ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಆಳ–ಅಗಲ: ಮೂರು ತಿಂಗಳಲ್ಲಿ 4 ಲಕ್ಷ ಉದ್ಯೋಗ ನಷ್ಟ

Last Updated 29 ಮಾರ್ಚ್ 2023, 19:36 IST
ಅಕ್ಷರ ಗಾತ್ರ

ಉದ್ಯೋಗ ಕಡಿತ 2023ರಲ್ಲೂ ಮುಂದುವರಿದಿದೆ. ವರ್ಷದ ಮೊದಲ ಮೂರು ತಿಂಗಳು ಪೂರ್ಣಗೊಳ್ಳುವ ಮೊದಲೇ, ವಿಶ್ವದಾದ್ಯಂತ 4.14 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ ಐ.ಟಿ ವಲಯದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.55 ಲಕ್ಷಕ್ಕೂ ಹೆಚ್ಚು. ಇನ್ನೂ ಹಲವು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ‘2023ರ ಉಳಿದ ತಿಂಗಳುಗಳು ಮತ್ತು 2024ರಲ್ಲೂ ಉದ್ಯೋಗ ಕಡಿತ ದೊಡ್ಡಮಟ್ಟದಲ್ಲಿಯೇ ಇರಲಿದೆ’ ಎಂದು ಫೋಬ್ಸ್‌ ಅಂದಾಜಿಸಿದೆ.

ಟೆಕ್‌ ಮತ್ತು ಸ್ಟಾರ್ಟ್‌ಅಪ್‌ ವಲಯದಲ್ಲಿ ಆಗುವ ನೇಮಕಾತಿ ಮತ್ತು ಉದ್ಯೋಗ ಕಡಿತದ ದತ್ತಾಂಶಗಳನ್ನು ಅಮೆರಿಕದ ಟೆಕ್‌ ಕಂಪನಿ ಲೇಆಫ್‌.ಎಫ್‌ಐಇ ನಿರ್ವಹಿಸುತ್ತದೆ. ಲೇಆಫ್‌.ಎಫ್‌ಐಇ ದತ್ತಾಂಶಗಳ ಪ್ರಕಾರ 2023ರ ಜನವರಿ 1ರಿಂದ ಮಾರ್ಚ್‌ 26ರವರೆಗೆ ವಿಶ್ವದಾದ್ಯಂತ 553 ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡಿವೆ.

ಈ 553 ಕಂಪನಿಗಳು ಒಟ್ಟು 1,55,462 ಉದ್ಯೋಗಗಳನ್ನು ಕಡಿತ ಮಾಡಿವೆ. ಇದರಲ್ಲಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಅಥವಾ ಕೇಂದ್ರ ಕಚೇರಿ ಹೊಂದಿರುವ ಕಂಪನಿಗಳ ಸಂಖ್ಯೆಯೇ ಹೆಚ್ಚು. ಮತ್ತು ಹೀಗೆ ಈ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಅಮೆರಿಕನ್ನರ ಸಂಖ್ಯೆಯೇ 70 ಸಾವಿರ ದಾಟುತ್ತದೆ. ಜಾಗತಿಕ ಐಟಿ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಭಾರತೀಯರ ಸಂಖ್ಯೆಯೂ ದೊಡ್ಡದಿದೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ಭಾರತದಲ್ಲಿ ಈ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ದತ್ತಾಂಶಗಳು ಹೇಳುತ್ತವೆ.

ವಿಶ್ವದ ಬಹುತೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತವಿದೆ. ಪರಿಣಾಮವಾಗಿ ಆರ್ಥಿಕತೆಯ ಎಲ್ಲಾ ವಲಯಗಳಲ್ಲೂ ಉದ್ಯೋಗ ಕಡಿತವಾಗುತ್ತಿದೆ. ಆದರೆ ಉದ್ಯೋಗ ಕಡಿತದಲ್ಲಿ ಟೆಕ್‌ ಕಂಪನಿಗಳ ಪಾಲು ದೊಡ್ಡದಿದೆ. ಅಮೆಜಾನ್‌, ಟ್ವಿಟರ್‌, ಗೂಗಲ್ ಮತ್ತು ಮೆಟಾದಂತಹ ಟೆಕ್‌ ದೈತ್ಯ ಕಂಪನಿಗಳು ಹತ್ತಾರು ಸಾವಿರ ಸಂಖ್ಯೆಯಲ್ಲಿ ಉದ್ಯೋಗವನ್ನು ಕಡಿತ ಮಾಡಿವೆ. ಹೀಗಾಗಿ ಇಂತಹ ದೊಡ್ಡ ಮಟ್ಟದ ಉದ್ಯೋಗ ಕಡಿತಗಳು ಹೆಚ್ಚು ಸದ್ದು ಮಾಡುತ್ತವೆ. ಆದರೆ, ಸಣ್ಣ ಸಣ್ಣ ಸಂಖ್ಯೆಯಲ್ಲಿ ಆಗುವ ಉದ್ಯೋಗ ಕಡಿತವು ಗಮನಕ್ಕೆ ಬರುವುದೇ ಇಲ್ಲ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ವಿಶ್ವದಾದ್ಯಂತ ಒಟ್ಟು 1,948 ಕಂಪನಿಗಳು ಉದ್ಯೋಗವನ್ನು ಕಡಿತ ಮಾಡಿವೆ. ಈ ಕಂಪನಿಗಳು ಕಡಿತ ಮಾಡಿದ ಉದ್ಯೋಗಗಳ ಸಂಖ್ಯೆ 4.14 ಲಕ್ಷ ಎಂಬುದು ಲೇಆಫ್‌.ಎಫ್‌ಐಇ
ಕೊಡುವ ಲೆಕ್ಕಾಚಾರ.

ಉದ್ಯೋಗ ಕಡಿತ ಇನ್ನೂ ಮುಂದುವರಿಯಲಿದೆ ಎಂಬುದನ್ನು ಈಗಾಗಲೇ ಕೆಲವು ಕಂಪನಿಗಳ ಪ್ರಕಟಣೆಗಳು ಸೂಚಿಸಿವೆ. ಟೆಕ್‌ ದೈತ್ಯ ಆ್ಯಕ್ಸೆಂಚರ್ ಮುಂದಿನ ಆರು ತಿಂಗಳಲ್ಲಿ ಒಟ್ಟು 19,000 ಉದ್ಯೋಗಗಳನ್ನು ಕಡಿತ ಮಾಡುವುದಾಗಿ ಈಚೆಗೆ ಹೇಳಿದೆ. ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇ 40ರಷ್ಟು ಉದ್ಯೋಗಿಗಳು ಭಾರತೀಯರೇ ಆಗಿದ್ದಾರೆ. ಕಂಪನಿಯ ಉದ್ಯೋಗ ಕಡಿತ ಕಾರ್ಯಯೋಜನೆಯ ಪ್ರಕಾರ 7,000 ಭಾರತೀಯರನ್ನು ಮುಂದಿನ ತಿಂಗಳುಗಳಲ್ಲಿ ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ.

ಭಾರತ: ಸ್ಟಾರ್ಟ್‌ಅಪ್‌ಗಳಲ್ಲೇ ಹೆಚ್ಚು ನಷ್ಟ

ಐಟಿ ದೈತ್ಯ ಕಂಪನಿಗಳ ಉದ್ಯೋಗ ಕಡಿತ ಕ್ರಮದಿಂದ ಕೆಲಸ ಕಳೆದುಕೊಂಡ ಭಾರತೀಯರ ಸಂಖ್ಯೆ ದೊಡ್ಡದು ಇದ್ದರೂ, ಅದಕ್ಕಿಂತ ಹೆಚ್ಚು ಭಾರತೀಯರು ಸ್ಟಾರ್ಟ್‌ ಅಪ್‌ ವಲಯದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. 2023ರ ಜನವರಿ 1ರಿಂದ ಮಾರ್ಚ್ 24ರವರೆಗೆ ಭಾರತದ ಒಟ್ಟು 37 ಸ್ಟಾರ್ಟ್‌ಅಪ್‌ಗಳು ಉದ್ಯೋಗ ಕಡಿತವನ್ನು ಘೋಷಿಸಿವೆ. ಇವಿಷ್ಟೇ ಕಂಪನಿಗಳು ಒಟ್ಟು 5,808 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇವುಗಳಲ್ಲಿ ಕೆಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನಷ್ಟೇ ಕಡಿಮೆ ಮಾಡಿದ್ದರೆ, ಕೆಲವು ಕಂಪನಿಗಳು ಮುಚ್ಚಿಹೋಗಿವೆ.

2022ರ ಜುಲೈನಿಂದ ಈವರೆಗೆ ಭಾರತದ ಒಟ್ಟು 89 ಸ್ಟಾರ್ಟ್‌ಅಪ್‌ಗಳು ಮತ್ತು ಯೂನಿಕಾರ್ನ್‌ಗಳು ಉದ್ಯೋಗ ಕಡಿತ ಕ್ರಮಗಳನ್ನು ಘೋಷಿಸಿವೆ. ಈ ಕ್ರಮದಿಂದ 23,195 ಜನರು ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗ ಕಡಿತ ಮಾಡಿದ ಕಂಪನಿಗಳಲ್ಲಿ ಓಲಾ, ಬೈಜೂಸ್‌, ಸ್ವಿಗ್ಗಿ, ಗೋ ಮೆಕ್ಯಾನಿಕ್‌, ಎಂಫಿನ್‌, ಕಾರ್ಸ್‌24ನಂತಹ ಬೇರೆ ಬೇರೆ ವಲಯಗಳಿಗೆ ಸೇರಿದ ಕಂಪನಿಗಳೂ ಇವೆ. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಪತನದ ಕಾರಣದಿಂದ ಭಾರತದ ಮತ್ತು ಭಾರತೀಯರ ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆ ಸ್ಥಗಿತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ಟ್‌ಅಪ್‌ಗಳು ಉದ್ಯೋಗ ಕಡಿತ ಮಾಡುವ ಅಥವಾ ಸಂಪೂರ್ಣವಾಗಿ ಸ್ಥಗಿತವಾಗುವ ಅಪಾಯವನ್ನು ಎದುರಿಸುತ್ತಿವೆ.

ಕಾರಣಗಳು

ಉದ್ಯೋಗ ಕಡಿತ ಘೋಷಿಸಿದ ಕೆಲವು ದೈತ್ಯ ಕಂಪನಿಗಳು, ಆ ಕ್ರಮ ತೆಗೆದುಕೊಳ್ಳಲು ಕಾರಣಗಳನ್ನೂ ನೀಡಿವೆ. ಬಹುತೇಕ ಕಂಪನಿಗಳು ವಹಿವಾಟು ಇಳಿಕೆಯಾಗುತ್ತಿರುವುದು ಅಥವಾ ಬೆಳವಣಿಗೆಯಾಗದೇ ಇರುವುದೇ ಪ್ರಮುಖ ಕಾರಣ ಎಂದು ಹೇಳಿವೆ. ಜತೆಗೆ ವೆಚ್ಚ ಕಡಿತದ ಕ್ರಮವಾಗಿ ಉದ್ಯೋಗವನ್ನು ಕಡಿತ ಮಾಡುತ್ತಿದ್ದೇವೆ ಎಂದು ಹೇಳಿವೆ. ಟೆಕ್‌ ಕಂಪನಿಗಳಲ್ಲಿ ದೊಡ್ಡ ಸಂಬಳದ ಅತ್ಯುನ್ನತ ಹುದ್ದೆಗಳಲ್ಲೇ ಉದ್ಯೋಗ ಕಡಿತದ ಪ್ರಮಾಣ ಹೆಚ್ಚು.

ಟೆಕ್‌ ವಲಯದಲ್ಲಿ ಆರಂಭವಾದ ಉದ್ಯೋಗ ಕಡಿತವು ಈಗ ಆರೋಗ್ಯ ಸೇವೆ, ಬ್ಯಾಂಕಿಂಗ್‌, ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಿದೆ. ಬಹುತೇಕ ಉದ್ಯೋಗಗಳು ಸೇವಾ ವಲಯದಲ್ಲೇ ಕಡಿತವಾಗಿವೆ. ಮನೋರಂಜನಾ ಕ್ಷೇತ್ರದಲ್ಲೂ ಉದ್ಯೋಗ ಕಡಿತ ಆರಂಭವಾಗಿದೆ. ಡಿಸ್ನಿ 7,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಮುಂದಿನ ದಿನಗಳಲ್ಲಿ ಇದು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಲಿದ ಎಂದು ಫೋಬ್ಸ್‌ ಅಂದಾಜಿಸಿದೆ.

l ವಿಮಾನ ತಯಾರಕ ಸಂಸ್ಥೆಯ ಬೋಯಿಂಗ್ ತನ್ನ 2,000 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡಲು ಸಜ್ಜಾಗಿದೆ

l ಕಾರು ತಯಾರಕ ಸಂಸ್ಥೆ ಫೋರ್ಡ್ ಮೋಟರ್ಸ್‌, ಯುರೋಪ್‌ನಲ್ಲಿರುವ ತನ್ನ 3,800 ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ

l ಪ್ರಮುಖ ಐಟಿ ಕಂಪನಿ ಐಬಿಎಂ, ಜಗತ್ತಿನಾದ್ಯಂತ ಕೆಲಸ ಮಾಡುತ್ತಿರುವ ತನ್ನ ಶೇ 1.5ರಷ್ಟು (3,900) ನೌಕರರನ್ನು ಸದ್ಯದಲ್ಲೇ ಕಳೆದುಕೊಳ್ಳಲಿದೆ

l ಇದೇ ವರ್ಷ 3 ಸಾವಿರ ಸಿಬ್ಬಂದಿ ಸೇರಿದಂತೆ 2025ರೊಳಗೆ 6 ಸಾವಿರ ಸಿಬ್ಬಂದಿಯನ್ನು ಕಡಿತ ಮಾಡಲು ಫಿಲಿಪ್ಸ್ ಮುಂದಾಗಿದೆ

l ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಕ್ಷೇತ್ರದ ಗೋಲ್ಡ್‌ಮನ್ ಸ್ಯಾಚ್ 3,200 ನೌಕರರನ್ನು ತೆಗೆದುಹಾಕಲು ನಿರ್ಧರಿಸಿದೆ

l ಸರಕು ಸಾರಿಗೆ ಕ್ಷೇತ್ರದ ಫೆಡೆಕ್ಸ್ ಈ ವರ್ಷದ ಆರಂಭದಲ್ಲಿ ಶೇ 10ರಷ್ಟು ನೌಕರರ ಉದ್ಯೋಗವನ್ನು ಬಲಿಕೊಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 12 ಸಾವಿರ ಜನರು ಸಂಸ್ಥೆಯ ಉದ್ಯೋಗ ಕಳೆದುಕೊಂಡಿದ್ದಾರೆ

l ಕೈಗಾರಿಕಾ ಉತ್ಪನ್ನಗಳ ತಯಾರಿಕಾ ಸಂಸ್ಥೆ 3ಎಂ, ಜಾಗತಿಕವಾಗಿ 2,500 ಸಿಬ್ಬಂದಿಯ ಉದ್ಯೋಗವನ್ನು ಕಡಿತ ಮಾಡಿದೆ

l 2023ರ ಎರಡನೇ ತ್ರೈಮಾಸಿಕದ ವೇಳೆಗೆ ಶೇ 18ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಲುಸಿಡ್ ಮಾ.28ರಂದು ತೀರ್ಮಾನ

l ಮೈಕ್ರೊಸಾಫ್ಟ್ ಒಡೆತನದ ಗಿಟ್‌ಹಬ್, ಭಾರತದಲ್ಲಿರುವ ತನ್ನ ಎಲ್ಲ 142 ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ನಿರ್ಧಾರವನ್ನು ಮಾ.28ರಂದು ಪ್ರಕಟಿಸಿದೆ. ಈ ಬಗ್ಗೆ ಫೆಬ್ರುವರಿಯಲ್ಲೇ ಕಂಪನಿ ಸುಳಿವು ನೀಡಿತ್ತು

l ಉದ್ಯಮಿ ಇಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್‌ ಅನ್ನು 2022ರ ಅಕ್ಟೋಬರ್‌ನಲ್ಲಿ ಖರೀದಿಸುವ ವೇಳೆ ಸಂಸ್ಥೆಯಲ್ಲಿ ಸುಮಾರು 7,500 ಜನ ಕೆಲಸ ಮಾಡುತ್ತಿದ್ದರು. ನೌಕರರ ಸಂಖ್ಯೆ ಈಗ 2000ಕ್ಕೆ ಇಳಿದಿದೆ. ಇತ್ತೀಚೆಗೆ ಅಂದರೆ ಇದೇ ಫೆಬ್ರುವರಿಯಲ್ಲಿ ಶೇ 10ರಷ್ಟು ಜನರಿಗೆ ಮತ್ತೆ ಮನೆ ದಾರಿ ತೋರಿಸಲಾಗಿತ್ತು

l ಯಾಹೂ ಸಂಸ್ಥೆಯು ಈ ವರ್ಷಾಂತ್ಯಕ್ಕೆ 1,600 ಉದ್ಯೋಗಿಗಳನ್ನು ತೆಗೆದುಹಾಕಲಿದೆ. ಜಾಹೀರಾತು ತಂತ್ರಜ್ಞಾನ ತಂಡಕ್ಕೆ ಹೊಸ ರೂಪ ನೀಡುವ ಮಾತನ್ನಾಡಿದೆ

l ಕ್ಲೌಡ್ ಆಧಾರಿತ ವಿಡಿಯೊ ಕಾನ್ಫರೆನ್ಸ್ ಸೇವೆ ಒದಗಿಸುತ್ತಿರುವ ಝೂಮ್, ಶೇ 15ರಷ್ಟು ಸಿಬ್ಬಂದಿ ಕಡಿತಕ್ಕೆ ನಿರ್ಧರಿಸಿದೆ

l ಕಂಪ್ಯೂಟರ್ ಮಾರಾಟ ಕುಸಿದಿರುವ ಕಾರಣ ನೀಡಿ, ತನ್ನ ಶೇ 2.5ರಷ್ಟು ಸಿಬ್ಬಂದಿಯನ್ನು (6,650) ಕಡಿತಗೊಳಿಸಲು ಡೆಲ್ ಕಂಪನಿ ಮುಂದಾಗಿದೆ

l ಡಿಜಿಟಲ್ ವಾಲೆಟ್ ಸೇವೆ ನೀಡುತ್ತಿರುವ ಪೇಪಾಲ್ ಕಂಪನಿಯ ಸಿಬ್ಬಂದಿ ಕಡಿತ ನಿರ್ಧಾರವು ಸುಮಾರು ಎರಡು ಸಾವಿರ ನೌಕರರ ಮೇಲೆ ಪರಿಣಾಮ ಬೀರಿದೆ

l ಕಳೆದ ವರ್ಷ ಅದಾಯದಲ್ಲಿ ಶೇ 11ರಷ್ಟು ಹೆಚ್ಚಳ ಕಂಡುಬಂದಿದ್ದರೂ, ಜರ್ಮನಿ ಮೂಲದ ಸಾಫ್ಟ್‌ವೇರ್ ಕಂಪನಿ ಸ್ಯಾಪ್ 2,800 ಉದ್ಯೋಗ ಕಡಿತ ಮಾಡಲು ಜನವರಿಯಲ್ಲಿ ತೀರ್ಮಾನಿಸಿತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT