ಸೋಮವಾರ, ಮಾರ್ಚ್ 27, 2023
32 °C

ಪ್ರಜಾವಾಣಿ ಚರ್ಚೆ: ವಿದ್ಯುತ್ ದರ ಏರಿಕೆ ಸೂಕ್ತವೇ? ಮಾಜಿ ಸಿಎಂ ಎಚ್‌ಡಿಕೆ ಲೇಖನ

ಎಚ್.ಡಿ.ಕುಮಾರಸ್ವಾಮಿ Updated:

ಅಕ್ಷರ ಗಾತ್ರ : | |

ವರ್ಷಕ್ಕೊಮ್ಮೆ ದರ ಏರಿಕೆ ಮಾಡಬೇಕಾದರೆ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಆದರೆ, ವೆಚ್ಚ ಹೊಂದಾಣಿಕೆ ಲೆಕ್ಕ ಬಂದಾಗ ದರ ಏರಿಕೆ ಎನ್ನುವುದು ಕೆಇಆರ್‌ಸಿ ವಿವೇಚನೆ. ವೆಚ್ಚ ಹೊಂದಾಣಿಕೆಯ ಒಳಸುಳಿಗಳು ಹೊರಕ್ಕೆ ಗೊತ್ತಾಗುವುದೇ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಇಂಥ ಹೊಂದಾಣಿಕೆ ತಂತ್ರಗಾರಿಕೆ ಯಾರ ಮರ್ಜಿಯಲ್ಲಿ ನಡೆಯುತ್ತದೆ ಎನ್ನುವುದು ಕಣ್ಣಿಗೆ ಕಾಣದ ಲೆಕ್ಕಾಚಾರ

ಸಂದರ್ಭ ಯಾವುದೇ ಇರಲಿ. ಸರ್ಕಾರಕ್ಕೆ ದರ ಏರಿಕೆ ಕೊನೇ ಆಯ್ಕೆ ಆಗಿರಬೇಕು. ದರ ಏರಿಕೆ ಎಂದರೆ ಹೊರೆ ಹೇರಿಕೆ. ಅಂಥ ಸನ್ನಿವೇಶ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೆಲವೊಮ್ಮೆ ದರ ಏರಿಕೆ ಅನಿವಾರ್ಯವಾಗಬಹುದು. ಆದರೆ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಗೆ ದರ ಏರಿಕೆಯೇ ಮೊದಲ ಆಯ್ಕೆ. ಸಮಸ್ಯೆಯ ಮೂಲಕ್ಕೆ ಹೋಗಿ ಅದನ್ನು ಪರಿಹರಿಸುವ ಪ್ರಯತ್ನವನ್ನೇ ಸರ್ಕಾರಗಳು ಮಾಡುತ್ತಿಲ್ಲ ಅನ್ನಿಸುತ್ತಿದೆ.

2022ರ ಏಪ್ರಿಲ್‌ 1ರಂದು ವಿದ್ಯುತ್‌ ದರ ಏರಿಕೆ ಮಾಡಲಾಗಿತ್ತು. ಈಗ ಜುಲೈ 1ರಿಂದ ಮತ್ತೆ ವಿದ್ಯುತ್‌ ಶಾಕ್‌ ಕೊಡಲಾಗುತ್ತಿದೆ. ಪ್ರತಿ ಗ್ರಾಹಕನ ಮೇಲೆ ₹40 ಹೊರೆ ಬೀಳಲಿದೆ. ದರ ಏರಿಕೆ ಮಾಡಬೇಕು ಎಂದೆನಿಸಿದರೆ ಸಾಕು, ಅದಕ್ಕೊಂದು ನೆಪ ಹುಡುಕಿ, ಅನುಕೂಲಕರ ಪ್ರಸ್ತಾವ ಬರೆಸಿಕೊಂಡು ದರ ಏರಿಕೆ ಮಾಡಲಾಗುತ್ತದೆ. ವಿದ್ಯುತ್‌ ವಿಷಯದಲ್ಲಿ ಆಗುತ್ತಿರುವುದೂ ಇದೇ. ಹೊರ ರಾಜ್ಯಕ್ಕೆ ಮಾರಿ ₹2500 ಕೋಟಿ ಮಾಡಿಕೊಂಡ ಸರ್ಕಾರಕ್ಕೆ ರೈತರಿಗೆ ಕನಿಷ್ಠ 3 ಗಂಟೆ ವಿದ್ಯುತ್ ಕೊಡುವ ಹೃದಯವಂತಿಕೆ ಇಲ್ಲ.

ಜನರ ಬವಣೆ ಅದೆಷ್ಟರ ಮಟ್ಟಿಗೆ ಬಿಗಡಾಯಿಸಿ ಕೂತಿದೆ ಎಂದರೆ, ಕೋವಿಡ್‌ ಬರೆಯಿಂದ ಹೆಚ್ಚಿನವರು ಇನ್ನೂ ಚೇತರಿಸಿಕೊಂಡಿಲ್ಲ. ಬಡ, ಮಧ್ಯಮ ವರ್ಗದ ಜನರಿಗೆ ಎರಡೊತ್ತಿನ ಊಟಕ್ಕೂ ಕಷ್ಟದ ಸನ್ನಿವೇಶವೇ ಇದೆ. ನಿಜಸ್ಥಿತಿ ಹೀಗಿರುವಾಗ ಈಗ ₹19ರಿಂದ ₹31ರವರೆಗೆ ವಿವಿಧ ಎಸ್ಕಾಂಗಳಲ್ಲಿ ವಿದ್ಯುತ್‌ ದರ ಏರಿಕೆಗೆ ಕೆಇಆರ್‌ಸಿ ಒಪ್ಪಿಗೆ ಕೊಟ್ಟಿದೆ! ಏಕೆ ಎಂದು ಕೇಳಿದರೆ, ಅದಕ್ಕಿದೆ ಸಿದ್ಧ ಉತ್ತರ. ಉತ್ಪಾದನಾ ವೆಚ್ಚ ಹೊಂದಾಣಿಕೆಗೆ ದರ ಏರಿಕೆ ಮಾಡಬೇಕಿದೆ. ಇದೇನೂ ಹೊಸತಲ್ಲ, ಹಿಂದಿನಿಂದಲೂ ಮಾಡಿಕೊಂಡೇ ಬರಲಾಗುತ್ತಿದೆ ಎಂದು ಎಸ್ಕಾಂಗಳು ಹೇಳುತ್ತಿವೆ.

ದರ ಏರಿಕೆಯ ಪರ ಹೀಗೆ ವಕಾಲತ್ತು ಹಾಕುವ ಎಸ್ಕಾಂಗಳು ದಕ್ಷತೆಯ ಪ್ರಶ್ನೆ ಬಂದಾಗ ಜಾಣ ಮೌನಕ್ಕೆ ಶರಣಾಗುತ್ತವೆ. ವಿದ್ಯುತ್‌ ಸೋರಿಕೆ ಬಗ್ಗೆ ಸೊಲ್ಲೆತ್ತಿದರೆ ಮೌನವಾಗಿಬಿಡುತ್ತವೆ. ಉಳ್ಳವರು ಸಾವಿರಾರು ಯೂನಿಟ್‌ ವಿದ್ಯುತ್‌ ಕದ್ದರೂ, ಕಂಡೂಕಾಣದಂತೆ ಇದ್ದುಬಿಡುವ ಎಸ್ಕಾಂಗಳಿಗೆ, 100 ಯೂನಿಟ್‌ ಬಳಕೆ ಮಾಡುವ ಬಡ, ಮಧ್ಯಮ ವರ್ಗದ ಜನರ ಜೇಬುಗಳ ಮೇಲೆಯೇ ಕಾಕದೃಷ್ಟಿ. ಜಿಡ್ಡುಗಟ್ಟಿದ ಓಬಿರಾಯನ ಕಾಲದ ನಿರ್ವಹಣಾ ವ್ಯವಸ್ಥೆಗೇ ಜೋತುಬಿ‌ದ್ದಿರುವ ಎಸ್ಕಾಂಗಳಿಗೆ ಹೊಸ ತಂತ್ರಜ್ಞಾನ ಅಥವಾ ಆಧುನೀಕರಣ ಎಂದರೆ ಅಪಥ್ಯ. ವೆಚ್ಚ ಕಡಿಮೆ ಮಾಡಿದರೆ, ಸರ್ಪ ತುಳಿದಷ್ಟು ವ್ಯಗ್ರರಾಗುತ್ತಾರೆ. ಹಾಗಾದರೆ, ಎಸ್ಕಾಂಗಳ ಪ್ರಮೇಯ ಏನು? ಸರ್ಕಾರದ ಕರ್ತವ್ಯಗಳೇನು? ಜನರನ್ನು ಸುಲಿಗೆ ಮಾಡುವುದೇ ಮೊದಲ ಆಯ್ಕೆಯಾದರೆ, ನಾಗರಿಕ ಸರ್ಕಾರ ಎನ್ನುವುದಕ್ಕೆ ಅರ್ಥವಿದೆಯೇ? ದರ ಏರಿಕೆ ಮಾಡಿ ಎಂದು ಎಸ್ಕಾಂಗಳು ಪ್ರಸ್ತಾವ ಸಲ್ಲಿಸುತ್ತವೆ. ಅದನ್ನು ಒಪ್ಪಿಕೊಳ್ಳಬೇಕೇ ಬೇಡವೇ ಎಂಬ ವಿವೇಚನೆ ಸರ್ಕಾರಕ್ಕೆ ಇರಬೇಕು. ಆ ಎಸ್ಕಾಂಗಳು ಎಲ್ಲೆಲ್ಲಿ ನಷ್ಟಕ್ಕೆ ಗುರಿಯಾಗಿವೆ? ಎಲ್ಲೆಲ್ಲಿ ಯಡವಟ್ಟುಗಳಾಗಿವೆ? ಇದಕ್ಕೆ ಸರ್ಕಾರ ಮದ್ದು ಅರೆದಿದೆಯೇ? ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಜನರ ಹಿತ ಮುಖ್ಯವಾಗಬೇಕು. 

ರಾಜ್ಯದಲ್ಲಿ ಆಡಳಿತ ನಡೆಸಿದ ಕೆಲ ಸರ್ಕಾರಗಳು ಎಸಗಿದ ಪ್ರಮಾದಗಳು ಇಂಧನ ವ್ಯವಸ್ಥೆಯನ್ನು ಹದಗೆಡಿಸಿವೆ. ನಾನು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಸ್ಕಾಂನಲ್ಲಿ ₹1,000 ಕೋಟಿ ಠೇವಣಿ ಇತ್ತು. ಅದನ್ನು ಈಗ ₹29,000 ಕೋಟಿಯಷ್ಟು ಸಾಲದ ಕೂಪಕ್ಕೆ ತಳ್ಳಲಾಗಿದೆ. ಇನ್ನು, ಕೆಪಿಸಿಎಲ್, ಆರ್‌ಪಿಸಿಎಲ್‌ಗಳ ಮೇಲೆ ₹11,000 ಕೋಟಿ ಸಾಲದ ಹೊರೆ ಇದೆ ಎಂದು ಗುರುಚರಣ್ ನೇತೃತ್ವದ ಸಮಿತಿ ಹೇಳಿದೆ. ಆ ವರದಿಯ ಇನ್ನೊಂದು ಬೆಚ್ಚಿಬೀಳಿಸುವ ಅಂಶ ಎಂದರೆ, 2023-24ನೇ ಸಾಲಿಗೆ 7,14,660 ಯೂನಿಟ್ ವಿದ್ಯುತ್ ಖರೀದಿಗೆ ₹39,233 ಕೋಟಿ ಬೇಕಿದೆ.

ವಿದ್ಯುತ್ ಖರೀದಿ ಅಕ್ರಮಗಳ ತನಿಖೆಗೆ 2014ರಲ್ಲಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಆದರೆ, ಆ ಸಮಿತಿ ರಚನೆಗೆ ಮುನ್ನವೇ ಸರ್ಕಾರವು ತನ್ನನ್ನು ತಾನೇ ಆರೋ‍ಪಮುಕ್ತಗೊಳಿಸಿಕೊಂಡಿತ್ತು. ಈ ಸದನ ಸಮಿತಿಗಳ ಕಥೆ ಹೇಗೆ ಎಂದರೆ, ಕುರಿ ಕಾಯಲು ತೋಳವನ್ನೆ ಕಾವಲು ಇಟ್ಟ ಹಾಗೆ. ಅಕ್ರಮದ ತನಿಖೆಗೆ ರಚನೆಯಾಗುವ ಸದನ ಸಮಿತಿಗೆ ಅದೇ ಇಲಾಖೆಯ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಇದು ದೊಡ್ಡ ವಿಪರ್ಯಾಸ. 

ಇಲ್ಲೊಂದು ಟೋಪಿ ಲೆಕ್ಕಾಚಾರವೂ ಅಡಗಿದೆ. ವರ್ಷಕ್ಕೊಮ್ಮೆ ದರ ಏರಿಕೆ ಮಾಡಬೇಕಾದರೆ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಆದರೆ, ವೆಚ್ಚ ಹೊಂದಾಣಿಕೆ ಲೆಕ್ಕ ಬಂದಾಗ ದರ ಏರಿಕೆ ಎನ್ನುವುದು ಕೆಇಆರ್‌ಸಿ ವಿವೇಚನೆ. ವೆಚ್ಚ ಹೊಂದಾಣಿಕೆಯ ಒಳಸುಳಿಗಳು ಹೊರಕ್ಕೆ ಗೊತ್ತಾಗುವುದೇ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಇಂಥ ಹೊಂದಾಣಿಕೆ ತಂತ್ರಗಾರಿಕೆ ಯಾರ ಮರ್ಜಿಯಲ್ಲಿ ನಡೆಯುತ್ತದೆ ಎನ್ನುವುದು ಕಣ್ಣಿಗೆ ಕಾಣದ ಲೆಕ್ಕಾಚಾರ.

ಅಲ್ಲದೆ, ದರ ಏರಿಕೆಯ ಕಾರಣಗಳು ಸುಲಭ. ಕಲ್ಲಿದ್ದಲು ಅಭಾವ, ಎಸ್ಕಾಂಗಳ ಆರ್ಥಿಕ ನಷ್ಟ, ನಿರಂತರ ಬೆಲೆ ಏರಿಕೆ– ಈ ಕಾರಣಗಳು ಅಂತಿಮವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತವೆ. ರಾಯಚೂರು, ಬಳ್ಳಾರಿ, ಯರಮರಸ್ ಶಾಖೋತ್ಪನ್ನ ಘಟಕಗಳು ಈಗ ದಿನಪೂರ್ತಿ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಕೆಲ ಘಟಕಗಳು ಮಾತ್ರ ಕೆಲಸ ಮಾಡುತ್ತಿವೆ. ಅಲ್ಲಿ ಉತ್ಪಾದನೆ ಆಗುವ ಶೇ 65ರಷ್ಟು ವಿದ್ಯುತ್ ಅನ್ನು ಕೇಂದ್ರ ಗ್ರಿಡ್‌ಗೆ ಕೊಡಬೇಕಿದೆ.

ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜ್ಯದ ಎಲ್ಲಾ ಶಾಖೋತ್ಪನ್ನ ಘಟಕಗಳಲ್ಲಿ ಹಿಂದೆ ನಿತ್ಯ 25,000 ಟನ್ ಕಲ್ಲಿದ್ದಲು ಬಳಕೆ ಆಗುತ್ತಿತ್ತು. ಈಗ 6,000 ಟನ್ ಮಾತ್ರ ಬಳಕೆ ಆಗುತ್ತಿದೆ. ಇದಕ್ಕೆ ಕಲ್ಲಿದ್ದಲು ಪೂರೈಕೆ ವ್ಯತ್ಯಯ, ಬೆಲೆ ಏರಿಕೆಯ ಕಾರಣ ಕೊಡುತ್ತಾರೆ. ಕಲ್ಲಿದ್ದಲು ಮೂಲದಿಂದಲೇ ರಾಜ್ಯದಲ್ಲಿ 3.70 ಕೋಟಿ  ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಸೌರ ಮತ್ತು ಪವನ ಮೂಲದಿಂದ 95 ದಶಲಕ್ಷ ಯೂನಿಟ್ ಉತ್ಪಾದನೆ ಆಗುತ್ತದೆ. ಇದರ ನಡುವೆ ಹೊರರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್ ಮಾರಿಕೊಳ್ಳಲಾಗಿದೆ. ಕಾಣದ ಒಳ ಲೆಕ್ಕಾಚಾರ ಯಾರಿಗೂ ತಿಳಿಯುತ್ತಿಲ್ಲ. ಯಾರಿಗಾಗಿ ಹೊಂದಾಣಿಕೆ ಎನ್ನುವುದೂ ಅಸ್ಪಷ್ಟ. ಇಲ್ಲಿ ಎದ್ದು ಕಾಣುವುದು ಯಾರದ್ದೋ ಹಿತ ಕಾಯುವ ಒಳ ಉದ್ದೇಶವಷ್ಟೇ. 

ಲೇಖನ

–ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು