ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಮುಳುಗಡೆ ಸಂತ್ರಸ್ತರ ಗೋಳು

ಕೃಷ್ಣಾ ಮೇಲ್ದಂಡೆ ಯೋಜನೆಯು ರಾಜ್ಯ ಬೃಹತ್‌ ನೀರಾವರಿ ಯೋಜನೆ
Last Updated 11 ಆಗಸ್ಟ್ 2022, 5:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯು ರಾಜ್ಯ ಬೃಹತ್‌ ನೀರಾವರಿ ಯೋಜನೆಯಾಗಿದೆ. ಆಲಮಟ್ಟಿ, ನಾರಾಯಣಪುರ ಎಂಬಲ್ಲಿ ಎರಡು ಜಲಾಶಯಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಬಾಗಲಕೋಟೆ, ವಿಜಯಪುರ, ಕೊಪ್ಪಳ,‌ ಯಾದಗಿರಿ, ರಾಯಚೂರು, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಹಸಿರು ನಳನಳಿಸುತ್ತಿದೆ.

ಜಿಲ್ಲೆಯ ಆರಂಭಕ್ಕೂ ಕೆಲವೇ ವರ್ಷಗಳ ಮೊದಲು ಸ್ಥಳಾಂತರ ಕಾರ್ಯ ಆರಂಭಗೊಂಡಿತ್ತು. ಆಲಮಟ್ಟಿ ಜಲಾಶಯದಲ್ಲಿ 136 ಗ್ರಾಮಗಳು ಮುಳುಗಡೆಯಾಗಿದ್ದರೆ, 58,432 ಕುಟುಂಬಗಳ 2,92,160 ಜನರು ಸಂತ್ರಸ್ತರಾಗಿದ್ದಾರೆ. ಅದೇ ರೀತಿ ನಾರಾಯಣಪುರ ಜಲಾಶಯದಲ್ಲಿ 40 ಗ್ರಾಮಗಳು ಮುಳುಗಡೆಯಾಗಿದ್ದು, 11,744 ಕುಟುಂಬಗಳ 58,720 ಜನರು ಸಂತ್ರಸ್ತರಾಗಿದ್ದಾರೆ. 136 ಗ್ರಾಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಕೃಷ್ಣ ಜಲಭಾಗ್ಯ ನಿಗಮದಿಂದ ₹191 ಕೋಟಿ ವೆಚ್ಚದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಬಾಕಿ ಇದೆ. ಕೃಷ್ಣಾ ಮೆಲ್ಡಂಡೆ ಯೋಜನೆಯ 1 ಮತ್ತು 2ನೇ ಹಂತಗಳಿಂದ 6.22 ಲಕ್ಷ ಹೆಕ್ಟೇರ್‌ ನೀರಾವರಿಗೆ ಒಳಪಡಿಸಲಾಗಿದೆ.

ಮುಳುಗಡೆಯಾದ 177 ಗ್ರಾಮಗಳಲ್ಲಿ ಬಾಗಲಕೋಟೆಯ 39, ಬೀಳಗಿಯ 33, ಜಮಖಂಡಿಯ 22, ಆಲಮಟ್ಟಿ ವ್ಯಾಪ್ತಿಯ 43, ನಾರಾಯಣಪುರ ವ್ಯಾಪ್ತಿಯ (ಹುನಗುಂದ ತಾಲ್ಲೂಕು ಸೇರಿದಂತೆ) 29 ಹಳ್ಳಿಗಳು ನೀರಿನಲ್ಲಿವೆ. 1,76,783 ಎಕರೆ ಜಮೀನು ಮುಳುಗಡೆಯಾಗಿದೆ. 78,854 ಕಟ್ಟಡಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರದ ಒಂದು ಭಾಗ ಸೇರಿದಂತೆ ಹೆಚ್ಚಿನ ಹಳ್ಳಿಗಳು ಜಿಲ್ಲೆಯಲ್ಲಿ ಬರುತ್ತವೆ. ಅತಿ ಹೆಚ್ಚು ಸಂತ್ರಸ್ತರು ಇದೇ ಜಲ್ಲೆಯವರಾಗಿದ್ದಾರೆ.

ಪುನರ್‌ ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ 15,092 ಎಕರೆ ವಶಪಡಿಸಿಕೊಳ್ಳಲಾಗಿದೆ. 77,328 ಎಕರೆ ಕಾಲುವೆ ನಿರ್ಮಾಣಕ್ಕಾಗಿ, 4,595 ಎಕರೆ ಅಚ್ಚುಕಟ್ಟು ಹಾಗೂ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ.

ಮೂರನೇ ಹಂತದ ಯೋಜನೆ ಜಾರಿ ಮಾಡಿದರೆ 26 ಗ್ರಾಮಗಳು ಹಾಗೂ 75,563 ಎಕರೆ ಮುಳುಗಡೆಯಾಗಲಿದೆ. 20 ಗ್ರಾಮಗಳ ಪುನರ್‌ ವಸತಿಗಾಗಿ 6,467 ಎಕರೆ, ಕಾಲುವೆ ಜಾಲ ನಿರ್ಮಾಣಕ್ಕಾಗಿ 51,837 ಎಕರೆ ಬೇಕಾಗಿದೆ. ಅರಲ್ಲಿ ಈಗಾಗಲೇ 25,642 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಮುಳುಗಡೆ ಗ್ರಾಮಗಳ ಜನರಿಗೆ ಪುನರ್‌ ವಸತಿಗೆ ಜಾಗ ನೀಡಲಾಗಿದೆ.. ಆದರೆ, ಜನರು ಪೂರ್ತಿಯಾಗಿ ಇನ್ನು ಸ್ಥಳಾಂತರವಾಗಿಲ್ಲ. ಆದ್ದರಿಂದ ಖಾಲಿ ನಿವೇಶನಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಕೆಲವು ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಅವರು ಅಲ್ಲಿ ವಾಸಿಸದ್ದರಿಂದ ಪಾಳು ಬಿದ್ದಿವೆ. ಕೆಲವು ಗ್ರಾಮಗಳನ್ನು ದೂರದಲ್ಲಿ ಮಾಡಿರುವುದರಿಂದ ಜಮೀನುಗಳಿಗೆ ಹೋಗಿ–ಬರಲು ರೈತರಿಗೆ ತೊಂದರೆಯಾಗಿದೆ.

ಬಹುತೇಕ ಪುನರ್‌ ವಸತಿ ಕಲ್ಪಿಸಿದಾಗ ರಸ್ತೆಗಳನ್ನು ನಿರ್ಮಿಸಿದ್ದು, ನಂತರ ದಿನಗಳಲ್ಲಿ ಅವುಗಳ ದುರಸ್ತಿ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಅವುಗಳು ಹಾಳಾಗಿ ಹೋಗಿವೆ. ಬದುಕು ಕಟ್ಟಿಕೊಳ್ಳಲು ಪರದಾಟ ಮುಂದುವರದೇ ಇದೆ.

ಮಾದರಿ ನವನಗರ ನಿರ್ಮಾಣ

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಬಾಗಲಕೋಟೆ ನಗರ ಸೇರಿದಂತೆ ಹಲವು ಗ್ರಾಮಗಳೂ ಮುಳುಗಡೆಯಾಗಿವೆ. ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿರುವ ಬಾಗಲಕೋಟೆಯ ‘ನವನಗರ’ ಮಾದರಿಯಾಗಿದೆ.

ಚಂಡೀಗಢ ಮಾದರಿಯಲ್ಲಿ ನವನಗರ ನಿರ್ಮಾಣ ಆರಂಭಿಸಲಾಗಿತ್ತು. ನಂತರ ಅಂತರರಾಷ್ಟ್ರೀಯ ವಾಸ್ತುಶಿಲ್ಪಿ ಚಾರ್ಲ್ಸ್ ಕೋರಿಯಾ ಅವರ ನೆರವಿನಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತು.

ಮುಳುಗಡೆ ಪ್ರದೇಶದ ಜನರಿಗಾಗಿ ಹೊಸ ನಗರ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ 6,459 ಕಟ್ಟಡಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 2,392 ಕಟ್ಟಡಗಳು ಮುಳಗುಡೆಯಾಗಲಿವೆ. ಕಟ್ಟಡಗಳಿಗೆ ₹1,055 ಕೋಟಿ ಪರಿಹಾರ ಪಾವತಿಸಲಾಗಿದೆ.

ಹಿನ್ನೀರಿನ ಮುಳುಗಡೆಯಾದವರಿಗೆ ನೀಡಲು 5,811 ಎಕರೆಯನ್ನು ₹307 ಕೋಟಿ ಪರಿಹಾರ ಪಾವತಿಸಲಾಗಿದೆ.

ಯುನಿಟ್‌ 1ರಲ್ಲಿ ನೀರು ಸರಬರಾಜು ಒಳಚರಂಡಿ, ವಿದ್ಯುತ್‌, ರಸ್ತೆ ಮುಂತಾದವುಗಳ ನಿರ್ಮಾಣಕ್ಕೆ 149 ಕೋಟಿ ವೆಚ್ಚ ಮಾಡಲಾಗಿದೆ. ಯುನಿಟ್‌ 2ರಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ₹896 ಕೋಟಿ ವೆಚ್ಚ ಮಾಡಲಾಗಿದೆ. ಮೂರನೇ ಹಂತದ ಅಭಿವೃದ್ಧಿಗೆ ₹3,070 ಕೋಟಿ ವೆಚ್ಚ ಮಾಡಲು ಅಂದಾಜು ಪತ್ರಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT