ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ನಿರ್ಭಯಾ ನಿಧಿ ಕಡೆಗಣನೆ

Last Updated 12 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ನಿರ್ಭಯಾ ನಿಧಿ ಅಡಿ ಮಹಿಳೆಯರ ಸುರಕ್ಷತೆಗೆಂದು ಖರೀದಿಸಲಾದ ವಾಹನಗಳನ್ನು, ಮಹಾರಾಷ್ಟ್ರ ಸರ್ಕಾರವು ಸಚಿವರು ಮತ್ತು ಶಾಸಕರ ಬೆಂಗಾವಲಿಗೆ ಬಳಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಾಪಕ ಟೀಕೆ ಮತ್ತು ಆಕ್ಷೇಪ ವ್ಯಕ್ತವಾಗಿದೆ. ಆದರೆ, ನಿರ್ಭಯಾ ನಿಧಿಯಿಂದ ನೀಡಲಾದ ಅನುದಾನವು ದೇಶದ ಬಹುತೇಕ ರಾಜ್ಯಗಳಲ್ಲಿ ಬಳಕೆಯೇ ಆಗುತ್ತಿಲ್ಲ ಎನ್ನುತ್ತವೆ ಸರ್ಕಾರಿ ದಾಖಲೆಗಳು. ಒಟ್ಟಾರೆಯಾಗಿ ಮಹಿಳೆಯರ ಸುರಕ್ಷತೆಗಾಗಿ ರೂಪಿಸಲಾದ ಈ ಕಾರ್ಯಕ್ರಮವನ್ನು ಕಡೆಗಣಿಸಲಾಗಿದೆ ಎಂಬುದನ್ನು ಈ ದಾಖಲೆಗಳು ಬೊಟ್ಟುಮಾಡಿ ಹೇಳುತ್ತವೆ

ಮಹಿಳೆಯರ ಮೇಲಿನ ಅತ್ಯಾಚಾರವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ನಿರ್ಭಯಾ ನಿಧಿಯನ್ನು ಆರಂಭಿಸಿತ್ತು. ಮನೆ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವುದು, ತುರ್ತು ಸಂದರ್ಭದಲ್ಲಿ ಕ್ಷಿಪ್ರ ಸ್ಪಂದನೆ ಹಾಗೂ ಅತ್ಯಾಚಾರದಂತಹ ಸಂದರ್ಭದಲ್ಲಿ ತ್ವರಿತ ಸಾಂತ್ವನ ಮತ್ತು ನ್ಯಾಯದಾನಕ್ಕೆ ಅಗತ್ಯವಿರುವಸವಲತ್ತುಗಳನ್ನು ಈ ನಿಧಿಯ ಅಡಿ ಒದಗಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಈ ನಿಧಿಯ ಅಡಿ ಈವರೆಗೆ ಒದಗಿಸಲಾಗಿರುವ ಅನುದಾನವು ಪೂರ್ಣ ಪ್ರಮಾಣದಲ್ಲಿ ಬಳಕೆಯೇ ಆಗಿಲ್ಲ.

ನಿರ್ಭಯಾ ನಿಧಿ ಅಡಿ ಕೇಂದ್ರ ಸರ್ಕಾರವೇ ಏಕಪಕ್ಷೀಯವಾಗಿ ಯಾವುದೇ ಕಾರ್ಯಕ್ರಮವನ್ನು ರೂಪಿಸುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳು ಇಂತಹ ಕ್ರಮ ತೆಗೆದುಕೊಳ್ಳಲು ಇಷ್ಟು ಅನುದಾನದ ಅಗತ್ಯವಿದೆ ಎಂಬ ಪ್ರಸ್ತಾವ ಸಲ್ಲಿಸಬೇಕು. ಇಂತಹ ಪ್ರಸ್ತಾವಗಳು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತಿದ್ದರೆ, ಕೇಂದ್ರ ಸರ್ಕಾರವು ಅದನ್ನು ಸಾರ್ವತ್ರಿಕ ಕಾರ್ಯಕ್ರಮವಾಗಿ ರೂಪಿಸುತ್ತದೆ. ಅದಕ್ಕೆ ಅಗತ್ಯವಿರುವ ಅನುದಾನದ ಮೊತ್ತವನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ಮಂಜೂರು ಮಾಡಲಾಗುತ್ತದೆ. ಅನುದಾನವನ್ನು ಪ್ರತಿ ವರ್ಷವೂ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ 2014ರಿಂದ 2022ರ ಏಪ್ರಿಲ್‌ವರೆಗೆ ಒಟ್ಟು₹9,176.65 ಕೋಟಿ ಮೊತ್ತದ ಕಾರ್ಯಕ್ರಮಗಳನ್ನು ರೂಪಿಸಿವೆ. ಕೇಂದ್ರ ಸರ್ಕಾರವು ಒಟ್ಟು ₹7,418.46 ಕೋಟಿಯಷ್ಟು ಅನುದಾನವನ್ನು ಮಾತ್ರ ಮಂಜೂರು ಮಾಡಿದೆ. ಆದರೆ, ಇಷ್ಟೂ ಹಣ ಬಿಡುಗಡೆಯಾಗಿಲ್ಲ. ಬದಲಿಗೆ ಈವರೆಗೆ ₹4,480.30 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ.

ಇದಕ್ಕಿಂತಲೂ ಕಳವಳಕಾರಿಯಾದ ಅಂಶವೆಂದರೆ, ಬಿಡುಗಡೆಯಾದ ಅನುದಾನವೂ ಪೂರ್ಣ ಬಳಕೆಯಾಗಿಲ್ಲ ಎಂಬುದು. ನಿರ್ಭಯಾ ನಿಧಿ ಅಡಿ ಈವರೆಗೆ ₹ 4,480 ಕೋಟಿ ಬಿಡುಗಡೆಯಾಗಿದೆ. ಆದರೆ, ಇದರಲ್ಲಿ ಬಳಕೆಯಾಗಿದ್ದು ₹3,140 ಕೋಟಿ ಮಾತ್ರ.

ಕೆಲವು ಕಾರ್ಯಕ್ರಮಗಳನ್ನು ಈಚೆಗಷ್ಟೇ ರೂಪಿಸಿರುವುದು ಅನುದಾನ ಬಳಕೆ ಪ್ರಮಾಣ ಕಡಿಮೆ ಇರಲು ಕಾರಣ ಎನ್ನಲಾಗಿದೆ. ಆದರೆ, 2014 ಮತ್ತು 2015ರಲ್ಲಿ ರೂಪಿಸಿದ ಕೆಲವು ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಕೆಲವು ಕಾರ್ಯಕ್ರಮಗಳ ಅನುದಾನವು ಸ್ವಲ್ಪವೂ ಬಳಕೆಯಾಗಿಲ್ಲ. ಹೀಗೆ ಅನುದಾನವನ್ನು ಬಳಕೆ ಮಾಡದಿರುವವರಲ್ಲಿ ಹಲವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಹಲವು ಸಚಿವಾಲಯಗಳೂ ಇವೆ. ಒಟ್ಟಾರೆ, ಈ ಕಾರ್ಯಕ್ರಮಗಳನ್ನು ಕಡೆಗಣಿಸಲಾಗಿದೆ ಎಂಬುದನ್ನು ಈ ಅಂಕಿಅಂಶಗಳು ಹೇಳುತ್ತವೆ.

ಹೆಣ್ಣುಮಕ್ಕಳ ಸುರಕ್ಷತೆಗಾಗಿ ಆರಂಭಿಸಲಾದ ಈ ನಿಧಿಯು ಬಳಕೆಯಾಗದೇ ಇರುವ ಸಂದರ್ಭದಲ್ಲೇ, ದೇಶದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ದಂತಹ ಪ್ರಕರಣಗಳು ಏರಿಕೆಯಾಗಿವೆ. ಈ ಏರಿಕೆಯು, ಕೇಂದ್ರದ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ನಿರ್ಭಯಾ ನಿಧಿಯು ವಿಫಲವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಅನುದಾನದ ಸ್ಥಿತಿಗತಿ

₹9,176.65 ಕೋಟಿ;ಪ್ರಸ್ತಾವಿತ ಅನುದಾನ

₹7,418.46 ಕೋಟಿ;ಮಂಜೂರಾದ ಅನುದಾನ

₹4,480.30 ಕೋಟಿ;ಬಿಡುಗಡೆಯಾದ ಅನುದಾನ

₹3,140.07 ಕೋಟಿ;ಬಳಕೆಯಾದ ಅನುದಾನ

ಅನುಷ್ಠಾನವಾಗದ ಕಾರ್ಯಕ್ರಮಗಳು

ನಿರ್ಭಯಾ ನಿಧಿ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ ಕೆಲವು ಅನುಷ್ಠಾನವಾಗಿವೆ. ಇನ್ನು ಕೆಲವು ಕುಂಟುತ್ತಿವೆ. ಕೆಲವು ಕಾರ್ಯಕ್ರಮಗಳು ಆರಂಭವಾಗಿಯೇ ಇಲ್ಲ. ಅಂತಹ ಕೆಲ ಕಾರ್ಯಕ್ರಮಗಳ ವಿವರ ಇಂತಿದೆ.

ಮಹಿಳಾ ಪೊಲೀಸ್ ಸ್ವಯಂಸೇವಕರು:ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರ ಅಡಿಯಲ್ಲಿ ಮಹಿಳಾ ಪೊಲೀಸ್‌ ಸ್ವಯಂಸೇವಕರ ಆಯ್ಕೆ, ತರಬೇತಿ ಮತ್ತು ನಿಯೋಜನೆಗೆ ಕಾರ್ಯಕ್ರಮ ರೂಪಿಸಲಾಗಿತ್ತು. ದೇಶದ ಎಲ್ಲಾ ರಾಜ್ಯಗಳಲ್ಲಿ ಇದನ್ನು ಜಾರಿಗೆ ತರಬೇಕಿತ್ತು. 2016ರಲ್ಲಿ ಈ ಕಾರ್ಯಕ್ರಮ ರೂಪಿಸಿದ್ದರೂ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ.ಈ ಕಾರ್ಯಕ್ರಮಕ್ಕೆ ಒಟ್ಟು ₹27 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದ್ದು, ಕೇಂದ್ರ ಸರ್ಕಾರವು ಈವರೆಗೆ ₹ 16.32 ಕೋಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಇದರಲ್ಲಿ ಬಳಕೆಯಾಗಿದ್ದು ₹3.07 ಕೋಟಿ ಮಾತ್ರ.

ಒನ್‌ ಸ್ಟಾಪ್‌ ಸೆಂಟರ್‌:ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಸೇವೆಗಳು ಹಾಗೂ ನೆರವುಗಳು ಒಂದೇ ಸ್ಥಳದಲ್ಲಿ ದೊರೆಯುವ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು 2015ರ ಏಪ್ರಿಲ್‌ನಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. ಇದಕ್ಕಾಗಿ ₹ 867.74 ಕೋಟಿ ಅನುದಾನದ ಅಗತ್ಯವಿದೆ ಎಂದು ಪ್ರಸ್ತಾಪ ರೂಪಿಸಲಾಗಿತ್ತು. ಇಷ್ಟೂ ಅನುದಾನವನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ. ಅದರಲ್ಲಿ ₹672 ಕೋಟಿ ಬಿಡುಗಡೆಯಾಗಿದೆ. ಆದರೆ, ಅದರಲ್ಲಿ ಬಳಕೆಯಾಗಿದ್ದು ₹164.71 ಕೋಟಿ ಮಾತ್ರ. ಈ ಕಾರ್ಯಕ್ರಮದ ಅನುಷ್ಠಾನದ ಪ್ರಮಾಣ ಶೇ 19ಕ್ಕಿಂತಲೂ ಕಡಿಮೆ.

ಸಿ–ಡಾಕ್‌:ದೇಶದ ಎಲ್ಲಾ ಬಸ್‌ಗಳು, ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಓಡಾಟದ ಮೇಲೆ ನಿಗಾ ಇರಿಸುವ ಏಕೀಕೃತ ಪ್ಲಾಟ್‌ಫಾರಂ ಅನ್ನು ರೂಪಿಸುವ ಉದ್ದೇಶದಿಂದ ಸಿ–ಡಾಕ್‌ ಎಂಬ ಕಾರ್ಯಕ್ರಮವನ್ನು 2019ರಲ್ಲಿ ಆರಂಭಿಸಲಾಗಿತ್ತು. ಇದಕ್ಕಾಗಿ ಒಟ್ಟು ₹ 465 ಕೋಟಿ ಮೊತ್ತದ ಅನುದಾನದ ಅಗತ್ಯವಿದೆ ಎಂದು ಪ್ರಸ್ತಾಪ ಸಲ್ಲಿಸಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಲ್ಲಿಸಿದ್ದ ಪ್ರಸ್ತಾಪ ಮತ್ತು ಅನುದಾನಕ್ಕೆ ಕೇಂದ್ರ ಸರ್ಕಾರವು ಪೂರ್ಣ ಒಪ್ಪಿಗೆ ನೀಡಿತ್ತು. ಇದಕ್ಕಾಗಿ ₹ 192 ಕೋಟಿ ಅನುದಾನವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈವರೆಗೆ ಈ ಅನುದಾನದಲ್ಲಿ ಒಂದು ರೂಪಾಯಿಯೂ ಬಳಕೆಯಾಗಿಲ್ಲ. ಈ ಕಾರ್ಯಕ್ರಮದ ಅನುಷ್ಠಾನ ಪ್ರಮಾಣ ಶೂನ್ಯ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಜ್ಯಗಳ ಸಾರಿಗೆ ಇಲಾಖೆಗಳು ಜಂಟಿಯಾಗಿ ಇದನ್ನು ಅನುಷ್ಠಾನಕ್ಕೆ ತರಬೇಕಿತ್ತು. ಆದರೆ, ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ನಿರ್ಲಕ್ಷ್ಯಕ್ಕೆ ಸ್ಥಾಯಿಸಮಿತಿ ಆಕ್ಷೇಪ

‘ಶಿಕ್ಷಣ, ಮಹಿಳೆ, ಮಕ್ಕಳು, ಯುವಜನತೆ ಹಾಗೂ ಕ್ರೀಡಾ ಸಂಸದೀಯ ಸ್ಥಾಯಿಸಮಿತಿ’ಯು ನಿರ್ಭಯಾ ನಿಧಿಯ ಬಳಕೆ, ಯೋಜನೆಗಳ ಅನುಷ್ಠಾನ ಕುರಿತು ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗೃಹಸಚಿವಾಲಯಗಳು ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನೂ ಸಮಿತಿಗೆ ವಿವರಿಸಿವೆ

lಶಿಫಾರಸು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವುದಕ್ಕಾಗಿ ಎಲ್ಲ ರಾಜ್ಯಗಳ ಸಾರಿಗೆ ಸೇವಾ ಸಂಸ್ಥೆಗಳು ಕೇಂದ್ರದ ಹೆದ್ದಾರಿ ಸಚಿವಾಲಯದ ಜೊತೆ ಸಂಪರ್ಕದಲ್ಲಿರಬೇಕು. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ಘಟಕವೊಂದನ್ನು ಆರಂಭಿಸುವ ಅಗತ್ಯವಿದೆ

ಸರ್ಕಾರದ ಕ್ರಮ: ಸಾರ್ವಜನಿಕ ಸಾರಿಗೆಯ ಬಸ್‌ಗಳ ಓಡಾಟದ ಮೇಲೆ ಸದಾ ನಿಗಾ ವಹಿಸುವ ವ್ಯವಸ್ಥೆಯನ್ನು ರೂಪಿಸುವುದು ಹಾಗೂ ಅಪಾಯದ ಕರೆಗಂಟೆ ಸೌಲಭ್ಯ ಒದಗಿಸುವುದು ಮೊದಲಾದ ವಿಚಾರಗಳಲ್ಲಿ ವಿವಿಧ ರಾಜ್ಯಗಳ ಜೊತೆ ಕೇಂದ್ರ ಸಚಿವಾಲಯ ಸಂಪರ್ಕದಲ್ಲಿದೆ

lಶಿಫಾರಸು: ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ, ಅಪಾಯದ ಕರೆಗಂಟೆ ಅಳವಡಿಕೆ ಹಾಗೂ ನಿಯಂತ್ರಕರನ್ನು ನೇಮಿಸುವ ಕುರಿತಂತೆ ಕೆಲವು ರಾಜ್ಯಗಳು ಶಿಫಾರಸು ಮಾಡಿವೆ. ಕೇಂದ್ರ ಸರ್ಕಾರವು ಈ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುದಕ್ಕಾಗಿ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಏಕೀಕೃತ ನೀತಿಯನ್ನು ಕಾಲಮಿತಿಯೊಳಗೆ ರೂಪಿಸುವ ಅಗತ್ಯವಿದೆ

ಸರ್ಕಾರದ ಕ್ರಮ: ಬಹುತೇಕ ರಾಜ್ಯಗಳಿಗೆ ಸಾರಿಗೆ ಬಸ್‌ಗಳ ಮೇಲೆ ನಿಗಾ ವಹಿಸುವ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ರಾಜ್ಯಗಳು ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡಲು ಸಾಧ್ಯವಾಗುವಂತೆ ನಿರ್ಭಯಾ ನಿಧಿಯಲ್ಲಿ ಇದಕ್ಕೆ ಬೇಕಾದ ಹಣಕಾಸನ್ನು ಸರ್ಕಾರ ಒದಗಿಸುತ್ತಿದೆ

lಶಿಫಾರಸು: ರೈಲುಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ವ್ಯವಸ್ಥೆ ಇಲ್ಲ ಎಂಬುದನ್ನು ಸಮಿತಿ ಮನಗಂಡಿದೆ. ಹೀಗಾಗಿ, ರೈಲಿನಲ್ಲೇ ಪ್ರಕರಣ ದಾಖಲಿಸಲು ಸಾಧ್ಯವಾಗುವ ವ್ಯವಸ್ಥೆಯನ್ನು ಗೃಹಸಚಿವಾಲಯ ಜೊತೆ ಸೇರಿ ರೈಲ್ವೆ ಸಚಿವಾಲಯ ರೂಪಿಸಬೇಕಿದೆ

ಸರ್ಕಾರದ ಕ್ರಮ: ರೈಲು ಹಾಗೂ ನಿಲ್ದಾಣಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳ ಕುರಿತು ದೂರು ನೀಡಲು ಸಹಾಯವಾಣಿ (139) ಇದೆ

lಶಿಫಾರಸು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ದೂರು ದಾಖಲಿಸುವಲ್ಲಿಂದ ಹಿಡಿದು, ಪ್ರತಿ ಹಂತದಲ್ಲೂ ಅಡೆತಡೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ರತೀ ಪೊಲೀಸ್ ಠಾಣೆಯಲ್ಲಿ ಇಂತಹ
ಪ್ರಕರಣಗಳನ್ನು ನಿಭಾಯಿಸಲು ತರಬೇತಿ ಪಡೆದ ಒಬ್ಬ ಪೊಲೀಸ್‌ ಅಧಿಕಾರಿಯನ್ನು ನಿಯೋಜಿಸಬೇಕು

ಸರ್ಕಾರದ ಕ್ರಮ: ಪ್ರತೀ ಠಾಣೆಯಲ್ಲಿ ಮಹಿಳಾ ಸಹಾಯ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ನಿರ್ಭಯಾ ನಿಧಿಯಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ₹100 ಕೋಟಿ ಅನುದಾನ ಒದಗಿಸಲಾಗಿದೆ. ಪ್ರತೀ ಠಾಣೆಯಲ್ಲಿ ಶೇ 33ರಷ್ಟು ಮಹಿಳಾ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು ಎಂಬ ಆದೇಶವನ್ನು ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಲು ಪೊಲೀಸ್ ಸಿಬ್ಬಂದಿಯನ್ನು ತರಬೇತಿಗೊಳಿಸಲಾಗುತ್ತಿದೆ

lಶಿಫಾರಸು: ನಿರ್ಭಯಾ ನಿಧಿಯಡಿ ಜಾರಿಮಾಡಲಾಗಿರುವ ವಿವಿಧ ಯೋಜನೆಗಳ ಪ್ರಗತಿ ಕುಂಠಿತವಾಗಿದ್ದು, ಅವುಗಳಿಗೆ ವೇಗ ನೀಡುವುದಕ್ಕಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಬಹುತೇಕ ರಾಜ್ಯಗಳು ಶೇ 20ರಿಂದ ಶೇ 30ರಷ್ಟು ಮಾತ್ರ ನಿರ್ಭಯಾ ನಿಧಿ ಬಳಕೆ ಮಾಡಿವೆ

ಸರ್ಕಾರದ ಕ್ರಮ: ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿರಂತರವಾಗಿ ಪ್ರಗತಿ ಪರಿಶೀಲನೆ ನಡೆಸುತ್ತಿದೆ. ಸಮಿತಿ ರಚನೆಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ನಿರ್ಭಯಾ ನಿಧಿ ಬಳಸುವಂತೆ ರಾಜ್ಯ ಸರ್ಕಾರಗಳಿಗೆ ದೂರವಾಣಿ ಕರೆ, ಇ–ಮೇಲ್ ಮೂಲಕ ತಿಳಿಸಲಾಗುತ್ತಿದೆ

ಆಧಾರ: ನಿರ್ಭಯಾ ನಿಧಿ ಡ್ಯಾಶ್‌ಬೋರ್ಡ್‌, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪಿಐಬಿ ಪ್ರಕಟಣೆಗಳು, ಪಿಟಿಐ, ‘ಶಿಕ್ಷಣ, ಮಹಿಳೆ, ಮಕ್ಕಳು, ಯುವಜನತೆ ಹಾಗೂ ಕ್ರೀಡಾ ಸಂಸದೀಯ ಸ್ಥಾಯಿಸಮಿತಿ’ಯ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT