ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠಕ್ಕೂ ವಿರೋಧ

Last Updated 19 ಮೇ 2022, 19:45 IST
ಅಕ್ಷರ ಗಾತ್ರ

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಮರುಪರಿಷ್ಕರಣೆ ಸಮಿತಿಯು ಸಿದ್ಧಪಡಿಸಿದ 10ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಡಾ. ಆರ್‌. ಗಣೇಶ್‌ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಎಂಬ ಲೇಖನವನ್ನು ಸೇರಿಸಲಾಗಿದೆ. ಧರ್ಮ,ಯಜ್ಞ, ದಾನ, ತಪಸ್ಸು ಮುಂತಾದ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪ‍ರಿಕಲ್ಪನೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಜಾತ್ಯತೀತ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಪಾಠವನ್ನು ಬೋಧಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬಂದಿದೆ. ಜತೆಗೆ, ಹತ್ತನೇ ತರಗತಿಯ ವಿದ್ಯಾರ್ಥಿಗಳು ಅರಗಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಸಂಕೀರ್ಣವಾದ ಭಾಷೆಯನ್ನು ಬಳಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಪಾಠದ ಆಯ್ದ ಭಾಗ ಮತ್ತು ಅದಕ್ಕೆ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ

ಋತ, ಸತ್ಯ, ಋಣ, ಧರ್ಮ

ಜಗತ್ತಿನ ಅಸ್ತಿತ್ವ ಎಲ್ಲರಿಗೂ ತೋರುತ್ತದೆ. ಈ ಅಸ್ತಿತ್ವದ ಹಿಂದಿನ ವ್ಯವಸ್ಥೆ ಕೆಲವರಿಗೆ ಮಾತ್ರ ಕಾಣುತ್ತದೆ. ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ ಭಾವಜಗತ್ತಿನ ಅಸ್ತಿತ್ವದ ಹಿಂದಿರುವ ಭಾವವ್ಯವಸ್ಥೆ ಕಲಾವಿದರಿಗೆ ಅರಿವಾಗುತ್ತದೆ. ಇವೆರಡೂ ಜಗತ್ತುಗಳ ಹಿಂದಿರುವ ತತ್ವ ಜ್ಞಾನಿಗಳಿಗೆ ತಿಳಿಯುತ್ತದೆ. ಹೀಗೆ ‘ಸತ್ಯ’ ಎನಿಸಿದ ಅಸ್ತಿತ್ವದ ಹಿಂದಿರುವ ‘ಋತ’ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ವೇದ್ಯ. ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ. ನಲ್ಲಿ ತಿರುಗಿಸಿದೊಡನೆನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ-ತಂತ್ರಜ್ಞಾನಗಳ ಮಾನವವ್ಯವಸ್ಥೆಯಷ್ಟೇ ಅಲ್ಲದೆ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು, ಮುಗಿಲುಗಳು, ಮಳೆ-ಗಾಳಿಗಳು, ರವಿಕಿರಣಗಳು, ಗಿಡ-ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ; ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ. ಈ ಅರಿವು ಯಾರನ್ನೇ ಆದರೂ ಇಡಿಯ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡದೆ ಇರದು. ಇಲ್ಲವಾದಲ್ಲಿ ಆ ಅರಿವೇ ಹುಸಿಯೆನ್ನಬೇಕು. ಕೃತಜ್ಞತೆಯ ಈ ಭಾವವೇ ‘ಋಣ’ಪ್ರಜ್ಞೆ. ಒಮ್ಮೆ ನಾವು ನಮ್ಮ ಸುತ್ತಲಿನ ಜಗದ್ವ್ಯವಸ್ಥೆಗೆಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾಗುವುದಿಲ್ಲ. ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವೇ! ಇಂಥ ಪ್ರಯತ್ನವನ್ನೇ ‘ಧರ್ಮ’ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ.

ಯಜ್ಞ, ದಾನ, ತಪಸ್ಸು

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ‘ಯಜ್ಞ’. ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪಸುರಿಯುವ, ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರ ಆಕ್ಷೇಪ. ಅಗ್ನಿಮುಖದಲ್ಲಿ ಆಹುತಿ ನೀಡುವುದು ಒಂದು ಸಂಕೇತ ಮಾತ್ರ. ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವಂತೆಯೇ ಸರಿ. Struggle for existence ಎಂದು ಚಾರ್ಲ್ಸ್ ಡಾರ್ವಿನ್ ಹೇಳಿರುವಂತೆ ಹೊತ್ತುಹೊತ್ತಿನ ತುತ್ತಿಗಾಗಿ, ಅನ್ನ-ಚಿನ್ನಗಳಿಗಾಗಿ, ಹೆಣ್ಣು-ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವ ಸಹಜವಾಗಿ ಲೋಭಿ. ಪ್ರಕೃತಿ ಅವನಿಗೆ ಹೇಳಿಕೊಟ್ಟಿದ್ದೇ ಇಂಥ ಜಿಪುಣತನವನ್ನು. ಇದನ್ನು ಕೆಲಮಟ್ಟಿಗಾದರೂ ಮೀರದೆ ಇದ್ದಲ್ಲಿ ಬಾಳು ಹಸನಾಗದು, ಅರ್ಥಪೂರ್ಣವಂತೂ ಆಗಲೇ ಆರದು. ನಿಸರ್ಗಲೋಭಿಯಾದ ಅವನಿಗೆ ಔದಾರ್ಯದ ಹಾದಿಯನ್ನೂ ಅದು ಕೊಡುವ ನೆಮ್ಮದಿಯನ್ನೂ ತಿಳಿಸಿಕೊಡುವ ತಾಯಿ ಸಂಸ್ಕೃತಿ.‘ಯಜ್ಞ’ ಸಂಸ್ಕೃತಿಯ ಒಂದು ಅನುಷ್ಠಾನ. ಅಗ್ನಿಯಲ್ಲಿ ಯಾವುದಾದರೂ ಆಹಾರ ಪದಾರ್ಥವನ್ನು ಹಾಕಿದರೆ ಅದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದ ತಥ್ಯ. ವಸ್ತುಸ್ಥಿತಿ ಹೀಗಿದ್ದರೂ ಅದನ್ನೇಮಾಡುವುದೆಂದರೆ - ತನಗೆ ಮರಳಿ ಬರುವುದೆಂಬ ಯಾವುದೇ ನಿಶ್ಚಯ ಇಲ್ಲದಿದ್ದರೂ ಕೊಡಬೇಕೆಂಬ ಜೀವನಪಾಠದ ಕಲಿಕೆ ತಾನೆ!

“ಮನುಷ್ಯಾಃ ಅನ್ನಗತಪ್ರಾಣಾಃ” ಎಂದು ವೇದ ಹೇಳಿದೆ. ಚಿನ್ನವಿಲ್ಲದೆ ಬದುಕಬಹುದು; ಆದರೆ ಅನ್ನವಿಲ್ಲದೆ ಬದುಕಲಾದೀತೇ! ಹೀಗೆ ನಮಗೆ ಅವಶ್ಯವಾಗಿ ಬೇಕಾದ ಆಹಾರವನ್ನು ನಾವು ಸಾಂಕೇತಿಕವಾಗಿಯಾದರೂ ಅಗ್ನಿಗೆ ಅರ್ಪಿಸುವುದೆಂದರೆ ಅದು ಪ್ರತಿಫಲದ ಅಪೇಕ್ಷೆಯಿಲ್ಲದೆ ತ್ಯಾಗ ಮಾಡುವುದರ ಲಕ್ಷಣ. ಹೀಗೆತ್ಯಾಗವನ್ನೊಂದು ಹಿರಿಯ ಮೌಲ್ಯವಾಗಿ ಸಾಕ್ಷಾತ್ಕರಿಸಿಕೊಂಡ ಬಳಿಕ ಜಗತ್ತಿನ ಸಹಮಾನವರೊಡನೆ ಬಾಳುವುದು ಸುಖವಾಗುತ್ತದೆ. ಈ ಕಾರಣದಿಂದಲೇ ಯಜ್ಞಕ್ಕೆ ‘ದೇವತಾರಾಧನೆ’ ಎಂಬ ಅರ್ಥವಷ್ಟೇ ಅಲ್ಲದೆ ‘ಒಟ್ಟು ಸೇರುವಿಕೆ’, ‘ಹಂಚಿಕೊಂಡು ಬಾಳುವಿಕೆ’, ‘ತ್ಯಾಗ ಮಾಡುವಿಕೆ’ ಎಂಬೆಲ್ಲ ಅರ್ಥಸ್ವಾರಸ್ಯಗಳಿವೆ. ಮನಃಪೂರ್ವಕವಾಗಿ ಒಮ್ಮೆ ಕೊಟ್ಟ ಬಳಿಕ ಕಳವಳಿಸಬಾರದು. ‘ಕೊಟ್ಟು ಕೆಟ್ಟೆ’ ಎನ್ನುವುದು ಸರಿಯಲ್ಲವೆಂದೇ ಅಚ್ಚಗನ್ನಡದ ಗಾದೆಮಾತು. ತ್ಯಾಗವನ್ನು ಮಾಡಿಯೂ ಪಶ್ಚಾತ್ತಾಪ ಪಡದಿರುವುದು ನಿಜಕ್ಕೂ ಮನಸ್ಸಿನ ಒಂದುಉನ್ನತಿ.

ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ತ್ಯಾಗವು ‘ದಾನ’ವಾದರೆ ಹಾಗೆ ಮಾಡಲು ಬೇಕಾದ ಮನಸ್ಸಿನ ಪರಿಪಾಕ ‘ತಪಸ್ಸು’. ಹೀಗೆ ಯಜ್ಞ ಎಂಬ ನಾಣ್ಯಕ್ಕೆ ದಾನ ಮತ್ತು ತಪಸ್ಸುಗಳೆಂಬ ಎರಡು ಮುಖಗಳಿವೆ. ಜೀವನದಲ್ಲಿ ಎಲ್ಲಕಾಲಕ್ಕೂ ಸಲ್ಲುವ ನಾಣ್ಯ ಯಜ್ಞವೇ ಹೊರತು ಬೇರೆ ಬೇರೆ ದೇಶ-ಕಾಲಗಳಲ್ಲಿ, ಬೇರೆ ಬೇರೆ ಪ್ರಭುತ್ವಗಳಲ್ಲಿ ಚಲಾವಣೆಗೆ ಬರುವ ಹಣವಲ್ಲ. ಹೀಗೆ ಧರ್ಮಾಚರಣೆಗೆ ಯಜ್ಞ ಒಂದು ಪ್ರಮುಖ ಸಾಧನ.

ಪುರುಷಾರ್ಥಗಳು

ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ‘ಪುರುಷಾರ್ಥ’. ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ ಎಂದಾಯಿತು. ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ. ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ಕಾಣುತ್ತವೆ. ಹೀಗೆ ಸತ್+ಚಿತ್+ಆನಂದ ಎಂಬ ಇರವು, ಅರಿವು, ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ. ಹೀಗಾಗಿಯೇ ಇಲ್ಲಿ ಕಾಣುವ ‘ಪುರುಷ’ ಎಂಬ ಪದಕ್ಕೆ ಗಂಡುಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ. ಇದೇನಿದ್ದರೂ ಲಿಂಗಾತೀತವಾದ ಆತ್ಮವನ್ನು ಕುರಿತದ್ದು. ಇಂಥ ಆತ್ಮವೇ ಪರಬ್ರಹ್ಮವಸ್ತು.

ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪೈಕಿ ಬಯಕೆಯೇ ಮೂಲವಾದ ಕಾಮವು ಜೀವಕೇಂದ್ರಿತವಾಗಿದ್ದರೆ ಇಂಥ ಬಯಕೆಯನ್ನು ಆಯಾ ಹೊತ್ತಿಗೆ ಈಡೇರಿಸಬಲ್ಲ ಸಾಧನಗಳನ್ನು ಪ್ರತಿನಿಧಿಸುವ ಅರ್ಥವು ಜಗತ್ಕೇಂದ್ರಿತವಾಗಿದೆ. ಬಯಕೆ-ಈಡೇರಿಕೆಗಳ ಮೊತ್ತವೆನಿಸಿದ ಜೀವ-ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ, ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ. ಧರ್ಮದ ಕೇಂದ್ರ
ಈಶ್ವರನಲ್ಲಿದೆ. ಜನಸಾಮಾನ್ಯರು ‘ದೇವರು’ ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ‘ಈಶ್ವರ’ ಎಂದು ಹೆಸರಿಸಿವೆ. ದಿಟವೇ, ಈಶ್ವರನಲ್ಲಿ ವಿಶ್ವಾಸವಿರಿಸದ ಜನರೂ ಈ ಜಗತ್ತಿನಲ್ಲಿ ಇದ್ದಾರೆ. ಅಂಥವರ ಪಾಲಿಗೆ ಧರ್ಮ ಎನ್ನುವುದು ಕೇವಲ ಜಗತ್ತು-ಜೀವಗಳ ನಡುವೆ ಇರಬೇಕಾದ ಪ್ರಾಮಾಣಿಕ ವ್ಯವಹಾರವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ-ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಇಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವಂತಿಲ್ಲ. ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮ. ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ. ‘ವ್ಯವಹಾರ’ವು ಮಾನವರ ನಡುವಣ ಶಿಸ್ತಿಗೆ ಸಂಬಂಧಿಸಿದರೆ ‘ಆಚಾರ’ವು ಮಾನವರ ಒಳಗಣ ಶಿಸ್ತಿಗೆ ಸಂಬಂಧಿಸಿದೆ.

ಸ್ವಧರ್ಮ ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯಾವಶ್ಯಕ. ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ. ಹಿಂದೆ ಸಮಾಜ ತುಂಬ ಸರಳವಾಗಿದ್ದಾಗ, ವಿಜ್ಞಾನತಂತ್ರಜ್ಞಾನಗಳ ಮೂಲಕ ದೇಶ-ಕಾಲಗಳ ಮಾರ್ಪಾಡು ಹೆಚ್ಚಿಲ್ಲದಿದ್ದಾಗ, ಸಂಪನ್ಮೂಲಗಳ ಸಮೃದ್ಧಿ ವೈವಿಧ್ಯಗಳು ಕಡಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು. ಇಂಥ ವ್ಯವಸ್ಥೆ ಪರಿಪೂರ್ಣವೇನೂ ಅಲ್ಲ. ಅದು ಆ ಕಾಲಕ್ಕೆ ಸಾಕೆಂದು ತೋರಿರಬಹುದು.ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಇಂದು ಹುಟ್ಟು ಮತ್ತು ಪರಿಸರಗಳ ಮೂಲಕವೇ ಸ್ವಧರ್ಮವನ್ನು ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವೂ ಇಲ್ಲ, ಅದು ಸಾಧುವೂ ಅಲ್ಲ. ಆದುದರಿಂದ ತನ್ನೊಳಗಿನ ಒಲವು-ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟು. ದಿಟವೇ, ಇಲ್ಲಿ ಕೂಡ ಹುಟ್ಟು ಮತ್ತು ಪರಿಸರಗಳು ತಮ್ಮ ಪ್ರಭಾವವನ್ನು ಕೆಲಮಟ್ಟಿಗೆ ಬೀರುತ್ತವೆ. ಆದರೆ ಎಂದೂ ಎಲ್ಲಿಯೂ ಇವುಗಳಿಗಿಂತ ಮುಖ್ಯವಾದುದು, ನಾವೆಲ್ಲ ನಚ್ಚಬಹುದಾದುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯವೇ.

* 10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಇರುವ ಪಾಠ

ಭಾರತೀಯತೆಯ ಫಲಾನುಭವಿಗಳು ಯಾರು?

ಆರ್‌. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಠ್ಯ ಭಾರತೀಯ ಎನ್ನಬಹುದಾದ ಕೆಲವು ಚಿಂತನೆಗಳು ಇವೆ ಮತ್ತು ಅವುಗಳನ್ನು ತಪ್ಪಾಗಿ ಗ್ರಹಿಸಿರುವುದರಿಂದ ಆ ಚಿಂತನೆಗಳಿಗೆ ಇರುವ ನಿಜವಾದ ಅರ್ಥ ಮರೆಮಾಚಲ್ಪಟ್ಟಿದೆ ಎಂದು ವಾದಿಸುತ್ತದೆ. ಮೊದಲಿಗೆ ಈ ಚಿಂತನೆ, ಚಿಂತನಾಕ್ರಮ ಎನ್ನುವ ಪರಿಕಲ್ಪನೆಗಳು ಪಾಶ್ಚಾತ್ಯರಿಂದ ಬಂದಿರುವಂತಹವು ಎನ್ನುವುದನ್ನು ಗಮನಿಸಬೇಕು. ‘ಭಾರತೀಯ ಚಿಂತನೆಗಳು’ ಎಂಬುದರ ಬಗ್ಗೆ ಮಾತನಾಡುವಾಗ ಈ ‘ಭಾರತೀಯ’ ಎನ್ನುವ ಚಿಂತನೆಗಳಲ್ಲಿ ಯಾವ ಯಾವ ಚಿಂತನೆಗಳು ಇವೆ? ಆ ಚಿಂತನೆಗಳು ಭಾರತದ ಎಲ್ಲ ಜನರನ್ನೂ ಒಳಗೊಂಡಿವೆಯೇ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಗಣೇಶ್ ಅವರು ಭಾರತೀಯ ಚಿಂತನೆಗಳು ಎಂದು ವಾದಿಸುವ ಪರಿಕಲ್ಪನೆಗಳು ಆಶಯದ ರೂಪದಲ್ಲಿ ಮೇಲ್ನೋಟಕ್ಕೆ ಎಲ್ಲರನ್ನೂ ಒಳಗೊಳ್ಳುವ ಹಾಗೆ ಕಂಡರೂ ವಾಸ್ತವದಲ್ಲಿ ಯಾವತ್ತೂ ಹಾಗಿರಲಿಲ್ಲ. ಈ ‘ಭಾರತೀಯ’ತೆಯ ಫಲಾನುಭವಿಗಳು ಕೇವಲ ಕೆಲವು ಶೋಷಕ ಸಮುದಾಯಗಳು ಮಾತ್ರ. ಆದರೆ ನಮ್ಮ ಸಂಸ್ಕೃತಿಯಲ್ಲಿ ಎಲ್ಲವೂ ಇವೆ, ಇಲ್ಲಿ ಎಲ್ಲರೂ ಎಲ್ಲ ಕಾಲದಲ್ಲಿಯೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಮಾನರಾಗಿದ್ದರು ಎನ್ನುವುದನ್ನು ಸಂಸ್ಕೃತಿ, ಚಿಂತನೆಗಳ ಹೆಸರಿನಲ್ಲಿ ನಂಬಿಸಿ ಬಹುಸಂಖ್ಯಾತರನ್ನು ಯಾಮಾರಿಸಿಕೊಂಡೆ ಬರಲಾಗಿದೆ. ಇದು ‘ವಸುದೈವ ಕುಟುಂಬಕಮ್’, ‘ಸರ್ವೆಜನಃ ಸುಖಿನೋ ಭವಂತು’ ಎಂದು ಹೇಳುತ್ತಾ ಇಲ್ಲಿರುವ ಎಲ್ಲವೂ ಶ್ರೇಷ್ಠ ಎನ್ನುವ ಭ್ರಮೆಯನ್ನು ಭಿತ್ತಿ ಅಸಮಾನತೆ, ಶೋಷಣೆಗಳನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವಂತೆ ಮಾಡಿರುವ ತಂತ್ರದ ಮುಂದುವರಿಕೆಯಾಗಿದೆ.

ಗಣೇಶ್ ಅವರು ಹೇಳುವ ಯಜ್ಞದ ಪರಿಕಲ್ಪನೆ ಅರ್ಥ ಮತ್ತು ಆಶಯದ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಒಳಿತಾಗಲಿ ಎಂದು ಬಯಸಿದರೂ ವಾಸ್ತವದಲ್ಲಿ ಹಾಗೇ ಯಾವತ್ತೂ ನಡೆದಿಲ್ಲ. ಇತಿಹಾಸವನ್ನು ಗಮನಿಸಿದರೆ ಯಜ್ಞಯಾಗಾದಿಗಳ ಫಲಾನುಭವಿಗಳು ಯಾರು, ಯಜ್ಞ ಯಾಗಾದಿಗಳ ನೆಪದಲ್ಲಿ ಯಾರು ಸಂಪತ್ತನ್ನು ಪಡೆಯುತ್ತಿದ್ದರು ಎನ್ನುವುದು ತಿಳಿಯುತ್ತದೆ. ಇಲ್ಲಿ ತಮ್ಮನ್ನು ಶೋಷಿಸುವವರಿಗೆ ತಾವೇ ಎಲ್ಲವನ್ನೂ ಕೊಟ್ಟು ಶೋಷಣೆಗೆ ಒಳಗಾಗಿರುವ ಭೀಕರ ಚರಿತ್ರೆ ಇದೆ. ಇದನ್ನು ಧರ್ಮ, ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಸಮಾಜದ ಒಂದು ವರ್ಗ ಅನುಭವಿಸಿಕೊಂಡು ಬಂದಿದೆ. ಈ ರೀತಿಯ ಸಂಸ್ಕೃತಿಯಲ್ಲಿ ಬಹುಸಂಖ್ಯಾತರು ಶೋಷಣೆಗೆ ಒಳಗಾಗುತ್ತಿದ್ದುದ್ದನ್ನು ವಿರೋಧಿಸಿಯೇ ಬೌದ್ಧ ಧರ್ಮ ಸ್ಥಾಪನೆಯಾಯಿತು. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಗಣೇಶ್ ಎತ್ತಿ ಹಿಡಿಯುವ ಮೌಲ್ಯಗಳು ಬರಿ ಬಾಯಿ ಮಾತಿನಲ್ಲಿ ಮಾತ್ರ ಆದರ್ಶಗಳಾಗಿವೆಯೇ ಹೊರತು ಆಚರಣೆಯಲ್ಲಿ ಅಲ್ಲ.

-ವಿ.ಎಲ್. ನರಸಿಂಹಮೂರ್ತಿ,ಅಧ್ಯಾಪಕ, ಇಂಗ್ಲಿಷ್ ವಿಭಾಗ, ನ್ಯಾಷನಲ್ ಕಾಲೇಜು, ಬಸವನಗುಡಿ

ಬಹುತ್ವ ಮರೆಮಾಚುವ ಪ್ರಯತ್ನ

‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಾಠವು ಭಾರತೀಯತೆ ಎಂದರೆ ಇದೇ ಎಂಬ ಏಕಾಕೃತಿಯನ್ನು ಮಕ್ಕಳ ಮುಂದೆ ಇರಿಸುತ್ತದೆ. ಭಾರತೀಯತೆ ಎಂದರೆ ಏನು ಎಂಬುದನ್ನು ನಾವು ವೈವಿಧ್ಯಮಯ ನಂಬಿಕೆ, ಬಹು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುತ್ತಿರುವ ಈ ಹೊತ್ತಲ್ಲಿ ಇಂತಹ ಪಠ್ಯ ಮತ್ತೆ ಬಹುತ್ವವನ್ನು ಮರೆಮಾಚಿ ಏಕರೂಪದ ಚಿಂತನೆಯನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಿದೆ. ಇಲ್ಲಿ ಭಾರತೀಯ ಚಿಂತನೆಯ ಹೆಸರಿನಲ್ಲಿ ಕಾಣುತ್ತಿರುವುದು ವೈದಿಕ ಚಿಂತನೆಗಳು. ನಮ್ಮಲ್ಲಿ ಬೌದ್ಧ, ಜೈನ ಮುಂತಾದ ಶ್ರಮಣ ಧಾರೆಗಳಿವೆ, ನೆಲಮೂಲದ ಚಿಂತನೆಗಳು ಜನರ ಬದುಕುಗಳನ್ನು ಕಟ್ಟಿವೆ. ಇವೆಲ್ಲ ದಯೆ, ಕಾರುಣ್ಯವನ್ನು ದೊಡ್ಡ ಮೌಲ್ಯವಾಗಿ ಸಾರಿವೆ. ಯಜ್ಞಯಾಗಾದಿಗಳ ಮೂಲಕ ಅಗ್ನಿಯನ್ನಷ್ಟೆ ಅಲ್ಲ ನೀರನ್ನು ಪೂಜಿಸುವ ಬಹಳ ದೊಡ್ಡ ಪರಂಪರೆ ಇದೆ. ಪ್ರೌಢಶಾಲಾ ಹಂತದಲ್ಲಿ ಒಂದು ಪಠ್ಯ ಭಾಷಾ ಬೋಧನೆಯ ಜೊತೆಗೆ ಒಳಗೊಳ್ಳುವ ಸಂವೇದನೆಯನ್ನು ರೂಪಿಸುವ ಕೆಲಸ ಮಾಡಬೇಕು. ಆದರೆ ಇಂತಹ ಪಠ್ಯಗಳು ನಿರ್ದಿಷ್ಟ ಚಿಂತನಾ ಧಾರೆಯೇ ಭಾರತೀಯ ಚಿಂತನಾ ಕ್ರಮ ಎನ್ನುವ ಮೂಲಕ ವಾಸ್ತವವನ್ನು ಮರೆಸುತ್ತವೆ.

-ಡಾ. ಪಿ.ಭಾರತಿದೇವಿ,ಲೇಖಕಿ

ಪುರೋಹಿತಶಾಹಿ ನೆಲೆಗಳ ಗಟ್ಟಿಗೊಳಿಸುವ ಕೆಲಸ

ಆರ್. ಗಣೇಶ್ ಅವರು ಪ್ರತಿಪಾದಿಸುತ್ತಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪುರೋಹಿತಶಾಹಿಯ ತಾರತಮ್ಯದ ನೆಲೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವುವೇ ಆಗಿದೆ. ಅವರು ಹೇಳುತ್ತಿರುವ ಭಾರತೀಯ ಸಂಸ್ಕೃತಿ, ಸನಾತನ ಸಂಸ್ಕೃತಿಗಳು ಅದೇ ಅಸಮಾನತೆಯ ಪುನರುತ್ಥಾನದ ಸಾಧನಗಳಾಗಿವೆ. ಹಾಗೆ ನೋಡಿದರೆ ಭಾರತೀಯ ಸಂಸ್ಕೃತಿ ಎಂಬುದೊಂದು ಈ ದೇಶದಲ್ಲಿ ಇಲ್ಲ. ಇಲ್ಲಿರುವುದು ಬಹುಸಂಸ್ಕೃತಿಗಳೇ ಹೊರತು ಎಲ್ಲರನ್ನು ಏಕತ್ವದಲ್ಲಿ ಪ್ರತಿನಿಧಿಸುವ ಯಾವುದೇ ಒಂದು ಸಂಸ್ಕೃತಿ ಎಂಬುದಿಲ್ಲ. ಇದು ಭಾರತೀಯ ಮಟ್ಟದಲ್ಲಿ ನಡೆಯುತ್ತಿರುವ ಏಕ ದೇಶ, ಏಕ ಭಾಷೆ, ಏಕ ಸಂಸ್ಕೃತಿ ಎಂಬ ಅಪಾಯಕಾರಿ ಕಾರ್ಯಸೂಚಿಯನ್ನು ಹೊಂದಿದಂತಿದೆ. ಆದ್ದರಿಂದಲೇ ಬಹುತ್ವವನ್ನು ಬಡಿದು ಏಕತ್ವದಲ್ಲಿ ಕಟ್ಟುವ ದಮನಕಾರಿ ಅಂಶಗಳನ್ನು ಶಿಕ್ಷಣದ ಮೂಲಕ ಎಳೆಯ ಮನಸ್ಸುಗಳಿಗೆ ತುಂಬುವ ಕೆಲಸವನ್ನು ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ.

ಗಣೇಶ್‌ ಅವರು ತಮ್ಮ ಈ ಪಠ್ಯದ ಮೂಲಕ ಮಕ್ಕಳ ಸಹಜ ಮನಸ್ಥಿತಿಯನ್ನು ನಾಶಮಾಡಿ, ಅರ್ಥವಿಲ್ಲದ ಸನಾತನ ಮೌಲ್ಯಗಳನ್ನು, ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ಬಿತ್ತಿ ಅವರನ್ನು ಶತಮಾನಗಳಷ್ಟು ಕಾಲ ಹಿಂದಕ್ಕೆ ಎಳೆದೊಯ್ಯುವುದಾಗಿದೆ. ಇಡೀ ಜಗತ್ತು ಮಕ್ಕಳನ್ನು ವಿಜ್ಞಾನ, ತಂತ್ರಜ್ಞಾನ, ವೈಚಾರಿಕತೆ ಜೊತೆಗೆ ಓಡುವಂತೆ ಸಜ್ಜುಗೊಳಿಸುತ್ತಿದ್ದರೆ ನಾವು ಮಾತ್ರ ಹುಸಿ ಧಾರ್ಮಿಕತೆ ಮತ್ತು ಹುಸಿ ದೇಶಭಕ್ತಿಯ ಹೆಸರಲ್ಲಿ ಕೆಲಸಕ್ಕೆ ಬಾರದ ಹಳಸಲು ಬೂಸಾ ಪಠ್ಯಗಳನ್ನು ಕೊಟ್ಟು ಮಕ್ಕಳನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುತ್ತಿದ್ದೇವೆ. ಮಕ್ಕಳನ್ನು ರೂಪಿಸಬೇಕಿರುವುದು ತಾರತಮ್ಯದ ನೆಲೆಗಳನ್ನು ಧಿಕ್ಕರಿಸಿ ಎಲ್ಲರನ್ನೂ ಒಳಗೊಳ್ಳುವ ಸಮತೆಯ ತತ್ವದ ಆಧಾರದಲ್ಲಿ. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ. ಅದನ್ನು ಬಿಟ್ಟು ಮುಗ್ಧ ಮಕ್ಕಳ ಮನಸ್ಸಿನಲ್ಲಿ ದ್ವೇಷವನ್ನು ತುಂಬಿ ಸಹಬಾಳ್ವೆಯ ಬದುಕನ್ನು ನಾಶ ಮಾಡುವುದಲ್ಲ. ಸರ್ಕಾರಕ್ಕೆ ನಿಜಕ್ಕೂ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ, ಅವರ ಬದುಕಿಗೆ ದಿಕ್ಕಾಗುವಂಥ ಮಹೋನ್ನತ ಪಠ್ಯಗಳನ್ನು ರೂಪಿಸಲಿ. ಈಗ ನಡೆಯುತ್ತಿರುವ ಪಠ್ಯ ಪರಿಸ್ಕರಣೆ ಎಂಬ ವಿಷಸ್ವರೂಪಿ ಬೆಳವಣಿಗೆಗಳನ್ನು ನೋಡಿದರೆ ದೇಶದ ಭವಿಷ್ಯದ ಕುಡಿಗಳೆನಿಸಿಕೊಂಡ ಮಕ್ಕಳನ್ನು ಈ ವಿಷ ವರ್ತುಲದಿಂದ ರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಧುತ್ತನೇ ಎದುರು ನಿಲ್ಲುತ್ತದೆ.

-ರವಿಕುಮಾರ್ ಬಾಗಿ,ಕನ್ನಡ ಪ್ರಾಧ್ಯಾಪಕ, ನ್ಯಾಷನಲ್ ಕಾಲೇಜು, ಬಸವನಗುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT