ಗುರುವಾರ , ಜುಲೈ 7, 2022
20 °C

ಆಳ–ಅಗಲ: ನದಿ ಜೋಡಣೆ.. ಇದೆ ಹಲವು ಅಡಚಣೆ

ಅಮೃತ್‌ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನದಿ ಜೋಡಣೆ ವಿಷಯ ಪ್ರಸ್ತಾಪಿಸಲಾಗಿದ್ದು, ಕೆನ್–ಬೆಟ್ವಾ ನದಿ ಜೋಡಣೆ ಯೋಜನೆಗೆ ಹಣ ತೆಗೆದಿರಿಸಲಾಗಿದೆ. ಜೊತೆಗೆ ದೇಶದ ಇತರ ಐದು ನದಿಗಳನ್ನು ಬೆಸೆಯುವ ನಿರ್ಧಾರ ಅಂತಿಮಗೊಂಡಿದೆ. ಪೆನ್ನಾರ್–ಕಾವೇರಿ,
ಕೃಷ್ಣಾ–ಪೆನ್ನಾರ್, ಕೃಷ್ಣಾ–ಗೋದಾವರಿ, ಪಾರ್ ತಾಪಿ–ನರ್ಮದಾ ಹಾಗೂ ದಮನ್ ಗಂಗಾ ಪಿಂಜಾಲ್ ನದಿಗಳು ಜೋಡಣೆ ಆಗಲಿವೆ. ಕರ್ನಾಟಕಕ್ಕೆ ಸಂಬಂಧಪಟ್ಟಂತೆ, ಕಾವೇರಿ, ಕೃಷ್ಣಾ, ಪೆನ್ನಾರ್ ನದಿಗಳಿಗೆ ಸಂಪರ್ಕ ಕಲ್ಪಿಸುವುದರಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಕೆನ್–ಬೆಟ್ವಾ

ಮಧ್ಯಪ್ರದೇಶದ ಬರಪೀಡಿತ ಬುಂದೇಲ್‌ಖಂಡಕ್ಕೆ ನೀರುಣಿಸುವ ₹46 ಸಾವಿರ ಕೋಟಿ ವೆಚ್ಚದ ಕೆನ್–ಬೆಟ್ವಾ ನದಿ ಜೋಡಣೆ ಯೋಜನೆಯಿಂದ 9.05 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರು ಲಭ್ಯವಾಗಲಿದೆ. ಇದರಿಂದ 65 ಲಕ್ಷ ಜನರಿಗೆ ಕುಡಿಯುವ ನೀರು ದೊರಕಲಿದೆ. ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸಂಪುಟವು ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಉತ್ತರ ಪ್ರದೇಶದ ಕೆಲವು ಜಿಲ್ಲೆಗಳೂ ನೀರು ಪಡೆಯಲಿವೆ. ಯೋಜನೆಯಿಂದ ಈ ಜಿಲ್ಲೆಗಳ ಜನರ ಸಾಮಾಜಿಕ–ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೃಷಿ ಚಟುವಟಿಕೆ ಹೆಚ್ಚಾಗಿ, ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಜನರ ವಲಸೆ ತಪ್ಪುತ್ತದೆ. ಆದರೆ, ಈ ಪ್ರದೇಶದಲ್ಲಿನ ಅಳಿವಿನಂಚಿನಲ್ಲಿರುವ ಹುಲಿ ಸಂರಕ್ಷಣೆ ಕಾರ್ಯಕ್ರಮಗಳಿಗೆ ಯೋಜನೆಯಿಂದ ಅಡ್ಡಿಯಾಗಲಿದೆ ಎಂಬ ಕೂಗು ಎದ್ದಿದೆ. ಹುಲಿಗಳ  ಆವಾಸಸ್ಥಾನಗಳ ನಡುವಿನ ಸಂಪರ್ಕ ಕಡಿತಗೊಳಿಸಿದರೆ, ಅವುಗಳ ಸಂತತಿ ಕ್ಷೀಣಿಸುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಗೋದಾವರಿ–ಕೃಷ್ಣಾ ಹಾಗೂ ಪೆನ್ನಾರ್–ಕಾವೇರಿ

2020ರಲ್ಲಿ, ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವರು ಗೋದಾವರಿ–ಕೃಷ್ಣಾ–ಕಾವೇರಿ ನದಿಗಳನ್ನು ಜೋಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದರು. ಗೋದಾವರಿಯಿಂದ 247 ಟಿಎಂಸಿ ಹೆಚ್ಚುವರಿ ನೀರನ್ನು ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ಜಲಾನಯನ ಪ್ರದೇಶಗಳನ್ನು ಒಳಗೊಂಡ ದಕ್ಷಿಣದ ಪ್ರದೇಶಗಳಿಗೆ ತಿರುಗಿಸಬಹುದು ಎಂದು ಡಿಪಿಆರ್ ಹೇಳಿದೆ. ಈ ಯೋಜನೆ ಮೂರು ಹಂತಗಳಲ್ಲಿದೆ. ಈ ಯೋಜನೆಯ ಮೊದಲ ಹಂತದಲ್ಲಿ ತನ್ನ ಪಾಲಿನ 200 ಟಿಎಂಸಿ ಅಡಿ ನೀರನ್ನು ನೀಡುವಂತೆ ತಮಿಳುನಾಡು ಕೋರಿದೆ. ದಕ್ಷಿಣದ ರಾಜ್ಯಗಳಿಗೆ ಅನುಕೂಲವಾಗುವಂತೆ ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ತಮಿಳುನಾಡು ಕೇಂದ್ರವನ್ನು ಒತ್ತಾಯಿಸಿತ್ತು. ಆದರೆ, ತಮಿಳುನಾಡಿನ ಉದ್ದೇಶಿತ ಕಾವೇರಿ-ವೈಗೈ-ಗುಂಡಾರ್ ಅಂತರ್‌ರಾಜ್ಯ ನದಿ ಜೋಡಣೆ ಯೋಜನೆಯನ್ನು ಕರ್ನಾಟಕ ವಿರೋಧಿಸಿತ್ತು.

ಪೆನ್ನಾರ್–ಕೃಷ್ಣಾ

ಕರ್ನಾಟಕದಲ್ಲಿ ಕೇವಲ 20 ಕಿಲೋಮೀಟರ್ ಉದ್ದಕ್ಕೆ ಹರಿಯುವ ಪೆನ್ನಾರ್ ನದಿಯನ್ನು ಕೃಷ್ಣಾ ನದಿ ಜೊತೆ ಸಂಪರ್ಕಿಸುವ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ. ಈ ನದಿ ಮುಂದೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹರಿಯುತ್ತದೆ. ಈ ಯೋಜನೆಯಿಂದ ಕರ್ನಾಟಕವು ಕೃಷ್ಣಾ ನದಿಯಿಂದ ಪಡೆಯುವ ನೀರಿನ ಪ್ರಮಾಣವು ಕಡಿಮೆಯಾಗಲಿದ್ದು, ಆಂಧ್ರಪ್ರದೇಶಕ್ಕೆ ಹೆಚ್ಚು ನೀರು ಹರಿದುಹೋಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ನದಿಗಳನ್ನು ಯಾವ ಸ್ಥಳದಲ್ಲಿ ಬೆಸೆಯಲಾಗುತ್ತದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಯೋಜನೆಯ ಡಿಪಿಆರ್ ತಯಾರಿ ಹಂತದಲ್ಲೇ ಕರ್ನಾಟಕಕ್ಕೆ ಹಂಚಿಕೆಯಾಗುವ ನೀರಿನ ಪಾಲು ನಿರ್ಧಾರವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಬೇಡಿಕೆಯನ್ನು ಮಂಡಿಸಿದ್ದಾರೆ. ಬಚಾವತ್ ತೀರ್ಪಿನಂತೆ, ರಾಜ್ಯಕ್ಕೆ ಕೃಷ್ಣಾ ನದಿಯಿಂದ 734 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ನ್ಯಾ. ಬೃಜೇಶ್ ಕುಮಾರ್ ಆಯೋಗವು ಹೆಚ್ಚುವರಿಯಾಗಿ 130 ಟಿಂಎಸಿ ಅಡಿ ನೀರು ಹಂಚಿದ್ದು, ಈ ಬಗ್ಗೆ ಅಧಿಸೂಚನೆ ಪ್ರಕಟವಾಗುವುದು ಬಾಕಿಯಿದೆ. 

ದಮನ್‌ಗಂಗಾ–ಪಿಂಜಾಲ್

ಮುಂಬೈ ನಗರಕ್ಕೆ ನೀರು ಒದಗಿಸಲು ದಮನ್‌ಗಂಗಾ ಜಲಾನಯನ ಪ್ರದೇಶದಿಂದ ಹೆಚ್ಚುವರಿ ನೀರನ್ನು ತಿರುಗಿಸಲು ದಮನ್‌ಗಂಗಾ-ಪಿಂಜಾಲ್ ನದಿಯನ್ನು ಸಂಪರ್ಕಿಸುವ ಗುರಿ ಹಾಕಿಕೊಳ್ಳಲಾಗಿದೆ. ದಮನ್‌ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಭುಗಡ್ ಜಲಾಶಯ ಮತ್ತು ಉಪನದಿ ವಾಘ್‌ಗೆ ಅಡ್ಡಲಾಗಿ ಕಟ್ಟಿರುವ ಖಾರ್ಗಿಹಿಲ್ ಜಲಾಶಯದಲ್ಲಿ ಲಭ್ಯವಾಗುವ ನೀರನ್ನು ವರ್ಗಾಯಿಸಲು ಉದ್ದೇಶಿಸಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪೀಂಟಲುಕಾದ ಭುಗಡ್ ಗ್ರಾಮದ ಬಳಿ ದಮನ್‌ಗಂಗಾ ನದಿಯ ಮೇಲೆ 826 ಮೀ ಉದ್ದದ ಅಣೆಕಟ್ಟು ನಿರ್ಮಿಸುವ ಪ್ರಸ್ತಾವವಿದೆ. 

ಪಾರ್ ತಾಪಿ–ನರ್ಮದಾ

ಪಾರ್–ತಾಪಿ–ನರ್ಮದಾ ನದಿಗಳ ಜೋಡಣೆಯು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಾಗಿತ್ತು. ಇದರ ಅಂದಾಜು ವೆಚ್ಚ ₹16 ಸಾವಿರ ಕೋಟಿ. ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಹರಿಯುವ ಪಶ್ಚಿಮ ಘಟ್ಟಗಳ ನದಿಗಳ ಹೆಚ್ಚುವರಿ ನೀರನ್ನು ಈ ಯೋಜನೆಗಳು ಗುಜರಾತ್‌ನ ಬರಪೀಡಿತ ಕಛ್‌ ಹಾಗೂ ಸೌರಾಷ್ಟ್ರಕ್ಕೆ ವರ್ಗಾಯಿಸುತ್ತವೆ. ಯೋಜನೆಯಿಂದ ಬುಡಕಟ್ಟು ಜನರು ತಮ್ಮ ವಾಸಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕವಿದೆ. ಯೋಜನೆ ವಿರೋಧಿಸಿ ಕೆಲವು ವರ್ಷಗಳಿಂದ ಗುಜರಾತ್‌ನಲ್ಲಿ ದೊಡ್ಡ ಪ್ರತಿಭಟನೆಗಳೂ ನಡೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು