ಸೋಮವಾರ, ಮಾರ್ಚ್ 8, 2021
24 °C
ಅಂಗನವಾಡಿ ಕಾರ್ಯಕರ್ತರಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ಕೂಡಲೇ ಸಂಬಳ ನೀಡುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಿಲ್ಲ, ಅದನ್ನು ಆದಷ್ಟು ಬೇಗ ಕೊಡಿ ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಬುಧವಾರ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. 

ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ರ‍್ಯಾಲಿ ಮೂಲಕ ಬಂದ ಕಾರ್ಯಕರ್ತೆಯರು ಪ್ರತಿ ತಿಂಗಳ ಐದನೇ ತಾರೀಖಿನ ಒಳಗಾಗಿ ಸಂಬಳ ನೀಡಬೇಕು ಎಂದು ಒತ್ತಾಯಿಸಿದರು. ನಂತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹಣಮಕ್ಕ ದಾಸರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಹಣಮಕ್ಕ ಮಾತನಾಡಿ, ‘ನಮಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ನೀಡುತ್ತಿರುವುದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಕನಿಷ್ಟ ವೇತನವನ್ನಾದರು ಸರಿಯಾಗಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ ಮತ್ತು ಯುಕೆಜಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಅಂಗನವಾಡಿಯಲ್ಲೇ ಈ ಶಿಕ್ಷಣವನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಮಕ್ಕಳಿಗೆ ಹಾಗೂ ಮಾತೃ ಪೂರ್ಣ ಯೋಜನೆಯಲ್ಲಿ ನೀಡುವ ಆಹಾರ ಧಾನ್ಯಗಳು ಕಳಪೆ ಮಟ್ಟದ್ದಾಗಿದೆ. ಜೊತೆಗೆ ಅವು ಸರಿಯಾದ ಸಮಯಕ್ಕೆ ವಿತರಣೆಯಾಗುತ್ತಿಲ್ಲ. ಅಂಗನವಾಡಿಗಳಿಗೆ ವರ್ಷಕ್ಕೆ ಕೇವಲ 4 ಗ್ಯಾಸ್ ಸಿಲಿಂಡರ್ ಒದಗಿಸಲಾಗುತ್ತಿದೆ. ಅದನ್ನು 8ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಅಂಗನವಾಡಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಒಂದೇ ಸ್ಥಳದಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೇಲ್ವಿಚಾರಕಿಯರನ್ನು ಆ ಸ್ಥಳಗಳಿಂದ ವರ್ಗಾವಣೆ ಮಾಡಬೇಕು. ಮಾತೃ ಪೂರ್ಣ ಯೋಜನೆಯಡಿ ಪೂರೈಸುವ ಮೊಟ್ಟೆಯ ಬಿಲ್‌ ಪಾವತಿಯಾಗಿಲ್ಲ. ಇದರಿಂದ ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯೋಜನೆಯನ್ನು ಬಂದ್ ಮಾಡಲಾಗುತ್ತದೆ’ ಎಂದರು.

‘ಬಾಗಲಕೋಟೆ ತಾಲ್ಲೂಕಿಗೆ ಬೇರೆ ಬೇರೆ ಇಲಾಖೆಯವರನ್ನು ಸಿಡಿಪಿಒ ಹಾಗೂ ಸಹಾಯಕ ನಿರ್ದೇಶಕರನ್ನು ನೇಮಿಸಲಾಗಿದೆ. ಇದನ್ನು ಬಿಟ್ಟು ಇಲಾಖೆಯ ಎಲ್ಲ ಹುದ್ದೆಗಳಿಗೆ ಖಾಯಂ ನೌಕರರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು. 

ಸಂಘಟನೆಯ ಮುಖಂಡೆಯರಾದ ಕಾರ್ಯದರ್ಶಿ ರೇಣುಕಾ ಪೂಜಾರಿ, ಮಂಜುಳಾ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡೆಯರಾದ ರುಕ್ಮಿಣಿ ಬಡಿಗೇರ, ಮಂಗಳಾ ಗಾಳಪೂಜಿಮಠ, ಎಸ್.ಕಾಮರಡ್ಡಿ  ಪಾಲ್ಗೊಂಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು