ಸೋಮವಾರ, ಜುಲೈ 26, 2021
22 °C

ಆಳ-ಅಗಲ | ಕೊರೊನಾವೈರಾಣುವಿನ ಹೊಸ ರೂಪ 'ಡೆಲ್ಟಾ ಪ್ಲಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರವಾಗಲು ಕಾರಣವಾಗಿದ್ದು ಡೆಲ್ಟಾ (ಬಿ.1.617) ತಳಿಯ ಕೊರೊನಾವೈರಾಣು ಎಂದು ತಜ್ಞರು ಹೇಳಿದ್ದಾರೆ. ಆದರೆ ಈಗ ಡೆಲ್ಟಾ ತಳಿಯ ರೂಪಾಂತರ ತಳಿಯಾದ, ‘ಡೆಲ್ಟಾ ಪ್ಲಸ್’ (ಬಿ.1.617.2) ದೇಶದ ಕೆಲವೆಡೆ ಕಾಣಿಸಿಕೊಂಡಿದೆ. ವಿಶ್ವದ 9 ದೇಶಗಳಲ್ಲಿ ಈ ತಳಿಯು ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್ ತಳಿಯು ಒಂದು ಆಸಕ್ತಿದಾಯಕ ತಳಿ ಎಂದಷ್ಟೇ ವಾರದ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ, ಇದು ಕಳವಳಕಾರಿ ರೂಪಾಂತರ ತಳಿ ಎಂದು ಘೋಷಿಸಿದೆ.

ಕೊರೊನಾ ವೈರಾಣುವಿನ ಹೊರಕವಚದಲ್ಲಿ ಮುಳ್ಳುಚಾಚಿಕೆಗಳು (ಸ್ಪೈಕ್‌ ಪ್ರೋಟೀನ್‌) ಇರುತ್ತವೆ. ವೈರಾಣುಗಳು ಮನುಷ್ಯನ ಜೀವಕೋಶಗಳನ್ನು ಪ್ರವೇಶಿಸಲು ಈ ಮುಳ್ಳು ಚಾಚಿಕೆಗಳು ನೆರವಾಗುತ್ತವೆ. ವೈರಾಣು ಎಷ್ಟು ಕ್ಷಿಪ್ರವಾಗಿ ಹರಡುತ್ತವೆ ಎಂಬುದು ಈ ಮುಳ್ಳುಚಾಚಿಕೆಗಳ ಸಂಖ್ಯೆ ಮತ್ತು ಸ್ವರೂಪವನ್ನು ಆಧರಿಸಿರುತ್ತದೆ. ಮೂಲ ಕೊರೊನಾ ವೈರಾಣುವಿನಲ್ಲಿ ಈ ಮುಳ್ಳುಚಾಚಿಕೆಗಳ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮೊದಲ ಅಲೆಯಲ್ಲಿ ಸೋಂಕು ನಿಧಾನವಾಗಿ ಹರಡಿತು. ಜಗತ್ತಿನ ವಿವಿಧೆಡೆ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ಹೊಸ ತಳಿಯ ವೈರಾಣುವಿನಲ್ಲಿ ಈ ಮುಳ್ಳುಚಾಚಿಕೆಗಳು ಹೆಚ್ಚಾಗಿದ್ದವು. ಹೀಗಾಗಿ ಎರಡನೇ ಅಲೆ ತೀವ್ರವಾಗಿತ್ತು. 

ಭಾರತದಲ್ಲಿ ಮೊದಲು ಪತ್ತೆ ಮಾಡಿದ್ದ ಡೆಲ್ಟಾ ತಳಿಯಲ್ಲೂ ಮುಳ್ಳುಚಾಚಿಕೆಗಳು ತೀವ್ರವಾಗಿದ್ದವು. ಹೀಗಾಗಿಯೇ ಎರಡನೇ ಅಲೆ ಅತ್ಯಂತ ಕ್ಷಿಪ್ರವಾಗಿ ಹರಡಿತು. ಡೆಲ್ಟಾ ಪ್ಲಸ್ ತಳಿಯಲ್ಲಿನ ಮುಳ್ಳುಚಾಚಿಕೆಗಳು ಮತ್ತಷ್ಟು ತೀವ್ರವಾಗಿವೆ. ಹೀಗಾಗಿ ಸೋಂಕು ಹರಡುವಿಕೆಗೆ ಈ ತಳಿಯು ಮತ್ತಷ್ಟು ವೇಗ ನೀಡುತ್ತದೆ ಎಂದು ಈ ತಳಿಯ ವಂಶವಾಹಿ ಅಧ್ಯಯನ ನಡೆಸಿರುವ ಭಾರತದ ವಿಜ್ಞಾನಿಗಳು ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಅಧೀನದಲ್ಲಿರುವ 28 ಪ್ರಯೋಗಾಲಯಗಳಲ್ಲಿ ಈ ತಳಿಯ ವಂಶವಾಹಿ ಅಧ್ಯಯನ ಮುಂದುವರಿಸಲಾಗಿದೆ. ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಈ ತಳಿಯು ಮೊದಲು ಕಾಣಿಸಿಕೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಲಾ 100 ಕೋವಿಡ್‌ ರೋಗಿಗಳ ಸೋಂಕಿನ ಮಾದರಿಗಳನ್ನು ಈ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇವುಗಳಲ್ಲಿ 21ರಷ್ಟು ಮಾದರಿಗಳಲ್ಲಿ ಮಾತ್ರವೇ ಡೆಲ್ಟಾ ಪ್ಲಸ್ ತಳಿ ಪತ್ತೆಯಾಗಿದೆ. ಈ ತಳಿಯು ಅತ್ಯಂತ ಕ್ಷಿಪ್ರವಾಗಿ ಹರಡುವ ಶಕ್ತಿ ಹೊಂದಿರುವ ಕಾರಣದಿಂದಲೇ ಇದನ್ನು ಕಳವಳಕಾರಿ ರೂಪಾಂತರ ತಳಿ ಎಂದು ಪರಿಗಣಿಸಲಾಗಿದೆ. 

ಅಪಾಯಕಾರಿಯೇ?

ಡೆಲ್ಟಾ ಪ್ಲಸ್ ತಳಿಯಲ್ಲಿನ ಸ್ಪೈಕ್‌ಪ್ರೋಟೀನ್‌ಗಳು ತೀವ್ರಗಾಮಿ ಸ್ವರೂಪದವು. ಹೀಗಾಗಿ, ಇವು ಅತ್ಯಂತ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಡೆಲ್ಟಾ ಪ್ಲಸ್ ತಳಿಯ ಇತರ ಕೆಲವು ಗುಣಲಕ್ಷಣಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ದೇಶದಲ್ಲಾಗಲೀ, ವಿಶ್ವದಲ್ಲಾಗಲೀ ಈವರೆಗೆ ಡೆಲ್ಟಾ ಪ್ಲಸ್ ತಳಿಯ ಕಾರಣದಿಂದ ಸಾವು ಸಂಭವಿಸಿದ್ದು ವರದಿಯಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈಗ ದೇಶದ ಕೆಲವೇ ರಾಜ್ಯಗಳಲ್ಲಿ, ಒಟ್ಟು ಎರಡಂಕಿಯಷ್ಟು ಪ್ರಕರಣಗಳಲ್ಲಷ್ಟೇ ಡೆಲ್ಟಾ ಪ್ಲಸ್ ತಳಿ ಪತ್ತೆಯಾಗಿದೆ. ಇದನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇತರೆಡೆಗೂ ಹರಡುವ ಸಾಧ್ಯತೆ ಇದೆ. ಇದರಿಂದಾಗಿ ದೇಶದಲ್ಲಿ ಕೋವಿಡ್‌ನ ಮೂರನೇ ಅಲೆ ಸೃಷ್ಟಿಯಾಗಬಹುದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಾನವನ ಶ್ವಾಸಕೋಶದ ಜೀವಕೋಶಗಳಿಗೆ ಬಲವಾಗಿ ಅಂಟಿಕೊಳ್ಳುವ ಸಾಮರ್ಥ್ಯವನ್ನು ಡೆಲ್ಟಾ ಪ್ಲಸ್‌ ತಳಿಯ ಕೊರೊನಾವೈರಾಣು ಹೊಂದಿದೆ. ಇದರಿಂದ ರೋಗದ ತೀವ್ರತೆ ಹೆಚ್ಚುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮನುಷ್ಯನ ದೇಹದಲ್ಲಿನ ಪ್ರತಿಕಾಯಗಳು ಡೆಲ್ಟಾ ಪ್ಲಸ್ ತಳಿಯ ವಿರುದ್ಧ ಕಡಿಮೆ ಪ್ರತಿರೋಧ ತೋರುತ್ತವೆ ಎಂಬುದು ಅಧ್ಯಯನದಿಂದ ಕಪತ್ತೆಯಾಗಿದೆ. ಹೀಗಾಗಿಯೇ ಈ ತಳಿಯನ್ನು ಕಳವಳಕಾರಿ ತಳಿ ಎಂದು ಪರಿಗಣಿಸಲಾಗಿದೆ.

ದೇಶದಲ್ಲಿ ನಾಲ್ಕೈದು ತಿಂಗಳ ನಂತರ ಕೋವಿಡ್‌ನ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಈ ತಳಿಯ ಕಾರಣದಿಂದ ಶೀಘ್ರದಲ್ಲೇ ಮೂರನೇ ಅಲೆ ತಲೆದೋರುವ ಅಪಾಯವಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.


ಅಂಕಿಅಂಶ

ಲಸಿಕೆ ಕೆಲಸ ಮಾಡುತ್ತವೆಯೇ?

ಭಾರತದಲ್ಲಿ ಈಗ ಕೋವಿಡ್‌ ಹರಡದಂತೆ ನೀಡಲಾಗುತ್ತಿರುವ ಕೋವಿಶೀಲ್ಡ್‌, ಕೋವ್ಯಾಕ್ಸಿನ್ ಮತ್ತು ಸ್ಪುತ್ನಿಕ್-ವಿ ಲಸಿಕೆಗಳು ಡೆಲ್ಟಾ ಪ್ಲಸ್ ತಳಿಯ ವಿರುದ್ಧ ಕೆಲಸ ಮಾಡುತ್ತವೆಯೇ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. 'ಡೆಲ್ಟಾ ತಳಿಯ ವಿರುದ್ಧ ಈ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದವು. ಡೆಲ್ಟಾ ಪ್ಲಸ್‌ ತಳಿಯ ವಿರುದ್ಧ ಕೆಲಸ ಮಾಡುತ್ತವೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಅಧ್ಯಯನಗಳು ಮುಗಿದ ನಂತರ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗಲಿದೆ' ಎಂದು ಕೇಂದ್ರ ಸರ್ಕಾರವು ಹೇಳಿದೆ.

ಎಲ್ಲೆಲ್ಲಿ ಪತ್ತೆ

ದೇಶದ ಹಲವೆಡೆ ಡೆಲ್ಟಾ ಪ್ಲಸ್ ತಳಿಯ ಒಟ್ಟು 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ತಳಿಯ ಕೊರೊನಾವೈರಾಣುವಿಗೆ ತುತ್ತಾದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

45,000+ ಡೆಲ್ಟಾಪ್ಲಸ್ ಅವತರಣಿಕೆಗಾಗಿ ದೇಶದಾದ್ಯಂತ ನಡೆದ ವಂಶವಾಹಿ ಅಧ್ಯಯನಗಳ ಸಂಖ್ಯೆ

40 ದೇಶದಾದ್ಯಂತ ಈಗ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ಪ್ರಕರಣಗಳು

ಮಹಾರಾಷ್ಟ್ರ: ರತ್ನಗಿರಿ ಮತ್ತು ಜಲಗಾಂವ್ ಜಿಲ್ಲೆಗಳಲ್ಲಿ ಒಟ್ಟು 21 ಡೆಲ್ಟಾ ಪ್ಲಸ್ ತಳಿಯ ಪ್ರಕರಣಗಳು ಪತ್ತೆಯಾಗಿವೆ

ಮಧ್ಯಪ್ರದೇಶ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ರಾಜಧಾನಿ ಭೋಪಾಲ್ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಮಾತ್ರ ಡೆಲ್ಟಾ ಪ್ಲಸ್ ಪ್ರಕರಣಗಳು ಕಾಣಿಸಿಕೊಂಡಿವೆ

ಕೇರಳ: ಕೇರಳದ ಪಟ್ಟಣಂತಿಟ್ಟ ಮತ್ತು ಪಾಲಕ್ಕಾಡ್‌ನಲ್ಲಿ ಒಟ್ಟು ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಮೂರು ಪ್ರಕರಣಗಳಲ್ಲಿ ನಾಲ್ಕು ವರ್ಷದ ಬಾಲಕನೂ ಸೇರಿದ್ದಾನೆ

ಕರ್ನಾಟಕ: ರಾಜ್ಯದ ಮೊದಲ ಡೆಲ್ಟಾ ಪ್ಲಸ್ ತಳಿ ಪ್ರಕರಣವು ಮೈಸೂರಿನಲ್ಲಿ ಪತ್ತೆಯಾಗಿದೆ ಎಂದು ಬುಧವಾರವಷ್ಟೇ ರಾಜ್ಯ ಸರ್ಕಾರ ಘೋಷಿಸಿದೆ

ತಮಿಳುನಾಡು: ತಮಿಳುನಾಡಿನಲ್ಲಿ ಈವರೆಗೆ ಡೆಲ್ಟಾ ಪ್ಲಸ್ ತಳಿಯ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಆದರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ

ಪಂಜಾಬ್: ರಾಜ್ಯದಲ್ಲಿ ಒಂದು ಪ್ರಕರಣವಷ್ಟೇ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ

ಆಂಧ್ರಪ್ರದೇಶ, ಪಂಜಾಬ್: ಎರಡೂ ರಾಜ್ಯಗಳಲ್ಲಿ ತಲಾ ಒಂದು ಪ್ರಕರಣವಷ್ಟೇ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ

ಜಮ್ಮು: ಜಮ್ಮುವಿನಲ್ಲಿ ಈವರೆಗೆ ಡೆಲ್ಟಾ ಪ್ಲಸ್ ತಳಿಯ ಒಂದು ಪ್ರಕರಣವಷ್ಟೇ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ

* ಉಳಿದ ಪ್ರಕರಣಗಳು ಎಲೆಲಿಯವು ಎಂಬುದರ ಬಗ್ಗೆ ಸ್ಪಷ್ಟಮಾಹಿತಿ ಲಭ್ಯವಿಲ್ಲ

ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರ

‘ಡೆಲ್ಟಾ ಪ್ಲಸ್’ ಸೋಂಕಿತ ರೋಗಿಗಳು ಕಂಡುಬರುವ ಜಿಲ್ಲೆಗಳು ಮತ್ತು ಕ್ಲಸ್ಟರ್‌ಗಳಲ್ಲಿ ತಕ್ಷಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳ ಸರ್ಕಾರಗಳಿಗೆ ಸಲಹೆ ನೀಡಿದೆ.

ಈ ರೂಪಾಂತರಿ ತಳಿಯ ಬಗ್ಗೆ ಹೆಚ್ಚು ಆತಂಕಪಡಬೇಕಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮೊದಲು ಹೇಳಿದ್ದರು. ಆದರೆ ರೂಪಾಂತರವು ಆತಂಕಕಾರಿ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ರತ್ನಗಿರಿ ಜಿಲ್ಲೆಯೊಂದರಲ್ಲೇ 16 ಪ್ರಕರಣ ದಾಖಲಾಗಿವೆ. ವಿಶೇಷವೆಂದರೆ, ಪ್ರಮುಖ ನಗರಗಳಲ್ಲಿ ಇದರ ಕುರುಹು ಪತ್ತೆಯಾಗಿಲ್ಲ.

ಡೆಲ್ಟಾ ಪ್ಲಸ್ ರೂಪಾಂತರ ಕಂಡುಬರುವ ಜಿಲ್ಲೆಗಳು ಮತ್ತು ಕ್ಲಸ್ಟರ್‌ಗಳಲ್ಲಿ ಸೋಂಕು ಪರೀಕ್ಷೆ, ಸೋಂಕು ಪತ್ತೆ ಮತ್ತು ಲಸಿಕಾ ಕಾರ್ಯಕ್ರಮಗಳನ್ನು ವೇಗಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಜನಸಂದಣಿಯನ್ನು ತಡೆಯುವುದು ಮತ್ತು ಜನರ ಬೆರೆಯುವಿಕೆಯನ್ನು ನಿಗ್ರಹಿಸುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.

ಸಕ್ರಿಯ ರೋಗಿಗಳ ಪರೀಕ್ಷಾ ಮಾದರಿಗಳನ್ನು ತಕ್ಷಣವೇ ಗೊತ್ತುಪಡಿಸಿದ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ವೈದ್ಯಕೀಯ ಸೋಂಕುಶಾಸ್ತ್ರೀಯವಾಗಿ ಪರಸ್ಪರ ಸಂಬಂಧಗಳನ್ನು ಪತ್ತೆಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಅನೇಕ ರಾಷ್ಟ್ರಗಳಲ್ಲಿ ಪತ್ತೆ

ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾದ ಒಂಬತ್ತು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.  ಚೀನಾ, ಅಮೆರಿಕ, ಆಫ್ರಿಕಾ, ಸ್ಕ್ಯಾಂಡಿನೇವಿಯಾ, ಜಪಾನ್ ಮತ್ತು ಪೆಸಿಫಿಕ್ ರಿಮ್ ದೇಶಗಳಲ್ಲಿ ಡೆಲ್ಟಾ ರೂಪಾಂತರವು  ಏಕಾಏಕಿ ದೃಢಪಟ್ಟಿತ್ತು. ಇದು ಹೆಚ್ಚು ಹರಡುವಂತೆ ಕಂಡುಬರುತ್ತದೆ ಮತ್ತು ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದರು.

ಬ್ರಿಟನ್‌ನಲ್ಲಿ ಈ ತಳಿಯು ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಈವರೆಗೆ ಡೆಲ್ಟಾ ಪ್ಲಸ್‌ ತಳಿಯ 41 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಡೆಲ್ಟಾ ಪ್ಲಸ್‌ ಸೋಂಕಿಗೆ ತುತ್ತಾಗಿರುವವರರನ್ನು ಆಸ್ಪತ್ರೆಗಳಲ್ಲಿ ಐಸೊಲೇಷನ್‌ನಲ್ಲಿ ಇರಿಸಲಾಗಿದೆ. 41 ಸೋಂಕಿತರು ಸಂಪರ್ಕಿಸಿದ್ದವರನ್ನು ಮತ್ತು ಅವರ ಸಂಚಾರ ವಿವರವನ್ನು ಕಲೆ ಹಾಕಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಕೋವಿಡ್‌ ತಗುಲಿದ್ದವರ ಗಂಟಲ ದ್ರವದ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು