ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಾಜಕೀಯ ನಾಯಕರ ದುಬಾರಿ ದಿರಿಸು

Last Updated 13 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳ ಹಲವು ನಾಯಕರು ಸಾಮಾನ್ಯವಾಗಿ ಖಾದಿ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಹಲವು ನಾಯಕರಿಗೆ ದುಬಾರಿ ವಸ್ತುಗಳನ್ನು ಬಳಸುವ ಅಭ್ಯಾಸ ಇದೆ. ದುಬಾರಿ ವಸ್ತುಗಳ ಬಳಕೆಯು ಹಲವು ಬಾರಿ ವಿವಾದದ ಸ್ವರೂಪವನ್ನೂ ಪಡೆದುಕೊಂಡದ್ದಿದೆ. ಪ್ರತಿಸ್ಪರ್ಧಿ ಪಕ್ಷಗಳ ಮುಖಂಡರೇ ಈ ಕುರಿತು ಟೀಕೆ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡಿದ ನಿದರ್ಶನಗಳು ಇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಟು, ರಾಹುಲ್ ಅವರ ಜಾಕೆಟ್‌ ಮತ್ತು ಟಿ–ಶರ್ಟ್‌, ಅಮಿತ್ ಶಾ ಅವರ ಮಫ್ಲರ್‌ ಇಂತಹುದಕ್ಕೆ ಕೆಲವು ಉದಾಹರಣೆಗಳು

‘ಮೋದಿಯ ₹ 10 ಲಕ್ಷದ ಸೂಟು, ಒಂದೂವರೆ ಲಕ್ಷದ ಕನ್ನಡಕ’

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪುಗಳು ಹಲವು ಬಾರಿ ಸುದ್ದಿ ಮಾಡಿವೆ. 2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಮೋದಿ ಅವರು ಧರಿಸಿದ್ದ ಸೂಟು ಬಾರಿ ವಿವಾದಕ್ಕೆ ಕಾರಣವಾಗಿತ್ತು.

‘ಸೂಟಿಗೆ ಬಳಸಿದ್ದ ಬಟ್ಟೆಯಲ್ಲಿ ‘ನರೇಂದ್ರ ದಾಮೋದರದಾಸ್‌ ಮೋದಿ’ ಎಂದು ಚಿನ್ನದ ಎಳೆಯಲ್ಲಿ ನೇಯಲಾಗಿತ್ತು. ಸೂಟಿನುದ್ದಕ್ಕೂ ಈ ನೇಯ್ಗೆ ಇತ್ತು. ಇದು ಹತ್ತು ಲಕ್ಷದ ಸೂಟು. ತನ್ನನ್ನು ತಾನು ಫಕೀರ ಎಂದು ಕರೆದುಕೊಳ್ಳುವ ಮೋದಿ ಅವರು ₹10 ಲಕ್ಷದ ಸೂಟು ಧರಿಸಿದ್ದಾರೆ’ ಎಂದು ಕಾಂಗ್ರೆಸ್‌, ಎಎಪಿ ಲೇವಡಿ ಮಾಡಿದವು. ಮೋದಿ ನೇತೃತ್ವದ ಸರ್ಕಾರವನ್ನು ಸೂಟು–ಬೂಟಿನ ಸರ್ಕಾರ ಎಂದೇಕಾಂಗ್ರೆಸ್‌ ಕರೆಯಿತು. ಮೋದಿ ಅವರನ್ನು ದುಬಾರಿ ಫಕೀರ ಎಂದೂ ಕರೆಯಲಾಯಿತು. ವಿವಾದಕ್ಕೆ ಕಾರಣವಾಗಿದ್ದ ಈ ಸೂಟನ್ನು ಉದ್ಯಮಿಯೊಬ್ಬರು ಮೋದಿ ಅವರಿಗೆ ಉಡುಗೊರೆ ನೀಡಿದ್ದರು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿತ್ತು. 2016ರಲ್ಲಿ ಈ ಸೂಟನ್ನು ಪ್ರಧಾನಿ ಕಚೇರಿ ಹರಾಜಿಗೆ ಹಾಕಿತ್ತು. ಗುಜರಾತಿನ ಉದ್ಯಮಿಯೊಬ್ಬರು ಅದನ್ನು ₹4.30 ಕೋಟಿಗೆ ಖರೀದಿಸಿದ್ದರು. ಈ ಹಣವನ್ನು ಪ್ರಧಾನಿ ಕಚೇರಿಯು ಸ್ವಚ್ಛಭಾರತ ನಿಧಿಗೆ ಜಮೆ ಮಾಡಿರುವುದಾಗಿ ಹೇಳಿತ್ತು.

2019ರಲ್ಲಿ ಸೂರ್ಯಗ್ರಹಣವನ್ನು ವೀಕ್ಷಿಸುತ್ತಿರುವ ಚಿತ್ರಗಳನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಆದರೆ ಆ ಚಿತ್ರಗಳು ಹೆಚ್ಚು ಸದ್ದು ಮಾಡಿದ್ದು ಬೇರೆಯದ್ದೇ ಕಾರಣಕ್ಕೆ. ಮೋದಿ ಅವರು ಸೂರ್ಯಗ್ರಹಣದ ವೇಳೆ ‘ಮೆಬ್ಯಾಕ್‌’ ಬ್ರ್ಯಾಂಡ್‌ನ ತಂಪು ಕನ್ನಡಕವನ್ನು ಧರಿಸಿದ್ದರು. ಮರ್ಸಿಡಿಸ್‌ ಕಂಪನಿಯ ಐಷಾರಾಮಿ ಕಾರು ಮೆಬ್ಯಾಕ್‌ ಅನ್ನು ರೂಪಿಸಿದ್ದ ವೆಲ್‌ಹೆಲ್ಮ್‌ ಮೆಬ್ಯಾಕ್‌ ಮತ್ತವರ ಮಗ ಕಾರ್ಲ್‌ ಮೆಬ್ಯಾಕ್‌ ಒಡೆತನದ, ಮೆಬ್ಯಾಕ್‌ ಕಂಪನಿ ಈ ಕನ್ನಡಕವನ್ನು ತಯಾರಿಸುತ್ತದೆ. ಈ ಕಂಪನಿ ತಯಾರಿಸುವ ಪ್ರತಿ ಕನ್ನಡಕವನ್ನು ಕೈಯಿಂದ ತಯಾರಿಸಲಾಗಿರುತ್ತದೆ ಮತ್ತು ಅತ್ಯಮೂಲ್ಯವಾದ ವಸ್ತುಗಳನ್ನು ಮಾತ್ರ ಅದರಲ್ಲಿ ಬಳಸಲಾಗುತ್ತದೆ. ಮೋದಿ ಅವರು ಧರಿಸಿದ್ದ ಮಾದರಿಯ ಕನ್ನಡಕದ ಬೆಲೆ 2019ರಲ್ಲೇ ₹1.60 ಲಕ್ಷದಷ್ಟಿತ್ತು.

ಮೋದಿ ಅವರು ಬಳಸುವ ಮೋಂಟ್‌ಬ್ಲಾಂಕ್ಪೆನ್‌ ಸಹ ದುಬಾರಿ ಬೆಲೆಯದ್ದೇ. ವಿರೋಧ ಪಕ್ಷಗಳ ಟೀಕೆಗೆ ಈ ಪೆನ್‌ ಸಹ ಹಲವು ಬಾರಿ ಗುರಿಯಾಗಿದ್ದಿದೆ. ಹಲವು ವಿದೇಶ ಪ್ರವಾಸಗಳಲ್ಲಿ ಮೋದಿ ಅವರು ಈ ಪೆನ್‌ ಬಳಸಿದ್ದಾರೆ. ಇದು ಮೋದಿ ಅವರಿಗೆ ಉಡುಗೊರೆಯಾಗಿ ಬಂದದ್ದು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಮೋಂಟ್‌ಬ್ಲಾಂಕ್‌ ಕಂಪನಿಯ ಫೌಂಟನ್‌ ಮಾದರಿಯ ಈ ಪೆನ್‌ನ ಬೆಲೆ ₹1.30 ಲಕ್ಷದಷ್ಟಿದೆ. ಮೋದಿ ಅವರು ಬಳಸುವ ದುಬಾರಿ ಕೈಗಡಿಯಾರಗಳ ಬಗ್ಗೆಯೂ ವಿಪಕ್ಷಗಳು ಹಲವು ಬಾರಿ ಟೀಕೆ ಮಾಡಿವೆ.

ರಾಹುಲ್‌ ಜಾಕೆಟ್‌, ಟಿ–ಶರ್ಟ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಧರಿಸುವ ಬಟ್ಟೆಗಳ ಮೇಲೆ ಬಿಜೆಪಿ ನಾಯಕರು ಸದಾ ಕಣ್ಣಿಟ್ಟಿರುತ್ತಾರೆ. ರಾಹುಲ್‌ ಅವರ ದುಬಾರಿ ಜಾಕೆಟ್‌, ಟಿ–ಶರ್ಟ್‌ಗಳ ಬಗ್ಗೆ ಬಿಜೆಪಿ ನಾಯಕರು ಸದಾ ಆಕ್ಷೇಪ ವ್ಯಕ್ತಪಡಿಸುತ್ತಿರುತ್ತಾರೆ. ಈಗ ರಾಹುಲ್ ಅವರ ಟಿ–ಶರ್ಟ್‌ ಸುದ್ದಿಯಾಗುತ್ತಿದೆ.

ರಾಹುಲ್ ಗಾಂಧಿ ಅವರಬರ್‌ಬೆರಿ ಟಿ–ಶರ್ಟ್‌
ರಾಹುಲ್ ಗಾಂಧಿ ಅವರ
ಬರ್‌ಬೆರಿ ಟಿ–ಶರ್ಟ್‌

‘ಕಾಂಗ್ರೆಸ್‌ನ ಭಾರತವನ್ನು ಒಗ್ಗೂಡಿಸಿ ಯಾತ್ರೆಯ ವೇಳೆ ರಾಹುಲ್‌ ಧರಿಸಿದ್ದ ಟಿ–ಶರ್ಟ್‌ ಬರ್‌ಬೆರಿ ಕಂಪನಿಯದ್ದು. ಆ ಟಿ–ಶರ್ಟ್‌ನ ಬೆಲೆ ₹41,000’ ಎಂದು ಬಿಜೆಪಿಯ ಹಲವು ನಾಯಕರು ಹೇಳಿದ್ದಾರೆ. ರಾಹುಲ್‌ ಅವರ ಟಿ–ಶರ್ಟ್‌ ಮತ್ತು ಬರ್‌ಬೆರಿ ಜಾಲತಾಣದಲ್ಲಿರುವ ಟಿ–ಶರ್ಟ್‌ನಲ್ಲಿ ನಮೂದಿಸಿರುವ ಬೆಲೆಯ ಚಿತ್ರವನ್ನು ಬಿಜೆಪಿಯ ಹಲವು ನಾಯಕರು ಟ್ವೀಟ್‌ ಮಾಡಿದ್ದರು. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

₹41,000 ಬೆಲೆಯ ಟಿ–ಶರ್ಟ್‌ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ, ಕಾಂಗ್ರೆಸ್‌ ನಾಯಕರು ಮೋದಿ ಅವರ ₹10 ಲಕ್ಷದ ಸೂಟಿನ ವಿಷಯವನ್ನು ಪ್ರಸ್ತಾಪಿಸಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಹ ಬಿಜೆಪಿ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಗಮನಾರ್ಹ.

ರಾಹುಲ್‌ ಅವರ ಬಟ್ಟೆ ಸುದ್ದಿಯಾಗಿದ್ದು ಇದೇ ಮೊದಲಲ್ಲ. 2018ರಲ್ಲಿ ಈಶಾನ್ಯ ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಇದ್ದಾಗ, ರಾಹುಲ್‌ ಅವರು ಪಾಪ್‌ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆಗ ಅವರು ಧರಿಸಿದ್ದ ಜಾಕೆಟ್‌ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ‘₹70,000 ಬೆಲೆಯ ಬರ್‌ಬೆರಿ ಜಾಕೆಟ್‌ ಧರಿಸಿರುವ ರಾಹುಲ್‌ ಗಾಂಧಿ, ಮೋದಿ ಅವರ ದಿರಿಸಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ಬಿಜೆಪಿ ಟ್ವೀಟ್‌ ಮಾಡಿತ್ತು.

‘ಶಾ ಮಫ್ಲರ್ಬೆಲೆ ₹80,000’

ಬಿಜೆಪಿ ನಾಯಕ ಅಮಿತ್ ಶಾ ಸಹ ದುಬಾರಿ ಬೆಲೆಯ ವಸ್ತುಗಳನ್ನು ಬಳಸುತ್ತಾರೆ ಎಂಬ ವಿಚಾರವನ್ನು ಕಾಂಗ್ರೆಸ್ ಬಿಚ್ಚಿಟ್ಟಿದೆ.‘ಕೇಂದ್ರ ಗೃಹಸಚಿವ ₹80,000 ಬೆಲೆಯ ಮಫ್ಲರ್ ಬಳಸುತ್ತಾರೆ. ಅವರು ಧರಿಸುವ ಕನ್ನಡಕದ ಬೆಲೆ ₹2.5 ಲಕ್ಷ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರು ಬಳಸುತ್ತಿರುವ ಟಿ–ಶರ್ಟ್ ₹41 ಸಾವಿರ ಮೌಲ್ಯದ್ದು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಗೆಹಲೋತ್ ಈ ಪ್ರತ್ಯಾರೋಪ ಮಾಡಿದ್ದಾರೆ.

ಭಾರತ ಒಗ್ಗೂಡಿಸಿ ಯಾತ್ರೆಯ ಯಶಸ್ಸನ್ನು ಅರಗಿಸಿಕೊಳ್ಳಲು ಆಗದ ಬಿಜೆಪಿ, ಟಿ–ಶರ್ಟ್ ವಿಚಾರವಾಗಿ ಗೊಂದಲ ಎಬ್ಬಿಸಲು ಮುಂದಾಗಿರುವುದು ಸರಿಯಲ್ಲ ಎಂದು ಗೆಹಲೋತ್ ಹೇಳಿದ್ದಾರೆ. ‘ರಾಹುಲ್ ಟಿ ಶರ್ಟ್ ಬಗ್ಗೆ ಮಾತನಾಡುವ ಮುನ್ನ, ನಿಮ್ಮ ನಾಯಕ ಅಮಿತ್ ಶಾ ಅವರು ಬಳಸುವ ದುಬಾರಿ ಕನ್ನಡಕ ಹಾಗೂ ಮಫ್ಲರ್ ಬಗ್ಗೆಯೂ ತಿಳಿದುಕೊಳ್ಳಿ’ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಶಾ ಅವರು ಬರ್‌ಬೆರಿ ಕಂಪನಿಯ ಮಫ್ಲರ್‌ ಧರಿಸಿದ್ದ ಚಿತ್ರವನ್ನು 2014ರಲ್ಲಿ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದರು. ಆಗ ಅದರ ಬೆಲೆ 520 ಡಾಲರ್‌ (ಈಗಿನ ಮೌಲ್ಯದಲ್ಲಿ ₹41,600) ಇತ್ತು ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

‘₹2.5 ಲಕ್ಷ ಬೆಲೆಯ ಕೈಚೀಲ’!

ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರು ₹2.5 ಲಕ್ಷ ಬೆಲೆಯ ಕೈಚೀಲ ಬಳಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮೊಯಿತ್ರಾ ಬಳಸುತ್ತಿದ್ದ ಕೈಚೀಲದ ವಿಚಾರ ಚರ್ಚೆಗೆ ಬಂದಿತ್ತು.

ಪಕ್ಷದ ಮತ್ತೊಬ್ಬ ಸಂಸದೆ ಕಾಕೋಲಿ ಘೋಷ್ ಅವರು ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಸರ್ಕಾರವನ್ನು ಟೀಕಿಸಲು ಮುಂದಾದರು. ಘೋಷ್ ಪಕ್ಕದಲ್ಲೇ ಕುಳಿತಿದ್ದ ಮೊಯಿತ್ರಾ ಅವರು ತಮ್ಮ ಕೈಚೀಲವನ್ನು ಮೇಜಿನ ಕೆಳಗೆ ಅಡಗಿಸಿ ಇಟ್ಟರು ಎಂದು ಆರೋಪಿಸಲಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ‘ಮೊಯಿತ್ರಾ ಅವರು ‘ಲೂಯಿಸ್ ವಿಟ್ಟನ್’ ಕಂಪನಿಯ ದುಬಾರಿ ಬೆಲೆಯ ಕೈಚೀಲವನ್ನು ಕೇವಲ ಐದು ಸೆಕೆಂಡ್‌ನಲ್ಲಿ ಅಡಗಿಸಿಟ್ಟರು. ಇವರು ಬಂಗಾಳದ ಜಾದೂಗಾರ್ತಿಯೇ ಸರಿ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಲೇವಡಿ ಮಾಡಿದ್ದರು.

ದುಬಾರಿ ಕೈಚೀಲ ಬಳಸುವ ಮೊಯಿತ್ರಾ ಅವರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ಕಿಡಿಕಾರಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಮೊಯಿತ್ರಾ, 2019ರಿಂದಲೂ ಸದನಕ್ಕೆ ಇದೇ ಕೈಚೀಲವನ್ನು ತರುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ’ ಎಂದು ಹೇಳಿದ್ದರು.

ದುಬಾರಿ ಕೈಚೀಲ ಕೊಳ್ಳಲು ಹಾಗೂ ಸುಪ್ರೀಂ ಕೋರ್ಟ್ ವಕೀಲರ ಶುಲ್ಕ ಭರಿಸಲು ಮೊಯಿತ್ರಾ ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದರು. ‘ಪ್ರಧಾನಿ ಮೋದಿ ಅವರು ತಮ್ಮ ₹10 ಲಕ್ಷ ಬೆಲೆಯ ಸೂಟ್ ಸೇರಿದಂತೆ ಇತರ ವಸ್ತುಗಳನ್ನು ಹರಾಜು ಹಾಕಿದ ಬಳಿಕ ಒಂದಿಷ್ಟು ಹಣವನ್ನು ಕಳುಹಿಸಿದ್ದರು. ಈ ಹಣದಿಂದ ಬ್ಯಾಗ್ ಖರೀದಿಸಿದೆ. ಉಳಿದ ಹಣವನ್ನು ವಕೀಲರಿಗೆ ನೀಡಿದೆ’ ಎಂದು ವ್ಯಂಗ್ಯದ ಧಾಟಿಯಲ್ಲಿ ಮೊಯಿತ್ರಾ ಉತ್ತರಿಸಿದ್ದರು. ಜಾರಿ ನಿರ್ದೇಶನಾಲಯದ ನಿರ್ದೇಶಕರ ಸೇವಾವಧಿಯನ್ನು ಅಕ್ರಮವಾಗಿ ವಿಸ್ತರಿಸಲಾಗಿದೆ ಎಂದು ಆರೋಪಿಸಿ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಮಂಡಿಸುವ ವಕೀಲರಿಗೆ ನೀಡಲಾಗುವ ಹಣದ ಮೂಲದ ಬಗ್ಗೆ ಮೊಯಿತ್ರಾ ಅವರನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಹ್ಯೂಬ್ಲೊ ವಾಚು

ಸಿದ್ದರಾಮಯ್ಯ
ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಟ್ಟಿಕೊಳ್ಳುತ್ತಿದ್ದ ವಾಚು ವಿವಾದಕ್ಕೆ ಕಾರಣವಾಗಿತ್ತು. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು 2016ರಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಬಗ್ಗೆ ಗಮನ ಸೆಳೆದಿದ್ದರು. ಇದು ಹ್ಯೂಬ್ಲೊ ವಾಚು, ಇದನ್ನು ಗಣಿ ಉದ್ಯಮಿಯೊಬ್ಬರು ಸಿದ್ದರಾಮಯ್ಯ ಅವರಿಗೆ ಉಡುಗೊರೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿಯೂ ಅವರು ಹೇಳಿದ್ದರು.

ಬಳಿಕ, ಬಿಜೆಪಿ ಕೂಡ ಈ ಬಗ್ಗೆ ಭಾರಿ ಗದ್ದಲ ಎಬ್ಬಿಸಿತ್ತು. ವಿಧಾನಸಭೆಯ ಅಧಿವೇಶನದಲ್ಲಿ ಈ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಕೆಲ ದಿನಗಳ ಕೋಲಾಹಲದ ಬಳಿಕ, ಇದು ಮಧ್ಯಪ್ರಾಚ್ಯ ದೇಶದಲ್ಲಿರುವ ತಮ್ಮ ವೈದ್ಯ ಮಿತ್ರರೊಬ್ಬರು ಕೊಟ್ಟ ವಾಚು ಎಂದು ಸಿದ್ದರಾಮಯ್ಯ ಹೇಳಿದ್ದರು. ಆ ವ್ಯಕ್ತಿಯು ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳ ಜೊತೆಗೆ ಯಾವುದೇ ವ್ಯವಹಾರ ಹೊಂದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದರು. ತಮ್ಮನ್ನು ಆ ವ್ಯಕ್ತಿಯು ಭೇಟಿ ಮಾಡಲು ಬಂದಾಗ ಅವರ ಕೈಯಲ್ಲಿದ್ದ ವಾಚು ಕಂಡು ಖುಷಿಪಟ್ಟಿದ್ದೆ. ಅದಕ್ಕಾಗಿ ಅವರು ಅದನ್ನು ತಮಗೇ ಕೊಟ್ಟರು ಎಂದು ಸಿದ್ದರಾಮಯ್ಯ ಹೇಳಿದ್ದರು.

ವಿವಾದವು ತೀವ್ರಗೊಂಡ ಬಳಿಕ, ವಿಧಾನಸಭೆಯ ಸ್ಪೀಕರ್‌ಗೆ ವಾಚನ್ನು ಒಪ‍್ಪಿಸುವ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದರು. ಮುಖ್ಯಮಂತ್ರಿಗಳಿಗೆ ಸಿಕ್ಕ ಉಡುಗೊರೆಯ ಪ್ರದರ್ಶನದಲ್ಲಿ ಈ ವಾಚನ್ನೂ ಈಗ ಇರಿಸಲಾಗಿದೆ. ಈ ವಾಚಿನ ಬೆಲೆ ₹70 ಲಕ್ಷ ಎಂದು ಕುಮಾರಸ್ವಾಮಿ ಹೇಳಿದ್ದರು. ಹುಬ್ಲೊ ಅತ್ಯಂತ ದುಬಾರಿ ಬ್ರ್ಯಾಂಡ್‌ ಆಗಿದ್ದು, ಸುಮಾರು ₹2 ಕೋಟಿ ಬೆಲೆಯ ವಾಚು ಕೂಡ ಇದೆ.

****

ಆಧಾರ: ಪಿಟಿಐ, ರಾಯಿಟರ್ಸ್‌, ಎಎಫ್‌ಪಿ, ಮೆಬ್ಯಾಕ್‌, ಹುಬ್ಲೊ, ಮೋಂಟ್‌ಬ್ಲಾಂಕ್‌, ಬರ್‌ಬೆರಿ ಕಂಪನಿಗಳ ಅಧಿಕೃತ ಜಾಲತಾಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT