ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಒಡಿಶಾದ ಪುರಿ ಜಗನ್ನಾಥ ಕಾರಿಡಾರ್‌- ರಾಜಕೀಯ ಸಮರ

Last Updated 7 ಅಕ್ಟೋಬರ್ 2022, 0:21 IST
ಅಕ್ಷರ ಗಾತ್ರ

ಪುರಿ ಜಗನ್ನಾಥ ಮಂದಿರದ ‘ರತ್ನ ಭಂಡಾರ’ದ ಕೊಠಡಿಯ ಬೀಗವನ್ನು ತೆರೆದು, ಕೊಠಡಿಯ ಭೌತಿಕ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಕಚೇರಿ ಹೇಳಿದೆ. ಇದರ ಜತೆಯಲ್ಲಿಯೇ ದೇವಾಲಯದ ಭೌತಿಕ ಸ್ಥಿತಿಗತಿಯ ಸರ್ವೇಕ್ಷಣೆ ನಡೆಸಬೇಕೂ ಎಂದು ಎಎಸ್‌ಐ ಹೇಳಿದೆ. ಇವೆಲ್ಲವೂ, ಒಡಿಶಾ ಸರ್ಕಾರ ಕೈಗೊಂಡಿರುವ ‘ಪುರಿ ಪರಂಪರಾ ಕಾರಿಡಾರ್ ಯೋಜನೆ’ಗೆ ತಡೆ ಒಡ್ಡುವ ಯತ್ನಗಳು ಎಂದೇ ವಿಶ್ಲೇಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರುಕೆಲ ತಿಂಗಳ ಹಿಂದಷ್ಟೇ ವಾರಾಣಸಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಉದ್ಘಾಟನೆ ಮಾಡಿದ್ದರು. ಎಎಸ್‌ಐ ನಿಯಮಗಳ ಅಡಿ ಸಂರಕ್ಷಿತ ಪ್ರದೇಶವಾಗಿದ್ದ ಕಾಶಿ ದೇವಾಲಯ ಸಂಕೀರ್ಣದಲ್ಲಿ, ಹೊಸ ದೇವಾಲಯಗಳು, ಅತಿಥಿ ಗೃಹ, ಸ್ನಾನಘಟ್ಟ, ಅಡುಗೆ ಕೋಣೆ, ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ದೇವಾಲಯದ ಆವರಣಕ್ಕೆ ಕೆಂಪು ಕಲ್ಲಿನ ಹಾಸು ಹಾಕಲಾಗಿತ್ತು. ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆಂದು ಈ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇಂಥದ್ದೇ ಒಂದು ಪ್ರಯತ್ನವನ್ನು ಒಡಿಶಾ ಸರ್ಕಾರ ಸಹ ಮಾಡುತ್ತಿದೆ. ಆದರೆ ಈ ಯೋಜನೆಗೆ ಬಿಜೆಪಿಯೇ ತಕರಾರು ತೆಗೆಯುತ್ತಿದೆ.ಜಗತ್ಪ್ರಸಿದ್ಧ ಪುರಿ ಜಗನ್ನಾಥನ ದೇವಾಲಯ ಸಂಕೀರ್ಣ, ರಥಬೀದಿ ಮತ್ತು ದೇವಾಲಯದ ಸುತ್ತ ಇರುವ ಮಠಗಳ ಸಂಕೀರ್ಣವನ್ನು ಅಭಿವೃದ್ಧಿಪಡಿಸುವ ಹಾಗೂ ಶೌಚಾಲಯ ಮತ್ತು ಅತಿಥಿಗೃಹವನ್ನು ನಿರ್ಮಿಸುವ ಯೋಜನೆ ಇದಾಗಿದೆ. ಆದರೆ, ಯೋಜನೆ ಆರಂಭವಾದಾಗಿನಿಂದ ಒಂದಿಲ್ಲೊಂದು ತಡೆಗಳು ಎದುರಾಗುತ್ತಲೇ ಇವೆ. ಯೋಜನೆ ವಿರುದ್ಧ ಪುರಿಯ ಕೆಲವು ನಿವಾಸಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಾದರೂ, ವಿರೋಧ ಪಕ್ಷ ಬಿಜೆಪಿ ಬಹಿರಂಗವಾಗಿ ಈ ಯೋಜನೆಯನ್ನು ವಿರೋಧಿಸುತ್ತಿದೆ.

2016ರಲ್ಲೇ ಒಡಿಶಾ ಸರ್ಕಾರ ಈ ಯೋಜನೆಗೆ ಯೋಜನಾ ವರದಿ ಸಿದ್ಧಪಡಿಸಿತ್ತು. ಆದರೆ, ಯೋಜನೆ ಕಾಮಗಾರಿ ಆರಂಭವಾಗಿದ್ದು 2020ರ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ. ಯೋಜನೆ ಅನುಷ್ಠಾನಕ್ಕೆ ದೇವಾಲಯ ಸಂಕೀರ್ಣವೂ ಸೇರಿ ಒಟ್ಟು 15 ಎಕರೆಗಳಷ್ಟು ಜಾಗದ ಅವಶ್ಯಕತೆ ಇತ್ತು. ದೇವಾಲಯ ಸಂಕೀರ್ಣದ ಸುತ್ತ ಇರುವ ವಸತಿ ಕಟ್ಟಡಗಳು ಮತ್ತು ಮಠಗಳ ಖಾಸಗಿ ಜಮೀನನ್ನು ಸರ್ಕಾರವು ಸ್ವಾಧೀನ ಪಡಿಸಿಕೊಂಡಿದೆ. ಅದಕ್ಕಾಗಿ ಪರಿಹಾರವನ್ನೂ ನೀಡಿದೆ. ಹೀಗೆ ಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿ ಇದ್ದ ಕಟ್ಟಡಗಳನ್ನು ನೆಲಸಮ ಮಾಡಿ, ಪುನರ್ ಅಭಿವೃದ್ಧಿ ಪಡಿಸಲಾಗುತ್ತಿದೆ.

ಸಂರಕ್ಷಿತ ಪ್ರದೇಶದ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸು ವಂತಿಲ್ಲ. ಈ ಕಾಮಗಾರಿಯಿಂದ ದೇವಾಲಯದ ಕಟ್ಟಡಕ್ಕೆ ಧಕ್ಕೆಯಾಗುತ್ತದೆ ಎಂದು ಪುರಿಯ ನಿವಾಸಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ದ್ದರು. ಸರ್ಕಾರ ಮತ್ತು ಎಎಸ್‌ಐನ ವಾದಗಳನ್ನು ಆಲಿಸಿದ್ದ ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿತ್ತು. ಅದೇ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೂ ಹೋಗಿದ್ದರು. ಅವರ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್‌, ಪ್ರತಿದಿನ 60,000ಕ್ಕೂ ಹೆಚ್ಚು ಜನರು ಭೇಟಿ ನೀಡುವ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ತೀರ್ಪು ನೀಡಿತ್ತು. ಇದರ ಮಧ್ಯೆ ಬಿಜೆಪಿ ಶಾಸಕರು ಯೋಜನೆಯನ್ನು ವಿರೋಧಿಸಿ, ಒಡಿಶಾ ವಿಧಾನಸಭೆಯಲ್ಲಿ ಗದ್ದಲ ನಡೆಸಿದ್ದರು. ಬಿಜೆಪಿ ಸಂಸದ ಅಪರಾಜಿತಾ ಸಾರಂಗಿಲೋಕಸಭೆಯಲ್ಲೂ ಯೋಜನೆಯನ್ನು ವಿರೋಧಿಸಿ ಮಾತನಾಡಿದ್ದರು. ಆದರೆ ಇವು ಯಾವುವೂ ಫಲ ನೀಡಿರಲಿಲ್ಲ. ಸುಪ್ರೀಂ ಕೋರ್ಟ್‌ನ ಅನುಮತಿಯ ಮೇರೆಗೆ ಒಡಿಶಾ ಸರ್ಕಾರ ಕಾಮಗಾರಿ ಮುಂದುವರಿಸಿದೆ.

ಆದರೆ, ಈಗ ದೇವಾಲಯದಲ್ಲಿರವ ರತ್ನ ಭಂಡಾರ ಕೊಠಡಿಯನ್ನು ತೆರೆಯುವ ಬೇಡಿಕೆ ಚಾಲ್ತಿಗೆ ಬಂದಿದೆ. ಇದನ್ನು ಆಗ್ರಹಿಸಿದವರಲ್ಲಿ ಬಿಜೆಪಿಯ ಶಾಸಕರೇ ಮೊದಲಿಗರು. ರತ್ನ ಭಂಡಾರದ ಪರಿಶೀಲನೆಯ ಜೊತೆಗೆ, ದೇವಾಲಯದ ಸದೃಢತೆಯನ್ನೂ ಪರಿಸೀಲಿಸಲು ಬಿಜೆಪಿ ಶಾಸಕರು ಬೇಡಿಕೆ ಇಟ್ಟಿದ್ದಾರೆ. ‘ಕಾಮಗಾರಿಯಿಂದ ದೇವಾಲಯಕ್ಕೆ ಧಕ್ಕೆಯಾಗಿದೆ ಎಂದು ಹೇಳಿ, ಯೋಜನೆಗೆ ಅಡ್ಡಿಪಡಿಸುವುದೇ ಇದರ ಹಿಂದಿನ ಉದ್ದೇಶ’ ಎಂದು ವಿಶ್ಲೇಷಿಸಲಾಗಿದೆ.

ಏನಿದು ರತ್ನ ಭಂಡಾರ

12ನೇ ಶತಮಾನದಲ್ಲಿ ಪೂರ್ವದ ಗಂಗರ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ನೆಲಮಾಳಿಗೆಯಲ್ಲಿ 2 ಕೋಣೆಗಳಿವೆ. ಒಂದು ಒಳಕೋಣೆ, ಇನ್ನೊಂದು ಹೊರಕೋಣೆ. ಹೊರಕೋಣೆ ಯಲ್ಲಿ ಇರುವ ಚಿನ್ನ, ಬೆಳ್ಳಿಯ ಆಭರಣಗಳನ್ನು ಪ್ರತಿನಿತ್ಯ ಹಾಗೂ ವಿಶೇಷ ಸಂದರ್ಭಗಳಲ್ಲಿ ಜಗನ್ನಾಥ ದೇವರ ವಿಗ್ರಹಕ್ಕೆ ತೊಡಿಸಲಾಗುತ್ತದೆ. ಆದರೆ ಒಳಕೋಣೆಯ ಬಾಗಿಲನ್ನು ಹತ್ತಾರು ವರ್ಷಗಳಿಂದ ತೆರೆದಿಲ್ಲ. ಅಲ್ಲಿ ಅಪಾರ ಮುತ್ತು ರತ್ನ, ವೈಡೂರ್ಯಗಳು ಇವೆ ಎನ್ನಲಾಗುತ್ತದೆ.

ರತ್ನಭಂಡಾರದ ಸುತ್ತ ಅನುಮಾನಗಳ ಹುತ್ತ

ಒಡಿಶಾದ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ) ಹಾಗೂ ಬಿಜೆಪಿ ನಡುವೆ ‘ರತ್ನಭಂಡಾರ’ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಇದು ರಾಜಕೀಯ ತಿರುವು ಪಡೆದಿದ್ದು, ಮುಂಬರುವ ಒಡಿಶಾ ವಿಧಾನಸಭೆ ಚುನಾವಣೆಯ ವಿಷಯವಾ ಗಿಯೂ ಮಾರ್ಪಾಟಾಗಿದೆ. ಪುರಿಯಲ್ಲಿ ರುವ ಐತಿಹಾಸಿಕ ಜಗನ್ನಾಥ ಮಂದಿರದ ನೆಲಮಾಳಿಗೆಯಲ್ಲಿ ಚಿನ್ನ, ಬೆಳ್ಳಿ, ರತ್ನ ಮೊದಲಾದ ಬೆಲೆಬಾಳುವ ಆಭರಣಗಳ ‘ರತ್ನಭಂಡಾರ’ ಇದೆ. ಈ ಭಂಡಾರದ ಬಾಗಿಲು ತೆರೆಯಬೇಕು ಎಂಬುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಗ್ರಹವಾಗಿದ್ದರೆ, ಬಿಜೆಡಿ ಸರ್ಕಾರವು ಭಂಡಾರದ ಬಾಗಿಲು ತೆರೆಯುವ ಆಲೋಚನೆಯಲ್ಲಿ ಇಲ್ಲ.

ಅಚ್ಚರಿಯೆಂದರೆ, ರತ್ನಭಂಡಾರದ ಬೀಗ ಕಳೆದುಹೋಗಿದೆಯಂತೆ. ನಾಲ್ಕು ವರ್ಷಗಳ ಹಿಂದೆ ಒಳಕೋಣೆಯ ಬಾಗಿಲು ತೆರೆಯುಲು ಮುಂದಾಗಿ ದ್ದಾಗ ಬೀಗ ಕಳೆದುಹೋಗಿರುವ ವಿಷಯ ಬಹಿರಂಗವಾಗಿತ್ತು. ಇದು ಜನರಲ್ಲಿ ಇನ್ನಷ್ಟು ಅನಮಾನಗಳನ್ನು ಹುಟ್ಟು ಹಾಕಿತ್ತು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಳೆದ ತಿಂಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾಜ್ಯ ಸರ್ಕಾರವು ಭಂಡಾರದ ಬಾಗಿಲನ್ನು ತೆರೆಯದೇ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದರು. ಬಿಜೆಡಿ ಆಡಳಿತದಲ್ಲಿ ದೇವಸ್ಥಾನದ ಖಜಾನೆಯೂ ಸುರಕ್ಷಿತವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ‘ನಕಲಿ’ ಬೀಗದ ಕೈ ಇದೆ ಎಂದು ಕೆಲವು ದಿನಗಳ ಬಳಿಕ ಜಿಲ್ಲಾಧಿಕಾರಿ ಹೇಳಿದ್ದರು. ‘ನಕಲಿ ಸರ್ಕಾರದ ಬಳಿ ಮಾತ್ರವೇ ನಕಲಿ ಬೀಗದ ಕೈ ಇರಲು ಸಾಧ್ಯ’ ಎಂದು ನಡ್ಡಾ ಲೇವಡಿ ಮಾಡಿದ್ದರು.

ಕೇರಳದ ಅನಂತಪದ್ಮನಾಭ ದೇವಸ್ಥಾನದ ನೆಲಮಾಳಿಗೆಯ ಬಿ ಕೋಣೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳು ಇವೆ ಎಂಬ ಸುದ್ದಿ ಕೆಲವು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಕೋಣೆಯ ಬಾಗಿಲನ್ನು ತೆರೆಯಬೇಕೇ ಬೇಡವೇ ಎಂಬ ಬಗ್ಗೆ ವಾದ–ವಿವಾದಗಳು ನಡೆದಿದ್ದವು. ಅದೇ ರೀತಿ ಜಗನ್ನಾಥ ಮಂದಿರದ ರತ್ನಭಂಡಾರ ಇದೀಗ ಚರ್ಚಿತ ವಿಷಯವಾಗಿದೆ. ಅನಂತಪದ್ಮನಾಭ ಮಂದಿರದಲ್ಲಿ ಇದೆ ಎನ್ನಲಾದ ಸಂಪತ್ತಿನ ಪ್ರಮಾಣಕ್ಕೆ ಹೋಲಿಸಿದರೆ, ಜಗನ್ನಾಥ ಮಂದಿರದ ಸಂಪತ್ತು ಕಡಿಮೆ ಎಂಬ ಮಾತಿದ್ದರೂ, ಐತಿಹಾಸಿಕವಾಗಿ ಇದು ಮಹತ್ವದ್ದು ಎಂದು ಪರಿಣತರು ಹೇಳುತ್ತಾರೆ.

ಎಷ್ಟಿದೆ ಆಭರಣ?: ರತ್ನಭಂಡಾರದಲ್ಲಿ 1978ರಲ್ಲಿ ನಡೆಸಿದ್ದ ಪರಿಶೀಲನೆಯ ಮಾಹಿತಿ ಯನ್ನು ರಾಜ್ಯ ಸರ್ಕಾರವು ವಿಧಾನಸಭೆಗೆ 2021ರಲ್ಲಿ ನೀಡಿತ್ತು. ರತ್ನಭಂಡಾರದಲ್ಲಿ 149 ಕೆ.ಜಿ. ಬಂಗಾರ, 258 ಕೆ.ಜಿ ಬೆಳ್ಳಿ ವಸ್ತುಗಳಿವೆ. ವಿವಿಧ ಕಾರಣಗಳಿಂದ, 14 ಬಗೆಯ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ತೂಕ ಮಾಡಿಲ್ಲ ಎಂದು ಸರ್ಕಾರ ಮಾಹಿತಿ ನೀಡಿತ್ತು.

44 ವರ್ಷಗಳ ಹಿಂದೆ ತೆರೆಯಲಾಗಿತ್ತು: ಈ ಭಂಡಾರವನ್ನು ಒಮ್ಮೆಯೂ ತೆರೆದಿಲ್ಲ ಎಂದಲ್ಲ. ಭಂಡಾರದ ಬಾಗಿಲನ್ನು ಪ್ರತೀ ಮೂರು ವರ್ಷಗಳಿಗೆ ಒಮ್ಮೆ ತೆರೆಯಬೇಕು ಎಂದು 1955ರ ಶ್ರೀ ಜಗನ್ನಾಥ ದೇವಸ್ಥಾನ ಕಾಯ್ದೆ ಹೇಳುತ್ತದೆ. 1803, 1926 ಹಾಗೂ 1978ರಲ್ಲಿ ಬಾಗಿಲು ತೆರೆಯಲಾಗಿತ್ತು. ಆದರೆ, ಕಳೆದ 44 ವರ್ಷಗಳಿಂದ ಇದರ ಬಾಗಿಲನ್ನು ತೆರೆದಿಲ್ಲ. 2018ರಲ್ಲಿ ಭಂಡಾರವನ್ನು ಪರಿಶೀಲಿಸುವ ಯತ್ನ ನಡೆದಿತ್ತು. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು, ದೇವಸ್ಥಾನದ ಅರ್ಚಕರು ಸಮೀಕ್ಷೆಗೆ ತೆರಳಿದ್ದರು. ಆದರೆ, ಭಂಡಾರದ ಬೀಗದ ಕೈ ಸಿಗಲಿಲ್ಲ. ಹೀಗಾಗಿ ಹೊರಗಡೆಯಿಂದಲೇ ಸಮೀಕ್ಷೆ ನಡೆಸಲಾಗಿತ್ತು. ಬೀಗ ಕಳವಾಗಿರುವ ವಿಚಾರ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.

ಬೀಗ ನಾಪತ್ತೆಯಾದ ಪ್ರಕರಣದ ತನಿಖೆ ನಡೆಸಲು, ನಿವೃತ್ತ ನ್ಯಾಯಮೂರ್ತಿ ರಘುಬೀರ್ ದಾಸ್ ನೇತೃತ್ವದಲ್ಲಿ ಸರ್ಕಾರವು ನ್ಯಾಯಾಂಗ ಆಯೋಗ ರಚಿಸಿತ್ತು. ಆಯೋಗವು 324 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಸರ್ಕಾರವು ವಿಧಾನಸಭೆಯಲ್ಲಿ ಈ ವರದಿಯನ್ನು ಈವರೆಗೂ ಮಂಡಿಸಿಲ್ಲ.

lದೇವಸ್ಥಾನದ ಕಟ್ಟಡ ರಚನೆಯನ್ನು ಭೌತಿಕವಾಗಿ ಪರಿಶೀಲಿಸಬೇಕಿರುವ ಕಾರಣ, ರತ್ನಭಂಡಾರವನ್ನು ತೆರೆಯಬೇಕು ಎಂದು ಭಾ‘ಭಂಡಾರದ ಗೋಡೆಯಲ್ಲಿ ಬಿರುಕು, ನೀರು’ರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸರ್ಕಾರಕ್ಕೆಇತ್ತೀಚೆಗೆ ಮನವಿ ಸಲ್ಲಿಸಿದೆ. ಭಂಡಾರದ ಗೋಡೆಗಳು ಹಾನಿಗೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಖುದ್ದು ಪರಿಶೀಲನೆ ನಡೆಸಿ ದುರಸ್ತಿ ಕೆಲಸ ಮಾಡಬೇಕಿದೆ ಎಂದು ಇಲಾಖೆ ತಿಳಿಸಿತ್ತು

lಭಂಡಾರದ ಗೋಡೆಗಳಲ್ಲಿ ಬಿರುಕುಗಳು ಮೂಡಿದ್ದು, ಅದರಲ್ಲಿ ನೀರು ಕಾಣಿಸಿಕೊಂಡಿದೆ ಎಂದು ಭಂಡಾರದ ಉಸ್ತುವಾರಿ ನೋಡುಕೊಳ್ಳುತ್ತಿರುವ ನೌಕರ ನಿರಂಜನ್ ಮೇಕಪ್ ಅವರು ಹೇಳಿದ್ದು, ದುರಸ್ತಿ ಮಾಡಬೇಕಿರುವ ಕಾರಣ, ತಕ್ಷಣವೇ ಭಂಡಾರದ ಬಾಗಿಲನ್ನು ತೆರೆಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

lಭಂಡಾರವನ್ನು ತೆರೆಯುವ ಮೂಲಕ, ಜನರಲ್ಲಿ ಎದ್ದಿರುವ ಅನುಮಾನಗಳಿಗೆ ಉತ್ತರ ನೀಡಬೇಕಿದೆ ಎಂದು ಪುರಿಯ ರಾಜ ಹಾಗೂ ದೇವಸ್ಥಾನ ನಿರ್ವಹಣಾ ಮಂಡಳಿಯ ಮುಖ್ಯಸ್ಥರೂ ಆಗಿರುವ ಗಜಪತಿ ಮಹಾರಾಜ ದಿವ್ಯಸಿಂಹ ದೇವ್‌ ಅಭಿಪ್ರಾಯಪಟ್ಟಿದ್ದಾರೆ

1978ರಲ್ಲಿ ಖುದ್ದು ಭಂಡಾರ ನೋಡಿದ್ದ ಮಿಶ್ರಾ: 1978ರಲ್ಲಿ ಕೊನೆಯ ಬಾರಿಗೆ ಭಂಡಾರದ ಪರಿಶೀಲನೆ ನಡೆದಿತ್ತು. ಆಗ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ರವೀಂದ್ರ ನಾರಾಯಣ ಮಿಶ್ರಾ ಅವರು ಪರಿಶೀಲನಾ ತಂಡದಲ್ಲಿದ್ದರು. ಅವರು ಹೇಳುವ ಪ್ರಕಾರ, ‘ಅತ್ಯಮೂಲ್ಯ ಆಭರಣಗಳನ್ನು ಒಳಕೋಣೆಯಲ್ಲಿ ಭದ್ರವಾಗಿ ಇರಿಸಲಾಗಿದೆ. ಭಾರಿ ಪ್ರಮಾಣದ ಚಿನ್ನ, ವಜ್ರ ಹಾಗೂ ಇನ್ನಿತರೆ ಆಭರಣಗಳನ್ನು ನಾನು ಅಂದು ನೋಡಿದ್ದೆ’ ಎಂದು ಮಿಶ್ರಾ ಹೇಳಿದ್ದಾರೆ.


ಆಧಾರ: ಪುರಿ ಜಗನ್ನಾಥ ಪಾರಂಪರಿಕ ಕಾರಿಡಾರ್ ಯೋಜನೆ ವರದಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT