ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಭೂಕಂಪ– ನಡುಕ ಹುಟ್ಟಿಸುವ ಭೂಮಿಯಾಳದ ಕದಲಿಕೆ

Last Updated 8 ಫೆಬ್ರುವರಿ 2023, 18:57 IST
ಅಕ್ಷರ ಗಾತ್ರ

ಭೂಮಿಯ ಮೇಲ್ಪದರದಲ್ಲಿ ಉಂಟಾಗುವ ಅಲುಗಾಟವೇ ಭೂಕಂಪ. ಮೇಲ್ಮೈಯಿಂದ ನೋಡಿದರೆ ಭೂಮಿಯು ಬಹಳ ಗಟ್ಟಿ ಇರುವಂತೆ ಕಾಣಿಸುತ್ತದೆ. ಆದರೆ, ಮೇಲ್ಪದರದ ಕೆಳಗೆ ಇರುವ ಪದರಗಳು ಚಟುವಟಿಕೆಯಿಂದ ಕೂಡಿರುತ್ತವೆ. ಭೂಮಿಯು ಮುಖ್ಯವಾಗಿ ನಾಲ್ಕು ಪದರಗಳನ್ನು ಹೊಂದಿದೆ. ಅವುಗಳೆಂದರೆ, ಘನವಾದ ಮೇಲ್ಪದರ, ಗಟ್ಟಿಯಾದ ಒಳಪದರ, ದ್ರವರೂಪದಲ್ಲಿರುವ ಪದರ ಮತ್ತು ತಳಭಾಗದ ಪದರ. ಘನವಾದ ಮೇಲ್ಪದರ ಮತ್ತು ಗಟ್ಟಿಯಾದ ಒಳಪದರವನ್ನು ಭೂವಲಯ (ಲಿಥೊಸ್ಪಿಯರ್‌) ಎಂದು ಗುರುತಿಸಲಾಗುತ್ತದೆ. ಈ ಭೂವಲಯ ಎಂಬುದು ಇಡೀ ಭೂಮಿಯನ್ನು ಆವರಿಸಿರುವ ದೊಡ್ಡ ಹಾಳೆಯಂತಹ ಒಂದೇ ತುಣುಕು ಅಲ್ಲ. ಭೂವಲಯವು ನೂರಾರು ಬೃಹತ್‌ ತುಣುಕುಗಳಿಂದ ಕೂಡಿದೆ. ಭೂವಲಯದ ಬೃಹತ್‌ ತುಣುಕುಗಳು ತಮ್ಮ ಕೆಳಗೆ ಇರುವ ದ್ರವರೂಪದ ಪದರದಲ್ಲಿ ತೇಲಾಡುತ್ತ ಚಲಿಸುತ್ತಿರುತ್ತವೆ.

ನಿರಂತರವಾಗಿ ನಡೆಯುತ್ತಿರುವ ಈ ಚಲನೆಯು ಭೂಮಿಯ ಮೇಲ್ಪದರದ ಮೇಲೆ ಒತ್ತಡ ಸೃಷ್ಟಿಸುತ್ತದೆ. ಮೇಲ್ಪದರವು ತಾಳಿಕೊಳ್ಳಲಾರದಷ್ಟು ಈ ಒತ್ತಡವು ಹೆಚ್ಚಾದಾಗ, ಮೇಲ್ಪದರದಲ್ಲಿ ಬಿರುಕು ಮೂಡುತ್ತದೆ. ಭೂವಲಯವು ಚಲಿಸಿದಾಗ ಮೇಲ್ಪದರದ ಬಿರುಕಿನಲ್ಲಿ ಕೂಡ ಚಲನೆ ಉಂಟಾಗುತ್ತದೆ. ಬಿರುಕು ಮೂಡಿರುವ ಪ್ರದೇಶದಲ್ಲಿ ಭೂಮಿಯ ಮೇಲ್ಪದರದ ಹಠಾತ್ ಚಲನೆಯೇ ಭೂಕಂಪ.

ಕಂಪನವು ಆರಂಭಗೊಂಡ ಸ್ಥಳವನ್ನು ಕಂಪನ ಕೇಂದ್ರ ಎಂದು ಗುರುತಿಸಲಾಗುತ್ತದೆ. ಭೂಕಂಪದ ಅತ್ಯಂತ ತೀವ್ರತೆಯು ಕಂಪನ ಕೇಂದ್ರದ ಸುತ್ತ ಇರುತ್ತದೆ. ಕಂಪನ ಕೇಂದ್ರದಿಂದ ನೂರಾರು ಅಥವಾ ಸಾವಿರಾರು ಕಿಲೋಮೀಟರ್‌ ದೂರದಲ್ಲಿಯೂ ಕಂಪನದ ಅನುಭವ ಆಗಬಹುದು.

ಕೆಲವೊಮ್ಮೆ ದೊಡ್ಡ ಭೂಕಂಪಕ್ಕೆ ಮೊದಲು ಪೂರ್ವಕಂಪನಗಳು ಉಂಟಾಗಬಹುದು. ಇವುಗಳ ತೀವ್ರತೆ ಕಡಿಮೆ ಇರುತ್ತದೆ. ಕಡಿಮೆ ತೀವ್ರತೆಯ ಈ ಕಂಪನಗಳು ಮುಂದೆ ದೊಡ್ಡ ಭೂಕಂಪ ಸಂಭವಿಸುವುದರ ಸೂಚನೆ ಎಂಬುದನ್ನು ಭೂವಿಜ್ಞಾನಿಗಳಿಗೆ ಗುರುತಿಸಲು ಸಾಧ್ಯವಿಲ್ಲ. ದೊಡ್ಡ ಭೂಕಂಪ ನಡೆದ ಬಳಿಕ ಅದೇ ಸ್ಥಳದಲ್ಲಿ ಕಡಿಮೆ ತೀವ್ರತೆಯ ಹಲವು ಕಂಪನಗಳು ಉಂಟಾಗುತ್ತವೆ. ಒಂದು ವಾರದಿಂದ ವರ್ಷ‌ಗಳ ವರೆಗೂ ಇದು ಮುಂದುವರಿಯಬಹುದು.

ಭೂಕಂಪ ಸಂಭವಿಸಲಿದೆ ಎಂಬುದರ ಮುನ್ಸೂಚನೆಯನ್ನು ವಿಜ್ಞಾನಿಗಳು ನೀಡುವುದು ಸಾಧ್ಯವಿಲ್ಲ. ಮುನ್ಸೂಚನೆ ನೀಡಲು ಮುಂದೆ ಸಾಧ್ಯವಾಗಬಹುದೇ ಎಂಬುದರ ಕುರಿತು ಕೂಡ ಯಾವುದೇ ಖಚಿತತೆ ಇಲ್ಲ. ಭೂಕಂಪಗಳ ಮುನ್ನೆಚ್ಚರಿಕೆ ಪಡೆದುಕೊಳ್ಳಲು ವಿಜ್ಞಾನಿಗಳು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಆದರೆ, ಅದರಲ್ಲಿ ಸಿಕ್ಕಿರುವ ಯಶಸ್ಸು ಅಲ್ಪ ಮಾತ್ರ. ಭೂಮಿಯಾಳದ ಚಲನೆಯಿಂದಾಗಿ ಬಿರುಕು ಸೃಷ್ಟಿಯಾದ ಪ್ರದೇಶದಲ್ಲಿ ಭವಿಷ್ಯದಲ್ಲಿ ಭೂಕಂಪ ಉಂಟಾಗಲಿದೆ ಎಂಬುದನ್ನು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಅದು ಎಂದು ಎಂಬುದು ಮಾತ್ರ ಗೊತ್ತಾಗುವುದಿಲ್ಲ.

ಹವಾಮಾನ ಮತ್ತು ಭೂಕಂಪನದ ನಡುವೆ ನಂಟು ಇದೆಯೇ ಎಂಬ ಪ್ರಶ್ನೆ ಇದೆ. ಹಾಗೆಯೇ ಕೆಲವು ಪ್ರಾಣಿಗಳಿಗೆ, ಕೆಲವು ಮನುಷ್ಯರಿಗೂ ಭೂಕಂಪನದ ಸುಳಿವು ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ಇದು ಈವರೆಗೆ ದೃಢಪಟ್ಟಿಲ್ಲ.

ಭೂಮಿಯಲ್ಲಿ ಮಾತ್ರವಲ್ಲ: ಈ ರೀತಿಯ ಕಂಪನವು ಭೂಮಿಯಲ್ಲಿ ಮಾತ್ರ ನಡೆಯವುದಲ್ಲ. ಚಂದ್ರನ ಮೇಲ್ಮೈಯಲ್ಲಿಯೂ ಇಂತಹ ಕಂಪನ ಆಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಮಂಗಳ, ಶುಕ್ರ ಗ್ರಹಗಳಲ್ಲಿಯೂ ಅವುಗಳ ಪದರಗಳೊಳಗೆ ನಡೆಯುವ ಚಟುವಟಿಕೆಗಳ ಪುರಾವೆಗಳನ್ನು ಸಂಗ್ರಹಿಸಲು ಯತ್ನಿಸುತ್ತಿದ್ದಾರೆ.

ಭಾರತದ ಮುಂದಿರುವ ಅಪಾಯ

ಭಾರತದ ಭೂ ಪ್ರದೇಶದ ಶೇ 59ರಷ್ಟು ಭಾಗವು ಭೂಕಂಪದ ಅಪಾಯವನ್ನು ಹೊಂದಿದೆ. ಇಡೀ ಹಿಮಾಲಯ ಪ್ರದೇಶವು ರಿಕ್ಟರ್‌ ಮಾಪಕದಲ್ಲಿ 8ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪದ ಅಪಾಯವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. 50 ವರ್ಷಗಳ ಅವಧಿಯೊಳಗೆ ಈ ಪ್ರದೇಶದಲ್ಲಿ ಹೆಚ್ಚು ತೀವ್ರತೆಯ ನಾಲ್ಕು ಭೂಕಂಪಗಳು ನಡೆದಿದ್ದವು. 1897ರಲ್ಲಿ ಶಿಲ್ಲಾಂಗ್‌ನಲ್ಲಿ (ತೀವ್ರತೆ 8.7), 1905ರಲ್ಲಿ ಕಂಗ್ಡಾದಲ್ಲಿ (ತೀವ್ರತೆ 8.0), 1934ರಲ್ಲಿ ಬಿಹಾರ–ನೇಪಾಳದಲ್ಲಿ (ತೀವ್ರತೆ 8.3) ಮತ್ತು 1950ರಲ್ಲಿ ಅಸ್ಸಾಂ–ಟಿಬೆಟ್‌ನಲ್ಲಿ (ತೀವ್ರತೆ 8.6) ಭೂಕಂಪಗಳು ಉಂಟಾಗಿವೆ.

ಹಿಮಾಲಯ ಪ್ರದೇಶದಲ್ಲಿ ಅತ್ಯಂತ ತೀವ್ರತೆಯ ಹಲವು ಭೂಕಂಪಗಳು ಉಂಟಾಗಬಹುದು ಎಂದು ಹಲವು ಅಧ್ಯಯನಗಳು ಎಚ್ಚರಿಕೆ ಕೊಟ್ಟಿವೆ. ಕಳೆದ 15 ವರ್ಷಗಳಲ್ಲಿ ದೇಶದಲ್ಲಿ ಹೆಚ್ಚು ತೀವ್ರತೆಯ 10 ಭೂಕಂಪಗಳು ನಡೆದಿವೆ. 20 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಜನಸಂಖ್ಯೆ ಹೆಚ್ಚಳವಾಗಿದೆ ಮತ್ತು ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವು ಭೂಕಂಪದಿಂದ ಆಗಬಹುದಾದ ಅನಾಹುತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂದು ಭಾರತ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಚ್ಚರಿಸಿದೆ.

ಹಿಮಾಲಯ ಪ್ರದೇಶವನ್ನು ಬಿಟ್ಟರೆ ದೇಶದ ಉಳಿದ ಭಾಗವು ಅಷ್ಟೊಂದು ಅಪಾಯವನ್ನು ಹೊಂದಿಲ್ಲ ಎಂಬ ಭಾವನೆ ಹಿಂದೆ ಇತ್ತು. ಆದರೆ, ಅಪಾಯ ಇಲ್ಲ ಎಂದು ಭಾವಿಸಿದ್ದ ಪ್ರದೇಶಗಳಲ್ಲಿ ಕೂಡ ಭೂಕಂಪ ಉಂಟಾಗಿದೆ. 1967ರಲ್ಲಿ ಕೊಯ್ನಾದಲ್ಲಿ ನಡೆದ ಭೂಕಂಪವು ಇದಕ್ಕೆ ಒಂದು ಉದಾಹರಣೆ. ಕೊಯ್ನಾ ಭೂಕಂಪದ ಬಳಿಕ, ಭೂಕಂಪ ವಲಯಗಳನ್ನು ಮರುರೂಪಿಸಲಾಯಿತು. 1993ರಲ್ಲಿ ಕಿಲ್ಲಾರಿಯಲ್ಲಿ ಭೂಕಂಪ ಆದ ಬಳಿಕ ಭೂಕಂಪ ವಲಯಗಳನ್ನು ಮತ್ತೆ ಬದಲಾಯಿಸಲಾಯಿತು. ದಖ್ಖನ್‌ ಮತ್ತು ಪರ್ಯಾಯ ದ್ವೀಪ ಪ್ರದೇಶದ ಕೆಲವು ಭಾಗಗಳನ್ನು ಕೂಡ ‘ಸಾಧಾರಣ ಅಪಾಯ’ ವಲಯಕ್ಕೆ ಸೇರಿಸಲಾಗಿದೆ.

ಈಶಾನ್ಯ ಭಾರತವು ಸದಾ ಭೂಕಂಪದ ಅಪಾಯವನ್ನು ಹೊಂದಿದೆ. ಮೇಲೆ ಉಲ್ಲೇಖಿಸಿದ ಎರಡು ದೊಡ್ಡ ಭೂಕಂಪಗಳ ಜೊತೆಗೆ, ಕಡಿಮೆ ತೀವ್ರತೆಯ ಭೂಕಂಪಗಳು ಆಗಾಗ ನಡೆದಿವೆ. 1950ರ ನಂತರ ಇಲ್ಲಿ ಸತತವಾಗಿ ಭೂಕಂಪ ಉಂಟಾಗಿದೆ. ರಿಕ್ಟರ್‌ ಮಾಪಕದಲ್ಲಿ 6ಕ್ಕಿಂತ ಹೆಚ್ಚು ತೀವ್ರತೆಯ ಒಂದು ಭೂಕಂಪವಾದರೂ ಪ್ರತಿ ವರ್ಷವೂ ಇಲ್ಲಿ ಆಗಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಕೂಡ ಭೂವಲಯ ತಿಕ್ಕಾಟ ಪ್ರದೇಶವೇ ಆಗಿದೆ.

ನಗರೀಕರಣ, ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳು ಮತ್ತು ಅರ್ಥ ವ್ಯವಸ್ಥೆಯ ಜಾಗತೀಕರಣದಿಂದಾದ ಅಭಿವೃದ್ಧಿ ಚಟುವಟಿಕೆಗಳು ಭೂಕಂಪ‍ದ ಅಪಾಯವನ್ನು ಹೆಚ್ಚಿಸಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರತಿಪಾದಿಸುತ್ತಿದೆ. ತಯಾರಿಕೆ ಮತ್ತು ಸೇವಾ ವಲಯದಲ್ಲಿ ಬಳಸಲಾಗುವ ಬೃಹತ್‌ ಯಂತ್ರಗಳು ಭೂಮಿಯ ಅಲುಗಾಟವನ್ನು ಹೆಚ್ಚಿಸಿವೆ. ಈಗ ಭೂಕಂಪಗಳು ಸಂಭವಿಸಿದರೆ ಜೀವಹಾನಿಯ ಜೊತೆಗೆ, ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವೂ ಉಂಟಾಗುತ್ತದೆ. ಜನದಟ್ಟಣೆಯ ನಗರಗಳಲ್ಲಿ ಭೂಕಂಪ ಉಂಟಾದರೆ, ಅದು ಉಂಟು ಮಾಡಬಹುದಾದ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ.

ಭೂಫಲಕಗಳು

ಭೂತೊಗಟೆಯ ತುಣುಕುಗಳನ್ನು ಭೂಫಲಕಗಳು ಎಂದು ಕರೆಯಲಾಗುತ್ತದೆ. ಭೂಮಿಯಲ್ಲಿ ಇಂತಹ 14 ಫಲಕಗಳಿವೆ. ಮೇಲ್ಮೈನಲ್ಲಿ ಸಮುದ್ರ ಮಾತ್ರ ಇರುವ ಫಲಕಗಳನ್ನು, ಫಲಕ ಎಂದಷ್ಟೇ ಕರೆಯಲಾಗುತ್ತದೆ. ಮೇಲ್ಮೈನಲ್ಲಿ ಭೂಮಿಯೂ ಇರುವ ಫಲಕಗಳನ್ನು ಭೂಫಲಕ ಎಂದು ಕರೆಯಲಾಗುತ್ತದೆ

ಯುರೇಷ್ಯಾ ಭೂಫಲಕ

ಅರೇಬಿಯಾ ಭೂಫಲಕ

ಇಂಡಿಯನ್‌ ಭೂಫಲಕ

ಆಸ್ಟ್ರೇಲಿಯ ಭೂಫಲಕ

ಆಫ್ರಿಕಾ ಭೂಫಲಕ

ದಕ್ಷಿಣ ಅಮೆರಿಕ ಭೂಫಲಕ

ಉತ್ತರ ಅಮೆರಿಕ ಭೂಫಲಕ

ಸ್ಕಾಷಿಯಾ ಭೂಫಲಕ

ನಾಸ್ಕಾ ಫಲಕ

ಅಂಟಾರ್ಕ್ಟಿಕ್‌ ಭೂಫಲಕ

ಪೆಸಿಫಿಕ್ ಫಲಕ

ಕೆರೆಬಿಯನ್ ಭೂಫಲಕ

ಕೊಕೊ ಫಲಕ

ಫಿಲಿಪ್ಪೀನ್ಸ್‌ ಫಲಕ

–––

ಭೂಫಲಕಗಳ ಬಿರುಕು

ಭೂಫಲಕಗಳ ಸಂಘರ್ಷದಿಂದಾಗಿ, ಭೂಮಿಯ ಮೇಲ್ಮೈನಲ್ಲಿ ಕಾಣಿಸಿಕೊಳ್ಳುವ ಬಿರುಕನ್ನು ಭೂಫಲಗಳ ಬಿರುಕು ಎಂದು ಕರೆಯಲಾಗುತ್ತದೆ. ಇವು ಕೆಲವೇ ಅಡಿಗಳಿಂದ ಹಿಡಿದು, ಸಾವಿರಾರು ಕಿ.ಮೀ.ಉದ್ದದಷ್ಟೂ ಇವೆ. ಉತ್ತರ ಅಮೆರಿಕ, ನ್ಯೂಜಿಲೆಂಡ್‌, ಟಿಬೆಟ್‌–ಹಿಮಾಲಯ ಪ್ರದೇಶದಲ್ಲಿ ಇಂತಹ ಹಲವು ಸಕ್ರಿಯ ಬಿರುಕುಗಳು ಇವೆ

ಸ್ಯಾಂಡ್‌ ಆ್ಯಂಡರ್‌ಸನ್ ಬಿರುಕು: 1816ರಲ್ಲಿ ಉತ್ತರ ಅಮೆರಿಕ ಭೂಫಲಕ ಮತ್ತು ಪೆಸಿಫಿಕ್‌ ಭೂಲಕಗಳ ಘರ್ಷಣೆಯಿಂದ ಉಂಟಾದ ಬಿರುಕು ಇದು. ಅಲ್ಲಿಯವರೆಗೆ ಈ ಬಿರುಕು ಇರಲಿಲ್ಲ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಬಿರುಕು ಇದೆ. ಇದು 1,287 ಕಿ.ಮೀ.ನಷ್ಟು ಉದ್ದವಿದೆ

––––––

ಹೆಚ್ಚು ಭೂಕಂಪ ಅಪಾಯದ ಪ್ರದೇಶಗಳು

ಅಟ್ಲಾಂಟಿಕ್‌ ಕಂದರ

ಆಫ್ರಿಕಾ ಭೂಫಲಕ ಮತ್ತು ಯುರೇಷ್ಯಾ ಭೂಫಲಕಗಳ ಪಶ್ಚಿಮ ಭಾಗವು ಉತ್ತರ ಅಮೆರಿಕ ಭೂಫಲಕದ ಪೂರ್ವಭಾಗವನ್ನು ಸಂಧಿಸುವ ಪ್ರದೇಶದಲ್ಲೂ ಸದಾ ಭೂಕಂಪ ಸಂಭವಿಸುತ್ತಿರುತ್ತದೆ. ಈ ಪ್ರದೇಶದಲ್ಲಿ ಬರುವ ಭೂಭಾಗದ ಮೇಲ್ಮೈ ಮತ್ತು ಸಮುದ್ರದ ತಳಭಾಗವು ಹಲವು ಮೀಟರ್‌ಗಳಷ್ಟು ದೂರ ಸರಿದಿವೆ. ಈ ಭೂಕಂಪ ರೇಖೆಯ ಮೇಲ್ಮೈನ ಬಹುಪಾಲು ಸಮುದ್ರವೇ ಇದೆ. ಹೀಗಾಗಿ ಸದಾ ಭೂಕಂಪ ಸಂಭವಿಸಿದರೂ, ಅದರ ಪರಿಣಾಮ ಮಾನವ ವಸತಿ ಪ್ರದೇಶದಲ್ಲಿ ಆಗುವುದಿಲ್ಲ. ಈ ಭೂಕಂಪ ರೇಖೆಯ ಪ್ರದೇಶದಲ್ಲಿ ಬರುವ ಐಸ್‌ಲ್ಯಾಂಡ್‌ ದ್ವೀಪವನ್ನು, ಈ ರೇಖೆಯು ಇಬ್ಭಾಗವಾಗಿಸಿದೆ. ಈ ರೇಖೆಯು ಕಂದರದ ರೂಪದಲ್ಲಿ ಇರುವುದರಿಂದ ಮತ್ತು ಅಟ್ಲಾಂಟಿಕ್‌ ಸಾಗರದಲ್ಲಿ ಇರುವುದರಿಂದ ಇದನ್ನು ‘ಅಟ್ಲಾಂಟಿಕ್‌ ಕಂದರ’ ಎಂದು ಕರೆಯಲಾಗುತ್ತದೆ.‌

ಆಲ್ಫೈಡ್‌ ಭೂಕಂಪ ರೇಖೆ

ಆಫ್ರಿಕಾ ಭೂಫಲಕ, ಇಂಡಿಯನ್ ಭೂಫಲಕ, ಅರೇಬಿಯಾ ಭೂಫಲಕಗಳು ಯುರೇಷ್ಯಾ ಭೂಫಲಕವನ್ನು ಸಂಧಿಸುವ ಪ್ರದೇಶವನ್ನು ‘ಆಲ್ಫೈಡ್‌ ಭೂಕಂಪ ರೇಖೆ’ ಎಂದು ಕರೆಯಲಾಗುತ್ತದೆ. ಎರಡನೇ ಅತಿಹೆಚ್ಚು ಭೂಕಂಪಗಳು ಸಂಭವಿಸುವ ಪ್ರದೇಶ ಇದಾಗಿದೆ. ಮ್ಯಾನ್ಮಾರ್‌, ನೇಪಾಳ, ಭಾರತದ ಉತ್ತರ ಭಾಗ, ಟಿಬೆಟ್‌, ಭೂತಾನ್‌, ಪಾಕಿಸ್ತಾನ, ಅಫ್ಗಾನಿಸ್ತಾನ, ಇರಾನ್, ಇರಾಕ್, ಇಸ್ರೇಲ್‌, ಲಿಬಿಯಾ, ಟರ್ಕಿ, ಸಿರಿಯಾ, ಇಟಲಿ, ಗ್ರೀಸ್‌, ಸ್ಪೇನ್‌ ಮತ್ತು ಪೋರ್ಚುಗಲ್‌ ಈ ಭೂಕಂಪ ರೇಖೆಯಲ್ಲಿ ಬರುತ್ತವೆ.

ಈಚೆಗೆ ಭಾರಿ ಭೂಕಂಪಕ್ಕೆ ನಲುಗಿರುವ ಟರ್ಕಿ ಮತ್ತು ಸಿರಿಯಾ, ಆಫ್ರಿಕಾ–ಅರೇಬಿಯಾ–ಯುರೇಷ್ಯಾ ಭೂಫಲಕಗಳು ಸಂಧಿಸುವ ಪ್ರದೇಶದಲ್ಲಿವೆ. ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಆಗಾಗ ಪ್ರಬಲ ಭೂಕಂಪಗಳು ಆಗಿವೆ.

ಬೆಂಕಿಯ ಉಂಗುರ

ಪೆಸಿಫಿಕ್‌ ಫಲಕವು ತನ್ನ ಸುತ್ತಲಿನ ಭೂಫಲಕಗಳನ್ನು ಸಂಧಿಸುವ ಪ್ರದೇಶದಲ್ಲಿ ಸದಾ ಸಂಘರ್ಷವಿರುತ್ತದೆ. ಈ ಪ್ರದೇಶದಲ್ಲಿ ಪ್ರತಿದಿನವೂ ಸಣ್ಣ ಪ್ರಮಾಣದ ಭೂಕಂಪ ಸಂಭವಿಸುತ್ತಿರುತ್ತದೆ ಮತ್ತು ಆಗಾಗ ದೊಡ್ಡ ಭೂಕಂಪಗಳು ಉಂಟಾಗುತ್ತವೆ. ಈ ಪ್ರದೇಶದುದ್ದಕ್ಕೂ ಹಲವು ಸಕ್ರಿಯ ಜ್ವಾಲಾಮುಖಿಗಳೂ ಇವೆ. ಸದಾ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟದ ಅಪಾಯ ಅತ್ಯಧಿಕವಾಗಿರುವ ಕಾರಣ ಈ ಪ್ರದೇಶವನ್ನು ‘ರಿಂಗ್‌ ಆಫ್‌ ಫೈರ್’ (ಬೆಂಕಿಯ ಉಂಗುರ) ಎಂದು ಕರೆಯಲಾಗುತ್ತದೆ.

ಉತ್ತರ ಅಮೆರಿಕದ ಪಶ್ಚಿಮ ಭಾಗದ ರಾಜ್ಯಗಳು, ಕೆನಡ, ಅಲಸ್ಕಾ, ಕೆರೀಬಿಯನ್‌ ದೇಶಗಳು, ದಕ್ಷಿಣ ಅಮೆರಿಕದ ದೇಶಗಳು, ನ್ಯೂಜಿಲೆಂಡ್‌, ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌, ಜಪಾನ್‌, ಕೊರಿಯಾ, ವಿಯೆಟ್ನಾಂ ದೇಶಗಳು ‘ರಿಂಗ್‌ ಆಫ್‌ ಫೈರ್’ ಪ್ರದೇಶದಲ್ಲೇ ಬರುತ್ತವೆ. ವರ್ಷವೊಂದರಲ್ಲಿ ನಡೆಯುವ ಒಟ್ಟು ಭೂಕಂಪಗಳಲ್ಲಿ ಶೇ 70ರಷ್ಟು ಭೂಕಂಪಗಳು ಈ ಪ್ರದೇಶದಲ್ಲೇ ಸಂಭವಿಸುತ್ತವೆ ಎಂದು ಅಮೆರಿಕದ ಯುಎಸ್‌ಜಿಎಸ್‌ನ ದತ್ತಾಂಶಗಳು ಹೇಳುತ್ತವೆ.

ಆಧಾರ: ಯುಎಸ್‌ ಜಿಯೊಲಾಜಿಕಲ್‌ ಸರ್ವೆ ಯುಎಸ್‌ಜಿಎಸ್‌, ಬ್ರಿಟನ್‌ ಜಿಯಾಲಜಿಕಲ್ ಸರ್ವೆ, ನಾಸಾದ ಸ್ಪೇಸ್‌ ಪ್ಲೇಸ್‌, ನ್ಯಾಷನಲ್‌ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ ಅಥಾರಿಟಿ ಜಾಲತಾಣಗಳು,ರಾಯಿಟರ್ಸ್‌

ಪ್ರಜಾವಾಣಿ ಗ್ರಾಫಿಕ್ಸ್‌: ಶಶಿಧರ ಹಳೇಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT