ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಷ್ಯಾ–ಉಕ್ರೇನ್‌ ಯುದ್ಧ ಭಾರತಕ್ಕೆ ತುಟ್ಟಿ

Last Updated 24 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಭಾರತದ ಅಡುಗೆ ಮನೆಗಳಲ್ಲಿ ಒಂದಿಷ್ಟು ಕಂಪನಕ್ಕೆ ಕಾರಣವಾಗಲಿದೆ. ಉಕ್ರೇನ್ ಹಾಗೂ ರಷ್ಯಾದಿಂದ ಪೂರೈಕೆಯಾಗುವ ಸೂರ್ಯಕಾಂತಿ ಎಣ್ಣೆ ಹಾಗೂ ಗೋಧಿ ಸೇರಿದಂತೆ ಹಲವು ದವಸ–ಧಾನ್ಯಗಳ ಮೇಲೆ ಭಾರತ ಅವಲಂಬಿತವಾಗಿದೆ. ದ್ರವೀಕೃತ ನೈಸರ್ಗಿಕ ಅನಿಲವನ್ನು (ಎನ್ಎನ್‌ಜಿ) ಈ ಎರಡೂ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಕಪ್ಪು ಸಮುದ್ರ ವ್ಯಾಪ್ತಿಯಲ್ಲಿರುವ ರಷ್ಯಾ ಹಾಗೂ ಉಕ್ರೇನ್ ದೇಶಗಳನ್ನು ಯುರೋಪಿನ ಗೋಧಿ ಕಣಜ ಎಂದೇ ಕರೆಯಲಾಗುತ್ತದೆ. ಇಲ್ಲಿ ಗೋಧಿ, ಸೂರ್ಯಕಾಂತಿ, ಸೋಯಾಬೀನ್ ಮೊದಲಾದ ಬೆಳೆಗಳನ್ನು ಅತ್ಯಂತ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿಂದ ಜಗತ್ತಿಗೆ ಅತ್ಯಧಿಕ ಪ್ರಮಾಣದಲ್ಲಿ ಧಾನ್ಯಗಳು ಪೂರೈಕೆಯಾಗುತ್ತವೆ. ಆದರೆ ಯುದ್ಧ ಆರಂಭವಾಗಿರುವುದರಿಂದ ಈ ಉತ್ಪನ್ನಗಳ ಪೂರೈಕೆ ವ್ಯತ್ಯಯವಾಗುತ್ತದೆ. ಇದು ಆಹಾರ ಹಣದುಬ್ಬರಕ್ಕೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು.

ಜಗತ್ತಿನ ಅತಿದೊಡ್ಡ ಗೋಧಿ ರಫ್ತು ದೇಶ ರಷ್ಯಾ. ಉಕ್ರೇನ್ 4ನೇ ಸ್ಥಾನದಲ್ಲಿದೆ. ಜಗತ್ತಿಗೆ ಪೂರೈಕೆಯಾಗುವ ಗೋಧಿಯಲ್ಲಿ ಈ ಎರಡೂ ದೇಶಗಳ ಪಾಲು ಶೇ 25ಕ್ಕಿಂತ ಹೆಚ್ಚು. ಪೂರೈಕೆ ಸರಪಳಿಯಲ್ಲಿ ಆಗಿರುವ ವ್ಯತ್ಯಾಸ ಹಾಗೂ ಕೋವಿಡ್ ಕಾರಣದಿಂದ ಬೆಲೆಗಳು ಈಗಾಗಲೇ ಏರಿಕೆಯಾಗಿದ್ದು, ಯುದ್ಧದಿಂದ ಇನ್ನಷ್ಟು ಏರಿಕೆ ಖಚಿತವಾಗಿದೆ. ಭಾರತವು ಈ ಎರಡೂ ದೇಶಗಳಿಂದ ಗೋಧಿಯನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಅಲ್ಪವಾದರೂ, ಪರಿಣಾಮ ಇದ್ದೇ ಇರುತ್ತದೆ. ಭಾರತಕ್ಕೆ ಅಮೆರಿಕದಿಂದ ಹೆಚ್ಚು ಗೋಧಿ ಆಮದಾಗುತ್ತದೆ.

ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಮೊಬೈಲ್ ಫೋನ್‌ಗಳಲ್ಲಿ ಬಳಸಲಾಗುವ ಪಲೇಡಿಯಂಲೋಹದ ಬೆಲೆ ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿದೆ. ರಷ್ಯಾದ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸುತ್ತದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಈಗಾಗಲೇ ಬೆಲೆ ಏರಿಕೆಯಾಗಿದೆ. ರಷ್ಯಾವು ಪಲೇಡಿಯಂ ಲೋಹದ ವಿಶ್ವದ ಅತಿದೊಡ್ಡ ರಫ್ತುದಾರ ದೇಶವಾಗಿದೆ. ಯುದ್ಧದ ಕಾರಣಕ್ಕೆ ಪೂರೈಕೆ ತಗ್ಗುವುದರಿಂದ ಜಗತ್ತಿನಲ್ಲಿಲೋಹ ಬೆಲೆ ಇನ್ನಷ್ಟು ಏರಿಕೆ ಕಾಣಲಿದೆ.ತಾಮ್ರ ಹಾಗೂ ಅಲ್ಯುಮಿನಿಯಂ ಲೋಹಗಳ ಮೇಲೂ ಭಾರತ ಈ ಎರಡೂ ದೇಶಗಳನ್ನು ಆಶ್ರಯಿಸಿದ್ದು, ಇವುಗಳ ಬೆಲೆಯೂ ಏರಿಕೆ ಕಾಣಲಿದೆ.

ಔಷಧ ಉದ್ಯಮಕ್ಕೆ ಹೊಡೆತ?

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಔಷಧ ಉದ್ಯಮದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಭಾರತದ ಔಷಧ ಕಂಪನಿಗಳುಉಕ್ರೇನ್‌ ಹಾಗೂ ರಷ್ಯಾಗೆ ಹೆಚ್ಚಿನ ಪ್ರಮಾಣದ ಔಷಧವನ್ನು ರಫ್ತು ಮಾಡುತ್ತವೆ. ಭಾರತವು ಜರ್ಮನಿ ಹಾಗೂ ಫ್ರಾನ್ಸ್ ನಂತರ ಉಕ್ರೇನ್‌ಗೆ ಅಧಿಕ ಪ್ರಮಾಣದ ಔಷಧವನ್ನು ರಫ್ತು ಮಾಡುತ್ತದೆ.

2021–22ರ ಅವಧಿಯಲ್ಲಿ (ಡಿಸೆಂಬರ್‌ವರೆಗೆ) ಭಾರತವು ₹812 ಕೋಟಿ ಮೌಲ್ಯದ ಔಷಧವನ್ನು ಉಕ್ರೇನ್‌ಗೆ ರಫ್ತು ಮಾಡಿದೆ. ಇದೇ ಅವಧಿಯಲ್ಲಿ ರಷ್ಯಾಗೆ₹2,867 ಕೋಟಿ ಮೌಲ್ಯದ ಔಷಧಗಳನ್ನು ಮಾರಾಟ ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ದತ್ತಾಂಶಗಳು ಮಾಹಿತಿ ನೀಡುತ್ತವೆ.

ಭಾರತದ ಹಲವು ಔಷಧ ಕಂಪನಿಗಳು ಉಕ್ರೇನ್ ಹಾಗೂ ರಷ್ಯಾದಲ್ಲಿ ನೆಲೆಯೂರಿವೆ.ಪ್ರಸಕ್ತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಉಕ್ರೇನ್‌ನಲ್ಲಿ ಪ್ರಮುಖ ಔಷಧ ಕಂಪನಿಯಾಗಿ ಬೆಳೆದಿರುವ ಡಾ. ರೆಡ್ಡೀಸ್ ಲ್ಯಾಬ್ ಪ್ರತಿಕ್ರಿಯಿಸಿದೆ. ರಷ್ಯಾ ಉತ್ಪಾದನೆ ಮಾಡಿರುವ ಸ್ಪುಟ್ನಿಕ್ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಪೂರೈಸುವ ಗುತ್ತಿಗೆಯನ್ನು ಡಾ. ರೆಡ್ಡೀಸ್ ಲ್ಯಾಬ್ ಪಡೆದುಕೊಂಡಿತ್ತು.

ಭಾರತದ ಸನ್ ಫಾರ್ಮಾ ಕೂಡ ರಷ್ಯಾದಲ್ಲಿ ಭದ್ರವಾಗಿ ನೆಲೆಯೂರಿದೆ. ರ್‍ಯಾನ್‌ಬಾಕ್ಸಿ ಸಂಸ್ಥೆಯು ಸಹ 1993ರಿಂದ ರಷ್ಯಾದಲ್ಲಿ ನೆಲೆಯೂರಿದೆ. ಯುದ್ಧದಂತಹ ಸನ್ನಿವೇಶಗಳು ಔಷಧ ಉದ್ಯಮದ ಮೇಲೆ ನೇರ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ಪೆಟ್ಟು ನೀಡುತ್ತವೆ ಎನ್ನುತ್ತಾರೆ ತಜ್ಞರು.

ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ

ತೈಲ ರಫ್ತು ದೇಶಗಳ ಒಕ್ಕೂಟ (ಒಪೆಕ್‌) ಹೊರತುಪಡಿಸಿ, ವಿಶ್ವದಲ್ಲಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಎರಡನೇ ದೊಡ್ಡ ದೇಶ ರಷ್ಯಾ. ರಷ್ಯಾವನ್ನು ಒಪೆಕ್‌ ಪ್ಲಸ್‌ ದೇಶ ಎಂದು ಪರಿಗಣಿಸಲಾಗಿದೆ. ರಷ್ಯಾದಿಂದ ಬಿಕರಿಯಾಗುವ ಕಚ್ಚಾತೈಲವನ್ನು ಬ್ರೆಂಟ್‌ ಕಚ್ಚಾ ತೈಲ ಎಂದು ವರ್ಗೀಕರಿಸಲಾಗುತ್ತದೆ. ಒಪೆಕ್‌ ಮತ್ತು ಒಪೆಕ್ ಪ್ಲಸ್‌ ದೇಶಗಳು ಕಚ್ಚಾತೈಲ ಉತ್ಪಾದನೆ ಕಡಿತ ಮಾಡಿರುವ ಕಾರಣ, ಪ್ರತಿ ಬ್ಯಾರೆಲ್‌ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ರಷ್ಯಾ ಈಗ ಯುದ್ಧ ಘೋಷಿಸಿದ ಬೆನ್ನಲ್ಲೇ ಪ್ರತಿ ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲದ ಬೆಲೆ 100 ಡಾಲರ್‌ ಗಡಿ ದಾಟಿದೆ.

ಇದರ ನೇರ ಪರಿಣಾಮ ಭಾರತದ ಇಂಧನ ಬಳಕೆದಾರರ ಮೇಲೆ ಆಗಲಿದೆ. ಕಚ್ಚಾತೈಲದ ಬೆಲೆ ಏರಿಕೆಯಾದರೆ, ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ಬೆಲೆ ಏರಿಕೆಯಾಗಲಿದೆ. ಯುದ್ಧ ಮುಂದುವರಿದಂತೆ ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಅತ್ಯಧಿಕವಾಗಿದೆ. ಹಾಗೇನಾದರೂ ಆದರೆ, ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಮತ್ತಷ್ಟು ತುಟ್ಟಿಯಾಗಲಿದೆ.

ಈಗಾಗಲೇ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹100ರ ಗಡಿ ದಾಟಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ ₹90ರ ಆಸುಪಾಸಿನಲ್ಲಿದೆ. ಇವುಗಳ ಬೆಲೆ ಮತ್ತಷ್ಟು ಏರಿಕೆಯಾದರೆ, ಜನರ ತಿಂಗಳ ಖರ್ಚಿನಲ್ಲಿ ಏರಿಕೆ ಆಗುತ್ತದೆ.

ಭದ್ರತೆಗೆ ತೊಡಕು

ರಷ್ಯಾ ಮತ್ತು ಉಕ್ರೇನ್‌ ಯುದ್ಧವು ಭಾರತದ ಭದ್ರತಾ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರುವ ಅಪಾಯಗಳಿವೆ. ಭಾರತವು ಈಗ ಉಕ್ರೇನ್‌ ಮತ್ತು ರಷ್ಯಾದಿಂದ ಹೊಸ ಸೇನಾ ಸಲಕರಣೆಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಆದರೆ, ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಈಗ ಬಳಕೆಯಲ್ಲಿರುವ ಹೆಲಿಕಾಪ್ಟರ್‌ಗಳು, ವಿಮಾನಗಳು, ಯುದ್ಧವಿಮಾನಗಳು, ಹಡಗುಗಳು, ಫಿರಂಗಿಗಳು, ರೈಫಲ್‌ಗಳು ಮತ್ತು ಸೇನಾ ವಾಹನಗಳ ಬಿಡಿಭಾಗಗಳು ಹಾಗೂ ಕೆಲವು ಮದ್ದುಗುಂಡುಗಳಿಗಾಗಿ ರಷ್ಯಾ ಮತ್ತು ಉಕ್ರೇನ್‌ ಅನ್ನು ಅವಲಂಬಿಸಿದೆ.

ಈ ಸಾಮಗ್ರಿಗಳನ್ನು ಭಾರತವುಸೋವಿಯತ್ ರಷ್ಯಾ ಪತನಕ್ಕೂ ಮೊದಲು ಖರೀದಿಸಿತ್ತು. ಆಗ ಉಕ್ರೇನ್‌, ಸೋವಿಯತ್ ರಷ್ಯಾದ ಭಾಗವಾಗಿತ್ತು. ಭಾರತಕ್ಕೆ ರಷ್ಯಾ ಪೂರೈಸಿದ್ದ ಸೇನಾ ಸಾಮಗ್ರಿಗಳು ಉಕ್ರೇನ್‌ನಲ್ಲಿನ ಕೈಗಾರಿಕಾ ಪ್ರದೇಶಗಳಿಂದ ಪೂರೈಕೆಯಾಗಿತ್ತು. ಈಗಲೂ ಈ ಪೂರೈಕೆ ಜಾಲ ಅಸ್ತಿತ್ವದಲ್ಲಿ ಇದೆ. ರಷ್ಯಾದ ಸೇನಾ ವಾಹನಗಳು ಮತ್ತು ಯುದ್ಧನೌಕೆಗಳ ಎಂಜಿನ್‌ಗಳು ಹಾಗೂ ಜಲವಿದ್ಯುತ್ ಘಟಕಗಳ ಟರ್ಬೈನ್‌ಗಳನ್ನು ರಷ್ಯಾಗೆ ಉಕ್ರೇನ್‌ ಪೂರೈಸುತ್ತದೆ. ರಷ್ಯಾ ಅವುಗಳನ್ನು ಬಳಸಿಕೊಂಡು ಸೇನಾ ವಾಹನಗಳು ಮತ್ತು ಯುದ್ಧನೌಕೆಗಳನ್ನು ತಯಾರಿಸುತ್ತದೆ. ರಷ್ಯಾದಿಂದ ಭಾರತ ಖರೀದಿಸಿರುವ ರೈಫಲ್‌ಗಳು, ಫಿರಂಗಿಗಳು ಮತ್ತು ಕ್ಷಿಪಣಿಗಳಿಗೂ ಇದು ಅನ್ವಯವಾಗುತ್ತದೆ.

2021–22ನೇ ಸಾಲಿನ ಮೊದಲ ಮೂರು ತ್ರೈಮಾಸಿಕದಲ್ಲಿ ಭಾರತವು ರಷ್ಯಾದಿಂದ ₹210 ಕೋಟಿ ಮೌಲ್ಯದ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಬಿಡಿಭಾಗಗಳನ್ನು ಖರೀದಿಸಿದೆ. ಹೀಗೆ ಖರೀದಿಸಿದ ಎಲ್ಲಾ ಬಿಡಿಭಾಗಗಳು ಇನ್ನೂ ಪೂರೈಕೆಯಾಗಿಲ್ಲ. ಈಗ ಯುದ್ಧ ಏರ್ಪಟ್ಟಿರುವ ಕಾರಣ, ಈ ಬಿಡಿಭಾಗಗಳು ಪೂರ್ಣ ಪ್ರಮಾಣದಲ್ಲಿ ತಕ್ಷಣವೇ ಪೂರೈಕೆಯಾಗುವ ಸಾಧ್ಯತೆ ಇಲ್ಲ. ಇದರಿಂದ ಭಾರತೀಯ ಸೇನೆಯ ಎಲ್ಲಾ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸೇನೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಸೋವಿಯತ್‌ ರಷ್ಯಾದ ಎಕೆ 47 ಸರಣಿಯ ರೈಫಲ್‌ಗಳು ಭಾರತದಲ್ಲಿ ಬಳಕೆಯಲ್ಲಿವೆ. ಈ ರೈಫಲ್‌ ತಯಾರಿಕೆಯಲ್ಲಿ ಬಳಸುವ ಹಲವು ಬಿಡಿಭಾಗಗಳು, ಈ ರೈಫಲ್‌ನಲ್ಲಿ ಬಳಸುವ ಗುಂಡುಗಳ ತಯಾರಿಕೆಯಲ್ಲಿನ ಕಚ್ಚಾ ವಸ್ತುಗಳನ್ನು ಉಕ್ರೇನ್‌ ಪೂರೈಸಬೇಕು. ಈ ರೈಫಲ್‌ಗಳ ನಿರ್ವಹಣೆ ಮತ್ತು ಮೇಲ್ದರ್ಜೆಗೆ ಏರಿಸುವ ಒಪ್ಪಂದಕ್ಕೆ 2021ರ ಫೆಬ್ರುವರಿಯಲ್ಲಿ ಭಾರತ ಮತ್ತು ಉಕ್ರೇನ್ ಸಹಿ ಹಾಕಿವೆ. ನಿರ್ವಹಣೆ ಮತ್ತು ಮೇಲ್ದರ್ಜೆಗೆ ಏರಿಸುವ ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಈಗ ಯುದ್ಧದ ಕಾರಣ ಈ ಯೋಜನೆ ತೀರಾ ವಿಳಂಬವಾಗುವ ಅಪಾಯ ಎದುರಿಸುತ್ತಿದೆ.

ಭಾರತವು ರಷ್ಯಾದಿಂದ ₹40,000 ಕೋಟಿ ವೆಚ್ಚದಲ್ಲಿ ಎಸ್‌–400 ಟ್ರಯಂಪ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸಲು 2015ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗಿಲ್ಲ. ರಷ್ಯಾ ಮೇಲಿನ ಅಮೆರಿಕದ ಆರ್ಥಿಕ ನಿರ್ಬಂಧದ ಕಾರಣ, ಪೂರೈಕೆ ಈಗಾಗಲೇ ವಿಳಂಬವಾಗಿದೆ. ಈಗ ಯುದ್ಧದ ಕಾರಣದಿಂದ ಪೂರೈಕೆ ಮತ್ತಷ್ಟು ವಿಳಂಬವಾಗುವ ಅಪಾಯವಿದೆ. ಇದರ ಜತೆಯಲ್ಲಿಯೇ ಅಮೆರಿಕವು ಮತ್ತಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಈ ಒಪ್ಪಂದವನ್ನೇ ರದ್ದುಪಡಿಸಬೇಕಾದ ಅನಿವಾರ್ಯ ಎದುರಾಗಬಹುದು.

ಭಾರತವು ಈಚೆಗಷ್ಟೇ ₹18,699 ಕೋಟಿ ವೆಚ್ಚದಲ್ಲಿ ರಷ್ಯಾದಿಂದ ಯುದ್ಧನೌಕೆಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಯುದ್ಧನೌಕೆಗಳಿಗೆ ಅಗತ್ಯವಿರುವ ಎಂಜಿನ್‌ಗಳನ್ನು ಉಕ್ರೇನ್ ಪೂರೈಸಿದೆ. ಇನ್ನೂ ಹಲವು ಎಂಜಿನ್‌ಗಳು ಪೂರೈಕೆಯಾಗಬೇಕಿವೆ. ಈಗ ಯುದ್ಧದ ಕಾರಣ ಈ ನೌಕೆಗಳ ಪೂರೈಕೆ ವಿಳಂಬವಾಗುವ ಅಪಾಯವಿದೆ.ಈ ಎಲ್ಲಾ ಕಾರಣಗಳಿಂದ ಭಾರತವು ದಕ್ಷಿಣ–ಚೀನಾ ಸಮುದ್ರ, ಹಿಂದೂಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ತನ್ನ ರಕ್ಷಣಾ ನೀತಿಯನ್ನು ಬದಲಾಯಿಸಬೇಕಾದ ಸ್ಥಿತಿ ಎದುರಾಗಬಹುದು.

ಆಧಾರ: ಪಿಟಿಐ, ಎಎಫ್‌ಪಿ, ವಾಣಿಜ್ಯ ಸಚಿವಾಲಯದ ಆಮದು – ರಪ್ತು ದತ್ತಾಂಶ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT