ಬುಧವಾರ, ಜುಲೈ 6, 2022
22 °C

ರಾಜ್ಯಪಾಲರ ನಡೆಯಿಂದ ಸಿಎಂ ಸ್ಟಾಲಿನ್‌ಗೆ ಇಕ್ಕಟ್ಟು: ಕಾಂಗ್ರೆಸ್‌ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡಿನ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯಪಾಲ ಆರ್‌.ಎನ್‌. ರವಿ ಕೇಳಿದ್ದು, ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ. ಇರೈ, ಕೆಲವು ಇಲಾಖೆಗಳ ಕಾರ್ಯದರ್ಶಿಗಳಿಗೆ ಅ.18ರಂದು ಪತ್ರ ಬರೆದಿದ್ದಾರೆ. ತಮ್ಮ ತಮ್ಮ ಇಲಾಖೆಯಡಿ ಅನುಷ್ಠಾನಗೊಳಿಸಲಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಮೌಲ್ಯಮಾಪನದ ವರದಿಯನ್ನು ಪಿಪಿಟಿ ಮೂಲಕ ರಾಜ್ಯಪಾಲರ ಎದುರು ಪ್ರಸ್ತುತಪಡಿಸಲು ಸಜ್ಜಾಗುವಂತೆ ತಿಳಿಸಿದ್ದಾರೆ.

ಆರ್‌.ಎನ್‌. ರವಿ, ನಾಗಾಲ್ಯಾಂಡ್‌ನಿಂದ ವರ್ಗಾವಣೆ ಯಾಗಿ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಿಂಗಳಲ್ಲಿ ಅವರ ನಡೆಯು, ಆಡಳಿತಾರೂಢ ಡಿಎಂಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ತಮಿಳುನಾಡು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವ ಕುರಿತು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ರಾಜ್ಯಪಾಲರನ್ನು ಭೇಟಿಯಾದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ.

ಚುನಾಯಿತ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ‘ರಾಜ್ಯಪಾಲರ ಹಸ್ತಕ್ಷೇಪ’ವನ್ನು ಆಕ್ಷೇಪಿಸುತ್ತಲೆ ಬಂದಿದ್ದ ಡಿಎಂಕೆ, ಇದೀಗ ರಾಜ್ಯಪಾಲರ ಕೋರಿಕೆ ಹಾಗೂ ಅದಕ್ಕೆ ಸರ್ಕಾರದಿಂದ ಸಿಕ್ಕಿರುವ ಸಕಾರಾತ್ಮಕ ಸ್ಪಂದನೆಯಿಂದ ಮುಜುಗರ ಎದುರಿಸುವಂತಾಗಿದೆ.

2017ರಲ್ಲಿ ರಾಜ್ಯಪಾಲರಾಗಿದ್ದ ಬನ್ವರಿಲಾಲ್‌ ಪುರೋಹಿತ್‌ ಅವರು ತಮ್ಮ ಜಿಲ್ಲಾ ಪ್ರವಾಸದ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆಗ, ರಾಜ್ಯಪಾಲರ ನಡೆಯನ್ನು ಟೀಕಿಸಿದ್ದ ಡಿಎಂಕೆ, ಅದನ್ನು ‘ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟ ಹಸ್ತಕ್ಷೇಪ’ ಎಂದು ಹೇಳಿತ್ತು. ಜೊತೆಗೆ, ಪ್ರತಿಭಟನೆಯನ್ನೂ ನಡೆಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಕೆ.ಎಸ್‌. ಅಳಗಿರಿ, ‘ರಾಜ್ಯಪಾಲರು ಕಲ್ಯಾಣ ಯೋಜನೆಗಳ ಮಾಹಿತಿ ಕೇಳಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವುದು ರಾಜ್ಯಪಾಲರ ಕೆಲಸವಲ್ಲ. ಅವರು ರಾಷ್ಟ್ರಪತಿಗಳಿಂದ ನೇಮಕವಾದವರು. ಜನರಿಂದ ಚುನಾಯಿತರಾದವರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು