ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಚುನಾವಣೆ 2020: ವಿಭಜಿತ ಅಮೆರಿಕ

Last Updated 8 ನವೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕನ್ನರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಿಭಜನೆ ಕಂಡುಬಂದಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ-ಮುಂದಿನ ಅಧ್ಯಕ್ಷ ಜೋ ಬೈಡನ್ ಅವರಿಗೆ ಬಂದಿರುವ ಮತಗಳ ವಿಶ್ಲೇಷಣೆಯಲ್ಲಿ ಇದು ಸಾಬೀತಾಗಿದೆ. ಕೆಲವು ಸಮುದಾಯಗಳು ಟ್ರಂಪ್‌ ಪರವಾಗಿ ನಿಂತರೆ, ಕೆಲವು ಸಮುದಾಯಗಳು ಬೈಡನ್‌ಗೆ ಮತ ನೀಡಿವೆ.

ಮತದಾನಕ್ಕೂ ಮೊದಲೇ ಈ ಸ್ವರೂಪದ ವಿಭಜನೆ ಅಮೆರಿಕದಲ್ಲಿ ಉಂಟಾಗಿತ್ತು. ಚುನಾವಣೆ ಎದುರಿಸಲು ಟ್ರಂಪ್ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯಗಳು ಮತ್ತು ಬೈಡನ್‌ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯಗಳಲ್ಲಿಯೇ ಈ ವಿಭಜನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಎರಡೂ ಪಕ್ಷದ ಅನುಯಾಯಿಗಳು ಮತ್ತು ಬೆಂಬಲಿಗರಲ್ಲೂ ಈ ವಿಭಜನೆ ಇತ್ತು. ಚುನಾವಣೆಗೂ ಮುನ್ನ, ಮತದಾನ ಮತ್ತು ಫಲಿತಾಂಶದ ನಂತರವೂ ಈ ವಿಭಜನೆ ಸ್ಪಷ್ಟವಾಗಿ ಕಾಣುತ್ತಿದೆ. ಶೈಕ್ಷಣಿಕ ಮಟ್ಟ, ಜನಾಂಗೀಯತೆ ಆಧಾರದಲ್ಲಿ ದೇಶವು ವಿಭಜನೆಯಾಗಿದೆ ಎಂದು ಸ್ಪಷ್ಟವಾಗಿ ಹೇಳುವುದಕ್ಕೆ ಪುರಾವೆಗಳಿವೆ.

ಚುನಾವಣಾ ಪ್ರಕ್ರಿಯೆ ಆರಂಭವಾಗುವ ಸಂದರ್ಭದಲ್ಲಿ ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರ ಸಾವು ಹೆಚ್ಚು ಸದ್ದು ಮಾಡಿತ್ತು. ಫ್ಲಾಯ್ಡ್‌ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿ ಬಿಳಿಯನೆಂಬುದು ಮತ್ತು ಆತನ ಸಾವಿಗೆ ಕಾರಣವಾದ ಕ್ರಿಯೆಯ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಫ್ಲಾಯ್ಡ್ ಸಾವನ್ನು ವಿರೋಧಿಸಿ ಅಮೆರಿಕದ ಕಪ್ಪುವರ್ಣೀಯರು ಭಾರಿ ಪ್ರತಿಭಟನೆ ನಡೆಸಿದ್ದರು. ಅಮೆರಿಕದ ಬಿಳಿಯ ಜನರೂ ಭಾರಿ ಪ್ರತಿಭಟನೆ ನಡೆಸಿದ್ದರು. ಆದರೆ, ಬಿಳಿಯ ಜನರಲ್ಲಿ ಕೆಲವು ವರ್ಗದ ಜನರು ಫ್ಲಾಯ್ಡ್ ಸಾವನ್ನು ಅಸಡ್ಡೆಯಿಂದ ನೋಡಿದ್ದರು. ಮತದಾನದಲ್ಲೂ ಈ ವಿಭಜನೆ ವ್ಯಕ್ತವಾಗಿದೆ.

ಆರ್ಥಿಕತೆ ವಿಚಾರದಲ್ಲೂ ಈ ಸ್ವರೂಪದ ವಿಭಜನೆ ಸ್ಪಷ್ಟವಾಗಿ ಗೋಚರಿಸಿತ್ತು. ಟ್ರಂಪ್ ಅವರ ‘ಅಮೆರಿಕವೇ ಮೊದಲು, ಅಮೆರಿಕನ್ನರೇ ಮೊದಲು’ ಎಂಬ ರಕ್ಷಣಾತ್ಮಕ ನೀತಿಗಳನ್ನು ಬೆಂಬಲಿಸಿದ್ದ ಮತದಾರರು ಈಗಲೂ ಟ್ರಂಪ್‌ಗೇ ಮತ ನೀಡಿದ್ದಾರೆ ಎಂಬುದು ಮತಗಳ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ಜಾಗತಿಕ ವಿಚಾರಗಳಲ್ಲಿ ಅಮೆರಿಕವು ವಹಿಸುತ್ತಿದ್ದ ಪಾತ್ರದಿಂದಾಗಿಯೇ ಆ ದೇಶವು ‘ಸೂಪರ್‌ ಪವರ್‌’, ‘ದೊಡ್ಡಣ್ಣ’ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ, ಟ್ರಂಪ್ ಅವರ ‘ಅಮೆರಿಕವೇ ಮೊದಲು’ ಎಂಬ ನೀತಿಯ ಕಾರಣದಿಂದ ಅಮೆರಿಕಕ್ಕೆ ಇದ್ದ ಈ ಮಾನ್ಯತೆ ಕುಗ್ಗುತ್ತಾ ಬಂದಿತ್ತು. ಈ ನೀತಿಗಳನ್ನು ವಿರೋಧಿಸಿದವರು ಬೈಡನ್ ಅವರಿಗೆ ಮತ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಪದವಿಮಟ್ಟದ ಶಿಕ್ಷಣ ಪಡೆದವರ ಪ್ರಮಾಣ ಹೆಚ್ಚು ಇರುವ ಪ್ರದೇಶಗಳಲ್ಲಿ ಬೈಡನ್ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ನಗರ ಪ್ರದೇಶದ ಯುವ ಮತ್ತು ಸುಶಿಕ್ಷಿತ ವರ್ಗದ ಮತದಾರರು ಡೆಮಾಕ್ರಟಿಕ್‌ ಪಕ್ಷದ ಉದಾರವಾದದ ನೀತಿಯನ್ನು ಬೆಂಬಲಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಹಿಲರಿ ಕ್ಲಿಂಟನ್ ಅವರು ಈ ವರ್ಗದಿಂದ ಪಡೆದಿದ್ದ ಮತಗಳಿಗಿಂತ ಹೆಚ್ಚು ಮತಗಳನ್ನು ಬೈಡನ್ ಪಡೆದಿದ್ದಾರೆ. ಆದರೆ ಪದವಿಗಿಂತಲೂ ಕಡಿಮೆ ಶಿಕ್ಷಣ ಪಡೆದಿರುವವರ ಪ್ರಮಾಣ ಹೆಚ್ಚು ಇರುವ ಪ್ರದೇಶದಲ್ಲಿ ಟ್ರಂಪ್ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ಶಿಕ್ಷಣದ ಪ್ರಮಾಣ ಅಧಿಕವಾಗಿರುವ ಪ್ರದೇಶಗಳಲ್ಲಿ ಉದಾರವಾದವನ್ನು ಬೆಂಬಲಿಸಿದವರ ಪ್ರಮಾಣ ಅಧಿಕವಾಗಿದೆ. ಶಿಕ್ಷಣದ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಸಂರಕ್ಷಣಾವಾದವನ್ನು ಬೆಂಬಲಿಸಿ ಮತ ಹಾಕಿದವರೇ ಹೆಚ್ಚು. ಮತಗಳ ವಿಶ್ಲೇಷಣೆಯಲ್ಲಿ ತಜ್ಞರು ಇದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಜನಾಂಗೀಯ ವಿಭಜನೆ ಮತದಾನದಲ್ಲೂ ವ್ಯಕ್ತವಾಗಿದೆ. ಕಪ್ಪು ವರ್ಣೀಯರು, ಆಫ್ರಿಕ ಮೂಲದ ಅಮೆರಿಕನ್ನರು ಮತ್ತು ಪದವಿಗಿಂತಲೂ ಹೆಚ್ಚು ಶಿಕ್ಷಣ ಪಡೆದಿರುವ ಬಿಳಿಯ ಜನರು ಬೈಡನ್ ಅವರಿಗೆ ಹೆಚ್ಚು ಮತ ನೀಡಿದ್ದಾರೆ. ಅಮೆರಿಕದ ಗ್ರಾಮೀಣ ಪ್ರದೇಶದ ಬಿಳಿಯ ಜನರು, ಈ ಭಾಗದ ವೃದ್ಧರು ಮತ್ತು ಮಧ್ಯವಯಸ್ಕರು ಟ್ರಂಪ್ ಅವರಿಗೆ ಮತ ನೀಡಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೂ ಈ ಸ್ವರೂಪದ ವಿಭಜನೆ ಢಾಳಾಗಿ ಕಾಣುತ್ತಿದೆ. ಕಪ್ಪು ವರ್ಣೀಯರು ವಾಷಿಂಗ್ಟನ್ ಡಿ.ಸಿ. ಬಳಿಯ ‘ಬ್ಲ್ಯಾಕ್ ಲೈವ್ ಮ್ಯಾಟರ್‌ ಫ್ಲಾಜಾ’ ಬಳಿ ಸಂಭ್ರಮಾಚರಣೆ ನಡೆಸಿದ್ದಾರೆ. ದೇಶದ ವಿವಿಧೆಡೆ ಕಪ್ಪು ಜನರು ಮತ್ತು ಬೈಡನ್ ಬೆಂಬಲಿಗರು ಸಾರ್ವಜನಿಕವಾಗಿ ಸಂಭ್ರಮವನ್ನು ಆಚರಿಸಿದ್ದಾರೆ.

ಆದರೆ, ಟ್ರಂಪ್ ಬೆಂಬಲಿಗರು ದೇಶದ ಹಲವು ರಾಜ್ಯಗಳಲ್ಲಿ ಶೋಕಾಚರಣೆ ನಡೆಸಿದ್ದಾರೆ. ಮಿಷಿಗನ್ ರಾಜ್ಯದ ರಾಜಧಾನಿಯಲ್ಲಿ ಟ್ರಂಪ್ ಬೆಂಬಲಿಗರು, ಚುನಾವಣಾ ಫಲಿತಾಂಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್ ಪರವಾಗಿ ನಡೆದ ಪ್ರತಿಭಟನೆಗಳಲ್ಲಿ ಬಿಳಿಯ ಜನರ ಸಂಖ್ಯೆಯೇ ಹೆಚ್ಚಾಗಿತ್ತು ಎಂದು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಹೇಳಿದೆ.

ಈಗ ಚುನಾವಣೆ ಬಹುತೇಕ ಮುಗಿದಿದೆ. ಅಮೆರಿಕದಲ್ಲಿ ಆಗಿರುವ ಈ ಒಡಕನ್ನು ಬೈಡನ್ ಅವರು ಹೇಗೆ ಒಗ್ಗೂಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT