮೊಮ್ಮಕ್ಕಳ ಆಟಪಾಠವೇ ಉಲ್ಲಾಸ ತರುತ್ತದೆ.

ಪ್ರವಾಸ ಅತ್ಯುತ್ತಮ

ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಉತ್ತಮವಾಗಿರುವವರಿಗೆ ನಿವೃತ್ತಿಯ ನಂತರ ಪ್ರವಾಸವೇ ಅತ್ಯುತ್ತಮ ಆಯ್ಕೆ ಎಂಬುದು ಹಲವರ ಅಭಿಮತ. ಟೂರ್‌ ಪ್ಯಾಕೇಜ್‌ಗಳು ಸಾಕಷ್ಟು ಇರುವ ಈ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳ ನಿಸರ್ಗ ಸೌಂದರ್ಯ, ಸಂಸ್ಕೃತಿ, ಆಹಾರ, ಭಾಷೆ ಇವುಗಳನ್ನು ಹತ್ತಿರದಿಂದ ನೋಡುವುದು ಬದುಕನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುತ್ತವೆ.

ಕೃಷಿಯೆಡೆ ಹೆಚ್ಚಿನ ಸೆಳೆತ

ನಿವೃತ್ತರಾದ ಹಲವು ದಂಪತಿ ಹಳ್ಳಿಗಳಲ್ಲಿರುವ ಜಮೀನಿನತ್ತ ಹೋಗಿ ವಿವಿಧ ಕೃಷಿ ಪ್ರಯೋಗ ಮಾಡುತ್ತಿರುವುದೂ ಈಚೆಗೆ ಟ್ರೆಂಡ್‌ ಆಗಿದೆ. ವಿದೇಶಗಳಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ಸಶಕ್ತರಾದವರ ಆಯ್ಕೆಯೂ ಇದೇ ಆಗುತ್ತಿದೆ. ಕೆಲವರು ಫಾರ್ಮ್‌ ಹೌಸ್ ಮಾಡಿದ್ದರೆ, ಇನ್ನಷ್ಟು ಮಂದಿ ತಮ್ಮ ತೋಟ–ಗದ್ದೆಗಳಲ್ಲೇ ರೆಸಾರ್ಟ್‌, ಹೋಂಸ್ಟೇ ರೀತಿ ಮಾಡಿ ಅದರಲ್ಲೂ ಆದಾಯ ಗಳಿಸುವ ಕನಸು ಕಂಡಿದ್ದಾರೆ.

ಸಮಾಜ ಸೇವೆ

ಇನ್ನಷ್ಟು ಮಂದಿಗೆ ನಿವೃತ್ತಿಯ ಅವಧಿಯಲ್ಲಿ ಸಮಾಜಸೇವೆ ಮಾಡಬೇಕೆಂಬ ತುಡಿತ ಉಂಟಾಗುವುದಿದೆ. ಇಂಥವರಿಗೆ ಬೇಕಾದಷ್ಟು ದಾರಿಗಳಿವೆ. ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುವುದು. ನಿರುದ್ಯೋಗಿಗಳಿಗೆ ಉದ್ಯೋಗದ ಕ್ಷೇತ್ರಗಳ ಬಗ್ಗೆ ಮಾರ್ಗದರ್ಶನ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ. ಸಮಾಜದಲ್ಲಿ ತೀವ್ರ ಕಷ್ಟಕರ ಸ್ಥಿತಿಯಲ್ಲಿರುವವರನ್ನು ಗುರುತಿಸಿ ಅವರಿಗೆ ಜೀವನ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ನೀಡುವುದು. ವಿದ್ಯಾಭ್ಯಾಸ ಹಾಗೂ ಕೆಲಸ ಮಾಡುತ್ತ ಸಿಕ್ಕ ಅನುಭವಗಳು ಯುವಜನತೆಗೆ ಬೋಧಿಸಲು ಅತ್ಯುತ್ತಮ ದಾರಿದೀಪಗಳು.

ಹೀಗೆ ಮಾಡಿ:

* ಮನೆಯೆದುರು ಜಾಗವಿದ್ದರೆ ಕೈತೋಟದಲ್ಲಿ ಸ್ವತಃ ಗಿಡ ನೆಡುವುದು, ಗಿಡಗಳ ಪೋಷಣೆ ಮಾಡುವುದು. ಔಷಧೀಯ ಸಸ್ಯಗಳನ್ನು ಹುಡುಕಿ ತಂದು ನೆಟ್ಟರೆ ಇನ್ನಷ್ಟು ಉಪಯುಕ್ತ.

* ಸಾಕುಪ್ರಾಣಿಗಳ ಬಗ್ಗೆ ಪ್ರೀತಿಯಿದ್ದರೆ ನಾಯಿ, ಬೆಕ್ಕುಗಳನ್ನು ಸಾಕುವುದು.

* ಹೊಲಿಗೆ, ಕಸೂತಿ ಗೊತ್ತಿದ್ದವರು ಹೊಲಿಗೆ ತರಗತಿಗಳನ್ನು ಮಾಡುವುದು. ಸುತ್ತಮುತ್ತಲಿನವರಿಗೆ ನಿಟ್ಟಿಂಗ್‌ ಹೇಳಿಕೊಡಬಹುದು.

* ಪಾಕಪ್ರವೀಣರು ಮಹಿಳೆ–ಯುವತಿಯರಿಗೆ ಅಡುಗೆಗಳನ್ನು ಕಲಿಸಬಹುದು.

* ಚಿತ್ರಕಲೆ, ಕ್ರಾಫ್ಟ್‌ಗಳ ಜ್ಞಾನವಿದ್ದರೆ ಮಕ್ಕಳಿಗೆ ಹೇಳಿಕೊಡಬಹುದು.

* ಹೊಸದೇನಾದರೂ ಕಲಿಯಬೇಕೆಂಬ ಉತ್ಸಾಹವಿದ್ದರೆ ಯೂಟ್ಯೂಬ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ತರಗತಿಗಳು ಲಭ್ಯವಿವೆ.

* ನೃತ್ಯಗಳಲ್ಲಿ ಆಸಕ್ತಿ ಇದ್ದರೆ 60ರ ನಂತರವೂ ವಿವಿಧ ಬಗೆಯ ನೃತ್ಯಗಳನ್ನು ಕಲಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT