ಮಂಗಳವಾರ, ಮಾರ್ಚ್ 9, 2021
23 °C
ಸುಳ್ಳು ಮಾಹಿತಿ ನೀಡಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರ ವಿರುದ್ಧ ಕ್ರಮ

ವಿಜಯಪುರ ಜಿಲ್ಲೆಗೆ 9194 ಜನ ಆಗಮನ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಜಿಲ್ಲೆಗೆ ಇದುವರೆಗೆ 9194 ಜನ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ತಾಲ್ಲೂಕಿಗೆ 2213, ಬಸವನ ಬಾಗೇವಾಡಿಗೆ 414, ಮುದ್ದೇಬಿಹಾಳ 1559, ಸಿಂದಗಿ 626, ಇಂಡಿ 585, ಬಬಲೇಶ್ವರ 626, ಕೊಲ್ಹಾರ 390, ತಿಕೋಟಾ 389, ನಿಡಗುಂದಿ 500, ತಾಳಿಕೋಟೆ 579, ಚಡಚಣ 650 ಮತ್ತು ದೇವರ ಹಿಪ್ಪರಗಿಗೆ 564 ಜನ ಸೇರಿದಂತೆ ಒಟ್ಟು 9137 ಜನ ಆಗಮಿಸಿದ್ದಾರೆ ಎಂದರು.

ವಿವಿಧ ರಾಜ್ಯಗಳಿಂದ 57 ಜನ

ಉತ್ತರಪ್ರದೇಶ, ರಾಜಸ್ಥಾನದಿಂದ 17, ಗುಜರಾತ್‌ 5, ಚಂಡೀಗಡದಿಂದ 11 ಮತ್ತು ಗೋವಾದಿಂದ 17 ಜನ ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ 57 ಜನ ಆಗಮಿಸಿದ್ದಾರೆ ಎಂದರು.

ಸೇವಾ ಸಿಂಧು ಆ್ಯಪ್‌ನಲ್ಲಿ ಬಹಳಷ್ಟು ಜನ ವಿವಿಧ ಜಿಲ್ಲೆ, ರಾಜ್ಯಗಳಿಗೆ ತೆರಳಲು ಹೆಸರು ನೋಂದಾಯಿಸಿದ್ದಾರೆ. ಈ ಸಂಬಂಧ ಆಯಾ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಬಸ್‌ಗಳ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದರು.

540 ಜನ

ಜಿಲ್ಲೆಯಿಂದ ರಾಜಸ್ಥಾನಕ್ಕೆ 388 ಮತ್ತು ಮಧ್ಯಪ್ರದೇಶಕ್ಕೆ 152 ಜನರನ್ನು 17 ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಇದುವರೆಗೆ ಕಳುಹಿಸಲಾಗಿದೆ. ಕೆಲವರು ಖಾಸಗಿ ವಾಹನಗಳನ್ನು ಮಾಡಿಕೊಂಡು ತೆರಳಿದ್ದಾರೆ ಎಂದು ಹೇಳಿದರು.

‌ಸಾಂಸ್ಥಿಕ ಕ್ವಾರಂಟೈನ್

ಅತೀ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ರಾಜಸ್ಥಾನ ಹಾಗೂ ದೆಹಲಿಗಳಿಂದ ಬರುವ ಪ್ರತಿಯೊಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದು  ತಿಳಿಸಿದರು.

ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಮೇಲಿನ ಐದು ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಿದ ತಕ್ಷಣ ಅವರ ಮನೆಗೆ ನೋಟಿಸ್ ಅಂಟಿಸಬೇಕು. ನೆರೆಹೊರೆಯವರಿಗೆ ಕಣ್ಗಾವಲಿಗೆ ತಿಳಿಸಬೇಕು. ಕೈಗೆ ಸೀಲ್ ಹಾಕಬೇಕು ಎಂದರು.

ಸಾಂಸ್ಥಿಕ ಕ್ವಾರಂಟೈನ್‍ಗಾಗಿ ವಸತಿ ಶಾಲೆ, ವಸತಿ ನಿಲಯ, ಪ್ರೌಢಶಾಲೆ, ಪ್ರಾಥಮಿಕ ಶಾಲೆಗೆ ಕಳುಹಿಸಲು ಸೂಚಿಸಿದರು.

ಹೊರ ರಾಜ್ಯ, ಜಿಲ್ಲೆಗಳಿಂದ ಸುಳ್ಳು ಮಾಹಿತಿ ನೀಡಿ ಜಿಲ್ಲೆಗೆ ಬಂದು ತಂಗಿದ್ದಲ್ಲಿ ಅಂತಹವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವಲಸಿಗರು ಮತ್ತು ನುಸುಳುಕೋರರ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು, ಅಂತವರು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಿಂದ ಬಂದ ಸಾರ್ವಜನಿಕರು ಕೂಡಾ ಜಿಲ್ಲೆಗೆ ಆಗಮಿಸಿರುವ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಆಯಾ ಗ್ರಾಮ, ನಗರಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿರುವವರ ಕುರಿತಂತೆ ಮತ್ತು ಬಂದ ಬಗ್ಗೆ ಮಾಹಿತಿ ನೀಡುವ ಕುರಿತು ಧ್ವನಿವರ್ದಕ, ಡಂಗೂರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು