ನವದೆಹಲಿ: ಭಾರತದ ಯುವ ಬ್ಯಾಡ್ಮಿಂಟನ್ ತಂಡವು ಅಮೆರಿಕದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಬ್ರೆಜಿಲ್ ತಂಡವನ್ನು 5–0ಯಿಂದ ಸುಲಭವಾಗಿ ಮಣಿಸಿ, ಗೆಲುವಿನ ಓಟವನ್ನು ಮುಂದುವರಿಸಿದೆ.
ಮೊದಲ ಪಂದ್ಯದಲ್ಲಿ 5–0 ಯಿಂದ ಕುಕ್ ಐಲ್ಯಾಂಡ್ಸ್ ತಂಡವನ್ನು ಮಣಿಸಿದ್ದ ಭಾರತದ ಆಟಗಾರರು, ಎರಡನೇ ಪಂದ್ಯದಲ್ಲೂ ಪಾರಮ್ಯ ಮೆರೆದರು.
ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಸಮರವೀರ್ ಮತ್ತು ರಾಧಿಕಾ ಶರ್ಮಾ ಜೋಡಿಯು 21-14, 21-17 ರಿಂದ ಜೋಕಿಮ್ ಮೆಂಡೋನ್ಸಾ ಮತ್ತು ಮರಿಯಾ ಕ್ಲಾರಾ ಲೋಪೆಸ್ ಲಿಮಾ ಜಯ ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿತು.
ಬಾಲಕರ ಸಿಂಗಲ್ಸ್ ಪಂದ್ಯದಲ್ಲಿ ಲೋಕೇಶ್ ರೆಡ್ಡಿ 21-17, 24-22 ರಿಂದ ಗೆಲುವು ಸಾಧಿಸಿದರೆ, ಬಾಲಕಿಯರ ಸಿಂಗಲ್ಸ್‌ನಲ್ಲಿ ದೇವಿಕಾ ಸಿಹಾಗ್ 21-9, 21-6 ರಿಂದ ಮರಿಯಾ ಎಡ್ವರ್ಡಾ ಒಲಿವೇರಾ ಅವರನ್ನು ಕೇವಲ 18 ನಿಮಿಷಗಳಲ್ಲಿ ಮಣಿಸಿದರು.
ಬಾಲಕರ ಡಬಲ್ಸ್‌ನಲ್ಲಿ ದಿವ್ಯಂ ಅರೋರಾ ಮತ್ತು ಮಯಾಂಕ್ ರಾಣಾ ಜೋಡಿಯು 21-19, 21-10 ರಿಂದ ಜೋಕ್ವಿಂ ಮೆಂಡೋನ್ಸಾ ಮತ್ತು ಜೊವೊ ಮೆಂಡೊನ್ಸಾ ತವೇರಾ ಜೋಡಿಯನ್ನು ಹಿಮ್ಮೆಟ್ಟಿಸಿದರೆ, ಬಾಲಕಿಯ ಡಬಲ್ಸ್ ಜೋಡಿ ವೆನ್ನಾಲ ಕಲಗೋಟ್ಲ ಮತ್ತು ಶ್ರೀಯಾಂಶಿ ವಾಲಿಶೆಟ್ಟಿ 21-13, 21-11 ರಿಂದ ಮಾರಿಯಾ ಕ್ಲಾರಾ ಲೋಪೆಸ್ ಲಿಮಾ ಮತ್ತು ಮಾರಿಯಾ ಎಡ್ವರ್ಡಾ ಒಲಿವೇರಾ ಅವರನ್ನು ಸದೆಬಡಿದರು.
‘ಡಿ’ ಗುಂಪಿನಲ್ಲಿರುವ ಭಾರತ ತಂಡವು ಮುಂದಿನ ಪಂದ್ಯದಲ್ಲಿ ಜರ್ಮನಿ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದ ಫಲಿತಾಂಶವು ಗುಂಪಿನ ಅಗ್ರಸ್ಥಾನವನ್ನು ನಿರ್ಧರಿಸುತ್ತದೆ. ಅಗ್ರಸ್ಥಾನ ಪಡೆಯುವ ತಂಡವು ಸೆ.28ರಂದು ಕ್ವಾರ್ಟರ್ ಫೈನಲ್‌ನಲ್ಲಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.