ಮಂಗಳವಾರ, ಫೆಬ್ರವರಿ 7, 2023
27 °C
ರಾಜ್ಯಮಟ್ಟದ ಶ್ರಮ ಚೇತನ ಕಾರ್ಯಕ್ರಮ: ಉಮಾ ಮಹಾದೇವನ್ ಹೇಳಿಕೆ

ಲಿಂಗತ್ವ ಅಲ್ಪಸಂಖ್ಯಾತರಿಗೂ ಸ್ವಾವಲಂಬಿ ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಸರ್ಕಾರ ಸೌಲಭ್ಯಗಳನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಪ್ರಗತಿಪರ ಮೊದಲ ಹೆಜ್ಜೆ ಇಡುವ ಮೂಲಕ ಅವರಿಗೂ ಸ್ವಾವಲಂಬಿ ಜೀವನ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ಶ್ರಮ ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಕಾರ್ಯ ಆಗಬೇಕಿದೆ ಎಂದರು.

ನರೇಗಾ ಜಾಬ್ ಕಾರ್ಡ್ ನೀಡಲಾಗುವುದು. ಕುರಿ, ದನಗಳ ಶೆಡ್ ನಿರ್ಮಿಸಿಕೊಳ್ಳಬಹುದಾಗಿದೆ. ಸ್ವ ಉದ್ಯೋಗ ಕೈಗೊಳ್ಳಲು ಸ್ವ ಸಹಾಯ ಸಂಘಗಳ‌ ರಚನೆ ಮಾಡಲಾಗಿದೆ. ಸಮಾಜದಲ್ಲಿ ಗೌರವ ಜೀವನ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ, ಶರಣರು ಬದುಕಿದ ನಾಡಿದು. ಹೆಣ್ಣು, ಗಂಡು ಎಂಬುದಿಲ್ಲ. ಆತ್ಮ ಮುಖ್ಯ ಎಂದಿದ್ದರು. ಎಲ್ಲರಿಗೂ ಸಮಾನ ಅವಕಾಶ ನೀಡುವ ಉದ್ದೇಶದಿಂದ ವಿವಿಧ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.

ಸಮಾಜ ಕೊಂಕು ನುಡಿ ನಡುವೆಯೂ ಸ್ವಾವಲಂಬಿ ಜೀವನ ನಿರ್ಮಾಣ. ಮಾಡುವ ಕಾರ್ಯವೇ ವ್ಯಕ್ತಿತ್ವ ತೋರಿಸುತ್ತದೆ. ಮುಖ್ಯವಾಹಿನಿಗೆ ಬರುತ್ತಿರುವ ಅವರಿಗೆ ಸಮಾಜ ಹೃದಯ ವೈಶಾಲ್ಯ ತೋರಿಸಿ, ಬೆಂಬಲಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌‌ ಮಾತನಾಡಿ,‌ ಸಾಮಾಜಿಕ‌ ಪಿಡುಗು ಗಳನ್ನು ನಿರ್ಮೂಲನೆ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯ ನೀಡಲಾಗುವುದು. ಜಿಲ್ಲೆಯಲ್ಲಿ 3,600 ಲಿಂಗತ್ವ ಅಲ್ಪಸಂಖ್ಯಾತ ರಿದ್ದಾರೆ. 100 ಜನರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಯುಕ್ತೆ ಶಿಲ್ಪಾ ನಾಗ್ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಎರಡು ಸ್ವಸಹಾಯ ಗುಂಪುಗಳಿಗೆ ₹1.50  ಸಹಾಯ ಧನದ ಚೆಕ್‍ ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ್, ಗದಗ ಜಿಲ್ಲೆ ಸಿಇಒ ಡಾ.ಸುಶೀಲಾ ಬಿ, ವಿಜಯಪಯರ ಜಿಲ್ಲಾ ಸಿಇಒ ರಾಹುಲ್ ಸಿಂಧೆ, ಯುಕೆಪಿ ಜಿಎಂ ರಾಹುಲ್‍ಪಾಂಡೆ ಇದ್ದರು.

 

 

ಯಶೋಗಾಥೆ ಬಿಚ್ಚಿಟ್ಟ ಲಿಂಗತ್ವ ಅಲ್ಪಸಂಖ್ಯಾತರು

ತಿರಸ್ಕರಿಸುತ್ತಿದ್ದ ಕುಟುಂಬಕ್ಕೆ ಆಸರೆಯಾದ, ಭಿಕ್ಷಾಟನೆ ಬಿಟ್ಟು ಸ್ವಾವಲಂಬಿ ಜೀವನ ರೂಪಿಸಿಕೊಂಡ, ದುಡಿದು ತಮ್ಮನ ಮದುವೆ ಮಾಡಿದ ಜೀವನಗಾಥೆಯನ್ನು ಲಿಂಗತ್ವ ಅಲ್ಪಸಂಖ್ಯಾತರು ಹಂಚಿಕೊಂಡರು.

‘ಅಪ್ಪ ಅಂಗವಿಕಲ, ಅಮ್ಮನಿಗೆ ಅನಾರೋಗ್ಯ. ಏಳು ಜನ ಮಕ್ಕಳು ದುಡಿದೇ ತಿನ್ನಬೇಕು. ಉದ್ಯೋಗ ಖಾತ್ರಿಯಿಂದ ಸಹಾಯ ಆಗಿದೆ. ಮನೆ ನಿರ್ಮಿಸಿಕೊಂಡಿದ್ದೇವೆ’ ಎಂದು ಕೊಪ್ಪಳದ ಶರಣಮ್ಮ ಸ್ವಾವಲಂಬಿ ಬದುಕು ಹಂಚಿಕೊಂಡರು.

‘ಏನಾದರೂ ಮಾಡಲು ಮುಂದಾದಾಗ ವ್ಯಂಗ್ಯ ಮಾಡುತ್ತಿದ್ದರು. ಸ್ವ ಸಹಾಯ ಸಂಘ ರಚಿಸಿಕೊಂಡಿದ್ದೇವೆ. ಮೇಕೆ ಸಾಕಾಣಿಕೆ ಮಾಡುವ ಮೂಲಕ ಬದುಕು ಕೊಂಡಿದ್ದೇವೆ’ ಎಂದು ಗುಳೇದಗುಡ್ಡ ತಾಲ್ಲೂಕಿನ ನಾಗರಾಳಿ ಎಸ್.ಪಿ.ಯ ಯಮನಪ್ಪ ಚಿಕ್ಕದ್ಯಾವಪ್ಪನವರ ಯಶೋಗಾಥೆ ಹಂಚಿಕೊಂಡರು.

‘ಭಿಕ್ಷಾಟನೆ ಬಿಟ್ಟು ಕೆಲಸ ಮಾಡೋಣ. ಕೆಲಸ ಮಾಡುತ್ತೇನೆ ಎಂದು ಗ್ರಾಮ ಪಂಚಾಯ್ತಿ ಸದಸ್ಯೆಯಾಗಿ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ’ ಎಂದು ವಿಜಯನಗರ ಜಿಲ್ಲೆಯ ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಸುಧಾ ಜೋಗತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು