ಸೋಮವಾರ, ಸೆಪ್ಟೆಂಬರ್ 20, 2021
29 °C
ಆಡಳಿತಾರೂಢ ಸರ್ಕಾರಗಳ ವಿರುದ್ಧ ಬಸವ ಜನ್ಮಭೂಮಿಯಲ್ಲಿ ಬೇಸರ

ಅರಣ್ಯ ರೋದನವಾದ ‘ರಾಷ್ಟ್ರೀಯ ಬಸವೋತ್ಸವ’ ಬೇಡಿಕೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಬಸವೇಶ್ವರರ ಜಯಂತಿಯಂದು ರಾಷ್ಟ್ರೀಯ ಬಸವೋತ್ಸವ ಹಾಗೂ ಬಸವ ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಿಸಬೇಕು ಎಂಬ ಬಸವ ಭಕ್ತ ಸಮೂಹದ ದಶಕಗಳ ಬೇಡಿಕೆ ಈಡೇರಿಲ್ಲ. ಪ್ರಬಲ ಹಕ್ಕೊತ್ತಾಯದ ಕೂಗು ಇಂದಿಗೂ ಅರಣ್ಯ ರೋದನವಾಗಿದೆ.

ಬಸವ ಜನ್ಮಭೂಮಿ ಪ್ರತಿನಿಧಿಸುವ ಆಡಳಿತಾರೂಢ ಸರ್ಕಾರದ ಸಚಿವರು ಸಹ ಈ ಬೇಡಿಕೆ ಈಡೇರಿಕೆಗೆ ಇಚ್ಚಾಶಕ್ತಿ ಪ್ರದರ್ಶಿಸದಿದ್ದುದು ಬಸವೇಶ್ವರರ ಅನುಯಾಯಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಇದೂವರೆಗೂ ಆಡಳಿತ ನಡೆಸಿದ ಯಾವೊಂದು ಸರ್ಕಾರಗಳು, ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಬಸವನಬಾಗೇವಾಡಿಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಕೆಲವೊಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸುವುದನ್ನು ಹೊರತುಪಡಿಸಿದರೆ; ಬಸವೇಶ್ವರರ ಜಯಂತಿ ಅಂಗವಾಗಿ ಸರ್ಕಾರದಿಂದ ಇನ್ಯಾವ ಧಾರ್ಮಿಕ ಸಮಾರಂಭ ನಡೆಯದಿರುವುದು ಬಸವ ಭಕ್ತರಲ್ಲಿ ಆಕ್ರೋಶ ಹೆಚ್ಚಿಸಿದೆ.

‘ಬಸವೇಶ್ವರರ ಹೆಸರಿನಲ್ಲಿ ಪ್ರಸ್ತುತ ಎಲ್ಲರೂ ರಾಜಕಾರಣ ಮಾಡುವವರಾಗಿದ್ದಾರೆ. ಬಹುತೇಕ ಸ್ವಾಮೀಜಿಗಳು ಬಸವ ಸ್ಮರಣೆಯಿಂದಲೇ ತಮ್ಮ ದಿನಚರಿ ಆರಂಭಿಸುತ್ತಾರೆ. ಬಸವರ ಹೆಸರಲ್ಲೇ ಹಲ ಹೋರಾಟ ನಡೆದಿವೆ. ಆದರೆ ಇದೂವರೆಗೂ ಯಾರೊಬ್ಬರೂ ರಾಷ್ಟ್ರೀಯ ಬಸವೋತ್ಸವಕ್ಕೆ ಸಂಬಂಧಿಸಿದಂತೆ ಚಕಾರ ಎತ್ತುತ್ತಿಲ್ಲ. ನಮ್ಮ ಕೂಗಿಗೆ ಬಲ ತುಂಬುತ್ತಿಲ್ಲ. ತಮ್ಮ ತಮ್ಮ ಸ್ವಾರ್ಥಕ್ಕೆ ಬಸವೇಶ್ವರರನ್ನು ಬಳಸಿಕೊಳ್ಳುವವರೇ ಹೆಚ್ಚಾಗುತ್ತಿದ್ದಾರೆ’ ಎಂಬ ದೂರು ವಿವಿಧ ಸಂಘಟನೆಗಳ ಮುಖಂಡರದ್ದಾಗಿದೆ.

ಮರೀಚಿಕೆ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಈ ನಿಟ್ಟಿನ ಯತ್ನ ನಡೆದರೂ; ಒಮ್ಮೆಯೂ ರಾಜ್ಯ ಮಟ್ಟದ ಬಸವ ಜಯಂತಿ ಬಸವನಬಾಗೇವಾಡಿಯಲ್ಲಿ ಆಚರಣೆಗೊಳ್ಳಲಿಲ್ಲ. ಲೀಲಾದೇವಿ ಆರ್‌.ಪ್ರಸಾದ್ ಸಚಿವರಾಗಿದ್ದ ಅವಧಿಯಲ್ಲಿ ಶರಣರ ಜಯಂತಿಯನ್ನು ಅವರವರ ಜನ್ಮಸ್ಥಳದಲ್ಲೇ ಆಚರಿಸಬೇಕು ಎಂಬ ಪ್ರಸ್ತಾಪವಿದ್ದರೂ, ಅನುಷ್ಠಾನಗೊಳ್ಳಲಿಲ್ಲ. ಇದರ ಪರಿಣಾಮ ಬಸವ ಅನುಯಾಯಿಗಳು ದಶಕದಿಂದ ಸಲ್ಲಿಸುತ್ತಿರುವ ಬೇಡಿಕೆ ಇಂದಿಗೂ ಮರೀಚಿಕೆಯಾಗಿದೆ.

ಬಸವೇಶ್ವರರು ಜನ್ಮ ತಾಳಿದ ಬಸವನಬಾಗೇವಾಡಿಯಲ್ಲಿಯೇ ರಾಷ್ಟ್ರೀಯ ಬಸವೋತ್ಸವ, ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆ ಬಸವ ಅಭಿಮಾನಿಗಳದ್ದು.

ವಚನ ಸಾಹಿತ್ಯ ಕುರಿತ ಚಿಂತನಗೋಷ್ಠಿ ನಡೆಯಬೇಕು. ಬಸವಣ್ಣನವರ ಜೀವನ ಸಂದೇಶ ಕುರಿತಾದ ನಾಟಕ ಪ್ರದರ್ಶನಗೊಳ್ಳಬೇಕು. ವಚನ ಸಾಹಿತ್ಯ, ಶರಣರ ಜೀವನ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಕಲಾವಿದರು ಸೇರಿದಂತೆ, ರಾಷ್ಟ್ರೀಯ–ಅಂತರರಾಷ್ಟ್ರೀಯ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂಬುದು ಬಸವ ಭಕ್ತರ ಆಗ್ರಹವಾಗಿದೆ.

ಹೋರಾಟದ ಹಾದಿ...

ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿಯಾಗಿದ್ದ ಸಾಹಿತಿ ದಿ.ಬಾಳನಗೌಡ ಪಾಟೀಲ, ಇನ್ನಿತರೆ ಧರ್ಮದರ್ಶಿಗಳು ಸೇರಿದಂತೆ, ರಾಷ್ಟ್ರೀಯ ಬಸವ ಸೈನ್ಯ, ನಂದಿ ಸಾಹಿತ್ಯ ವೇದಿಕೆ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾಜ್ಯ ಸರ್ಕಾರ ಪ್ರತಿ ವರ್ಷವೂ ರಾಷ್ಟ್ರೀಯ ಬಸವೋತ್ಸವ ಆಚರಿಸಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಿದ್ದರು.

2000ನೇ ಇಸ್ವಿಯಲ್ಲಿ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರಾಗಿದ್ದ ವಕೀಲ ದಿ.ಎಂ.ಎಂ.ಪಟ್ಟಣಶೆಟ್ಟಿ ಟ್ರಸ್ಟ್‌ ವತಿಯಿಂದಲೇ ರಾಷ್ಟ್ರೀಯ ಬಸವೋತ್ಸವ ಆಚರಿಸಿದರು. ಆ ವರ್ಷ ಮಾತ್ರ ಅದ್ಧೂರಿ ಕಾರ್ಯಕ್ರಮ ಆಯೋಜನೆಯಾಯಿತು ಎನ್ನುತ್ತಾರೆ ಕಲಾವಿದ ಕೆ.ಗಂಗಾಧರ.

ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ, ಐಕ್ಯಸ್ಥಳ ಕೂಡಲಸಂಗಮದ ಅಭಿವೃದ್ಧಿಗೆ ಆದ್ಯತೆ ನೀಡಿದಷ್ಟು ಬಸವಣ್ಣನವರ ಜನ್ಮಸ್ಥಳಕ್ಕೆ ಒತ್ತು ನೀಡಿಲ್ಲ ಎಂಬ ಅಸಮಾಧಾನ ಬಸವ ಭಕ್ತರದ್ದು.

ಬಹು ದಿನದ ಬೇಡಿಕೆ

‘ರಾಷ್ಟ್ರೀಯ ಬಸವೋತ್ಸವ ಆರಂಭಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಇದೂವರೆಗೂ ಬಸವನಬಾಗೇವಾಡಿಯಲ್ಲಿ ಉತ್ಸವ ಆಚರಿಸದಿರುವುದು ಬೇಸರ ತಂದಿದೆ. ಪ್ರತಿ ವರ್ಷ ರಾಜ್ಯ ಸರ್ಕಾರ ನೀಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಬಸವನಬಾಗೇವಾಡಿಯಲ್ಲೇ ನಡೆಯಬೇಕು ಎಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.

ಮುಖ್ಯಮಂತ್ರಿ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಬೇಕು. ಇದೇ ಸಂದರ್ಭ ಬಸವಾದಿ ಶರಣದ ವಿಚಾರಗಳನ್ನು ತಿಳಿಸುವ ವಿಚಾರಗೋಷ್ಠಿಗಳು ನಡೆಯಬೇಕು. ರಾಜ್ಯ ಮಟ್ಟದ ಕಾರ್ಯಕ್ರಮ ಇದಾಗಿರಬೇಕು’ ಎನ್ನುತ್ತಾರೆ ಬಸವನಬಾಗೇವಾಡಿಯ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ.

ಸ್ಪಂದನೆಯಿಲ್ಲ

‘ಎರಡು ದಶಕದಿಂದಲೂ ರಾಜ್ಯದ ಚುಕ್ಕಾಣಿ ಹಿಡಿದ ಎಲ್ಲ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಆಗ್ರಹಿಸಿದ್ದೇವೆ. ಯಾರೊಬ್ಬರಿಂದಲೂ ಸ್ಪಂದನೆ ಸಿಕ್ಕಿಲ್ಲ. ಪ್ರತಿ ವರ್ಷವೂ ಒಂದಲ್ಲಾ ಒಂದು ಚುನಾವಣಾ ನೀತಿ ಸಂಹಿತೆ, ಬರಗಾಲದಿಂದಾಗಿ ಅದ್ಧೂರಿ ಬಸವ ಜಯಂತಿ ಆಚರಣೆಯಾಗದೇ ಇರುವುದು ಬೇಸರದ ಸಂಗತಿ.

ಬಸವಣ್ಣನ ತತ್ವದ ಮೇಲೆ ಸರ್ಕಾರ ನಡೆಸುತ್ತೇವೆ ಎಂದು ಹೇಳುತ್ತಾರೆಯೇ, ವಿನಾಃ ಅವರ ಜನ್ಮಭೂಮಿಯಲ್ಲಿ ರಾಷ್ಟ್ರೀಯ ಬಸವೋತ್ಸವಕ್ಕೆ ಮುಂದಾಗುತ್ತಿಲ್ಲ. ಈಗಿನ ಸಮ್ಮಿಶ್ರ ಸರ್ಕಾರವಾದರೂ ವಿವಿಧ ಜಿಲ್ಲೆಗಳಲ್ಲಿ ಉತ್ಸವ ನಡೆಸಿದಂತೆ ರಾಷ್ಟ್ರೀಯ ಬಸವೋತ್ಸವ ಆಚರಣೆಗೆ ಮುಂದಾಗಬೇಕು. ಬಸವ ಭಕ್ತರ ಬೇಡಿಕೆ ಈಡೇರದಿದ್ದರೆ ಹೋರಾಟ ಹಮ್ಮಿಕೊಳ್ಳಲು ಸಿದ್ಧರಾಗುತ್ತಿದ್ದೇವೆ’ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಸರದ ಸಂಗತಿ

‘ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ತತ್ವಗಳನ್ನು ವಿದೇಶಿಗರು ಅಳವಡಿಸಿಕೊಳ್ಳಲು ಮುಂದಾಗುತ್ತಿರುವ ಸಂದರ್ಭದಲ್ಲಿ, ಬಸವಣ್ಣ ಜನಿಸಿದ ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗದಿರುವುದು ಬಸವ ಭಕ್ತರಿಗೆ ಬೇಸರ ತರಿಸಿದೆ.

ರಾಷ್ಟ್ರೀಯ ಉತ್ಸವ ಆಚರಣೆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗುವ ಮೂಲಕ ಬಸವಣ್ಣನ ವಿಚಾರಗಳನ್ನು ಎಲ್ಲೆಡೆ ತಲುಪಿಸುವ ಕೆಲಸ ಮಾಡಬೇಕಿದೆ’ ಎಂಬ ಆಗ್ರಹ ದಲಿತ ಸಂಘರ್ಷ ಸಮಿತಿಯ ಮುಖಂಡ ಸುರೇಶ ಮಣ್ಣೂರ ಅವರದ್ದು.

ಬಸವೋತ್ಸವ ಆಚರಿಸಲಿ

‘ಬಸವಣ್ಣನವರ ಕಾಯಕ, ದಾಸೋಹದ ಮಹತ್ವ ಸೇರಿದಂತೆ ಅವರ ಜೀವನಾದರ್ಶ, ವಚನಗಳಲ್ಲಿನ ಮೌಲ್ಯಗಳನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಬಸವೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸರ್ಕಾರ ಮುಂದಾಗಬೇಕಿದೆ. ಈ ದಿಸೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಪ್ರಾಮಾಣಿಕ ಯತ್ನ ನಡೆಸಬೇಕಿದೆ’ ಎಂಬ ಒತ್ತಾಯ ವಿಶ್ವಬಂಧು ಬಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಅಮರೇಶ ಮಿಣಜಗಿ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು