ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆ ಗ್ರಾಮಕ್ಕೆ ನಾಲ್ಕನೇ ಬಾರಿ ಪುರಸ್ಕಾರ!

ಬಯಲಿಗೆ ಹೋಗುವುದು ನಿಲ್ಲಿಸದ ಜನ
Last Updated 4 ಅಕ್ಟೋಬರ್ 2020, 14:19 IST
ಅಕ್ಷರ ಗಾತ್ರ

ಕೂಡಲಸಂಗಮ: ಈ ಬಾರಿ ನಾಲ್ಕನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೂಡಲಸಂಗಮ ಗ್ರಾಮ ಪಂಚಾಯ್ತಿ ದಾಖಲೆಯಲ್ಲಿ ಸಂಪೂರ್ಣ ಬಯಲು ಶೌಚಾಲಯ ಮುಕ್ತ ಗ್ರಾಮವಾದರೂ ಜನ ಇನ್ನೂ ಬಯಲಿಗೆ ಹೋಗುವುದು ನಿಲ್ಲಿಸಿಲ್ಲ.

ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವರಗೊಡದಿನ್ನಿ ಗ್ರಾಮಗಳನ್ನು ಹೊಂದಿದ ಕೂಡಲಸಂಗಮ ಗ್ರಾಮ ಪಂಚಾಯ್ತಿ 5888 ಜನಸಂಖ್ಯೆ, 1409 ಮನೆ, 1965 ಕುಟುಂಬಗಳ ಹೊಂದಿದೆ.

ಕೂಡಲಸಂಗಮ ಗ್ರಾಮದಲ್ಲಿನ ಎಲ್ಲಾ 937 ಕುಟುಂಬಗಳು ಶೌಚಾಲಯ ಹೊಂದಿವೆ ಎಂದು ಗ್ರಾಮ ಪಂಚಾಯ್ತಿ ದಾಖಲೆಯಲ್ಲಿದ್ದರೂ ವಾಸ್ತವವಾಗಿ ಇನ್ನೂ ಕೆಲವು ಕುಟುಂಬ ಶೌಚಾಲಯ ಹೊಂದಿಲ್ಲ. ಶೇ 50 ರಷ್ಟು ಜನಸಂಖ್ಯೆ ಶೌಚಾಲಯ ಸಮಪರ್ಕವಾಗಿ ಬಳಕೆ ಮಾಡಿಕೊಂಡರೆ ಉಳಿದವರಿಗೆ ಚೊಂಬಿನ ವ್ಯಾಮೋಹ ಕಡಿಮೆ ಆಗಿಲ್ಲ.

ಜಾಗದ ಕೊರತೆಯಿಂದ ಶೌಚಾಲಯ ಹೊಂದದ ಕುಟುಂಬಗಳಿಗೆ ಗ್ರಾಮ ಪಂಚಾಯ್ತಿ , ಲಕ್ಷ್ಮೀ ಗುಡಿ ಬಳಿ ಗುಂಪು ಶೌಚಾಲಯ ನಿರ್ಮಿಸಿ ಫಲಾನುಭವಿಗಳಿಗೆ ಬೀಗ ಕೊಟ್ಟಿದೆ. ಆದರೆ ಅದನ್ನು ಜನರು ಬಳಕೆ ಮಾಡದಿರುವುದರಿಂದ ನಿರುಪಯುಕ್ತವಾಗಿವೆ.

ನೀರು, ವಿದ್ಯುತ್ ಸೌಕರ್ಯ ಇಲ್ಲದ ಪರಿಣಾಮ ಗುಂಪು ಶೌಚಾಲಯ ಜನ ಬಳಕೆ ಮಾಡುತ್ತಿಲ್ಲ. ಪರಿಣಾಮ ನಿರುಪಯುಕ್ತವಾಗುವ ಜೊತೆಗೆ ಸುತ್ತಲು ಮುಳ್ಳು ಕಂಟಿ ಬೆಳೆದಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಸಿ ಕೆಲಸ ಮಾಡಿಸಿದ್ದಾರೆ, ಜನರಿಗೆ ಕೆಲಸ ನೀಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮ ಪಂಚಾಯ್ತಿ ಮುಂಭಾಗದ ರಸ್ತೆಯಲ್ಲಿಯೇ ಕಸವನ್ನು ಎಸೆಯುವ ಪರಿಣಾಮ ಗಬ್ಬು ನಾರುತ್ತಿದೆ. ಪಂಚಾಯ್ತಿ ಸಿಬ್ಬಂದಿ ಪ್ರತಿ ವಾರ ಸ್ವಚ್ಛಗೊಳಿಸುವ ಕಾರ್ಯ ಬಿಟ್ಟಿಲ್ಲ. ಗ್ರಾಮದ ಮಧ್ಯ ಭಾಗದಲ್ಲಿ ಕೆಲವು ಕಡೆ ಕಸ ಹಾಕುವರು. ಆದರೆ ವಿಲೇವಾರಿ ಕಾರ್ಯ ನಡೆದಿಲ್ಲ. ಗ್ರಾಮಸ್ಥರ ಕಸ ವಿಲೇವಾರಿಗೆ 12 ತಿಪ್ಪೆಗುಂಡಿ ಇವೆ. ಕಸ ವಿಲೇವಾರಿಯನ್ನು ಮಾಡದ ಪರಿಣಾಮ ತಿಪ್ಪೆಗುಂಡಿ ಸುತ್ತಲು ಕಸದ ರಾಶಿಯೇ ಇದೆ.

ಪಂಚಾಯ್ತಿ ದಾಖಲೆಗಳು, ಸಭೆ, ಸಮಾರಂಭ ಮಾಡುವಲ್ಲಿ ಶೇ 100 ಗುರಿ ಸಾಧಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಹೊಂಡ, ಅಂಗನವಾಡಿ ದುರಸ್ತಿ, ಕೈಬೋರ್ ದುರಸ್ತಿ, ಸಿ.ಸಿ ರಸ್ತೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT