ಕಾಗಿನೆಲೆ ಕೆರೆಯಲ್ಲಿ ಕ್ರೌಂಚ ಪಕ್ಷಿಗಳ ಕಲರವ

ಮಂಗಳವಾರ, ಏಪ್ರಿಲ್ 23, 2019
31 °C
ಹಾವೇರಿ ಜಿಲ್ಲೆಗೆ ಲಗ್ಗೆಯಿಟ್ಟ ಯೂರೋಪ್‍ದಿಂದ ವಲಸೆ ಬಂದ ವಿದೇಶಿ ಬಾನಾಡಿ

ಕಾಗಿನೆಲೆ ಕೆರೆಯಲ್ಲಿ ಕ್ರೌಂಚ ಪಕ್ಷಿಗಳ ಕಲರವ

Published:
Updated:

ಕಾಗಿನೆಲೆ ಕೆರೆ ಅಂಗಳದಲ್ಲಿ ವಿದೇಶಿಯ ಕ್ರೌಂಚ ಡೆಮೊಯ್ಸೆಲ್ಲಿ (Demoiselle Crane) ಹಕ್ಕಿಗಳ ಸಮೂಹ ಬೀಡುಬಿಟ್ಟಿವೆ ಸುದ್ದಿ ತಿಳಿಯಿತು. ಕ್ಯಾಮೆರಾ ಹೆಗಲೇರಿಸಿ, ಛಾಯಾಗ್ರಾಹಕ ಮಿತ್ರರಾದ ಚಂದ್ರು ಶಿಡೆನೂರು ಮತ್ತು ಹರೀಶ್‌ರೊಂದಿಗೆ ಬೆಳಗಿನ 6 ಗಂಟೆಗೆ ಕೆರೆ ಅಂಗಳದಲ್ಲಿ ಹಾಜರಿದ್ದೆವು. ಮರೆಯಲ್ಲಿ ಕುಳಿತು ಕಾಯುತ್ತಿದ್ದೆವು. ಸುಮಾರು ಎರಡು ತಾಸುಗಳ ನಂತರ ಆ ಪಕ್ಷಿಗಳ ಒಂದು ಗುಂಪು ಬಾನಲ್ಲಿ ಕಂಡಿತು. ಅತಿಸೂಕ್ಷ್ಮ ಸಂವೇದನಾ ಪಕ್ಷಿಯಾದ ಇವು ನಮ್ಮ ಇರುವಿಕೆಯನ್ನು ಕಂಡು ಬೇಗನೆ ನೀರಿಗಿಳಿಯಲ್ಲಿಲ್ಲ. ಬಹಳಷ್ಟು ಸಮಯವಾದ ಮೇಲೆ ನಮ್ಮಿಂದ ಬಹುದೂರದಲ್ಲಿ ಇಳಿದವು.

ಅರೆಮಲೆನಾಡಿನ ಹಾಗಿರುವ ಹಾವೇರಿ ಜಿಲ್ಲೆಯ ಹಾನಗಲ್‌, ಬ್ಯಾಡಗಿ, ರಾಣೆಬೆನ್ನೂರು ತಾಲ್ಲೂಕುಗಳ ಆಸುಪಾಸಿನ ಕೆರೆಗಳಲ್ಲಿ ಯೂರೋಪ್‍ನಿಂದ ವಲಸೆ ಬಂದ ವಿದೇಶಿ ಬಾನಾಡಿ ಕ್ರೌಂಚ ಡೆಮೊಯ್ಸೆಲ್ಲಿ ಹಕ್ಕಿಗಳ ಸಮೂಹ ಬೀಡುಬಿಟ್ಟಿವೆ. ನೀರುಕಾಗೆ, ಕೆಂಬರಲು ಸೊಲಾರಿ ಹಕ್ಕಿ, ಹೆಬ್ಬಾತು, ಮುಟ್ಟುಗಾಲು, ಗೊರವ ರಿವರ್ ಟರ್ನ, ಬಿಳಿಹುಬ್ಬಿನ ಬಾತು ಮುಂತಾದ ಸ್ಥಳೀಯ ವೆರೈಟಿಯ ಪಕ್ಷಿಗಳ ಜೊತೆ ‘ಕ್ರೌಂಚ ಡೆಮೊಯ್ಸೆಲ್ಲಿ’ ಯ ಸೌಂದರ್ಯವನ್ನು ವೀಕ್ಷಿಸಬಹುದು.

ಹದಿನಾಲ್ಕು ಪ್ರಭೇದಗಳು

ಕ್ರೌಂಚ ಡೆಮೊಯ್ಸೆಲ್ಲಿ ಪಕ್ಷಿಯ ಪೂರ್ವಾಪರ ಹುಡುಕಿ ದಾಗ, ಇವುಗಳಲ್ಲಿ 14 ವಿವಿಧ ಪ್ರಭೇದಗಳಿವೆ. ಅದರಲ್ಲಿ 4 ಪ್ರಭೇಧಗಳನ್ನು ಕಾಣಬಹುದು. ಅದರಲ್ಲಿ ಡೆಮೊಯ್ಸೆಲ್ಲಿ ಕೂಡ ಒಂದು ಎಂದು ಗೊತ್ತಾಯಿತು. ಉಳಿದವು ಕಾಮನ್ ಕ್ರೌಂಚ, ಸಾರಸ್ ಕ್ರೌಂಚ, ಸೈಬೀರಿಯನ್ ಅಥವಾ ದೊಡ್ಡ ಬಿಳಿ ಕ್ರೌಂಚ. ಈ ‘ಕ್ರೌಂಚ ಡೆಮೊಯ್ಸೆಲ್ಲಿ’ ಯ ವೈಜ್ಞಾನಿಕ ಹೆಸರು ‘ಗ್ರಸ್ ವಿರ್ಗೋ’. ಯೂರೋಪ್‍ನಿಂದ ಯುರೊಶಿಯಾ, ಮಂಗೋಲಿಯಾ , ಈಶಾನ್ಯ ಚೀನಾ ಮೂಲಕ ಭಾರತಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತವೆ. ಹಿಮಾಲಯದಲ್ಲಿನ ವಾತಾವರಣದ ಏರುಪೇರಿನಿಂದಾಗಿ ಆ ಮಾರ್ಗವಾಗಿ ಹಾರಿ ಬರುವ ಬಾನಾಡಿಗಳು ಹೆಚ್ಚು ಸಾಯುವುದುಂಟು.

ಈ ಹಕ್ಕಿಗಳು ಮೊದಲು ಉತ್ತರಭಾರತದ ಪ್ರದೇಶಗಳಿಗೆ ಬರುತ್ತವೆ. ಅಲ್ಲಿಂದ ಮೂರ್ನಾಲ್ಕು ದಿನಗಳ ವಿಶ್ರಾಂತಿಯ ನಂತರ ಆಂಧ್ರ ಹಾಗೂ ಕರ್ನಾಟಕದ ಕೆರೆಗಳು, ಸರೋವರಗಳ ಹಿನ್ನೀರಿನಲ್ಲಿ ಬೀಡುಬಿಡುತ್ತವೆ. ಅದರಲ್ಲಿಯೂ ದಕ್ಷಿಣ ಕರ್ನಾಟಕದ ಕೃಷಿ ಭೂಮಿ ಹಾಗೂ ಕೆರೆ-ಕಟ್ಟೆಗಳ ಸಮೀಪದಲ್ಲಿ ಹೆಚ್ಚಾಗಿ ಠಿಕಾಣಿ ಹೂಡುತ್ತವೆ.

ಗಗನ ವಿಹಾರಿ ಪಕ್ಷಿಗಳಲ್ಲಿ ಅತೀ ಎತ್ತರದಲ್ಲಿ ಹಾರುವ ಪಕ್ಷಿ ಇದು. ಶಿಸ್ತು ಬದ್ಧವಾಗಿ ಹಾರಾಡುತ್ತವೆ. ನೀರಿನಿಂದ ಮೇಲೆ ಹಾರುವಾಗ, ಕೆಳಗೆ ಇಳಿಯುವಾಗ ವರ್ತುಲಾಕಾರವಾಗಿ ಹಾರಾಡುತ್ತಾ ಇಳಿಯುತ್ತವೆ. ಸಮುದ್ರ ಮಟ್ಟದಿಂದ ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಹೀಗಾಗಿಯೇ ಇವು ಹಿಮಾಲಯ ಪರ್ವತದ ಮೇಲಿಂದ ಹಾದು ಭಾರತ ಪ್ರವೇಶಿಸುತ್ತವೆ.

ಇವುಗಳದ್ದು ಬಹಳ ಗಟ್ಟಿಮುಟ್ಟಿನ ಶರೀರ. ಆಹಾರ ಕಬಳಿಸಲು, ಗಾಳಿ ಸೀಳುವುದಕ್ಕಾಗಿರುವ ಇವುಗಳ ಕೊಕ್ಕು ಉದ್ದವಾಗಿ ಮೊನಚಾಗಿದ್ದು, ಗಟ್ಟಿಮುಟ್ಟಾಗಿದೆ. ಕತ್ತು ನೀಳವಾಗಿವೆ. ಬೇಕಾದಾಗ ಬಾಗಿಸಿಕೊಳ್ಳುತ್ತವೆ. ದೂರ ಸಂಚಾರಿಯಾದ ಈ ಪಕ್ಷಿ ಗುಂಪಾಗಿ ಸಂಚರಿಸುವಾಗ ತನ್ನ ಬಳಗದ ಹಕ್ಕಿಗಳನ್ನು ಗಟ್ಟಿ ಧ್ವನಿಯಿಂದ ಕೂಗಿ ಕರೆಯುತ್ತದೆ. ಆಹಾರಕ್ಕಾಗಿ ಕೆರೆ, ಕೊಳಗಳಲ್ಲಿ ಇಳಿಯವ ಮೊದಲು ಕೆಳಗಿರುವ ಅಪಾಯದ ಸೂಚನೆಗಳನ್ನು ಪರೀಕ್ಷಿಸಿಯೇ ಕೆಳಗಿಳಿಯುತ್ತವೆ. ಅಪಾಯದ ಸೂಚನೆ ಸಿಕ್ಕರೆ, ಕೆಳಗಿಳಿಯದೇ ವರ್ತುಲಾಕಾರವಾಗಿ ಸುತ್ತುತ್ತಾ ಮತ್ತೆ ಬೇರೆ ಕಡೆ ಹೋಗುತ್ತವೆ.

ಸಂಗಾತಿ ವರಿಸಲು ನೃತ್ಯ

ಯಾವಾಗಲೂ ಗುಂಪು ಗುಂಪಾಗಿ ವಾಸಿಸುವ ಈ ಪಕ್ಷಿ ಒಂದೇ ಸಂಗಾತಿಯೊಂದಿಗೆ ಜೀವನ ಮಾಡುತ್ತದೆ. ಎರಡರಲ್ಲೂ ಒಂದು ಸಾವನ್ನಪ್ಪಿದರೆ ಮತ್ತೊಂದು ಪಕ್ಷಿಯು ಅದರ ನೆನಪಿನಲ್ಲಿಯೇ ಆಹಾರ ಬಿಟ್ಟು ಕ್ರಮೇಣ ಸಾಯುತ್ತದೆ. ಹಾಗಾಗಿ ಇದರ ಸಂತತಿ ಕ್ಷೀಣಿಸುತ್ತಿದೆ ಎಂಬುದು ಪಕ್ಷಿ ತಜ್ಞರ ಅಭಿಪ್ರಾಯ.

ಬೆಳಗಿನ ವೇಳೆ ಕೆರೆಗೆ ಬಂದ ಕೂಡಲೇ ಎಲ್ಲ ಪಕ್ಷಿಗಳು ನೀರು ಕುಡಿದು ಗುಂಪಾಗಿ ನಿಂತುಕೊಂಡು ಕೆಲ ಹೊತ್ತು ವಿಶ್ರಾಂತಿ ಪಡೆದು, ಆಕಾಶದತ್ತ ನೋಡುತ್ತವೆ. ನಂತರ ಅಲ್ಲಿಂದ ಇಲ್ಲಿಗೆ ಸರ್‍ರನೆ ಓಡಿ ಮತ್ತೆ ಬಂದು ಕೆಲ ಹೊತ್ತು ಸಂಗಾತಿ ಆಯ್ಕೆಗಾಗಿ ಮೇಲೆ ಹಾರಿ ವಿಶೇಷ ನೃತ್ಯಗಳನ್ನು ಮಾಡುತ್ತವೆ. ಆ ನೃತ್ಯ ನೋಡುವುದೇ ಒಂದು ಸಂಭ್ರಮ.

ಕನ್ನಡದಲ್ಲಿ ಕಾರ್ಕೊಂಚ

ಈ ಪಕ್ಷಿಗೆ ಕನ್ನಡದಲ್ಲಿ ‘ಕಾರ್ಕೊಂಚ’ ಎನ್ನುತ್ತಾರೆ. ಇವು ಆಕಾಶದಲ್ಲಿ ಹಾರಾಡುವಾಗ ‘ಗಿ’ ಆಕಾರದಲ್ಲಿ ಹಾರಾಡುತ್ತವೆ. ಇವುಗಳ ಶಬ್ದ ಸಮುದ್ರದ ಅಲೆಗಳ ಶಬ್ಧದಂತೆ ಕೇಳುತ್ತದೆ. ಹಾರುವಾಗ ದೂರದಿಂದ ನೋಡಿದರೆ ಇದರ ಕಪ್ಪು ವರ್ಣದ ಎದೆ ಭಾಗ ಕೊಕ್ಕರೆಯ ಕತ್ತು ಅದರಿಂದ ಬೇರ್ಪಡಿಸಿದಂತೆ ಕಾಣುತ್ತದೆ.

ಬೆಳವಣಿಗೆ ಹಂತದಲ್ಲಿರುವಂತಹ ಎಲ್ಲವೂ ಬೂದು ಬಣ್ಣದಿಂದ ಕೂಡಿದ್ದೂ ಬಾಲ್ಯಾವಸ್ಥೆಯಲ್ಲಿ ಕುತ್ತಿಗೆ ಮುಂಭಾಗದಲ್ಲಿ ಸ್ವಲ್ಪ ಬೂದು ಬಣ್ಣ, ಮುಂದುವರಿದ ಪುಚ್ಚಗಳು ಚಿಕ್ಕದಾಗಿ ಬೂದು ಬಣ್ಣದಿಂದ ಇರುತ್ತದೆ.

ಇವು ದೊಡ್ಡದಾದ ನದಿ ಪಾತ್ರಗಳಲ್ಲಿ ಮರಳಿನ ದಿನ್ನೆಗಳ ಮೇಲೆ, ನದಿ ಹಿನ್ನಿರಿನಲ್ಲಿ, ವಿಶಾಲವಾದ ಕೆರೆ ಅಂಗಳಲ್ಲಿ ಹರಡಿಕೊಳ್ಳುತ್ತವೆ. ತಾವು ಇರುವ ಜಾಗದಿಂದ ಸುಮಾರು 100ಮೈಲಿಯಷ್ಟು ದೂರ ಆಹಾರವನ್ನು ಅರಸಿ ಹೋಗುತ್ತವೆ. ಬೆಳಗಿನ ವೇಳೆ ಗುಂಪು ಗುಂಪಾಗಿ ಕೆರೆಯ ನಡುಗಡ್ಡೆಗೆ ಬಂದು ಇಳಿಯುತ್ತವೆ. ಇಳಿದ ತಕ್ಷಣ ಮೊದಲು ನೀರು ಕುಡಿದು, ಬಹಳ ಹೊತ್ತಿನ ನಂತರ ಆಹಾರ ಸೇವಿಸುತ್ತವೆ.

ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !