ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಅತಿಥಿ ಉಪನ್ಯಾಸಕರು ಗೈರು: ನಡೆಯದ ಬೋಧನೆ

ಪಾಠ ನಡೆಯದೇ ವಿದ್ಯಾರ್ಥಿಗಳು ಅತಂತ್ರ
Published 30 ನವೆಂಬರ್ 2023, 5:35 IST
Last Updated 30 ನವೆಂಬರ್ 2023, 5:35 IST
ಅಕ್ಷರ ಗಾತ್ರ

ಬಾಗಲಕೋಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಉಪನ್ಯಾಸಕರು ಕಾಲೇಜಿಗೆ ಗೈರು ಹಾಜರಾಗಿರುವುದರಿಂದ ವಿದ್ಯಾರ್ಥಿಗಳು ಪಾಠಗಳಲ್ಲಿದೇ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿನ ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಸಂಖ್ಯೆ ಬಹಳ ಕಡಿಮೆ ಇದ್ದು, ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ. ಅವರು ಬೋಧನೆ ಕಾರ್ಯದಿಂದ ದೂರ ಉಳಿದಿರುವುದರಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಕೇಳುವ ಭಾಗ್ಯವಿಲ್ಲದಂತಾಗಿದೆ.

ಅತಿಥಿ ಉಪನ್ಯಾಸಕರು ಗೈರಾಗಿರುವುದು ಒಂದೆಡೆಯಾಗಿದ್ದರೆ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ನಡೆಯುತ್ತಿರುವುದರಿಂದ ಕಾಯಂ ಉಪನ್ಯಾಸಕರು ಅಲ್ಲಿಗೆ ತೆರಳಿದ್ದು, ಕಾಲೇಜುಗಳಲ್ಲಿ ಪಾಠ ಮಾಡುವವರೇ ಇಲ್ಲದಂತಾಗಿದೆ.

ಜಮಖಂಡಿಯ ಸರ್ಕಾರಿ ಪದವಿ ಮಹಿಳಾ ಕಾಲೇಜಿನಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 20 ಕಾಯಂ ಉಪನ್ಯಾಸಕರಿದ್ದರೆ, 50 ಮಂದಿ ಅತಿಥಿ ಉಪನ್ಯಾಸಕರಿದ್ದರು. ಅವರೆಲ್ಲ ನಾಲ್ಕು ದಿನಗಳಿಂದ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಕಾಟಾಚಾರಕ್ಕೆ ತರಗತಿಗಳು ನಡೆಯುತ್ತಿವೆ. 

20 ಮಂದಿ ಕಾಯಂ ಉಪನ್ಯಾಸಕರಲ್ಲಿ ಐವರು ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ, ಲಭ್ಯವಿರುವ ಉಪನ್ಯಾಸಕರು, ಒಂದೇ ಹಾಲ್‌ನಲ್ಲಿ ಮೂರ್ನಾಲ್ಕು ತರಗತಿಯ ವಿದ್ಯಾರ್ಥಿಗಳು ಕೂಡಿಸಿಕೊಂಡು ಪಾಠ ಮಾಡುತ್ತಿದ್ದಾರೆ.

ಬಾಗಲಕೋಟೆಯ ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಿದ್ದಾರೆ. ಅವರೆಲ್ಲರೂ ಗೈರಾಗಿರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ನಿತ್ಯವೂ ವಿದ್ಯಾರ್ಥಿಗಳು ಬಂದ್ ಒಂದೆರಡು ತರಗತಿಗೆ ಹಾಜರಾಗಿ ವಾಪಸ್‌ ಹೋಗುತ್ತಿದ್ದಾರೆ.

ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಬ್ಬರು ಕಾಯಂ ಉಪನ್ಯಾಸಕರಿದ್ದಾರೆ. ಅದರಲ್ಲಿ ಒಬ್ಬರು ಪ್ರಾಚಾರ್ಯರಿದ್ದಾರೆ. ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರು. ಉಪನ್ಯಾಸಕರೂ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ  ಕಾಲೇಜು ವಿಧ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದೆ.

ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರೊಂದಿಗೆ ಮಾತುಕತೆ ನಡೆಸಿ, ತರಗತಿಗಳು ನಡೆಯುವಂತೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಸೇವೆಯನ್ನು ಕಾಯಂ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು
ಚಂದ್ರಶೇಖರ ಕಾಳನ್ನವರ ಅತಿಥಿ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT