ಶುಕ್ರವಾರ, ಡಿಸೆಂಬರ್ 3, 2021
24 °C

ಆಳ–ಅಗಲ: 100 ಕೋಟಿ ಲಸಿಕೆ ಹೆಗ್ಗಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧ ಇದೇ ಜನವರಿ 16ರಂದು ಆರಂಭಿಸಲಾದ ಲಸಿಕೆ ಅಭಿಯಾನವು ಗುರುವಾರ ಮಹತ್ವದ ಮೈಲಿಗಲ್ಲೊಂದನ್ನು ದಾಟಿದೆ. ಲಸಿಕೆಯ ಒಟ್ಟು ನೂರು ಕೋಟಿ ಡೋಸ್‌ಗಳನ್ನು ಅರ್ಹರಿಗೆ ಹಾಕಲಾಗಿದೆ. ಇದೊಂದು ಬಹುದೊಡ್ಡ ಸಾಧನೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಇನ್ನೂ ಬಹು ದೂರ ಕ್ರಮಿಸಬೇಕಿದೆ ಎಂಬುದು ವಾಸ್ತವ. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 37ರಷ್ಟು ಜನರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ವಿಶ್ವದ ಬಹುತೇಕ ಪ್ರಮುಖ ರಾಷ್ಟ್ರಗಳಲ್ಲಿ ಎರಡೂ ಡೋಸ್‌ ಪಡೆದವರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದೆ. ಆದರೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದವರ ಪ್ರಮಾಣ ಶೇ 21ರಷ್ಟು. ಇನ್ನೂ ಶೇ 79ರಷ್ಟು ಜನರಿಗೆ ಎರಡನೇ ಡೋಸ್‌ ನೀಡಬೇಕಿದೆ

ಎಲ್ಲರಿಗೂ ಲಸಿಕೆಗೆ ಬೇಕು 479 ದಿನಗಳು

ಭಾರತದ ಒಟ್ಟು ಜನಸಂಖ್ಯೆ 136 ಕೋಟಿಗೂ ಹೆಚ್ಚು. ಈ ಎಲ್ಲಾ ಜನರಿಗೂ ಕೋವಿಡ್‌ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ಒಟ್ಟು 272 ಕೋಟಿ ಡೋಸ್‌ಗಳ ಅವಶ್ಯಕತೆ ಇದೆ. ಆದರೆ ಈಗ 100 ಕೋಟಿ ಡೋಸ್‌ಗಳನ್ನಷ್ಟೇ ನೀಡಲಾಗಿದೆ. ಇನ್ನೂ 172 ಕೋಟಿ ಡೋಸ್‌ಗಳನ್ನು ನೀಡಬೇಕಿದೆ. ದೇಶದಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾಗಿ ಈಗ 279 ದಿನ ಕಳೆದಿದೆ. ಇದೇ ವೇಗದಲ್ಲಿ ದೇಶದ ಎಲ್ಲರಿಗೂ ಲಸಿಕೆಯ ಎರಡೂ ಡೋಸ್‌ ನೀಡಲು ಇನ್ನೂ 479 ದಿನ ಬೇಕಾಗುತ್ತದೆ. ಅಂದರೆ ಎಲ್ಲರಿಗೂ ಲಸಿಕೆ ನೀಡಲು ಇನ್ನೂ ಒಂದು ವರ್ಷ ಮತ್ತು ನಾಲ್ಕು ತಿಂಗಳು ಬೇಕಾಗುತ್ತದೆ.

ಎಲ್ಲರಿಗೂ ಎರಡು ಡೋಸ್‌ ನೀಡಲು ಒಟ್ಟು 272 ಕೋಟಿ ಡೋಸ್‌ ಅಗತ್ಯವಿದೆ. ಆದರೆ ಲಸಿಕೆ ಪೋಲಿನ ಪ್ರಮಾಣವನ್ನು ಇದಕ್ಕೆ ಸೇರಿಸಿಲ್ಲ. ದೇಶದಲ್ಲಿ ಈಗ ಶೇ 6ರಷ್ಟು ಲಸಿಕೆ ಪೋಲಾಗುತ್ತಿದೆ. ಇದನ್ನು ಅಗತ್ಯವಿರುವ ಒಟ್ಟು ಡೋಸ್‌ಗಳಿಗೆ ಸೇರಿಸಿದರೆ, ಎಲ್ಲರಿಗೂ ಎರಡು ಡೋಸ್ ನೀಡಲು 288 ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ.

ಮಕ್ಕಳಿಗೆ ಸದ್ಯದಲ್ಲೇ ಕೋವಿಡ್ ಲಸಿಕೆ

ದೇಶದೆಲ್ಲೆಡೆ ಶಾಲೆಗಳು ಆರಂಭವಾಗುತ್ತಿದ್ದು, ಲಸಿಕೆ ಅಭಿಯಾನದಿಂದ ಹೊರಗುಳಿದಿ ರುವ ಮಕ್ಕಳ ಪೋಷಕರಲ್ಲಿ ಆತಂಕ ಇದೆ. ಆದರೆ ಮಕ್ಕಳಿಗೆ ಲಸಿಕೆ ಹಾಕುವ ಸಮಯ ದೂರವಿಲ್ಲ. ಸದ್ಯದಲ್ಲೇ ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಸಿದ್ಧತೆ ಮಾಡಿ ಕೊಂಡಿದೆ. ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯ ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಆರಂಭವಾಗಬಹುದು ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎನ್.ಕೆ ಅರೋರಾ ಹೇಳಿದ್ದಾರೆ.

18 ವರ್ಷದೊಳಗಿನ 44 ಕೋಟಿ ಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ 12ರಿಂದ 17 ವರ್ಷದೊಳಗಿನ 12 ಕೋಟಿ ಮಕ್ಕಳಿದ್ದಾರೆ. ಕಾಯಿಲೆ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸುಮಾರು 30 ಲಕ್ಷ ಮಕ್ಕಳು ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ. ಆರೋಗ್ಯವಂತ ಮಕ್ಕಳಿಗೆ 2022ರ ಮೊದಲ ತ್ರೈಮಾಸಿಕದಲ್ಲಿ ಲಸಿಕೆ ನೀಡಲಾಗುವುದು. ಮೊದಲ ಹಂತದಲ್ಲಿ 12–17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಭಾರತದಲ್ಲಿ ಮಕ್ಕಳಿಗೆ ನೀಡುವ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಝೈಕೋವ್–ಡಿ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಅನುಮೋದನೆ ಪಡೆದಿವೆ. ಇನ್ನೂ ಕೆಲವು ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ವರ್ಷದ ಹೊತ್ತಿಗೆ ಅವು ಲಭ್ಯವಾಗುವ ನಿರೀಕ್ಷೆಯಿದೆ.  

ಝೈಕೋವ್‌–ಡಿ: ಗುಜರಾತ್ ಮೂಲದ ಝೈಡಸ್ ಕ್ಯಾಡಿಲಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್‌–ಡಿ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅನುಮೋದಿಸಲಾಗಿದೆ. ಈ ಲಸಿಕೆಯನ್ನು ಮೊದಲ ಹಂತ ದಲ್ಲಿ ಬಳಸಲಾಗುತ್ತದೆ. ಝೈಡಸ್ ಸಂಸ್ಥೆಯು ಮೊದಲ ಹಂತದಲ್ಲಿ 40 ಲಕ್ಷ ಡೋಸ್‌ಗಳನ್ನು ಪೂರೈಸುವ ನಿರೀಕ್ಷೆ ಯಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಪ್ರತೀ ತಿಂಗಳು 1 ಕೋಟಿ ಡೋಸ್ ಪೂರೈಸಲಿದೆ. ಡಿಸೆಂಬರ್‌ ಹೊತ್ತಿಗೆ 4–5 ಕೋಟಿ ಡೋಸ್ ಪೂರೈಸುವ ಅಂದಾಜು ಇದೆ. 

ಇದು ಸೂಜಿ ರಹಿತ ಲಸಿಕೆಯಾಗಿದ್ದು, ಮೂರು ಡೋಸ್ ನೀಡಲಾಗುತ್ತದೆ. ಇದು ಮಕ್ಕಳಿಗೆ ನೀಡ ಬಹುದಾದ ವಿಶ್ವದ ಮೊದಲ ಕೋವಿಡ್ ಲಸಿಕೆಯಾಗಿದೆ. 

ಕೋವ್ಯಾಕ್ಸಿನ್: ಭಾರತವು, 2 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದ ಮೊದಲ ದೇಶ ಎನಿಸಿದೆ. ಕೇಂದ್ರ ಸರ್ಕಾರವು ಅಕ್ಟೋಬರ್ 12ರಂದು ಭಾರತ್ ಬಯೊಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿತ್ತು. ಇದನ್ನು 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಬಹುದು. ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗದ ವರದಿಗಳು ಇನ್ನಷ್ಟೇ ಪ್ರಕಟವಾಗಬೇಕಿವೆ. 

ಕೊವೊವ್ಯಾಕ್ಸ್: ಮಕ್ಕಳಿಗೆ ನೀಡುವುದಕ್ಕಾಗಿ ಅಭಿವೃದ್ಧಿ ಹಂತದಲ್ಲಿರುವ ಮೂರನೇ ಲಸಿಕೆ ಕೊವೊವ್ಯಾಕ್ಸ್. ಅಮೆರಿಕದ ನೊವೊವ್ಯಾಕ್ಸ್ ಸಂಸ್ಥೆಯು ಭಾರತದ ಮಕ್ಕಳಿಗಾಗಿ ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ಘಟಕದಲ್ಲಿ ತಯಾರಿಕೆ ಆಗಲಿದೆ. ತಾಂತ್ರಿಕವಾಗಿ ಎನ್‌ವಿಎಕ್ಸ್–ಸಿಒವಿ2373 ಎಂದು ಹೆಸರಿಸಲಾಗಿದೆ. ಇದು ಪ್ರೊಟೀನ್ ಆಧಾರಿತ ಲಸಿಕೆಯಾಗಿದೆ.  

ಕಾರ್ಬಿವ್ಯಾಕ್ಸ್: ಬಯೊಲಾಜಿಕಲ್ ಇ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಮತ್ತೊಂದು ಲಸಿಕೆ ಕಾರ್ಬಿವ್ಯಾಕ್ಸ್. ಕೆಲವು ಷರತ್ತುಗಳೊಂದಿಗೆ 5-18 ವರ್ಷ ವಯಸ್ಸಿನ ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಇದೇ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಲಾಗಿದೆ. ಇದರ ಕ್ಲಿನಿಕಲ್ ಪ್ರಯೋಗಗಳು ದೇಶದ 10 ಸ್ಥಳಗಳಲ್ಲಿ ನಡೆಯುತ್ತಿವೆ.  

ಕೋವ್ಯಾಕ್ಸಿನ್‌ಗೆ ಮಾನ್ಯತೆ: ಪರಿಶೀಲನೆ

ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಕಳೆದ 9 ತಿಂಗಳಿಂದ ಬಳಕೆಯಲ್ಲಿದೆ. ಆದರೆ ಜಾಗತಿಕವಾಗಿ ಅನುಮೋದನೆ ಇನ್ನೂ ದೊರೆತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಾಂತ್ರಿಕ ಸಲಹಾ ಸಮಿತಿಯು ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡುವ ಕುರಿತು ಚರ್ಚಿಸಲು ಇದೇ 26ರಂದು ಸಭೆ ಸೇರಲಿದೆ. ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಇದನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ಕುರಿತು ಶಿಫಾರಸುಗಳನ್ನು ಮಾಡಲು ಡಬ್ಲ್ಯುಎಚ್‌ಒ ತಜ್ಞರ ಸಲಹಾ ಗುಂಪು (ಎಸ್‌ಎಜಿಇ) ಇದೇ 6ರಂದು ಸಭೆ ನಡೆಸಿತ್ತು. ಡಬ್ಲ್ಯುಎಚ್‌ಒ ಮತ್ತು ಸ್ವತಂತ್ರ ತಜ್ಞರ ತಾಂತ್ರಿಕ ಸಲಹಾ ಸಮಿತಿಗಳು ಸಹ ಅನುಮೋದನೆ ನೀಡುವ ಮುನ್ನ ಲಸಿಕೆ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿಯೇ ಎಂದು ನಿರ್ಧರಿಸುತ್ತವೆ. ಲಸಿಕೆ ತಯಾರಕರು ಸಲ್ಲಿಸಿದ ದತ್ತಾಂಶಗಳನ್ನು ಡಬ್ಲ್ಯುಎಚ್‌ಒ ತಜ್ಞರು ಪರಿಶೀಲಿಸುತ್ತಿದ್ದಾರೆ.

ಭಾರತದ ಔಷಧ ನಿಯಂತ್ರಕರಿಂದ ತುರ್ತು ಬಳಕೆ ಅನುಮೋದನೆ ಪಡೆದ ಮೂರು ಕೋವಿಡ್-19 ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಒಂದಾಗಿದೆ.

ಕೋವ್ಯಾಕ್ಸಿನ್‌ ಪಾಲು ಶೇ 11.44: ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ 100 ಕೋಟಿ ಡೋಸ್‌ಗಳಲ್ಲಿ ಕೋವಿಶೀಲ್ಡ್ ಪಾಲು ದೊಡ್ಡದು. ಶೇ 88.46ರಷ್ಟು ಡೋಸ್‌ಗಳನ್ನು ಕೋವಿಶೀಲ್ಡ್ ಪೂರೈಸಿದೆ. ಕೊವಿಶೀಲ್ಡ್‌ನ ತಯಾರಿಕೆ ಹಾಗೂ ಪೂರೈಕೆ ಮಟ್ಟಕ್ಕೆ ಸಾಟಿಯಾಗುವಂತಹ ಸಾಮರ್ಥ್ಯವನ್ನು ಕೋವ್ಯಾಕ್ಸಿನ್ ಹೊಂದಿಲ್ಲ. ಹೀಗಾಗಿ ಕೋವ್ಯಾಕ್ಸಿನ್ ಪಾಲು ಶೇ 11.44ರಷ್ಟು ಮಾತ್ರ. ರಷ್ಯಾ ನಿರ್ಮಿತ ಸ್ಪುಟ್ನಿಕ್–ವಿ ಲಸಿಕೆ ಬಳಕೆಯು ಅಷ್ಟೇನೂ ಇಲ್ಲ. ಅದರ ಪ್ರಮಾಣ ಶೇ 0.10ರಷ್ಟು ಮಾತ್ರ ಎಂದು ಕೇಂದ್ರ ಸರ್ಕಾರ ರೂಪಿಸಿರುವ ಕೋವಿನ್ ತಾಣ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು