ಬುಧವಾರ, ಫೆಬ್ರವರಿ 26, 2020
19 °C
ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ

ನಕಲಿ ಪತ್ರಕರ್ತರ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಸುಳ್ಳು ಮಾಹಿತಿ ಅಥವಾ ನೈಜತೆಯನ್ನು ತಿರುಚಿ ಸುದ್ದಿ ಭಿತ್ತರಿಸುವ ನಕಲಿ ಪತ್ರಕರ್ತರು ಹಾಗೂ ಅನುಮತಿ ಇಲ್ಲದ ಯುಟ್ಯೂಬ್ ಚಾನೆಲ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಲವು ನಕಲಿ ಪತ್ರಕರ್ತರು ಸರ್ಕಾರಿ ಸಭೆ, -ಸಮಾರಂಭ ಹಾಗೂ ಸಚಿವರು ಸೇರಿದಂತೆ ಗಣ್ಯರ ಪತ್ರಿಕಾಗೋಷ್ಠಿಗೆ ಬರುವುದರಿಂದ ಸರ್ಕಾರಿ ಕೆಲಸಕ್ಕೆ ಅಡೆ-ತಡೆ ಉಂಟಾಗುತ್ತಿದೆ’ ಎಂದರು.

‘ನಕಲಿ ಪತ್ರಕರ್ತರ ಹಾವಳಿ ತಪ್ಪಿಸಲು ಅಧಿಕೃತ ಪತ್ರಕರ್ತರಿಗೆ ಬಾರ್‌ಕೋಡ್‌ ನಮೂದಿಸಿದ ಗುರುತಿನ ಪತ್ರ ನೀಡಲು ಉದ್ದೇಶ ಹೊಂದಲಾಗಿದೆ. ಅಧಿಕೃತ ಪತ್ರಕರ್ತರನ್ನು ಹೊರತುಪಡಿಸಿ, ನಕಲಿ ಪತ್ರಕರ್ತರು ಸರ್ಕಾರಿ ಸಭೆ-ಸಮಾರಂಭಗಳಿಗೆ ಹಾಜರಾಗಿ ಸುದ್ದಿ ಪ್ರಕಟಿಸುವುದು ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸಮಿತಿ ಪುನರ್‌ರಚನೆ: ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಕ್ಟ್ 1995ರ ಅಡಿಯಲ್ಲಿ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಯನ್ನು ಪುನರ್‌ ರಚಿಸಲಾಗಿದೆ.

‘ಈ ಕುರಿತು ದೂರುಗಳಿಗಾಗಿ ಪೋಲಿಸ್ ಇಲಾಖೆಯ 100 ಅಥವಾ ಜಿಲ್ಲಾ ಕಂಟ್ರೋಲ್ ರೂಂ. 08352-250751 ಹಾಗೂ ವಿಜಯಪುರ ನಗರ ಕಂಟ್ರೋಲ್ ರೂಂ. 08352-250844 ಸಂಪರ್ಕಿಸಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಮಾತನಾಡಿ, ‘ವಿವಿಧ ಧರ್ಮಗಳ, ಜನಾಂಗಗಳ, ಭಾಷೆಗಳ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿಗಳ, ಸಮುದಾಯಗಳ ನಡುವೆ ವೈಷಮ್ಯ, ವೈರತ್ವ ಅಥವಾ ದ್ವೇಷದ ಭಾವನೆಗಳನ್ನು ಬೆಳೆಸುವ, ಸಾರ್ವಜನಿಕರ ಶಾಂತಿಗೆ ಭಂಗವುಂಟು ಮಾಡುವ ಕಾರ್ಯಕ್ರಮ ಪ್ರಸಾರವಾದಲ್ಲಿ ಅಂತಹ ಕಾರ್ಯಕ್ರಮಗಳ ಪ್ರಸರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಬಹುದು. ಪ್ರಸಾರ ಮಾಡಿದ ಕೇಬಲ್ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೇಬಲ್ ಟೆಲಿವಿಷನ್ ರೆಗ್ಯೂಲೇಶನ್ ಆಕ್ಟ್ 1995ರಡಿ ರೂಪಿಸಲಾದ ನಿರ್ವಹಣಾ ಸಮಿತಿ ಸದಸ್ಯರಾದ ಎಸ್.ಬಿ.ಸಾವಳಸಂಗ, ವಿಜಯಲಕ್ಷ್ಮೀ ಬಾಳಿ, ಆರ್.ಪಿ.ಚವ್ಹಾಣ, ಎಸ್.ಎನ್.ಅತ್ತಾರ, ಪೀಟರ್ ಅಲೆಕ್ಸಾಂಡರ್, ಸಿಸ್ಟರ್ ಸೂಸಾನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು