ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಲಂಕಾ ತಟದಲ್ಲಿ ಚೀನಾ ಸೇನಾ ಹಡಗು

Last Updated 17 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಚೀನಾ ನೌಕಾಪಡೆಯ ಹಡಗು, ‘ಯುವಾನ್ ವಾಂಗ್‌–5’ ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಿದೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಹಡಗು ಲಂಗರು ಹಾಕಲು ತನ್ನ ಜಾಗದಲ್ಲಿ ಅವಕಾಶ ಮಾಡಿಕೊಟ್ಟ ಶ್ರೀಲಂಕಾದ ಎದುರು ಭಾರತವು ಪ್ರತಿಭಟನೆ ದಾಖಲಿಸಿದೆ. ‘ಭಾರತದ ಭದ್ರತೆಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಲಿದೆ’ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಆದರೆ, ಅದನ್ನು ಎದುರಿಸಲೂ ಭಾರತ ಸಿದ್ಧವಿದೆ ಎಂದು ಹೇಳಿದೆ.ಈ ಬೆಳವಣಿಗೆಯು ಮೂರೂ ದೇಶಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಮತ್ತು ವಾತಾವರಣವನ್ನು ಬಿಸಿಯಾಗಿಸಿದೆ.

‘ಯುವಾನ್‌ ವಾಂಗ್‌–5’ ಹಡಗು ಅತ್ಯಾಧುನಿಕ ಆ್ಯಂಟೆನಾಗಳು ಮತ್ತು ರೇಡಾರ್‌ಗಳನ್ನು ಹೊಂದಿರುವ ಪ್ರಬಲ ಸಂಶೋಧಕ ಹಡಗು. ‘ಇದನ್ನು ಸಮುದ್ರ ಮಾರ್ಗ, ಸಮುದ್ರದ ಸರ್ವೇಕ್ಷಣೆ ಮತ್ತು ಸಂಶೋಧನೆಗೆ ಬಳಸುತ್ತೇವೆ’ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಆದರೆ, ಇದು ಬಹು ಬಳಕೆಯ ನೌಕೆಯಾಗಿದ್ದು, ಶತ್ರುದೇಶಗಳ ಕ್ಷಿಪಣಿಯ ಪರೀಕ್ಷೆಗಳು ಮತ್ತು ರಾಕೆಟ್‌ಗಳ ಉಡಾವಣೆಯ ಮೇಲೆ ಗೂಢಚರ್ಯೆ ನಡೆಸಲು ಬಳಸಲಾಗುತ್ತಿದೆ ಎಂದು ಭಾರತವು ಆರೋಪಿಸಿದೆ.

ಯುವಾನ್ ವಾಂಗ್–5 ಹಡಗು ತಾನು ಇರುವಲ್ಲಿಂದ 750 ಕಿ.ಮೀ. ವ್ಯಾಪ್ತಿಯ ವೃತ್ತದಲ್ಲಿನ ಎಲ್ಲಾ ವಿದ್ಯಮಾನಗಳ ಮೇಲೂ ಗೂಢಚರ್ಯೆ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಈ ಹಡಗು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಪ್ರಮುಖ ಬಂದರುಗಳ ಮೇಲೆ ಗೂಢಚರ್ಯೆ ನಡೆಸಲು ಸಾಧ್ಯವಾಗುವಂತಹ ಸ್ಥಳದಲ್ಲಿ ಲಂಗರು ಹಾಕಿದೆ.ಚೀನಾದ ಈ ಹಡಗು ಗೂಢಚರ್ಯೆ ನಡೆಸಿದ್ದೇ ಆದಲ್ಲಿ, ದಕ್ಷಿಣ ಭಾರತದ ಕರಾವಳಿಯಲ್ಲಿ ನಡೆಯುವ ಸೇನೆಯ ಎಲ್ಲಾ ಚಟುವಟಿಕೆಗಳ ವಿವರ ಚೀನಾಗೆ ಲಭ್ಯವಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.ಈ ಕಾರಣದಿಂದಲೇ ಭಾರತವು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು. ಅಮೆರಿಕವೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

‘ಮುತ್ತಿನ ಮಾಲೆ’
ಮಧ್ಯಪ್ರಾಚ್ಯ, ಆಫ್ರಿಕಾ ದೇಶಗಳಿಂದ ಆಗ್ನೇಯ ಏಷ್ಯಾದತ್ತ ಸಾಗುವ ಬಹುತೇಕ ಹಡಗುಗಳು ಮಲಕ್ಕಾ ಜಲಸಂಧಿಯನ್ನು ಬಳಸುತ್ತವೆ. ಇದು ವಿಶ್ವದ ಅತ್ಯಂತ ದಟ್ಟಣೆಯ ಸಮುದ್ರಮಾರ್ಗವಾಗಿದೆ. ವಿಶ್ವದಲ್ಲಿ ವರ್ಷವೊಂದರಲ್ಲಿ ಸಾಗುವ ಒಟ್ಟು ಹಡಗುಗಳಲ್ಲಿ, ಶೇ 40ರಷ್ಟು ಹಡಗುಗಳು ಈ ಮಾರ್ಗವನ್ನೇ ಬಳಸುತ್ತವೆ.

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ಕಚ್ಚಾತೈಲ ಪೂರೈಕೆಯಾಗುವ ಅತ್ಯಂತ ಮಹತ್ವದ ಹಾಗೂ ಏಕೈಕ ಸಮುದ್ರಮಾರ್ಗವಿದು. ಅದೇ ರೀತಿ ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯೂರೋಪ್‌ನ ದೇಶಗಳಿಗೆ ಆಗ್ನೇಯ ಏಷ್ಯಾದಿಂದ ಮಸಾಲೆ ಪದಾರ್ಥಗಳು, ಜವಳಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಹೊತ್ತ ಹಡಗುಗಳು ಸಾಗುವುದು ಇದೇ ಮಾರ್ಗದಲ್ಲಿ. ಚೀನಾವು ಪ್ರಾಬಲ್ಯ ಸಾಧಿಸಿರುವ ‘ದಕ್ಷಿಣ ಚೀನಾ ಸಮುದ್ರ’ವೂ ಇದೇ ಮಾರ್ಗದಲ್ಲಿ ಬರುತ್ತದೆ. ಈ ಮಾರ್ಗದಲ್ಲಿ ಇರುವ ಪ್ರಮುಖ ಬಂದರುಗಳಲ್ಲಿ ಚೀನಾವು ತನ್ನ ಸೇನಾ ನೆಲೆಗಳನ್ನು ಸ್ಥಾಪಿಸುವ ಯೋಜನೆಗೆ ‘ಸ್ಟ್ರಿಂಗ್‌ ಆಫ್ ಪರ್ಲ್ಸ್‌’ (ಮುತ್ತಿನ ಮಾಲೆ) ಎಂದು ಹೆಸರಿಟ್ಟಿತ್ತು. ಈ ಬಂದರುಗಳಲ್ಲಿ ಸೇನಾ ನೆಲೆ ಸ್ಥಾಪನೆಯಾದ ಬಂದರುಗಳನ್ನು ‘ಪರ್ಲ್’ ಎಂದು ಪರಿಗಣಿಸಲಾಗುತ್ತದೆ. ಈ ಬಂದರುಗಳ ಮಧ್ಯ ಸಂಪರ್ಕ ಕಲ್ಪಿಸುವ ಸಮುದ್ರ ಮಾರ್ಗವನ್ನು ‘ಸ್ಟ್ರಿಂಗ್’ ಎಂದು ಕರೆಯಲಾಗುತ್ತದೆ.

‘ಚೀನಾದ ಮುತ್ತಿನ ಮಾಲೆ ಅಸ್ತಿತ್ವಕ್ಕೆ ಬರುವುದರಿಂದ ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನಕ್ಕೆ ಧಕ್ಕೆಯಾಗಲಿದೆ. ಇದರಿಂದ ಜಾಗತಿಕ ವಾಣಿಜ್ಯ ವಹಿವಾಟಿಗೆ ಅಡಚಣೆಯಾಗುತ್ತದೆ’ ಎಂಬ ಕಳವಳ ವ್ಯಕ್ತವಾಗಿದೆ. ಈ ಮಾರ್ಗದ ಅತ್ಯಂತ ಪ್ರಮುಖ ಜಲಸಂಧಿಯಾದ ಮಲಕ್ಕಾವನ್ನು ಚೀನಾ ತನ್ನ ನಿಯಂತ್ರಣಕ್ಕೆ ಪಡೆದರೆ, ವಿಶ್ವದ ಶೇ 40ಕ್ಕಿಂತಲೂ ಹೆಚ್ಚು ವಾಣಿಜ್ಯ ವಹಿವಾಟು ಅದರ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿಯೇ ಚೀನಾದ ಈ ಯತ್ನವನ್ನು ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯ ಪ್ರಬಲವಾಗಿ ವಿರೋಧಿಸುತ್ತಿವೆ. ಜತೆಗೆ ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸುವ ಸಲುವಾಗಿ ಕ್ವಾಡ್‌ ಒಕ್ಕೂಟವನ್ನು ರಚಿಸಿಕೊಂಡಿವೆ.

ತಂತ್ರಕ್ಕೆ ಸಿಲುಕಿತೇ ಲಂಕಾ...
‘ಶ್ರೀಲಂಕಾವು ಮೊದಲಿನಿಂದಲೂ ಚೀನಾದ ಸ್ಟ್ರಿಂಗ್‌ ಆಫ್ ಪರ್ಲ್ಸ್‌ ಯೋಜನೆಯ ಭಾಗವಾಗಿಯೇ ಇತ್ತು. ಭಾರತದ ಆಕ್ಷೇಪದ ಆತಂಕವಿದ್ದ ಕಾರಣ, ಚೀನಾವು ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಶ್ರೀಲಂಕಾದಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸುವ ಕಾರ್ಯಸೂಚಿಯನ್ನು ರಹಸ್ಯವಾಗಿ ಅನುಷ್ಠಾನಕ್ಕೆ ತರಲು ಕಾರ್ಯಪ್ರವೃತ್ತವಾಗಿತ್ತು’ ಎಂದು ಅಮೆರಿಕದ ಸೇನೆಯ ‘ಸ್ಟ್ರಿಂಗ್‌ ಆಫ್ ಪರ್ಲ್ಸ್‌’ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 2006ರಲ್ಲೇ ಸಿದ್ಧಪಡಿಸಿದ್ದ ಈ ವರದಿಯ ಪರಿಷ್ಕೃತ ಆವೃತ್ತಿಯನ್ನು ಅಮೆರಿಕವು ಈಚೆಗೆ ಬಿಡುಗಡೆ ಮಾಡಿತ್ತು.

‘ಬಾಂಗ್ಲಾದೇಶದ ಢಾಕಾ ಬಂದರು ಮತ್ತು ಪಾಕಿಸ್ತಾನದ ಗ್ವಾಡಾರ್ ಬಂದರುಗಳನ್ನು ಅಭಿವೃದ್ಧಿಪಡಿಸುವ ಸಂಬಂಧ, 90ಕ್ಕೂ ಹೆಚ್ಚು ವರ್ಷಗಳ ಅವಧಿಗೆ ಅವುಗಳನ್ನು ಚೀನಾ ಭೋಗ್ಯಕ್ಕೆ ಪಡೆದಿದೆ. ಈ ಬಂದರುಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿ ತನ್ನ ಎಲ್ಲಾ ಸ್ವರೂಪದ ಹಡಗುಗಳನ್ನು ಇರಿಸುವ ಮತ್ತು ತುರ್ತು ಸಂದರ್ಭದಲ್ಲಿ ಸೈನಿಕರನ್ನು ನಿಯೋಜನೆ ಮಾಡುವ ಹಕ್ಕನ್ನು ಚೀನಾ ಪಡೆದುಕೊಂಡಿದೆ. ಇಲ್ಲಿ ಭದ್ರತೆ ನೆಪದಲ್ಲಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಇದೇ ತಂತ್ರವನ್ನು ಶ್ರೀಲಂಕಾದಲ್ಲೂ ಬಳಸಲಾಗುತ್ತದೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಶ್ರೀಲಂಕಾಕ್ಕೆ ಚೀನಾವು ಅಪಾರ ಪ್ರಮಾಣದ ಸಾಲ ನೀಡಿದೆ. ಸಾಲ ತೀರಿಸಲಾಗದ ಶ್ರೀಲಂಕಾ ಸರ್ಕಾರವು ಬದಲಿಯಾಗಿ, ತನ್ನ ಹಂಬಂಟೋಟ ಬಂದರನ್ನು 99 ವರ್ಷಗಳ ಅವಧಿಗೆ ಚೀನಾದ ಸುಪರ್ದಿಗೆ ನೀಡಿದೆ. ಹಂಬಂಟೋಟ ಬಂದರು ಈಗ ಚೀನಾದ ಖಾಸಗಿ ಕಂಪನಿಯ ನಿಯಂತ್ರಣದಲ್ಲಿ ಇದೆ. ಹಾಗಾಗಿ ಈ ಬಂದರಿನಲ್ಲಿ ನಡೆಯುವ ಚಟುವಟಿಕೆಗಳ ಮೇಲೂ ಶ್ರೀಲಂಕಾಕ್ಕೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ.

ನಿಲುವು ಬದಲು
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾ, ಅನುಕೂಲಗಳನ್ನು ಲೆಕ್ಕಾಚಾರ ಹಾಕಿಯೇ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಮೊದಲಿಗೆ, ಭಾರತದಿಂದ ಆಕ್ಷೇಪ ಎದುರಾಗುತ್ತಿದ್ದಂತೆಯೇ ಎಚ್ಚೆತ್ತಿದ್ದ ಶ್ರೀಲಂಕಾ, ಹಂಬಂಟೋಟ ಬಂದರಿಗೆ ಚೀನಾ ನೌಕೆ ಬರುವುದನ್ನು ತಡೆದಿತ್ತು. ಇದಕ್ಕೆ ಚೀನಾದಿಂದ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ, ಚೀನಾ ಜೊತೆ ಆಂತರಿಕ ಮಾತುಕತೆಗೆ ಲಂಕಾ ಮುಂದಾಯಿತು. ಕೊನೆಗೆ, ಚೀನಾದ ನೌಕೆ ಲಂಗರು ಹಾಕಲು ಅನುಮತಿ ನೀಡುವುದಾಗಿ ಪ್ರಕಟಿಸಿತು. ಕೆಲವು ದಿನಗಳ ಬಳಿಕ ಅಂದರೆ, ಆಗಸ್ಟ್ 11ರ ಬದಲು ಆಗಸ್ಟ್ 16ರಂದು ಲಂಗರು ಹಾಕುವಲ್ಲಿ ಯುವಾನ್ ವಾಂಗ್ ನೌಕೆ ಯಶಸ್ವಿಯಾಯಿತು. ನೆರೆಯ ಭಾರತವೊಂದೇ ಮುಖ್ಯವಲ್ಲ, ಎಲ್ಲ ದೇಶಗಳ ನೆರವೂ ತನಗೆ ಬೇಕು ಎಂಬ ಉದ್ದೇಶ ಲಂಕಾದ ನಿರ್ಧಾರದಲ್ಲಿ ಎದ್ದು ಕಾಣುತ್ತಿದೆ. ‘ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಲು ಅಮೆರಿಕ, ಜಪಾನ್‌ ದೇಶಗಳ ನೌಕೆಗಳಿಗೂ ನಾವು ಅನುಮತಿ ನೀಡಿದ್ದೇವೆ’ ಎಂದು ಲಂಕಾ ಹೇಳಿದೆ. ಈ ಹೇಳಿಕೆಯ ಮೂಲಕ, ಚೀನಾ ನೌಕೆಗೆ ಅನುಮತಿ ನೀಡಿದ್ದರಲ್ಲಿ ತಪ್ಪಿಲ್ಲ ಎಂದು ಶ್ರೀಲಂಕಾ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ಎಲ್ಲ ದೇಶಗಳ ಜೊತೆ ಸಹಕಾರ ಹಾಗೂ ಸ್ನೇಹ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ಸ್ಪಷ್ಟಪಡಿಸಿದೆ. ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ನೆರವು ನೀಡಿದ ಎಲ್ಲ ದೇಶಗಳನ್ನು ಸ್ಮರಿಸುತ್ತೇವೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಚೀನಾದಿಂದ ಭಾರಿ ಪ್ರಮಾಣದ ಸಾಲ ಪಡೆದಿರುವ ಶ್ರೀಲಂಕಾ, ಚೀನಾ ಒತ್ತಡಕ್ಕೆ ಮಣಿದು ಭಾರತದ ಆಕ್ಷೇಪವನ್ನು ಗಾಳಿಗೆ ತೂರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವರಸೆ ಬದಲಿಸಿದ ಚೀನಾ
ಒಂದಿಷ್ಟು ದಿನದ ವಿಳಂಬದ ಬಳಿಕ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಲು ಶ್ರೀಲಂಕಾದ ಅನುಮತಿ ಸಿಗುತ್ತಿದ್ದಂತೆಯೇ ಚೀನಾದ ವರಸೆಯೇ ಬದಲಾಗಿದೆ. ಯುವಾನ್ ವಾಂಗ್ ನೌಕೆಯು ಹಂಬಂಟೋಟ ಬಂದರಿನಲ್ಲಿ ಇಂಧನ ಹಾಗೂ ಅಗತ್ಯವಸ್ತುಗಳ ಮರುಪೂರಣ ಮಾಡಲಿದೆ ಎಂದು ಚೀನಾ ಆರಂಭದಲ್ಲಿ ಪ್ರತಿಪಾದಿಸಿತ್ತು. ಆದರೆ, ಆಗಸ್ಟ್ 16ರಂದು ಬಂದರು ತಲುಪಿರುವ ನೌಕೆಯು, ಆಗಸ್ಟ್ 22ರವರೆಗೆ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲಿದೆ ಎಂದು ಚೀನಾ ಹೇಳಿದೆ.

ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರವೇ ಯುವಾನ್ ವಾಂಗ್ ನೌಕೆಯಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆಯಲಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದ್ದು, ತನ್ನ ನೈಜ ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ. ಚೀನಾ ಗೂಢಚರ್ಯೆ ನಡೆಸುವ ಸಾಧ್ಯತೆಯಿದೆ ಎಂದು ಭಾರತದ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿದ್ದವು. ಇಂಧನ ಹಾಗೂ ಅಗತ್ಯವಸ್ತುಗಳ ಮರುಪೂರಣ ಉದ್ದೇಶಕ್ಕಾಗಿ ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಕೆಲವು ದಿನ ಉಳಿಯಲು ಚೀನಾ ಅನುಮತಿ ಕೇಳಿತ್ತು. ಆದರೆ, ಲಂಗರು ಹಾಕುತ್ತಿದ್ದಂತೆಯೇ ಚೀನಾ ನಿಲುವು ಬದಲಾಗಿದೆ.

ಉನ್ನತ ತಂತ್ರಜ್ಞಾನ ಸವಲತ್ತುಗಳನ್ನು ಹೊಂದಿರುವ ಯುವಾನ್ ವಾಂಗ್ ನೌಕೆಯಿಂದ ಯಾವ ದೇಶದ ಭದ್ರತೆಗೂ ಅಪಾಯ ಎದುರಾಗುವುದಿಲ್ಲ ಎಂದು ಚೀನಾ ಭರವಸೆ ನೀಡಿದೆ. ಆದರೆ, ಮೂರನೇ ದೇಶದಿಂದ ಅಡ್ಡಿ ಎದುರಾಗುವುದನ್ನು ತಾನು ಒಪ್ಪುವುದಿಲ್ಲ ಎಂದು ಭಾರತ ಹಾಗೂ ಅಮೆರಿಕಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಆರಂಭದಲ್ಲಿ, ನೌಕೆ ಲಂಗರು ಹಾಕಲು ಅನುಮತಿ ನೀಡುವುದನ್ನು ಶ್ರೀಲಂಕಾ ವಿಳಂಬ ಮಾಡಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಚೀನಾ, ‘ಇದು ಸಂಪೂರ್ಣ ಅನ್ಯಾಯದಿಂದ ಕೂಡಿದೆ’ ಎಂದು ಹೇಳಿತ್ತು. ಶ್ರೀಲಂಕಾ ಮೇಲೆ ಒತ್ತಡ ಹೇರಿ, ದ್ವೀಪರಾಷ್ಟ್ರದ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶಿಸುವ ದೇಶಗಳನ್ನು ಚೀನಾ ಟೀಕಿಸಿತ್ತು.

ಆಧಾರ: ರಾಯಿಟರ್ಸ್, ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಪಿಟಿಐ, ಎಎಫ್‌ಪಿ, ಅಮೆರಿಕ ಸೇನೆಯ ‘ಸ್ಟ್ರಿಂಗ್‌ ಆಫ್ ಪರ್ಲ್ಸ್’ ಅಧ್ಯಯನ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT