ಶನಿವಾರ, ಏಪ್ರಿಲ್ 1, 2023
33 °C
ದಶಕ ಕಳೆದರೂ ಮೂಲಸೌಕರ್ಯ ವಂಚಿತ ಮಲಪ್ರಭಾ ನದಿ ದಂಡೆ ಗ್ರಾಮಗಳು

ಬಾದಾಮಿ: ಅತಂತ್ರ ಸ್ಥಿತಿಯಲ್ಲಿ ‘ಆಸರೆ’ ಸಂತ್ರಸ್ತರು

ಎಸ್.ಎಂ. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ : ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಗ್ರಾಮಗಳ ಆಸರೆ ಮನೆಗಳಲ್ಲಿ ವಾಸವಾಗಿರುವ ಸಂತ್ರಸ್ತರು ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

1993, 2003, 2006 ಮತ್ತು 2009 ರಲ್ಲಿ ಮಲಪ್ರಭಾ ನದಿ ದಂಡೆಯ ಗ್ರಾಮಗಳಿಗೆ ನವಿಲುತೀರ್ಥ ಜಲಾಶಯದ ಹೆಚ್ಚುವರಿ ನೀರು ಮತ್ತು ಮಳೆಯಿಂದಾಗಿ ಗ್ರಾಮಗಳಿಗೆ ಪ್ರವಾಹ ನುಗ್ಗಿ ಬೆಳೆಗಳೆಲ್ಲ ಕೊಚ್ಚಿ ಮನೆಗಳೆಲ್ಲ ನೆಲಸಮವಾಗಿವೆ. ಸರ್ಕಾರ ಮತ್ತು ದಾನಿಗಳ ಸಹಕಾರದಿಂದ ಮಲಪ್ರಭಾ ನದಿ ದಂಡೆಯ ಸಂತ್ರಸ್ತರಿಗೆ 2010 ರಲ್ಲಿ ತಾಲ್ಲೂಕಿನ 34 ಗ್ರಾಮಗಳಿಗೆ ಆಸರೆ ಮನೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸಿದೆ. ಶೇ 90 ರಷ್ಟು ಜನರು ಆಸರೆ ಮನೆಗಳಲ್ಲಿಯೇ ವಾಸವಾಗಿದ್ದಾರೆ. ಮಲಪ್ರಭಾ ನದಿ ದಂಡೆಯ ಸಮೀಪ ಕಿತ್ತಲಿ ಗ್ರಾಮದ ‘ಆಸರೆ’ ಬಡಾವಣೆಗಳಿಗೆ  ಪ್ರಜಾವಾಣಿ ಪ್ರತಿನಿಧಿ ಭೇಟಿ ನೀಡಿದಾಗ ಸಮಸ್ಯೆಗಳು ಗೋಚರಿಸಿದವು.

ಆಸರೆ ಬಡಾವಣೆ ಮನೆಗಳು ಕಸ ಮತ್ತು ಮುಳ್ಳು ಕಂಟಿಯಿಂದ ಆವೃತವಾಗಿದೆ. ಎಲ್ಲಿ ನೋಡಿದರಲ್ಲಿ ಜಾಲಿಮುಳ್ಳುಕಂಟಿ ಆಳೆತ್ತರದ ಬೆಳೆದಿದೆ. ಚರಂಡಿಯಿಲ್ಲದೇ ನಿಂತ ನೀರು ದುರ್ವಾಸನೆ ಹರಡಿ ರೋಗಗಳಿಗೆ ಆಹ್ವಾನಿಸುವಂತಿದೆ. ಕುಡಿಯಲು ನೀರು ಮತ್ತು ಬಳಸಲು ಸರಿಯಾಗಿ ನೀರು ಪೂರೈಕೆ ಇಲ್ಲ. ರಸ್ತೆಯಿಲ್ಲ, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳು ಸೌಕರ್ಯ ಮತ್ತು ಸ್ವಚ್ಛತೆ ಇಲ್ಲದ್ದು ಸಮಸ್ಯೆಗಳ ಸರಮಾಲೆಯೇ ಕಂಡು ಬಂದಿತು.

350ಕ್ಕೂ ಆಸರೆ ಮನೆಗಳಲ್ಲಿ 250 ಆಸರೆ ಮನೆಗಳಲ್ಲಿ ಸಂತ್ರಸ್ತರು ವಾಸವಾಗಿದ್ದಾರೆ. 200 ಮನೆಗಳಿಗೂ ಮುಖ್ಯ ರಸ್ತೆಯ ಪಕ್ಕದಲ್ಲಿ ಒಂದೇ ಕುಡಿಯುವ ನೀರಿನ ನಳವಿದೆ. ಬಡಾವಣೆಯಲ್ಲಿ ಬಳಸಲು ನಾಲ್ಕು ನಳಗಳಿವೆ. ಈ ನಳಕ್ಕೆ ವಿದ್ಯುತ್ ಇದ್ದರೆ ಮಾತ್ರ ನೀರು ಇರದಿದ್ದರೆ ನೀರು ಬರುವುದಿಲ್ಲ ಎಂದು ನಿವಾಸಿಗಳು ಹೇಳಿದರು.

‘200 ಮನಿಗೆ ನೀರು ಬಳಸಾಕ ನಾಕು ಸವಳ ನೀರಿನ ನಳ ಅದಾವರಿ. ಕುಡಿಯಾಕ ಎಲ್ಲಾರಿಗೂ ಸೇರಿ ನೀರಿನ ನಳ ಒಂದೈತ್ರಿ. ಎಲ್ಲರೂ ಮನಿಗೊಂದು ಒತ್ತುವ ಸೈಕಲ್ ಗಾಡಿ ಮಾಡೀವಿ ಇದರಿಂದ ನೀರು ತೊಗೊಂಡು ಹೊಕ್ಕೀವಿ. ಕುಡಿಯು ನೀರಿಂದು ಬಹಳ ತ್ರಾಸ್ ಐತ್ರಿ’ ಎಂದು ನೀರಿಗಾಗಿ ಬಂದ ಆಸರೆ ಬಡಾವಣೆಯ ವೃದ್ಧರಾದ ಹನುಮಪ್ಪ ಮತ್ತು ದ್ಯಾಮಣ್ಣ ಕಳವಳ ವ್ಯಕ್ತಪಡಿಸಿದರು.

‘ಇಲ್ಲಿ ಇರಕಾಹತ್ತಿ ಹತ್ತ ವರ್ಸಾತ್ರಿ. ಕುಡಿಯಾಕ ಸರಿಯಾಗಿ ನೀರಿಲ್ಲ. ಕುಡಿಯೂ ನೀರಿಗೆ ಇಲ್ಲಿಗೆ ಬರಬೇಕು. ಎಲ್ಲಾರ ಮನಿಗೆ ನಳ ಕೊಟ್ಟರ ಚೊಲೊ ಆಗತ್ರರಿ’ ಎಂದು ಆಸರೆ ಬಡಾವಣೆಯ ಮಲ್ಲಮ್ಮ ಹೇಳಿದರು.

‘ಆಸರೆ ಬಡಾವಣೆಯಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡ ನಿರ್ಮಿಸಿ ಬೀಗ ಹಾಕಿದೆ. ಬಡಾವಣೆಯ ಜನ ಸುತ್ತ ಬಯಲು ಬಹಿರ್ದೆಸೆಗೆ ಬಳಸುತ್ತಿದ್ದಾರೆ. ಪರಿಸರವೆಲ್ಲ ಹಾಳಾಗಿದೆ. ಇಲ್ಲಿನ 30 ಮಕ್ಕಳನ್ನು ಆಯಾ ಕರೆದುಕೊಂಡು ಕಿತ್ತಲಿ ಗ್ರಾಮಕ್ಕೆ ಹೋಗುವರು. ಇಲ್ಲಿಯೇ ಅಂಗನವಾಡಿ ಆರಂಭಿಸಬೇಕು’ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಎ. ಕಂಬಾರ ಹೇಳಿದರು.

ಇಡೀ ಆಸರೆ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆ ಒಂದು ಸಿಸಿ ರಸ್ತೆ ಮಾಡಿ ವರ್ಷವಾಗಿದೆ. ಈಗಾಗಲೇ ಕಿತ್ತು ಹೋಗಿದೆ ಎಂದು ಗ್ರಾಮದ ಪರಮೇಶ ದೂರಿದರು.

‘ಎಂಎಲ್ಎ ಸಿದ್ದರಾಮಯ್ಯ ನಮ್ಮ ಹಳ್ಳಿಗೆ ಬಂದಾಗ ಸಮಸ್ಯೆಗಳ ಬಗ್ಗೆ ಹೇಳಬೇಕಂತ ಅವರ ಹತ್ತರ ಹೊಂಟರ ಮಾತಾಡಿಗೊಡೂದಿಲ್ಲ. ನಾವೆಲ್ಲ ಹೇಳತೀವಿ ಸರಿ ಹಿಂದಕ ಅಂತ ದೂಕತಾರಿ ನಾವು ಯಾರಿಗೆ ಹೇಳಬೇಕು ತಿಳಿದಂಗ ಆಗೈತಿ’ ಎಂದು ಆಸರೆ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ದಶಕಗಳಿಂದ ಈ ಆಸರೆ ಬಡಾವಣೆಗಳ ಸಂತ್ರಸ್ತ ನಿವಾಸಿಗಳ ಗೋಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಮಲಪ್ರಭಾ ನದಿ ದಂಡೆಯ ಎಲ್ಲ 34 ಗ್ರಾಮಗಳ ಪರಿಸ್ಥಿತಿಯು ಇದೇ ಮಾದರಿಯಲ್ಲಿವೆ.

ಕೋಟ್‌

ಆಸರೆ ಬಡಾವಣೆಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಜೆಜೆಎಂ ಯೋಜನೆಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಕೊಡಲಾಗುವುದು
ಜಿ.ಬಿ. ರಂಗಪ್ಪಗೋಳ, ಪಿಡಿಒ, ಕಿತ್ತಲಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು