ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಲೋಕಲ್ ಸರ್ಕಲ್ಸ್ ಸಮೀಕ್ಷೆ: ಕೋವಿಡ್ ಲಸಿಕೆ ಬೇಡ ಎಂದ 33 ಕೋಟಿ ಜನ

ಲಸಿಕೆ ಅಜ್ಞಾನ ಹಿಂಜರಿಕೆಗೆ ಕಾರಣ
Last Updated 29 ಜೂನ್ 2021, 19:31 IST
ಅಕ್ಷರ ಗಾತ್ರ

ದೇಶದ 33 ಕೋಟಿಗೂ ಹೆಚ್ಚು ವಯಸ್ಕರು ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಹಿಂಜರಿಕೆ ಹೊಂದಿದ್ದಾರೆ. ಇವರಲ್ಲಿ ಕೆಲವು ಮಂದಿ ಲಸಿಕೆ ಪಡೆದುಕೊಳ್ಳುವುದೇ ಇರಲು ನಿರ್ಧಿರಿಸಿದ್ದರೆ, ಕೆಲವರು ಅಡ್ಡಪರಿಣಾಮಗಳ ಭಯದಿಂದ ಲಸಿಕೆಯಿಂದ ದೂರ ಉಳಿದಿದ್ದಾರೆ. ಲಸಿಕೆಯ ಪರಿಣಾಮಕತ್ವ ಮತ್ತು ಕ್ಲಿನಿಕಲ್ ಟ್ರಯಲ್‌ನ ಹೆಚ್ಚುವರಿ ಮಾಹಿತಿಗಳು ಬಹಿರಂಗವಾಗುವರೆಗೂ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ವರದಿ ಹೇಳಿದೆ. ಸಮೀಕ್ಷೆಯ ವರದಿಯು ಇದೇ ಭಾನುವಾರ ಬಿಡುಗಡೆಯಾಗಿದ್ದು, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಶಿಫಾರಸು ಮಾಡಲಾಗಿದೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರ ಜನಸಂಖ್ಯೆ 94 ಕೋಟಿಯಷ್ಟು ಇದೆ. ಸಮೀಕ್ಷೆ ನಡೆಸಿದ ಅವಧಿಯಲ್ಲಿ 24 ಕೋಟಿ ಜನರಿಗಷ್ಟೇ ಲಸಿಕೆಯ ಮೊದಲ ಡೋಸ್‌ ನೀಡಲಾಗಿತ್ತು. ಇನ್ನೂ 70 ಕೋಟಿ ಜನರಿಗೆ ಲಸಿಕೆ ನೀಡಬೇಕಿತ್ತು. ಆದರೆ ಲಸಿಕೆ ಪಡೆದುಕೊಳ್ಳಬೇಕಿರುವವರಲ್ಲಿ 33 ಕೋಟಿಯಷ್ಟು ಜನರು ಲಸಿಕೆ ಪಡೆದುಕೊಳ್ಳಲು ತೀವ್ರ ಹಿಂಜರಿಕೆ ಹೊಂದಿದ್ದಾರೆ ಎಂದು ಸಮೀಕ್ಷೆಯ ವರದಿ ಹೇಳಿದೆ.

33 ಜನರ ಹಿಂಜರಿಕೆ
33 ಕೋಟಿಯಷ್ಟು ಜನರು ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರ ಪ್ರಮಾಣವನ್ನು, ಇನ್ನೂ ಲಸಿಕೆ ಪಡೆದುಕೊಳ್ಳಬೇಕಿರುವ 70 ಕೋಟಿ ಜನರಿಗೆ ಹೋಲಿಸಿ ಈ ಲೆಕ್ಕಾಚಾರ ಮಾಡಲಾಗಿದೆ.

8,949: ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು
279 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ
(ಇನ್ನೂ ಲಸಿಕೆ ಪಡೆದುಕೊಳ್ಳದವರನ್ನಷ್ಟೇ ಸಮೀಕ್ಷೆಗೆ ಒಳಪಡಿಸಲಾಗಿದೆ)

ಹೈದರಾಬಾದ್‌ನಲ್ಲಿ ಆಟೋ ಚಾಲಕರಿಗೆ ನಡೆಸಲಾಗಿದ್ದ ಲಸಿಕೆ ಕಾರ್ಯಕ್ರಮದಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಎಎಫ್‌ಪಿ ಚಿತ್ರ
ಹೈದರಾಬಾದ್‌ನಲ್ಲಿ ಆಟೋ ಚಾಲಕರಿಗೆ ನಡೆಸಲಾಗಿದ್ದ ಲಸಿಕೆ ಕಾರ್ಯಕ್ರಮದಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಎಎಫ್‌ಪಿ ಚಿತ್ರ

70 ಕೋಟಿ/ ಇನ್ನೂ ಲಸಿಕೆ ಹಾಕಿಸಿಕೊಳ್ಳಬೇಕಿರುವ 18 ವರ್ಷ ಮೇಲ್ಪಟ್ಟವರ ಸಂಖ್ಯೆ. ವಯಸ್ಕರಿಗೆ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಅಡಿ ಈಗ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಜೂನ್ 21ರಿಂದ ಜಾರಿಗೆ ಬಂದ ಈ ಕಾರ್ಯಕ್ರಮದ ಅಡಿ ಆರಂಭದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಲಸಿಕೆಯ ಡೋಸ್‌ಗಳನ್ನು ನೀಡಲಾಗಿತ್ತು. ಆದರೆ ಈಗ ಪ್ರತಿದಿನ ನೀಡುತ್ತಿರುವ ಲಸಿಕೆಯ ಡೋಸ್‌ಗಳ ಸಂಖ್ಯೆ ಇಳಿಕೆಯಾಗುತ್ತಿದೆ.

20.3 ಕೋಟಿ/ ತಮ್ಮ ಸರದಿ ಬಂದ ತಕ್ಷಣ ಲಸಿಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿರುವವರ ಸಂಖ್ಯೆ. ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಿದರೆ, ಸಿದ್ಧವಿರುವ ಈ ಜನರಿಗೆ ಲಸಿಕೆ ಡೋಸ್‌ಗಳನ್ನು ನೀಡಬಹುದು

16.8 ಕೋಟಿ/ ಕೋವಿಡ್‌ ವಿರುದ್ಧ ಲಸಿಕೆಯ ಪರಿಣಾಮಗಳು, ರೂಪಾಂತರಿತ ತಳಿಯ ಕೊರೊನಾವೈರಾಣುವಿನ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದು ಪತ್ತೆಯಾದರೆ, ಲಸಿಕೆಯ ಕ್ಲಿನಿಕಲ್ ಟ್ರಯಲ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾದರೆ ಲಸಿಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿರುವವರ ಸಂಖ್ಯೆ. ಬೇರೆ ವಿದೇಶಿ ಲಸಿಕೆಗೂ ಕಾಯುತ್ತಿದ್ದೇವೆ ಎಂದು ಇವರಲ್ಲಿ ಕೆಲವರು ಹೇಳಿದ್ದಾರೆ. ಈ ಜನರು ಲಸಿಕೆ ಪಡೆದುಕೊಳ್ಳುವಂತೆ ಮಾಡಲು, ಸರ್ಕಾರವು ಜಾಗೃತಿ ಕಾರ್ಯಕ್ರಮ ನಡೆಸಬೇಕು. ರೂಪಾಂತರಿತ ತಳಿಗಳ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಈಗ ನಡೆಯುತ್ತಿರುವ ಅಧ್ಯಯನಗಳ ಬಗ್ಗೆ ಮಾಹಿತಿ ನೀಡಬೇಕು. ಆ ಮೂಲಕ ಈ ಜನರು ಲಸಿಕೆ ಪಡೆದುಕೊಳ್ಳಲು ಮನವೊಲಿಸಬಹುದು

8.4 ಕೋಟಿ/ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. ಜತೆಗೆ ಲಸಿಕೆ ಹಾಕಿಸಿಕೊಂಡರೆ ಅಡ್ಡಪರಿಣಾಮಗಳು ಉಂಟಾಗಬಹುದು ಎಂಬ ಭಯವಿದೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳವುದಿಲ್ಲ ಎಂದು ಹೇಳಿದವರ ಸಂಖ್ಯೆ. ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇವರಲ್ಲಿ ಜಾಗೃತಿ ಮೂಡಿಸುವ ಮೂಲಕ, ಲಸಿಕೆ ಪಡೆದುಕೊಳ್ಳಲು ಈ ಜನರ ಮನವೊಲಿಸಬಹುದು

16.1 ಕೋಟಿ/ ತಮ್ಮ ಈಗಿನ ಅನಾರೋಗ್ಯ ಮತ್ತು ವಿವಿಧ ಕಾಯಿಲೆಗಳ ಕಾರಣ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದೇವೆ ಎಂದವರ ಸಂಖ್ಯೆ. ಯಾವ ಅನಾರೋಗ್ಯ ಮತ್ತು ಕಾಯಿಲೆ ಇದ್ದವರು ಲಸಿಕೆ ತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಈ ಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ. ಯಾವ ಕಾಯಿಲೆ ಇದ್ದವರು ಲಸಿಕೆ ತೆಗೆದುಕೊಂಡರೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದರ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ

8.4 ಕೋಟಿ/ ಯಾವುದೇ ಕಾರಣಕ್ಕೂ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದವರ ಸಂಖ್ಯೆ. ಲಸಿಕೆ ಏಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಈ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ

ಜಾಗೃತಿಗೆ ಒತ್ತು ನೀಡಿ
33 ಕೋಟಿಯಷ್ಟು ಜನರು ಲಸಿಕೆ ಪಡೆದುಕೊಳ್ಳದೇ ಇರಲು ವಿವಿಧ ಕಾರಣಗಳನ್ನು ಮುಂದೊಡ್ಡಿದ್ದಾರೆ. ಕೋವಿಡ್‌ನ ಮೂರನೇ ಅಲೆ ಆಗಸ್ಟ್‌ ವೇಳೆಗೆ ಆರಂಭವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ ಹೆಚ್ಚು ಅಪಾಯಕಾರಿಯಾದ ಡೆಲ್ಟಾ ಪ್ಲಸ್ ರೂಪಾಂತರಿತ ತಳಿಯು ಹಲವು ರಾಜ್ಯಗಳಲ್ಲಿ ಹರಡಿದೆ. ಇಂತಹ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಶೇ 71ರಷ್ಟು ಜನರು ಹೇಳಿರುವುದು ಕಳವಳಕಾರಿ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಲಸಿಕೆಯ ಬಗ್ಗೆ ನಿಖರ ಮಾಹಿತಿ ಇಲ್ಲದೇ ಇರುವುದು ಮತ್ತು ತಪ್ಪು ಮಾಹಿತಿ ಇರುವುದೇ ಇದಕ್ಕೆ ಕಾರಣ. ಲಸಿಕೆ ತಯಾರಿಕೆ, ಕ್ಲಿನಿಕಲ್ ಪರೀಕ್ಷೆಗಳು, ಲಸಿಕೆಯ ಪರಿಣಾಮದ ಪ್ರಮಾಣ ಮತ್ತು ಲಸಿಕೆ ಬಳಕೆಗೆ ನೀಡುವ ಅನುಮತಿಯ ಪ್ರಕ್ರಿಯೆಗಳು ಮತ್ತಷ್ಟು ಪಾರದರ್ಶಕವಾಗಿ ಇರಬೇಕು. ಈ ಅಂಶಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸಿ, ಜನರಲ್ಲಿ ಲಸಿಕೆಗಳ ಬಗ್ಗೆ ವಿಶ್ವಾಸ ವೃದ್ಧಿಸುವ ಕೆಲಸವನ್ನು ಸರ್ಕಾರ ಮಾಡಬೇಕು.ಯಾವ ಕಾರಣಕ್ಕೂ ಲಸಿಕೆ ಪಡೆದುಕೊಳ್ಳದೇ ಇರಲು ನಿರ್ಧರಿಸಿರುವ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದೊಂದೇ ಉಳಿದಿರುವ ಏಕೈಕ ಮಾರ್ಗ ಎಂದು ವರದಿಯಲ್ಲಿ ಸೂಚಿಸಲಾಗಿದೆ.

ಮೂರನೇ ಅಲೆ ಬರುವ ಮುನ್ನವೇ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಸಮೀಕ್ಷೆಯ ಪ್ರಮುಖ ಅಂಶಗಳನ್ನು ಸಂಬಂಧಿತ ಸಚಿವಾಲಯದ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಲೋಕಲ್‌ ಸರ್ಕಲ್ಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT