ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಅರಣ್ಯ ಭೂಮಿ: ಹಕ್ಕುಪತ್ರ ಪಡೆಯಲು ಅಡ್ಡಿ ಹಲವು

Last Updated 17 ಆಗಸ್ಟ್ 2021, 19:36 IST
ಅಕ್ಷರ ಗಾತ್ರ

ಅರಣ್ಯ ಹಕ್ಕು ಕಾಯ್ದೆ 2006 ಬೇಗನೆ ಅನುಷ್ಠಾನಗೊಳ್ಳಬೇಕು ಎಂಬುದು ಬುಡಕಟ್ಟು ಸಮುದಾಯಗಳು ಮತ್ತು ಅರಣ್ಯವನ್ನು ಅವಲಂಬಿಸಿರುವವರ ಬಹುಕಾಲದ ಬೇಡಿಕೆ. ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸಿ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಇತ್ತೀಚೆಗೆ ಜಂಟಿ ಪತ್ರ ಬರೆದಿದೆ. ಅರಣ್ಯ ಹಕ್ಕು ಕಾಯ್ದೆಯು ಸಂಪೂರ್ಣವಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿಚಾರ. ಆದರೆ, ಪತ್ರ ಬರೆಯುವಾಗ ಪರಿಸರ ಮತ್ತು ಅರಣ್ಯ ಸಚಿವಾಲಯವನ್ನೂ ಸೇರಿಸಿಕೊಂಡಿರುವುದು ಅರಣ್ಯ ಹಕ್ಕುಗಳ ಹೋರಾಟಗಾರರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಅದೇನೇ ಇದ್ದರೂ, 2006ರಲ್ಲಿಯೇ ಅಂಗೀಕಾರವಾದ ಕಾಯ್ದೆಯ ಅನುಷ್ಠಾನವು ಆಮೆಗತಿಯಲ್ಲಿ ಸಾಗಿದೆ. ರಾಜ್ಯದಲ್ಲಿ ಕಾಯ್ದೆ ಜಾರಿ ಬಗೆಗಿನ ಒಂದು ನೋಟ ಇಲ್ಲಿದೆ:

ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದು, ಸರ್ಕಾರದ ಅರಣ್ಯ ಭೂಮಿ ಅಕ್ರಮ–ಸಕ್ರಮ ಕಾಯ್ದೆಯಡಿ 2.95 ಲಕ್ಷ ಅರಣ್ಯಭೂಮಿ ಅತಿಕ್ರಮಣದಾರರು ಸಾಗುವಳಿ ಹಕ್ಕಿಗಾಗಿ 2019ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವುಗಳಲ್ಲಿ 1.84 ಲಕ್ಷ ಅರ್ಜಿಗಳು ತಿರಸ್ಕೃತವಾಗಿದ್ದು, ಕೇವಲ 15,798 ಹಕ್ಕುಪತ್ರಗಳ ವಿತರಣೆಯಾಗಿದೆ. 56,055 ಎಕರೆ ಪ್ರದೇಶಕ್ಕೆ ಮಂಜೂರಾತಿ ನೀಡಲಾಗಿದ್ದು, 94,862 ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ. ಸಾಗುವಳಿ ಹಕ್ಕುಪತ್ರ ಪಡೆಯಲು ಅಗತ್ಯ ಪುರಾವೆಗಳನ್ನು ಒದಗಿಸಲಾಗದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಆತಂಕ ಗಿರಕಿ ಹೊಡೆಯುತ್ತಲೇ ಇದೆ. ಅತ್ತ ಅರಣ್ಯ ಭೂಮಿ ಸಾಗುವಳಿ ಹಕ್ಕುಪತ್ರ ಪಡೆದುಕೊಳ್ಳಲು ಆರಂಭವಾದ ಹೋರಾಟ 30 ವರ್ಷಗಳನ್ನು ದಾಟಿ ಸಾಗಿದೆ. ಆದರೆ ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮದಡಿ ಅರಣ್ಯವಾಸಿಗರು ಸಲ್ಲಿಸಿ ಇತ್ಯರ್ಥವಾಗದೇ ಬಾಕಿ ಇರುವ ಅರ್ಜಿಗಳ ಪುನರ್‌ಪರಿಶೀಲನೆ ಹಾಗೂ ಹಕ್ಕು ಪತ್ರ ವಿತರಣೆ ಪ್ರಕ್ರಿಯೆ ಕೋವಿಡ್‌ ಕಾರಣದಿಂದ ಇನ್ನಷ್ಟು ನನೆಗುದಿಗೆ ಬಿದ್ದಿದೆ.

ಅರಣ್ಯ ಅತಿಕ್ರಮಣದ ಜಾಗದ ಸಾಗುವಳಿ ಹಕ್ಕನ್ನುಅರಣ್ಯ ಹಕ್ಕು ಕಾಯ್ದೆಯಡಿ ಪಡೆಯಲು ಮೊದಲನೆಯದಾಗಿ ಪರಿಶಿಷ್ಟ ಪಂಗಡದವರು (ಎಸ್‌ಟಿ) ಅರ್ಹರಾದರೆ, ಎರಡನೆಯದಾಗಿ ಪಾರಂಪರಿಕ ಅರಣ್ಯವಾಸಿಗಳು (ಒಟಿಎಫ್‌ಡಿ), ಮೂರನೆಯದಾಗಿ ಸಮುದಾಯದವರು (ಕಮ್ಯುನಿಟಿ) ಅರ್ಹತೆ ಪಡೆಯಲಿದ್ದಾರೆ.ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ಪಡೆಯಲು 2005ರ ಡಿಸೆಂಬರ್‌ 13ಕ್ಕೆ ಮುಂಚೆ ಅನುಸೂಚಿತ ಬುಡಕಟ್ಟುಗಳು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರಬೇಕು. ಅಥವಾ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿರಬೇಕು. ಇತರೆ ಪಾರಂಪರಿಕ ಅರಣ್ಯ ವಾಸಿಗಳು ಹಕ್ಕು ಪತ್ರ ಪಡೆದುಕೊಳ್ಳಬೇಕೆಂದರೆ 2005ರ ಡಿಸೆಂಬರ್‌ 13ಕ್ಕೆ ಮುಂಚೆ ಕನಿಷ್ಠ 3 ತಲೆಮಾರಿನವರೆಗೆ ಅಂದರೆ 75 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದು, ಜೀವನಕ್ಕೆ ಅರಣ್ಯವನ್ನೇ ಅವಲಂಬಿಸಿರಬೇಕು.

ರಾಜ್ಯದ ಶಿವಮೊಗ್ಗ, ಉತ್ತರ ಕನ್ನಡ, ರಾಮನಗರ, ಮೈಸೂರು, ಗದಗ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಅತಿಕ್ರಮಣ ಸಮಸ್ಯೆ ಇದ್ದರೂ ಅತೀ ಹೆಚ್ಚು ಪ್ರಕರಣಗಳಿರುವುದು ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ. ಅರಣ್ಯವೇ ಹೆಚ್ಚಿರುವ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡುತ್ತಿರುವರಿಗೆಮೂರು ತಲೆಮಾರುಗಳ ಹಿನ್ನೆಲೆಯಿದ್ದರೂ ಸರ್ಕಾರ ಕೇಳಿದ ದಾಖಲೆ ಒದಗಿಸಲಾಗದ ಕಾರಣಕ್ಕೆ ಅರ್ಜಿಗಳು ತಿರಸ್ಕೃತವಾಗಿವೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಾಂತರಾಜು, ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಬಾಕಿ ಅರ್ಜಿಗಳ ಪುನರ್‌ ಪರಿಶೀಲನೆ ಪ್ರಕ್ರಿಯೆ ಕೋವಿಡ್‌ ಕಾರಣಕ್ಕೆ ಹಿನ್ನಡೆ ಪಡೆದಿತ್ತು. ಈಗ ಉಪ ವಿಭಾಗೀಯ ಮಟ್ಟದ ಸಮಿತಿ, ಜಿಲ್ಲಾಮಟ್ಟದ ಸಮಿತಿ ಮೂಲಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಇತ್ಯರ್ಥ ಪಡಿಸಲಾಗುವುದು. ಗ್ರಾಮ ಪಂಚಾಯ್ತಿ ಮಟ್ಟದ ಸಮಿತಿಯಿಂದ ಅರ್ಜಿಗಳು ತಿರಸ್ಕೃತವಾದಲ್ಲಿ ಅರ್ಜಿದಾರರು ಸ್ಥಳೀಯ ಉಪವಿಭಾಗಾಧಿಕಾರಿಗಳ ಮಟ್ಟದ ಸಮಿತಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಲ್ಲಿ ತಿರಸ್ಕೃತವಾದಲ್ಲಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮೇಲ್ಮನವಿಗೆ ಅವಕಾಶವಿದೆ. ಈ ಮೂರೂ ಹಂತದಲ್ಲಿ ಅರ್ಜಿ ತಿರಸ್ಕೃತವಾದಲ್ಲಿ ಅಂಥ ಅರಣ್ಯ ನಿವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಕೈಗೊಳ್ಳಲಿದೆ’ ಎಂದುಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ವಿತರಣೆ ಕುರಿತು ಹೇಳಿದರು.

ಈವರೆಗೂ ಅರಣ್ಯಭೂಮಿ ಸಾಗುವಳಿದಾರರು ತಮ್ಮ ಸರಳ, ಸಾಮಾನ್ಯ ಜೀವನಕ್ಕಾಗಿ ಕಿರು ಭೂಮಿ ಸಾಗುವಳಿ ಮಾಡಿಕೊಳ್ಳುತ್ತಿದ್ದರೂ ಅವರಿಗೆ ಮಾಲ್ಕಿ ಜಮೀನುಳ್ಳವರಿಗೆ ದೊರೆಯುತ್ತಿರುವ ಸರ್ಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಏಕೆಂದರೆ ಸೌಲಭ್ಯ ಪಡೆಯಲು ನೀಡಬೇಕಿರುವ ಜಮೀನು ಉತಾರವಾಗಲಿ, ಹಕ್ಕು ಪತ್ರವಾಗಲಿ ಅವರಲ್ಲಿಲ್ಲ. ಅದರಲ್ಲೂ ಅರಣ್ಯಕ್ಕೆ ಹೊಂದಿಕೊಂಡೇ ಇರುವ ಇಂಥವರ ಜಮೀನಿನಲ್ಲಿ ಬೆಳೆದ ಬೆಳೆಯ ಬಹುಪಾಲು ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಕಾಡು ಪ್ರಾಣಿಗಳಿಂದ ಉಂಟಾದ ಹಾನಿಯನ್ನು ಸರ್ಕಾರ ಯಾವತ್ತೂ ಭರಿಸಿಲ್ಲ. ಕಾರಣ ಆ ಪರಿಹಾರ ಪಡೆಯಲು ಇವರೆಲ್ಲರೂ ಸರ್ಕಾರದ ಪ್ರಕಾರ ಅನರ್ಹರು. ಇತ್ತೀಚೆಗೆ ಅತಿವೃಷ್ಟಿ ಆದಾಗಲೆಲ್ಲ ಬೆಳೆ ನಷ್ಟವಾದರೂ ಇವರ‍್ಯಾರಿಗೂ ಒಂದು ಪೈಸೆ ಪರಿಹಾರ ದೊರೆತಿಲ್ಲ. ಅಷ್ಟೇ ಏಕೆ; ಮಳೆಗೆ ಕುಸಿದು ಹೋದ ಅದೆಷ್ಟೋ ಸೂರುಗಳ ಪುನರ್‌ ನಿರ್ಮಾಣಕ್ಕೂ ಅರಣ್ಯ ಇಲಾಖೆ ಅಡ್ಡಗಾಲು ಹಾಕಿದೆ ಎಂದು ಹೆಸರು ಬಹಿರಂಗಪಡಿಸಲುಇಚ್ಚಿಸದ ಅರಣ್ಯ ಭೂಮಿ ಸಾಗುವಳಿದಾರರೊಬ್ಬರು ಆತಂಕದಲ್ಲೇ ಆರೋಪ ಮಾಡಿದ್ದಾರೆ.

‘ಅರಣ್ಯ ಹಕ್ಕು ಕಾಯ್ದೆ ಪ್ರಕಾರ, ಸಾಗುವಳಿ ಹಕ್ಕನ್ನು ಪಡೆಯುವಲ್ಲಿ ಆಡಳಿತಾತ್ಮಕವಾಗಿ ಸಾಕಷ್ಟು ಸಮಸ್ಯೆಗಳು ಇವೆ. ಅರಣ್ಯ ಅತಿಕ್ರಮಣ ಸಾಗುವಳಿ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಹಾಗೂ ಕಾಯ್ದೆಯ ಅರಿವಿನ ಕೊರತೆಯಿದೆ. ಕಾಯ್ದೆ ಪ್ರಕಾರ ಅರ್ಜಿ ಜೊತೆ ಸಲ್ಲಿಸಬೇಕಿದ್ದ ದಾಖಲೆಗಳ ಅಲಭ್ಯತೆ ಮುಂತಾದ ಕಾರಣಗಳಿಂದ ಅರಣ್ಯ ಭೂಮಿ ಅಕ್ರಮ–ಸಕ್ರಮ ಪ್ರಕ್ರಿಯೆ ಅತಂತ್ರ ಸ್ಥಿತಿಯಲ್ಲಿದೆ’ ಎನ್ನುತ್ತಾರೆ ರಾಜ್ಯ ಅರಣ್ಯಭೂಮಿ ಅತಿಕ್ರಮಣದಾರರ ಹೋರಾಟ ಸಮಿತಿ ಅಧ್ಯಕ್ಷ ಎ. ರವೀಂದ್ರ ನಾಯ್ಕ.

ಸುಪ್ರೀಂಕೋರ್ಟ್‌ ನಡೆ

ಅರಣ್ಯ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿ ಅರ್ಜಿಗಳು ತಿರಸ್ಕೃತಗೊಂಡಿದ್ದರೆ ಅತಿಕ್ರಮಣದಾರರನ್ನು ತಕ್ಷಣವೇ ಅರಣ್ಯದಿಂದ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ 2019ರ ಫೆಬ್ರುವರಿ 13ರಂದು ಆದೇಶ ನೀಡಿತ್ತು. ಅದೇ ವರ್ಷ ಫೆಬ್ರುವರಿ 28ರಂದು ಈ ಆದೇಶಕ್ಕೆ ತಡೆ ಕೊಟ್ಟಿತು. ತಿರಸ್ಕರಿಸಲಾದ ಅರ್ಜಿಗಳ ಮರುಪರಿಶೀಲನೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಲಾಯಿತು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ 18 ತಿಂಗಳ ಕಾಲಾವಕಾಶ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂಕೋರ್ಟ್‌ಗೆ 2019ರ ಜುಲೈಯಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದರು.

ಅರ್ಜಿ ತಿರಸ್ಕಾರಕ್ಕೆ ಕಾರಣಗಳು

*ಅರ್ಜಿದಾರರು ಕಂದಾಯ ಭೂಮಿಗಾಗಿ ಅರ್ಜಿ ಸಲ್ಲಿಸಿರುವುದು

*ಇತರೆ ಪಾರಂಪರಿಕ ಅರಣ್ಯ ವಾಸಿಗಳು 75 ವರ್ಷಗಳಿಂದ ಅರಣ್ಯ ಭೂಮಿಯನ್ನು ಅವಲಂಭಿಸಿರುವುದಕ್ಕೆ, ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿರುವುದು

*ಒಂದೇ ಕುಟುಂಬದಲ್ಲಿ ಬಹುಮಂದಿ ಅರ್ಜಿಗಳನ್ನು ಸಲ್ಲಿಸಿರುವುದು

*ಅರ್ಜಿದಾರರಲ್ಲಿ ಕೆಲವರು ಅರಣ್ಯ ಇಲಾಖೆ ವತಿಯಿಂದ ಸೌಲಭ್ಯಗಳೊಂದಿಗೆ ಈಗಾಗಲೇ ಪುನರ್‌ ವಸತಿ ಪಡೆದಿರುವುದು

*ಅರ್ಜಿಗಳ ಪುನರ್‌ ಪರಿಶೀಲನೆ ಪ್ರಕ್ರಿಯೆ ಮುಂದುವರಿಸಲು ಕೋವಿಡ್‌ ಸಾಂಕ್ರಾಮಿಕವೂ ಅಡ್ಡಿ ಆಗಿದೆ.

*****

ಸುಪ್ರೀಂಕೋರ್ಟ್‌ ಮಧ್ಯಂತರ ತಡೆಯಾಜ್ಞೆ ಆದೇಶದಲ್ಲಿ ನೀಡಿದ ನಿರ್ದೇಶನದಂತೆ ತಿರಸ್ಕರಿಸಲಾದ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಶೀಘ್ರ ಕೈಗೊಳ್ಳಲಾಗುವುದು.

- ಕಾಂತರಾಜು, ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.

******

ಟಿಬೆಟನ್ನರಿಗೆ ಸಾಗುವಳಿ ಹಕ್ಕನ್ನು ನೀಡಿರುವ ಸರ್ಕಾರ, ನಮ್ಮ ನೆಲದಲ್ಲೇ ಬದುಕು ಕಟ್ಟಿಕೊಂಡಿರುವ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವುದು ಎಷ್ಟರ ಮಟ್ಟಿಗೆ ಸರಿ?

- ಎ.ರವೀಂದ್ರ ನಾಯ್ಕ, ಅರಣ್ಯ ಭೂಮಿ ಅತಿಕ್ರಮಣದಾರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT