ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿ ವಿವರ ನೀಡದಿದ್ದರೆ ನಾಮಪತ್ರ ತಿರಸ್ಕಾರ’

ಕುಟುಂಬದ ಆಸ್ತಿ ವಿವರ ಸಲ್ಲಿಕೆ; ಎಲ್ಲ ಕಾಲಂಗಳ ಭರ್ತಿ ಕಡ್ಡಾಯ–ಡಿಸಿ
Last Updated 18 ಜೂನ್ 2018, 13:22 IST
ಅಕ್ಷರ ಗಾತ್ರ

ವಿಜಾಪುರ: ‘ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ತಮ್ಮ ಹಾಗೂ ಪತ್ನಿ, ಮಕ್ಕಳ ಹೆಸರಿನಲ್ಲಿರುವ ಆಸ್ತಿ ಮತ್ತು ಹೊಣೆಗಾರಿಕೆಯ ಮಾಹಿತಿ ಸಲ್ಲಿಸುವುದು ಕಡ್ಡಾಯ. ಪ್ರಮಾಣ ಪತ್ರದ ಫಾರ್ಮ್‌ ನಂ.26ರಲ್ಲಿ ಯಾವುದೇ ಕಾಲಂನ್ನು ಖಾಲಿ ಬಿಡುವ ಅಭ್ಯರ್ಥಿಯ ನಾಮಪತ್ರ ತಿರಸ್ಕಾರವಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ರಿತ್ವಿಕ್‌ ಪಾಂಡೆ ಹೇಳಿದರು.

‘ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಕೆಲ ಕಾಲಂಗಳನ್ನು ಅಭ್ಯರ್ಥಿಗಳು ಉದ್ದೇಶಪೂರ್ವಕವಾಗಿಯೇ ಖಾಲಿ ಬಿಡುತ್ತಿದ್ದಾರೆ. ಅವರ ವಿರುದ್ಧ ಸುಳ್ಳು ಮಾಹಿತಿ ನೀಡಿದ ಮೊಕದ್ದಮೆ ದಾಖಲಿಸಿದರೂ ಈ ತಂತ್ರಗಾರಿಕೆಯಿಂದ ಅವರು ಬಚಾವ್‌ ಆಗುತ್ತಿ­ದ್ದಾರೆ ಎಂದು ಕೆಲವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ  ಅಭ್ಯರ್ಥಿ ಯಾವುದೇ ಕಾಲಂ ಖಾಲಿ ಬಿಡದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ’ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಂದೊಮ್ಮೆ ಆ ಕಾಲಂನಲ್ಲಿ ಕೇಳಿದ ಮಾಹಿತಿ ಅನ್ವಯಿಸದಿದ್ದರೆ ‘ಇಲ್ಲ’ ಎಂದು ಬರೆಯಬೇಕು. ಆದರೆ, ಯಾವುದೇ ಕಾರಣಕ್ಕೂ ಖಾಲಿ

ಬಿಡಬಾರದು. ಖಾಲಿ ಬಿಟ್ಟರೆ ಆ ಬಗೆಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಅಭ್ಯರ್ಥಿಗೆ ನಾವು ನೋಟೀಸ್‌ ನೀಡುತ್ತೇವೆ. ಕಾಲಮಿತಿಯಲ್ಲಿ ಸಮರ್ಪಕ ಮಾಹಿತಿ ನೀಡದ ಅಭ್ಯರ್ಥಿಯ ನಾಮಪತ್ರ ತಿರಸ್ಕಾರವಾಗಲಿದೆ ಎಂದರು.

ಅಗತ್ಯ ದಾಖಲೆಗಳ ಜೊತೆಗೆ ಚುನಾವಣಾ ಉದ್ದೇಶಕ್ಕಾಗಿ ಹೊಸದಾಗಿ ಆರಂಭಿಸಿದ ಬ್ಯಾಂಕ್‌ ಉಳಿತಾಯ ಖಾತೆಯ ಪಾಸ್‌ಬುಕ್‌ನ ನಕಲು ಪ್ರತಿಯನ್ನೂ ಸಲ್ಲಿಸಬೇಕು. ನೋಂದಾಯಿತ ಮತ್ತು ಗುರುತಿಸಲ್ಪಟ್ಟ ರಾಜ್ಯ, ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಒಬ್ಬ ಸೂಚಕರನ್ನು, ಪಕ್ಷೇತರರಾಗಿ ಸ್ಪರ್ಧಿಸುವವರು 10 ಜನ ಸೂಚಕರನ್ನು ನೀಡಬೇಕು. ಸೂಚಕರು ವಿಜಾಪುರ ಲೋಕಸಭಾ ಮತಕ್ಷೇತ್ರದ ಮತದಾರರಾಗಿರಬೇಕು ಎಂದರು.

46,000 ಅರ್ಜಿ: ಹೊಸ ಮತದಾರರ ನೋಂದಣಿ ಆಂದೋಲನದ ಫಲವಾಗಿ ಮಾರ್ಚ್ 16ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕೋರಿ 46,000 ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷ ಆಂದೋ­ಲನ ನಡೆಸಿದ ಮಾರ್ಚ್‌ 9ರಂದು ಒಂದೇ ದಿನ 11,000 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು. ಚುನಾವಣಾ ವಿಭಾಗದ ಶಿರಸ್ತೇದಾರ ಚನಗೊಂಡ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಕಟ್ಟಿಮನಿಗೆ ಟಿಕೆಟ್‌ ನೀಡಿ’

ವಿಜಾಪುರ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಾನಪ್ಪ ಕಟ್ಟಿಮನಿ ಅವರಿಗೆ ನೀಡಬೇಕು ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದಾರಾಮ ಕಟ್ಟಿಮನಿ ತಿಳಿಸಿದ್ದಾರೆ.

ಅರುಣ ವೆಚ್ಚ ವೀಕ್ಷಕ

ಕೇಂದ್ರ ಚುನಾವಣಾ ಆಯೋಗವು ವಿಜಾಪುರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರನ್ನಾಗಿ ಅರುಣ ರಿಚರ್ಡ್‌ ಅವರನ್ನು ನೇಮಿಸಿದೆ.
ಅರುಣ ರಿಚರ್ಡ್‌ ಅವರ ಸಂಪರ್ಕ ಸಂಖ್ಯೆ. ಮೊ. 9482127342, ದೂರವಾಣಿ: ವಿಜಾಪುರ ಪ್ರವಾಸಿ ಮಂದಿರ–08352-272069

ಹಿಂದೂಸ್ತಾನ ಜನತಾ ಪಾರ್ಟಿ ಸ್ಪರ್ಧೆ

ವಿಜಾಪುರ ಮೀಸಲು ಕ್ಷೇತ್ರದಿಂದ ಹಿಂದೂಸ್ತಾನ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಇಂಡಿ ತಾಲ್ಲೂಕು ಬರಡೋಲ ಗ್ರಾಮದ ದೀಪಕ ಗಂಗಾರಾಮ ಕಟಕಧೊಂಡ ಅವರು ಸ್ಪರ್ಧಿಸಲಿದ್ದಾರೆ. ಪಕ್ಷದಿಂದ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ಬಿ.ಯು. ಗೋಸಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT