ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಮಾಧ್ಯಮ ದಮನ: ಕಾನೂನು ಕಾಗದದ ಮೇಲಷ್ಟೇ

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ: ಭಾರತದ ರ‍್ಯಾಂಕ್‌ 150
Last Updated 5 ಮೇ 2022, 19:31 IST
ಅಕ್ಷರ ಗಾತ್ರ

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯು 2022ನೇ ಸಾಲಿನ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಧ್ರುವೀಕರಣವು ಎರಡು ಪಟ್ಟು ಹೆಚ್ಚಳವಾಗಿದೆ. ಮಾಹಿತಿಯ ಭರಪೂರ ಮತ್ತು ಮಾಧ್ಯಮ ಧ್ರುವೀಕರಣಗಳು ದೇಶಗಳೊಳಗೆ ವಿಭಜನೆಗೆ ಕುಮ್ಮಕ್ಕು ನೀಡಿವೆ. ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆಯೂ ಧ್ರುವೀಕರಣ ಉಂಟಾಗಿದೆ ಎಂದು ವರದಿಯು ಹೇಳಿದೆ.

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವು ಶೋಚನೀಯವಾಗಿದೆ ಎಂಬುದು ವರದಿಯ ಅಭಿಪ್ರಾಯವಾಗಿದೆ. 180 ದೇಶಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತವು 150ನೇ ಸ್ಥಾನಕ್ಕೆ ಕುಸಿದಿದೆ. 2021ಕ್ಕೆ ಹೋಲಿಸಿದರೆ ಎಂಟು ಸ್ಥಾನ ಕೆಳಕ್ಕೆ ಇಳಿದಿದೆ. ‘ದೇಶದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗಳು ನಡೆದಿವೆ. ಮಾಧ್ಯಮವು ರಾಜಕೀಯವಾಗಿ ಪ‍ಕ್ಷಪಾತಿಯಾಗಿದೆ. ಮಾಧ್ಯಮ ಸಂಸ್ಥೆಗಳ ಮಾಲೀಕತ್ವವು ಕೇಂದ್ರೀಕೃತಗೊಂಡಿದೆ. ಈ ಎಲ್ಲವುಗಳು, ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಬಿಜೆಪಿಯ ನರೇಂದ್ರ ಮೋದಿ ಆಳ್ವಿಕೆ ಇರುವ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಮಾಧ್ಯಮ ಸ್ವಾತಂತ್ರ್ಯವನ್ನು ಬಿಕ್ಕಟ್ಟಿಗೆ ತಳ್ಳಿದೆ’ ಎಂದು ವರದಿ ವಿವರಿಸಿದೆ.

ಮಾಧ್ಯಮ ಲೋಕ

ಭಾರತದ ಮಾಧ್ಯಮ ಲೋಕದ ಸಮಗ್ರ ಚಿತ್ರಣವನ್ನು ವರದಿಯಲ್ಲಿ ನೀಡಲಾಗಿದೆ. ‘ಭಾರತದ ಮಾಧ್ಯಮ ಲೋಕವು ಭಾರತದಂತೆಯೇ ಬೃಹತ್‌ ಮತ್ತು ದಟ್ಟಣೆಯಿಂದ ಕೂಡಿದ್ದಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳಿವೆ (36 ಸಾವಿರ ವಾರಪತ್ರಿಕೆಗಳೂ ಸೇರಿ). 380 ಸುದ್ದಿವಾಹಿನಿಗಳಿವೆ. ಮಾಧ್ಯಮ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಮಾಲೀಕತ್ವದ ಕೇಂದ್ರೀಕರಣವು ಗೋಚರವಾಗುತ್ತಿಲ್ಲ’ ಎಂದು ವರದಿ ಹೇಳಿದೆ. ಮಾಧ್ಯಮ ಲೋಕವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಕೆಲವು ಸಂಸ್ಥೆಗಳನ್ನು ವರದಿಯಲ್ಲಿ ಹೆಸರಿಸಲಾಗಿದೆ. ಹಿಂದಿ ಭಾಷೆಯ ನಾಲ್ಕನೇ ಮೂರು ಭಾಗ ಓದುಗರನ್ನು ಮೂರೇ ಪತ್ರಿಕೆಗಳು ಹೊಂದಿವೆ. ಪ್ರಾದೇಶಿಕ ಮಟ್ಟದಲ್ಲಿ ಈ ಕೇಂದ್ರೀಕರಣ ಇನ್ನೂ ಗಾಢವಾಗಿದೆ. ಪಶ್ಚಿಮ ಬಂಗಾಳದಲ್ಲಿ ಆನಂದಬಜಾರ್‌ ಪತ್ರಿಕಾ, ಮಹಾರಾಷ್ಟ್ರದಲ್ಲಿ ಲೋಕಮತ, ಕೇರಳದಲ್ಲಿ ಮಲಯಾಳ ಮನೋರಮಾದಂತಹ ಪತ್ರಿಕೆಗಳ ಪಾರಮ್ಯ ಇದೆ. ಮುದ್ರಣ ಮಾಧ್ಯಮದ ರೀತಿಯಲ್ಲಿಯೇ ಸುದ್ದಿವಾಹಿನಿಗಳ ಮಾಲೀಕತ್ವವೂ ಕೇಂದ್ರೀಕರಣಗೊಂಡಿದೆ. ರೇಡಿಯೊ ಕ್ಷೇತ್ರದಲ್ಲಿ ಆಕಾಶವಾಣಿಯ ಏಕಸ್ವಾಮ್ಯ ಇದೆ ಎಂದು ವರದಿ ವಿಶ್ಲೇಷಿಸಿದೆ.

ರಾಜಕೀಯ ಸಂದರ್ಭ

‘ವಸಾಹತುಶಾಹಿ ವಿರೋಧಿ ಚಳವಳಿಯ ಉತ್ಪನ್ನವಾದ ಭಾರತದ ಮಾಧ್ಯಮವು ಪ್ರಗತಿಪರವಾಗಿಯೇ ಇತ್ತು. ಆದರೆ, 2010ನೇ ದಶಕದ ಮಧ್ಯಭಾಗದ ಬಳಿಕ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಆಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ, ತಮ್ಮ ಪಕ್ಷ ಬಿಜೆಪಿ ಮತ್ತು ಪ್ರಭಾವಿ ಮಾಧ್ಯಮ ಸಂಸ್ಥೆಗಳ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸಿದರು. ಮೋದಿ ಅವರು ಪತ್ರಕರ್ತರನ್ನು ವಿಮರ್ಶಾತ್ಮಕವಾಗಿಯೇ ನೋಡಿದ್ದಾರೆ. ತಮ್ಮ ಮತ್ತು ಬೆಂಬಲಿಗರ ನೇರ ಸಂಬಂಧವನ್ನು ಈ ಪತ್ರಕರ್ತರು ಹಾಳುಗೆಡವುತ್ತಿದ್ದಾರೆ ಎಂಬ ಭಾವನೆ ಅವರಲ್ಲಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿರುವ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದೂ ವರದಿಯಲ್ಲಿ ಆರೋಪಿಸಲಾಗಿದೆ.

ಜಾಹೀರಾತಿನ ಮೇಲೆ ಅವಲಂಬನೆ

ಭಾರತೀಯ ಮಾಧ್ಯಮವು ಬೃಹತ್ತಾಗಿ ಬೆಳೆದಿದೆ. ಆದರೆ, ದೌರ್ಬಲ್ಯಗಳನ್ನೂ ಹೊಂದಿದೆ. ಸ್ಥಳೀಯ, ಪ್ರಾದೇಶಿಕ ಸರ್ಕಾರಗಳು ನೀಡುವ ಜಾಹೀರಾತುಗಳ ಮೇಲೆ ಮಾಧ್ಯಮ ಸಂಸ್ಥೆಗಳು ಅವಲಂಬಿತವಾಗಿವೆ. ವ್ಯವಹಾರ ಹಾಗೂ ಸಂಪಾದಕೀಯ ನೀತಿಗಳ ನಡುವೆ ಇರಬೇಕಾದ ಗೆರೆ ನಾಪತ್ತೆಯಾಗಿದೆ. ತಮ್ಮ ವ್ಯಾವಹಾರಿಕ ಅಗತ್ಯಗಳಿಗಾಗಿ ಸಂಪಾದಕೀಯ ನೀತಿಯು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಮಾಧ್ಯಮ ಸಂಸ್ಥೆಗಳು ಬಯಸುತ್ತಿವೆ. ತನ್ನ ಸಂಕಥನವನ್ನು ಹೇರುವುದಕ್ಕಾಗಿ ಈ ಅವಕಾಶವನ್ನು ಕೇಂದ್ರ ಸರ್ಕಾರವು ಬಳಸಿಕೊಳ್ಳುತ್ತದೆ. ಪ್ರತೀವರ್ಷ ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಜಾಹೀರಾತಿಗಾಗಿ ₹13,000 ಕೋಟಿ ವ್ಯಯಿಸುತ್ತಿದೆ. ದೇಶದ ಕೆಲವು ಮಾಧ್ಯಮಗಳು ‘ಗೋದಿ ಮಾಧ್ಯಮ’ಗಳಾಗಿ ಇತ್ತೀಚಿನ ದಿನಗಳಲ್ಲಿ ಬದಲಾಗಿದ್ದು, (ಮೋದಿ ಕೈಗೊಂಬೆಯಾಗಿರುವ ಮಾಧ್ಯಮ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ) ಬಿಜೆಪಿ ಪರ ಕಾರ್ಯಸೂಚಿಯನ್ನು ಬೆರೆಸಿ ಸುದ್ದಿ ಪ್ರಸಾರ ಮಾಡುತ್ತಿವೆ. ಭಾರತದ ಬಹುತ್ವದ ಮಾಧ್ಯಮ ಮಾದರಿಗೆ ಇವು ಸವಾಲೊಡ್ಡಿವೆ ಎಂದು ವರದಿಯು ವಿವರಿಸಿದೆ.

ಕಾಣದ ವೈವಿಧ್ಯ

ಭಾರತೀಯ ಸಮಾಜದ ವೈವಿಧ್ಯವು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಷ್ಟೇನೂ ಪ್ರತಿಬಿಂಬಿತವಾಗುವುದಿಲ್ಲ. ಬಹುತೇಕ, ಪ್ರಭಾವಿ ಜಾತಿಯ ಹಿಂದೂ ಪುರುಷರು ಪತ್ರಿಕೋದ್ಯಮದ ಪ್ರಮುಖ ಹುದ್ದೆಗಳಲ್ಲಿ ಕಂಡುಬರುತ್ತಾರೆ. ಹೀಗಾಗಿ ಮಾಧ್ಯಮದಲ್ಲಿ ಪ್ರಸಾರವಾಗುವ ಸುದ್ದಿಗಳಲ್ಲಿ ಪಕ್ಷಪಾತ ಪ್ರತಿಬಿಂಬಿತವಾಗುತ್ತದೆ. ಉದಾಹರಣೆಗೆ, ಸುದ್ದಿವಾಹಿನಿಗಳು ಸಂಜೆಯ ಹೊತ್ತು ನಡೆಸುವ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳೆಯರ ಪ್ರಮಾಣ ಶೇ 15ಕ್ಕಿಂತ ಕಡಿಮೆಯಿದೆ. ಕೋವಿಡ್ ತೀವ್ರವಾಗಿದ್ದ ಸಮಯದಲ್ಲಿ ಕೆಲವು ಸುದ್ದಿ ನಿರೂಪಕರು ವೈರಸ್ ಹರಡಲು ಮುಸ್ಲಿಂ ಸಮುದಾಯ ಕಾರಣ ಎಂದು ಟೀಕಿಸಿದ್ದರು. ಇಂತಹ ಮಾಧ್ಯಮಗಳ ನಡುವೆಯೂ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಪತ್ರಕರ್ತೆಯರಿಂದಲೇ ಕೂಡಿರುವ ‘ಖಬರ್ ಲಹರಿಯಾ’ದಂತಹ ವಿಭಿನ್ನವಾದ ಮಾಧ್ಯಮಗಳೂ ಭಾರತದಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾನೂನು ಕಾಗದದ ಮೇಲಷ್ಟೆ

‘ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕಾಗದದ ಮೇಲಷ್ಟೇ ಇದೆ. ಆದರೆ, ಸರ್ಕಾರದ ವಿರುದ್ಧ ಬರೆಯುವ ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ, ದೇಶದ್ರೋಹ ಪ್ರಕರಣ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತಿದೆ. ಜತೆಗೆ ಅಂತಹ ಪತ್ರಕರ್ತರಿಗೆ ‘ದೇಶ ವಿರೋಧಿಗಳು’ ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ಸೂಚ್ಯಂಕ ವರದಿಯಲ್ಲಿ ಹೇಳಲಾಗಿದೆ.

‘ಕೋವಿಡ್‌–19ಕ್ಕೆ ಸಂಬಂಧಿಸಿದಂತೆ ಸರ್ಕಾರದ ಹೇಳಿಕೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ಇರುವ ವ್ಯತಿರಿಕ್ತ ಮಾಹಿತಿಗಳ ಬಗ್ಗೆ ವರದಿ ಬರೆದ ಪತ್ರಕರ್ತರ ವಿರುದ್ಧ ಸರ್ಕಾರ ಮತ್ತು ಅದರ ಬೆಂಬಲಿಗರು ಪ್ರಕರಣ ದಾಖಲಿಸುವ ಮೂಲಕ ಯುದ್ಧವನ್ನೇ ಸಾರಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ವರದಿ ಮಾಡಲು ಮುಂದಾದ ಪತ್ರಕರ್ತರನ್ನು ಬಂಧಿಸಿದ ಹಲವು ನಿದರ್ಶನಗಳಿವೆ. ಕೆಲವು ಬಾರಿ ಪೊಲೀಸರು ಪತ್ರಕರ್ತರನ್ನು ಅಮಾನವೀಯವಾಗಿ ವಶಕ್ಕೆ ಪಡೆದ ಘಟನೆಗಳೂ ನಡೆದಿವೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲಿನ ದಾಳಿ ಬಗ್ಗೆ ವರದಿ ಮಾಡಿದ್ದ ‘ದಿ ಕ್ಯಾರವಾನ್‌’ನ ಪತ್ರಕರ್ತ ಮನದೀಪ್ ಪುನಿಯಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಇದೇ ಘಟನೆ‌ ಬಗ್ಗೆ ವರದಿ ಮಾಡಿದ್ದ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ‘ಆನ್‌ಲೈನ್‌ ನ್ಯೂಸ್‌ ಇಂಡಿಯಾ’ ವರದಿಗಾರ ಧರ್ಮೇಂಧರ್ ಸಿಂಗ್‌ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ‘ದಿ ವೈರ್‌’ನ ಸಿದ್ಧಾರ್ಥ್ ವರದರಾಜನ್ ಮತ್ತು ಇಸ್ಮತ್ ಅರಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.‘ದಿ ಕ್ಯಾರವಾನ್‌’ನ ಕಾರ್ಯನಿರ್ವಾಹಕಾ ಸಂಪಾದಕ ವಿನೋದ್‌ ಕೆ. ಜೋಸ್‌, ಸಂಪಾದಕ ಅನಂತನಾಥ್, ಪತ್ರಕರ್ತೆ ಮೃಣಾಲ್‌ ಪಾಂಡೆ, ‘ನ್ಯಾಷನಲ್ ವೀಕ್ಲಿ’ ಸಂಪಾದಕ ಝಫರ್ ಅಘಾ, ಅಂಕಣಕಾರ ರಾಜದೀಪ್‌ ಸರ್ದೇಸಾಯಿ ಮತ್ತು ವ್ಯಂಗ್ಯಚಿತ್ರಕಾರ ಪರೇಶ್‌ನಾಥ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ, ಸರ್ಕಾರದ ಅವ್ಯವಸ್ಥೆ ಮತ್ತು ಅಕ್ರಮಗಳ ವಿರುದ್ಧ ಬರೆಯುವ ಪತ್ರಕರ್ತರ ಜೀವಕ್ಕೆ ಬೆದರಿಕೆ ಇದೆ. ಬಿಹಾರದ ಮಧುಬನಿ ಜಿಲ್ಲೆಯಲ್ಲಿನ ಅಕ್ರಮ ಕ್ಲಿನಿಕ್‌ಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಸರಣಿ ವರದಿ ಪ್ರಸಾರ ಮಾಡಿದ್ದ ಅವಿನಾಶ್ ಝಾ ಎಂಬ ಪತ್ರಕರ್ತನನ್ನು ಈಚೆಗೆ ಕೊಲ್ಲಲಾಗಿತ್ತು. ಕಚೇರಿಯಿಂದ ಹೊರಟಿದ್ದ ಝಾ ಅವರನ್ನು ಹಿಂಬಾಲಿಸಿ ಕೊಂದು, ದೇಹವನ್ನು ಸುಟ್ಟು ಬಿಸಾಡಲಾಗಿತ್ತು ಎಂದು ವರದಿ ಹೇಳಿದೆ.

ಕೇಂದ್ರ ಸರ್ಕಾರ, ಅದರ ನೀತಿಗಳು ಮತ್ತು ಬಲಪಂಥೀಯ ನಿಲುವುಗಳನ್ನು ವಿರೋಧಿಸಿ ಬರೆಯುವ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮತ್ತು ಬೆದರಿಕೆಯ ಸಮರ ಸಾರಲಾಗುತ್ತಿದೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರುಪತ್ರಕರ್ತೆ ರಾಣಾ ಅಯೂಬ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನೂ ದಾಖಲಿಸಲಾಗಿದೆ. ಹಾಥರಸ್ ಅತ್ಯಾಚಾರ ಪ್ರಕರಣದ ವರದಿಗೆಂದು ಉತ್ತರ ಪ್ರದೇಶಕ್ಕೆ ತೆರಳಿದ್ದ ಪತ್ರಕರ್ತ ಸಿದ್ದಿಕಿ ಕಪ್ಪನ್ ವಿರುದ್ಧ ಭಯೋತ್ಪಾದನೆ, ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಅವಹೇಳನ ಮುಂದುವರಿದಿದೆ.ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಎಲ್ಲಾ ಪತ್ರಕರ್ತರನ್ನು ದೇಶದ್ರೋಹ ಮತ್ತಿತರ ಪ್ರಕರಣಗಳಿಗೆ ಗುರಿ ಮಾಡುವುದು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಾರಿತ್ರ್ಯ ವಧೆ ಮಾಡುವುದು ಇನ್ನೊಂದೆಡೆ ನಡೆಯುತ್ತಲೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಧಾರ: ರಿಪೋರ್ಟರ್ಸ್ ವಿದೌಟ್‌ ಬಾರ್ಡರ್ಸ್‌ನ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT